Sunday, September 18, 2011

ಭಾಷಾಭಿಮಾನ

ಅವನು ದಿನಸಿ ತರಲು ಅಂಗಡಿಗೆ ಹೋದ. ಒಂದೋ ಎರಡೋ ವಸ್ತುಗಳನ್ನಷ್ಟೇ ಕೊಂಡುಕೊಳ್ಳಬೇಕಾದ್ದರಿಂದ ಇವನ ಕೆಲಸ ಬೇಗ ಮುಗಿಯಿತು. ಹಣ ಪಾವತಿಸಲು ಬಿಲ್ಲಿಂಗ್ ಕೌಂಟರಿನತ್ತ ಹೆಜ್ಜೆ ಹಾಕಿದ.

ಇವನ ಎದುರುಗಡೆ ಇಬ್ಬರಿದ್ದರು. ಮುಂದಿದ್ದ ಹೆಂಗಸು, ಕೌಂಟರಿನಲ್ಲಿದ್ದವನ ಜೊತೆ ತೆಲುಗಿನಲ್ಲಿ ವ್ಯವಹರಿಸುತ್ತಿದ್ದಳು. ಬಿಲ್ಲು ೪೧ ರುಪಾಯಿಯಾಗಿದ್ದರೆ ೫೦೦ರ ನೋಟು ಮುಂದೆ ಹಿಡಿದು ಚಿಲ್ಲರೆ ಕೊಡು ಎಂದು ಲಘುವಾಗಿ ಜಗಳ ಕಾಯುತ್ತಿದಳು.

ಕೌಂಟರಿನವ: ೫೦೦ ರುಪಾಯಿ ಚಿಲ್ಲರೆ ಇಲ್ಲ ಮೇಡಂ. ಚಿಲ್ಲರೆ ಕೊಡಿ.
ಮಹಿಳೆ: ನಾ ತೋ ಲೇದು ಬಾಬು. ನುವ್ವೇ ಪಂಪಿಚ್ಚೆಯಿ.
ಕೌಂಟರಿನವ: ಇಪ್ಪುಡೆ ಓಪನ್ ಚೇಸ್ಯಾನು. ನಾ ತೋ ಲೇದು. ಮೀರೆ ಈಯಂಡಿ.
....
....
....

ಕೊನೆಗೂ ಜಗಳ ಮುಗಿದು ಅವನು ತನ್ನ ಕ್ಯಾಶ್ ಕೌಂಟರಿನಲ್ಲೆ ಚಿಲ್ಲರೆ ಹುಡುಕಿ ಹುಡುಕಿ ತೆಗೆದು ಕೊಟ್ಟ.

ಅವಳು ಚಿಲ್ಲರೆ ತೆಗೆದುಕೊಂಡು ತನ್ನ ಕಾರಿನತ್ತ ಕಾಲ್ಕಿತ್ತಳು. ಅವಳ ಹಿಂದಿದ್ದ ಆಸಾಮಿಗೆ ಕೌಂಟರಿನವ 'ಅವಳ ಧಿಮಾಕು ನೋಡು' ಎಂದು ದೂರಿತ್ತನು. ಆ ಆಸಾಮಿಯೂ ಅವನ ಕೋಪಕ್ಕೆ ಸೊಪ್ಪು ಹಾಕುತ್ತ ತನ್ನ ಕೆಲಸವನ್ನು ಮುಗಿಸಿದನು.

ಈಗ ಇವನ ಸರದಿ. ೩೪ ರುಪಾಯಿ ವ್ಯಾಪಾರ ಮಾಡಿದ್ದ. ೫೦ ರುಪಾಯಿಯನ್ನಿತ್ತು ಚಿಲ್ಲರೆಗಾಗಿ ಕಾದು ನಿಂತ.

ಕೌಂಟರಿನವ: ಚಿಲ್ಲರೆ ಬೇಕು ಸಾರ್! ಚಿಲ್ಲರೆ ಕೊಡಿ.
ಇವನು: ಇಲ್ಲಪ್ಪ. ನನ್ನ ಹತ್ರ ಬರೀ ಈ ೫೦ ರುಪಾಯಿ ಮಾತ್ರ ಇದೆ.
ಕೌಂಟರಿನವ: ಎಲ್ಲ ಹೀಗಂದ್ರೆ ನಾನ್ ಎಲ್ಲಿಗೆ ಹೋಗ್ಲಿ? ಸರಿ, ಇನ್ನು ರುಪಾಯಿಗೆ ಏನಾದ್ರೂ ತೊಗೊಳ್ಳಿ.

ಇವನು ವಿಧಿಯಿಲ್ಲದೇ ೫ ರುಪಾಯಿಗೆ ಸಣ್ಣ ಮಕ್ಕಳು ತಿನ್ನುವ ಚಾಕಲೇಟ್ ಕೊಂಡ. ೧೧ ರುಪಾಯಿ ಚಿಲ್ಲರೆಯನ್ನಿತ್ತು ಅವನು ಮುಂದಿನ ಗಿರಾಕಿಯತ್ತ ಕೇಳಿದ.

ಅವನ್ಯಾರೋ ಹಿಂದಿಯವ. 'ಚಾವಲ್ ಕಾ ರೇಟ್ ಕ್ಯಾ ಹೇ??'
ಕೌಂಟರಿನವ: ಹಿಂದಿ ಇಲ್ಲ. ಕನ್ನಡ ಕನ್ನಡ!! ಹಿಂದಿ ನಹಿ.

ಸಾಮಾನು ತೆಗೆದುಕೊಳ್ಳುತ್ತಿದ್ದ ಇವನಿಗೆ ರೇಗಿತು. 'ಹಿಂದಿ ಬೇಡ ಅನ್ನೋ ನೀವು, ತೆಲುಗಲ್ಲಿಯೂ ಮಾತಾಡಬೇಡಿ. ಬರೀ ಕನ್ನಡದಲ್ಲೇ ಮಾತಾಡಿ' ಎಂದು ಹೇಳಿ ಅಲ್ಲಿಂದ ಹೋರಾಟ.

ಕೌಂಟರಿನವನ ಮೊಗದಲ್ಲಿ ಏನೋ ಅರ್ಥವಾದ ಹೊಸ ನಗುವಿತ್ತು.

Friday, August 26, 2011

ಎಲ್ಲರಿಗೂ ಕನ್ನಡ ಕಲಿಸುವ ಪದ: ಮಾಡಿ

ರೀ ಡ್ರೈವರ್!! ಡೋರ್ ಓಪನ್ ಮಾಡಿ!

ರೀ! ಸ್ವಾಮಿ! ಸ್ವಲ್ಪ ಅಡ್ಜಸ್ಟ್ ಮಾಡ್ಕೊಂಡ್ ಒಳಗ್ ನುಗ್ಗ್ರಿ!

ಎಂಜಾಯ್ ಮಾಡಿ!!

ಸ್ವಲ್ಪ ಸ್ಪೇಸ್ ಮಾಡಿ!!

ಹೋದ ತಕ್ಷಣ ನಂಗೆ ಒಂದು ಕಾಲ್ ಮಾಡಿ!

ಏನಿದು ಒಂದಕ್ಕೊಂದು ಸಂಬಂಧಾನೇ ಇಲ್ಲ ಅಂತ ಯೋಚಿಸ್ತಿದ್ದೀರಾ? ಇವು ನಮ್ಮ ಉದ್ಯಾನ ನಗರಿಯ ಕನ್ನಡದ ತುಣುಕುಗಳು (ಸ್ಯಾಂಪಲ್ಲುಗಳು) ಅಷ್ಟೇ.

ಮಾಡಿ.

ಬೆಂಗಳೂರಿನಲ್ಲಿ ಯಾರ ಬಳಿಗೂ ಹೋಗಿ ಕನ್ನಡದಲ್ಲಿ ಮಾತನಾಡಿದರೆ ಅವರು ಒಮ್ಮೆಯಾದರು ಈ ಪದವನ್ನು ಉಪಯೋಗಿಸದೇ ಇರುವುದಿಲ್ಲ. ಅವರಿಗೆ ಕನ್ನಡ ಬರಲಿ, ಬರದೇ ಇರಲಿ ಈ ಪದವಂತೂ ಹೆಚ್ಚಿನ ಪಕ್ಷ ತಿಳಿದೇ ಇರುತ್ತದೆ. ಕಾಲೇಜು, ಕಛೇರಿಗಳಲ್ಲಿಯ ಕನ್ನಡೇತರರಂತೂ ತುಸು ಹೆಚ್ಚಾಗಿಯೇ ಉಪಯೋಗಿಸಿದ್ದಾರೆ.

ಪ್ರಿಂಟ್ ಔಟ್ ಮಾಡಿ.
ಕ್ಲಾಸ್ ಬಂಕ್ ಮಾಡಿ.
ಲಂಚ್ ಮಾಡಿ.
ಸಿಗ್ನಲ್ ಜಂಪ್ ಮಾಡಿ.
ಸ್ಟಾಪ್ ಮಾಡಿ.
...
...
...

ಇಡೀ ವಾಕ್ಯವನ್ನು ಆಂಗ್ಲದಲ್ಲಿ ಹೇಳಿ ಕೊನೆಯಲ್ಲಿ ಈ 'ಮಾಡಿ' ಬಾಲಂಗೋಚಿಯನ್ನು ಅಂಟಿಸಿಬಿಡುತ್ತಾರೆ. ಹೀಗೆ ಹೇಳುವುದರಿಂದ ಅವರು ಕನ್ನಡ ಮಾತಾಡುತ್ತೇವೆ ಎಂದು ಸಾಧಿಸುತ್ತಾರೆ. ಕೆಲವೊಮ್ಮೆ ಈ ವಾಕ್ಯಗಳಿಗೆ ಸರಿಯಾದ ಅರ್ಥವಿರದಿದ್ದರೂ ನಮಗದು ಅರ್ಥವಾಗಿ ಬಿಡುತ್ತದೆ.

ಇದೆಲ್ಲಾ ಶುರುವಾಗಿದ್ದು ಎಲ್ಲಿಂದ? ಎಂಬ ಪ್ರಶ್ನೆಯನ್ನು ನಾವೇ ಹಾಕಿಕೊಳ್ಳುವುದು ಒಳ್ಳೆಯದು.

ನನಗೆ ತಿಳಿದ ಮಟ್ಟಿಗೆ ಇದನ್ನು ಮೊದಲು ಶುರು ಮಾಡಿದವರು ಮೊಬೈಲು ಸೇವೆಯ ವಿತರಕರಾದ 'ಸ್ಪೈಸ್' (ಈಗಿನ ಐಡಿಯಾ) ಸಂಸ್ಥೆಯವರು. ಮೊಬೈಲು ಕರೆಗಳು ದುಬಾರಿಯಾಗಿದ್ದ ಕಾಲದಲ್ಲಿ ಕಡಿಮೆ ದರದ ಪ್ಲ್ಯಾನ್ ಒಂದನ್ನು ಬಿಡುಗಡೆ ಮಾಡಿದ ಸಂದರ್ಭದಲ್ಲಿ 'ಸಿಂಪ್ಲಿ ಟಾಕ್ ಮಾಡಿ' ಎಂಬ ಅಡಿಬರಹದೊಂದಿಗೆ ಇದರ ಪ್ರಚಾರವನ್ನು ಮೊದಲುಮಾಡಿತು.

ವೃತ್ತಪತ್ರಿಕೆಗಳಲ್ಲಿ, ರೇಡಿಯೋಗಳಲ್ಲಿ ಇದನ್ನೇ ಕೇಳುತ್ತಿದ್ದ ಮಂದಿಗೂ ಇದೇ ರುಚಿ ಹಿಡಿದು ಇದರಂತೆಯೇ ತಮಾಷೆಯಾಗಿ ಮಾತನಾಡಲು ಪ್ರಾರಂಭಿಸಿತು. ಅದರಲ್ಲೇ ಒಂದು ರೀತಿಯ ಮೋಜು ಕಂಡಿತು. ಹಾಗೆ ಅದು ಬೃಹದಾಕಾರವಾಗಿ ಬೆಳೆದೂ ಬಿಟ್ಟಿತು. ನಮ್ಮ ಮಾಹಿತಿ ತಂತ್ರಜ್ಞರ ಕಿವಿಗಳ ಮೇಲೆ ಬಿದ್ದಮೇಲೆ ಅವರಿಗೆ ಎಲ್ಲಿಲ್ಲದ ಹುರುಪು ತುಂಬಿತು. ಸಿಕ್ಕ ಸಿಕ್ಕ ಕಡೆ ಇದನ್ನೇ ಉಪಯೋಗಿಸತೊಡಗಿದರು. ಬೆಂಗಳೂರಿನಲ್ಲಿರುವ ಎಲ್ಲರಿಗೂ ಈ 'ಮಾಡಿ' ಪದ ಕೆಲವೇ ದಿನಗಳಲ್ಲಿ ಎಂತಹ ಮೋಡಿ ಮಾಡಿತ್ತೆಂದು ತಿಳಿದವರೇ ಬಲ್ಲರು. ದಿನವಿಡೀ ಸಾವಿರ ಮಾಡಿಗಳನ್ನು ಕೇಳಿದವರಿದ್ದಾರೆ. ಕೇಳೀ ಕೇಳಿ ತಲೆ ಚಿಟ್ಟು ಹಿಡಿಸಿಕೊಂಡವರಿದ್ದಾರೆ.

ಪ್ರಮುಖ ಶೂ ತಯಾರಕರಾದ ನೈಕೀ ಗೆ ನಿಜವಾಗಿಯೂ ಈ ಪದದ ಅರ್ಥ ತಿಳಿದುಬಿಟ್ಟಿದ್ದರೆ ಅವರ 'Just Do it' ಕನ್ನಡದಲ್ಲಿ 'ಸುಮ್ನೆ ಮಾಡಿ' ಆಗಿಬಿಡುತ್ತಿತ್ತು. ಹೆಹ್ಹೆಹ್ಹೆ!!

ಇದನ್ನೇ ಹಲವರು ಪ್ರೇರಣೆಯಾಗಿ ತೆಗೆದುಕೊಂಡರು. ಬಟ್ಟೆ ಅಂಗಡಿಯವರು, ಚಿನ್ನದ ಅಂಗಡಿಯವರು ಇನ್ನೂ ಹಲವರು ಇದನ್ನೇ ಉಪಯೋಗಿಸಲು ಶುರು ಮಾಡಿದರು. ಎಲ್ಲರ ಬಾಯಲ್ಲಿಯೂ 'ಮಾಡಿ' ನಲಿದಾಡುತ್ತಿತ್ತು.

ಆದರೆ, ಈಗ;

ನಾವುಗಳೇ ಅದನ್ನು ಕನ್ನಡೇತರರಂತೆ ಉಪಯೋಗಿಸುತ್ತಿದ್ದೇವೆ. ಬಸ್ಸಿನಲ್ಲಿ ಎಷ್ಟು ಮಂದಿ 'ಬಾಗಿಲು ತೆಗೆಯಿರಿ' ಅನ್ನುತ್ತೇವೆ? ಎಲ್ಲರೂ 'ಡೋರ್ ಓಪನ್ ಮಾಡಿ'ಗೆ ಶರಣಾಗಿದ್ದೇವೆ. ಕಾಲ್ ಮಾಡಿ, ಫೋನ್ ಮಾಡಿ, ಕನೆಕ್ಟ ಮಾಡಿ, ಎಲ್ಲಾ ಮಾಮೂಲಾಗಿ ಬಿಟ್ಟಿದೆ. ಈ ಉದಾಹರಣೆಗಳು ಕೊಡುತ್ತಾ ಹೋದರೆ ಹನುಮಂತನ ಬಾಲದಂತೆ ಬೆಳೆಯುತ್ತಲೇ ಹೋಗುತ್ತದೆ. ಎಲ್ಲೋ ಒಂದು ಕಡೆ ಎಲ್ಲ ಕನ್ನಡ ಅಭಿಮಾನಿಗೂ ಇದು ಬೇಸರ ತರಿಸುತ್ತದೆ.

ಕನ್ನಡಿಗರೆಲ್ಲರಲ್ಲೂ ನನ್ನ ಮನವಿ ಇಷ್ಟೇ. ಕನ್ನಡ ಶ್ರೀಮಂತ ಭಾಷೆ. ಅದನ್ನು ಸಮೃದ್ಧವಾಗಿ ಬಳಸಿ. ಭಾಷೆ ಬರದಿರುವವರಂತೆ ಎಲ್ಲದಕ್ಕೂ 'ಮಾಡಿ'ಯನ್ನು ಆಂಟಿಸಬೇಡಿ. ಆಸಕ್ತ ಕನ್ನಡೇತರರಿಗೆ 'ಮಾಡಿ' ಯ ಬದಲು ಬೇರೆ ಪದಗಳನ್ನೂ ತಿಳಿಸಿ ಕೊಡಿ.

ಕೊನೆಯದಾಗಿ ಈ ಅಂಕಣವನ್ನು 'ಸಿಂಪ್ಲಿ ಎಂಜಾಯ್ ಮಾಡಿ' =)

Tuesday, August 16, 2011

ಪರಿವರ್ತನ

ಮಾರ್ಕೆಟ್ಟಲ್ಲಿ ಅವನು ಬಸ್ ಹತ್ತಿ ಕೂತ. ರಾತ್ರಿ ಒಂಬತ್ತೂ ಕಾಲಾದ್ದರಿಂದ ಖಾಲಿ ಖಾಲಿಯಾಗೆಯೇ ಇತ್ತು. ಗಾಳಿ ಬರಲೆಂದು ಕಿಟಕಿ ತೆರೆದು ಪುಸ್ತಕ ಓದಲು ಕೂತ.

ಮೆಜೆಸ್ಟಿಕ್ಕಿಗೆ ಬಂದ ಬಸ್ಸನ್ನು ಹಲವಾರು ಜನ ಏರಿದರು. ಇವನ ಎದುರುಗಡೆ ಒಬ್ಬ ಧಡೂತಿ ಆಸಾಮಿ ಬಂದು ಕೂತ. ಕೂತವನೇ ತನಗೆ ಬೇಕಾದಷ್ಟು ಕಿಟಕಿಯನ್ನು ತಳ್ಳಿ ತಣ್ಣನೆಯ ಗಾಳಿಯನ್ನು ಆಸ್ವಾದಿಸುತ್ತಾ ಕೂತ.

ಇವನಿಗೆ ಇರಿಸು ಮುರುಸಾಯಿತು. ಛಕ್ಕನೆ ಅವನಿಗೆ ಹೇಳಿದ: "ಸ್ವಾಮೀ, ನಾವೂ ಬಸ್ಸಲ್ಲಿದ್ದೇವೆ. ನಮಗೂ ಗಾಳಿ ಬೇಕು" ಎಂದವನೇ ಕಿಟಕಿಯನ್ನು ಮೊದಲಿದ್ದ ಹಾಗೆಯೇ ತಳ್ಳಿ ಓದಲು ಮುಂದುಮಾಡಿದ.

ಮನಸಿನಲ್ಲೇ ಬೈದುಕೊಳ್ಳುತ್ತಾ ಎದುರಿನಲ್ಲಿ ನಗುತ್ತ ಸಾವರಿಸಿಕೊಂಡು ಅವನೂ ತೆಪ್ಪಗಾದ.

ಐದು ನಿಮಿಷ ಕಳೆಯಿತು. ಸುಯಿ ಎಂದು ಬೀಸುತ್ತಿದ್ದ ಗಾಳಿ ತನ್ನ ಜೊತೆ ಭೋರ್ಗರೆಯುವ ಮಳೆಯನ್ನೂ ತಂದಿತು.

ಈಗ ಅವರಿಬ್ಬರೂ ಕಿಟಕಿ ಮುಚ್ಚುವುದಕ್ಕೆ ಮುಂದಾದರು.

Monday, August 15, 2011

ಕನ್ನಡ ವರ್ಣಮಾಲೆಯ ಅನಾಥ ಕೂಸು.

ೠ.

ನಾವೆಲ್ಲಾ ಪಾಠ ಮಾಡೋವಾಗ ಇದ್ದ ಈ ಅಕ್ಷರ ಸುಮಾರು ವರ್ಷಗಳಿಂದ ಕನ್ನಡ ವರ್ಣಮಾಲೆಯಿಂದ ಕಣ್ಮರೆಯಾಗಿದೆ. ಈಗಿನ ಮಕ್ಕಳು ಇವನ್ನು ತಮ್ಮ ಪಠ್ಯ ಪುಸ್ತಕದಲ್ಲಿ ಕಾಣುವುದಿಲ್ಲ. ನಮ್ಮ ಘನ ಕರ್ನಾಟಕ ಸರ್ಕಾರ ಈ ಅಕ್ಷರವನ್ನು ಕನ್ನಡದಿಂದ ಉಚ್ಚಾಟಿಸಿದೆ.

ನಮ್ಮ ಪುಣ್ಯ. ಇದು ಹೇಗೋ ತಂತ್ರಾಂಶದಿಂದ ಹೊರಗೆ ಹೋಗಿಲ್ಲ. ಈಗಲೂ ನಾವು ೠ ಎಂದು ಕೀಲಿಮಣೆಯಿಂದ ಬರೆಯಬಹುದು. ಇದನ್ನೂ ಹೊಡೆದೋಡಿಸದಿದ್ದರಷ್ಟೇ ಸಾಕು. ಈ ವಿಷಯ ಬರೆಯಲು ಆಗುತ್ತದೋ ಇಲ್ಲವೋ ಎಂದು ಶಂಕಿಸಿದ್ದ ನನಗೆ ತೃಪ್ತಿ ನೀಡಿತು.

ಇದಕ್ಕೆ ಕಾರಣ ಇನ್ನೂ ಹಾಸ್ಯಾಸ್ಪದ. ಸಂಸ್ಕೃತದಿಂದ ಆಯ್ದ ಈ ಸ್ವರ ಎಲ್ಲೂ ಉಪಯೋಗವಾಗಿಲ್ಲ. ಈ ಸ್ವರವನ್ನು ಉಪಯೋಗಿಸಿ ಯಾವ ಶಬ್ಧವಾಗಲಿ ಇಲ್ಲ. ಅದರಿಂದ ಇದರ ಉಪಯೋಗವಿಲ್ಲ.

ಇರಬಹುದು. ಆದರೆ ಆ ಕಾರಣ ಈ ಸ್ವರವನ್ನು ತೆಗೆದುಹಾಕಿದಲ್ಲಿ ನಾವು ಏನು ಸಾಧಿಸಿದಂತಾಗುತ್ತದೆ? ಅದು ಇದ್ದರೆ ನಮಗೇನು ಪ್ರಯೋಜನವಿಲ್ಲ; ಅಂದ ಮಾತ್ರಕ್ಕೆ ಅದನ್ನು ತೆಗೆದೇ ಬಿಡುವುದು ಯಾವ ನ್ಯಾಯ? ಸಂಸ್ಕೃತದಿಂದ ನಾವು ಎಷ್ಟೋ ಪದಗಳನ್ನು ಎರವಲು ಪಡೆದಿಲ್ಲವೇ? ಹಾಗೆಯೇ ಈ ಸ್ವರವನ್ನು ಪಡೆದಿದ್ದೆವಷ್ಟೇ. ಈ ಸ್ವರದ ಜಾಗ ಖಾಲಿ ಮಾಡಿ ನಾವು ಅಲ್ಲಿ ಏನಿಡಬೇಕಾಗಿದೆ? ಅದೆಷ್ಟು ಜಾಗ ಆಕ್ರಮಿಸಿಕೊಳ್ಳುತ್ತದೆ?

ಕೆಲವು ಜನರ ಅಭಿಪ್ರಾಯಕ್ಕೆ ಒಂದು ಸ್ವರವನ್ನೇ ಕಿತ್ತರೆ ಅದೆಷ್ಟರ ಮಟ್ಟಿಗೆ ಸರಿ?

ಆಗೀಗ ಹೊಸ ಪದಗಳನ್ನು ಟಂಕಿಸುವ ನಮಗೆ ಈ ಅಕ್ಷರ ಉಪಯೋಗಿಸಿ ಒಂದೂ ಪದವನ್ನು ಸೃಜಿಸಲು ಆಗಿಲ್ಲವೇ?

ಕನ್ನಡ ಶಬ್ದ ಬ್ರಹ್ಮರ ಎದುರು ಈ ಪ್ರಶ್ನೆಯನ್ನಿತ್ತು ಈ ಅಂಕಣವನ್ನು ಮುಗಿಸುತ್ತೇನೆ. ನನಗೇನಾದರೂ ಹೊಸ ಪದ ಆವಿಷ್ಕರಿಸಬೇಕಾಗಿ ಬಂದ ಸಂದರ್ಭದಲ್ಲಿ ಖಂಡಿತವಾಗಿಯೂ ಈ ಸ್ವರವನ್ನು ಗಣನೆಗೆ ತಂದುಕೊಳ್ಳುತ್ತೇನೆ ಎಂದು ಆಶ್ವಾಸನೆ ಕೊಡುತ್ತೇನೆ.

Saturday, July 23, 2011

ನೂತನ ಗಾಂಧಿವಾದಿ/ಉಪೇಂದ್ರವಾದಿಯೊಡನೆ ಒಂದು ಘಳಿಗೆ...

ಸುಮಾರು ಎರಡು ವಾರಗಳ ಹಿಂದೆ ಇರಬಹುದು. ಕಚೇರಿಯಿಂದ ತಡವಾಗಿ ಹೋಗುತ್ತಿದ್ದ ನನಗೆ ಮನೆಗೆ ಹೋಗಲು ಮೆಜೆಸ್ಟಿಕ್ಕಿನಿಂದ ೧೧ ಗಂಟೆಗೆ ಒಂದು ಬಸ್ಸು ಸಿಕ್ಕಿತು. ಯಥಾ ಪ್ರಕಾರ ಓಡಿ ಹೋಗಿ ಹತ್ತಿದ್ದರಿಂದ ನನಗೆ ಸೀಟು ಸಿಕ್ಕಿತು.

ಬಸ್ಸಿನಲ್ಲಿ ಬೆಳಕು ತಕ್ಕ ಮಟ್ಟಿಗೆ ಇದ್ದದ್ದರಿಂದ ನಾನು ನನ್ನ ಹವ್ಯಾಸವಾದ ಪುಸ್ತಕ ಓದುವುದನ್ನು ಮುಂದುವರಿಸಿದೆನು. ಹತ್ತು ನಿಮಿಷ ಜನರಿಗಾಗಿ ಕಾದ ಬಸ್ಸು ಹೊರಟಿತು.

ಎಲ್ಲವೂ ತಣ್ಣಗಿರಲು ಮುಂದಿನಿಂದ ಒಂದು ಸ್ವರ ಹೊರಟಿತು. ಅದು ಸುಮಾರು ೪೫-೫೦ ರ ಪ್ರಾಯದ ಗಂಡಸಿನ ಧ್ವನಿ. ಅಲ್ಲಿ ನಡೆದ ಸಂಭಾಷಣೆಯ ಯಥಾವತ್ ನಕಲು ಇಲ್ಲಿದೆ. (ಅವಾಚ್ಯ ಶಬ್ದಗಳನ್ನು ಮನ್ನಿಸಿ)

ಹಿರಿಯ ಗಂಡಸು: ರೀ ಸ್ವಾಮಿ, ನಿಮ್ಮ ಪಕ್ಕ ಒಂದ್ ಹೆಂಗಸು ನಿಂತ್ಕೊಂಡಿದೆ. ಲೇಡೀಸ್ ಸೀಟ್ ಅಲ್ಲಿ ಕೂತಿದ್ದೀರಾ, ಎದ್ದು ಅವರಿಗೆ ಜಾಗ ಕೊಡ್ರಿ.

ಆ ಕಡೆ ಇಂದ ಏನೂ ಉತ್ತರ ಬರಲಿಲ್ಲ.

ಹಿರಿಯ ಗಂಡಸು: ರೀ ರೆಡ್ ಶರ್ಟ್! ನಿಮಗೇ ಕಣ್ರೀ ಹೇಳ್ತಿರೋದು. ಪಕ್ಕದಲ್ಲಿ ಹೆಂಗಸು ನಿಂತಿರೋದು ಕಾಣಿಸುತ್ತಿಲ್ವಾ? ನಿಮ್ಮ ಅಮ್ಮ ನೋ ತಂಗಿ ನೋ ಹೀಗೇ ನಿಂತಿದ್ದರೆ ಸುಮ್ನೆ ಕೂರ್ತ ಇದ್ದ್ರಾ? ಎದ್ದು ಜಾಗ ಕೊಡ್ರಿ...

ಕಿರಿಯ ಗಂಡಸು: ರೀ ಸುಮ್ನಿರಿ ಸಾಕು. ದೊಡ್ಡದಾಗಿ ಹೇಳಕ್ಕೆ ಬಂದ್ಬಿಟ್ತ್ರು. ಸುಮ್ನೆ ನಿಮ್ಮ ಪಾಡಿಗೆ ನೀವ್ ನಿಂತ್ಕೊಳ್ಳ್ರೀ.

ಹಿರಿಯ: (ಬೇಡಿಕೊಳ್ಳುವ ಧ್ವನಿಯಲ್ಲಿ) ಅಪ್ಪ! ತಿರ್ಗ ಹೇಳ್ತಾ ಇದ್ದೀನಿ. ನಿಮ್ಮ ಅಕ್ಕಾನೋ ಅಮ್ಮ ನೋ ನಿಂತಿದ್ದರೆ ನೀನ್ ಹೀಗೆ ಮಾಡ್ತಿದ್ದ? ಎದ್ದೇಳಪ್ಪ.

ಕಿರಿಯ: ಹೋಗೊಲೋ ಲೌ* ಕೆ ಬಾ*!! ಹುಚ್ಚು ಸೂ* ಮಗನೆ! ಕೂತಿರೋರಿಗೆ ಕೂತಿರಕ್ಕೂ ಬಿಡಲ್ಲ... ನಾಯಿ ನನ್ನ ಮಕ್ಕಳು...

ಹಿರಿಯ: ಹೌದಪ್ಪ!! ಹೌದು. ಹೆಂಗಸರಿಗೆ ಅವ್ರ ಸೀಟಲ್ಲೇ ಜಾಗ ಬಿಡಿ ಅಂತ ಹೆಲೋ ನಾನು ಲೌ& ಕೆ #ಲೇ!! ನಾನಿಷ್ಟು ಮಾತಾಡ್ತಾ ಇದ್ದ್ರೂನೂ ಬೇರೆ ಜನ ಇರ್ಲಿ... ಕಂಡಕ್ಟರೂ ನನ್ನ ಸಹಾಯಕ್ಕೆ ಬರ್ತಿಲ್ಲ ನೋಡಿ... ನಾನು ಹುಚ್ಚು ಸೂ%$ ಮಗಾನೇ!! ಈ ಹೆಂಗಸರಿಗೋಸ್ಕರ ನಿಮ್ಮ ಹತ್ರ ಸೀಟ್ ಬಿಟ್ಟ ಕೊಡಿ ಅಂತ ಹೇಳ್ದೆ ನೋಡಿ, ಅವರೂ ನನ್ನ ಸಪೋರ್ಟಿಗೆ ಬರ್ಲಿಲ್ಲ ಅಂದ್ರೆ ನಾನು ನಾಯಿ ನನ್ನ ಮಗನೆ ಇರ್ಬೇಕು... ಥೂ ನಮ್ಮ ದೇಶಕ್ಕೆ. ಹೆಂಗಸರಿಗೆ ತುಂಬಾ ಮರ್ಯಾದೆ ಕೊಡತ್ತೆ... ಗುರು ಹಿರಿಯರಿಗೆ ಗೌರವ ಕೊಡ್ತಾರೆ ಅಂತ ಏನೇನೋ ಬಡಾಯಿ ಕೊಚ್ಚ್ಕೊತಾರೆ... ಎಲ್ಲ ಓಳು. ಇಡೀ ದೇಶ ಬರೀ ಹಲ್ಕಾ ನನ್ನ ಮಕ್ಕ್ಳಿಂದಾನೆ ತುಂಬ್ಕೊಂಡಿದೆ.

ಹೆಂಗಸರಿಗೆ ಸೀಟ್ ಕೊಡ್ರೋ ಅಂತ ಬೇಡ್ಕೊತೀವಲ್ಲ, ನಾವು ಸುವರ್ರ್ ನನ್ನ ಮಕ್ಕಳು... ಆರಾಮಾಗಿ ಹೆಂಗಸರ ಸೀಟಲ್ಲಿ ಕೂತ್ಕೊತೀರಲ್ಲ , ನೀವೆಲ್ಲ ಮಹಾನುಭಾವರೇ ಬಿಡಿ. ಏನೋ ಈ ಸಂನ್ ಮನುಷ್ಯನ್ನ ಕ್ಷಮಿಸಿ ಬಿಡಿ....


ಇನ್ನು ಮುಂದುವರೀತಾನೆ ಇತ್ತು ಅವನ ಪುರಾಣ ೫ ನಿಮಿಷಕ್ಕೆ. ಈ ರೀತಿ ಶಾಲಲ್ಲಿ ಚಪ್ಪಲಿ ಸುತ್ತ್ಕೊಂಡು ಹೊದೀತಿರೋದ್ ಕೇಳಕ್ಕಾಗ್ದೆ ಕಡೆಗೆ ಕೂತಿದ್ದ ಆ ಮಹಾ ಪುರುಷ ಎದ್ದ.

ಅಂತೂ ಕೊನೆಗೆ ಧರ್ಮಕ್ಕೆ ಜಯ.

Sunday, April 10, 2011

ವಿಪರ್ಯಾಸ.

ಅವನೇನು ಅಂಥಾ ಸುಂದರ ಅಲ್ಲ. ಅವಳೂ ಕೂಡ.

ಇಬ್ಬರೂ ಒಂದೇ ಕಛೇರಿಲಿ ಕೆಲಸ ಮಾಡೋರು. ಅಪರೂಪಕ್ಕೆ ಎದುರು ಬದುರು ಭೇಟಿ ಆಗ್ತಾ ಇದ್ದರೂ ಇಬ್ಬರಿಗೂ ಅಂತಹ ಹೇಳಿಕೊಳ್ಳೋ ಹಾಗೆ ಪರಿಚಯ ಇಲ್ಲ.

ಏನು ವಿಪರ್ಯಾಸನೋ? ಇಬ್ಬರೂ ಒಟ್ಟಿಗೆ ಕೆಲಸ ಮಾಡೋ ಪ್ರಮೇಯ ಬಂತು. ಸರಿ. ಎಷ್ಟ್ ಬೇಕೋ ಅಷ್ಟು ಮಾತಾಡ್ಕೊಂಡು ಇದ್ದ ಕೆಲಸ ಮುಗಿಸಿ ತಮ್ಮ ಪಾಡಿಗೆ ತಾವಿದ್ದರು. ಇಬ್ಬರ ನಡುವೆ ಬಿಂಕ ಇಲ್ಲ, ಬಿಗುಮಾನ ಇಲ್ಲ.

ಇದಾದ ನಂತರ ಆದ ವ್ಯತ್ಯಾಸ ಏನಂದ್ರೆ ಇಬ್ಬರೂ ಎದುರು ಬದುರಾದಾಗ ಒಂದು ಮಂದಸ್ಮಿತ ಇಬ್ಬರ ಮುಖದಲ್ಲೂ ಅರಳುತ್ತಿತ್ತು.

ದಿನ ಹೀಗೆ ಕಳೀತು. ಇಬ್ಬರೂ ತಮ್ಮ ಪಾಡಿಗೆ ಶಿವಾಂತ ಇದ್ದರು.

ಒಂದು ದಿನ ಇವನು ತಡವಾಗಿ ಮನೆ ಕಡೆ ಹೊರಟ. ಕಾಕತಾಳಿಯವಾಗಿ ಅವಳೂ ಅದೇ ಸಮಯದಲ್ಲಿ ಹೊರಟಳು. ಇಬ್ಬರೂ ಲಿಫ್ಟ್ ಹತ್ತಿರ ಸಿಕ್ಕಿದರು.

ಅವಳು: ಏನು? ಬೇಗ ಹೊರಡ್ತಾ ಇದ್ದೀರಿ?
ಅವನು: ಹಾಗೆ ಸುಮ್ನೆ. ಚೇಂಜ್ ಇರ್ಲಿ ಅಂತ.

ಅವಳು ಲಿಫ್ಟ್ ಕಡೆ ಮುಖ ಮಾಡಿದಳು. ಅವನು, ನಾನು ಮೆಟ್ಟಲು ಇಳ್ಕೊಂಡು ಹೋಗ್ತೀನಿ ಎಂದು ಹೊರಟ. ಅವಳು ಗಾಡಿ ತೆಗಿಯೋಕೆ ಬೇಸ್ಮೆಂಟ ಕಡೆ ಲಿಫ್ಟಲ್ಲಿ ಹೊರಟಳು. ಇವನು ಮೆಟ್ಟಿಲು ಇಳ್ಕೊಂಡು ಬಸ್ ಸ್ಟಾಂಡಿನ ಕಡೆ ನಡ್ಕೊಂಡೇ ಹೊರಟ.

ಕಚೇರಿ ಬಿಟ್ಟು ಮಾರು ದೂರ ಹೋಗಿದ್ದ ಅಷ್ಟೇ. ಅವಳು ಹಿಂದುಗಡೆ ಇಂದ ಬಂದಳು.

ಅವಳು: ಎಲ್ಲಿ ತನಕ ಡ್ರಾಪ್ ಮಾಡ್ಲಿ?
(ಇವನಿಗೆ ಅದೇನು ಮುಜುಗರನೋ? ಬಿಗುಮಾನನೋ?)
ಅವನು: ನನಗೆ ನಡ್ಕೊಂಡ್ ಹೋಗೋದ್ರಲ್ಲೇ ಖುಷಿ. ನೀವು ಹೋಗಿ. ಬಸ್ ಸ್ಟ್ಯಾಂಡ್ ಹೆಚ್ಚು ದೂರ ಇಲ್ಲ. ನಾನು ನಡ್ಕೊಂಡೇ ಹೋಗ್ತೀನಿ.
ಅವಳು: ಬನ್ನಿ ಪರವಾಗಿಲ್ಲ. ಸ್ವಲ್ಪ ಬೇಗ ಹೋಗೋರಂತೆ.
ಅವನು: ಅಡ್ಡಿ ಇಲ್ಲ. ತಾವು ತಮ್ಮ ಪಾಡಿಗೆ ಹೋಗಿ. ಬೇಜಾರ್ ಮಾಡ್ಕೋಬೇಡಿ. ನಂಗ್ ನಡ್ಕೊಂಡ್ ಹೋಗಕ್ಕೆ ಇಷ್ಟ.
ಅವಳು: ಸರಿ ಬಿಡಿ. ಬೈ!!

ಅಂದಿನಿಂದ ಇಬ್ಬರೂ ಒಬ್ಬರನ್ನೊಬ್ಬರು ಮಾತನಾಡಿಸಲಿಲ್ಲ.

Sunday, December 12, 2010

ಪ್ರಾಣಿಗಳೇಕೆ ಮಾತನಾಡುವುದಿಲ್ಲ? - ಒಂದು ಜಾನಪದ ಕಥೆ.

ಇಂದು ಮಧ್ಯಾಹ್ನ ಹೀಗೆ ಮನೆಯಲ್ಲಿ ಹರಟೆ ಹೊಡೆಯುತ್ತಿರುವಾಗ ಮಾವನ ಬಾಯಿಂದ ಹೊಮ್ಮಿ ಬಂದ ಕಥೆ. ಚಿಕ್ಕದಾಗಿ ಚೊಕ್ಕವಾಗಿ ಹೇಳ್ತೀನಿ. ಕೇಳಿ...

ಒಂದಾನೊಂದು ಕಾಲದಲ್ಲಿ, ತುಂಬಾ ಹಿಂದೆ, ತುಂಬಾಂದ್ರೆ ತುಂಬಾ ಹಿಂದೆ ಪ್ರಾಣಿಗಳೆಲ್ಲ ಮಾತಾಡ್ತಾ ಇದ್ದವು. ಎಲ್ಲಾ ಭಾಷೇನೂ ಮಾತಾಡ್ತಾ ಇದ್ದವು. ಜನರೂ, ಪ್ರಾಣಿಗಳು, ಒಬ್ಬರಿಗೊಬ್ಬರು ಮಾತಾಡುತ್ತ ಕಾಲ ಕಳೀತಾ ಇದ್ದರು. ಎಲ್ಲಾ ಸುಭಿಕ್ಷವಾಗಿದ್ದವು.

ಹೀಗಿರೋವಾಗ, ಒಂದಿನ ಏನಾಯ್ತು ಗೊತ್ತ? ಒಂದೂರಲ್ಲಿ ಒಬ್ಬ ಗೃಹಿಣಿ ಸಂಜೆ ಹಾಲು ಕರೆಯೋಕೆ ಅಂತ ಹಟ್ಟಿ ಕಡೆ ಬಂದಳು. ಪ್ರತೀ ದಿನ ಚೆನ್ನಾಗಿ ಮಾತಾಡ್ತಾ ಇದ್ದ ಹಸು, ಈವತ್ತು ಹೇಳಿದ್ದ ಮಾತು ಕೇಳಿ ಅವಳು ಕಂಗಾಲಾದಳು.

ಹಸು: ಹೂ ಹೂ, ಕರಿ ಕರಿ... ಈವತ್ತು ನಿನ್ ಗಂಡನ ಕೊನೆ ದಿನ ಅಲ್ವಾ? ಹೊಟ್ಟೆ ತುಂಬಾ ಹಾಲು ಕೊಡು ಅವನಿಗೆ.

ಹೆಂಗಸು: ಏಯ್! ನಿನ್ಗೆನಾಗಿದೆ ಈವತ್ತು? ಬುದ್ಧಿ ನೆಟ್ಟಗಿದ್ಯಾ ಹೆಂಗೆ?

ಹಸು: ನನಗೇನಾಗಿದೆ? ಚೆನ್ನಾಗೆ ಇದ್ದೀನಿ...

ಹೆಂಗಸು: ಮತ್ತೆ? ಏನೇನೋ ವಟಗುಟ್ಟುತ್ತಾ ಇದ್ದೀಯ?

ಹಸು: ಅಯ್ಯೋ! ಇರೋ ವಿಷಯ ಹೇಳ್ದೆ.

ಹೆಂಗಸು: ಇರೋ ವಿಷ್ಯ? ಅದೇನ್ ಸ್ವಲ್ಪ ಬಿಡಿಸಿ ಹೇಳು.

ಹಸು: ನಾಳೆ ಬೆಳಿಗ್ಗೆ ಹೊತ್ತಿಗೆ ನಿನ್ ಗಂಡ ಶಿವನ ಪಾದ ಸೇರ್ಕೊತಾನೆ. ನೋಡ್ಕೋ ಅಂದೇ ಅಷ್ಟೇ.

ಹೆಂಗಸು: ಏಯ್! ನಾಲಗೆ ಬಿಗಿ ಹಿಡಿದ್ ಮಾತಾಡು. ಇಷ್ಟ್ ವರ್ಷ ದಂಡಿ ದಂಡಿ ಬೂಸಾ, ಹುಲ್ಲು ಹಾಕಿದ್ದಕ್ಕೆ ಈ ಥರ ಶಾಪ ಹಾಕ್ತ ಇದ್ದೀಯ ನಂಗೆ? ನಾನೇನ್ ಕಮ್ಮಿ ಮಾಡಿದ್ದೆ ನಿಂಗೆ?

ಹಸು: ಇದೊಳ್ಳೆ ಕಥೆ ಆಯ್ತಲ್ಲ? ಇದ್ದಿದ್ದ್ ಇದ್ದ ಹಾಗ್ ಹೇಳಿದ್ರೆ ಎದ್ದ ಬಂದ್ ಎದೆಗ್ ಒದ್ದರಂತೆ. ಹಾಗಾಯ್ತು ಕಥೆ. ಏನೋ ನೀನು ನಮ್ಮ ಯಜಮಾಂತಿ. ಮುಂಚೆನೇ ತಿಲಿಸನ ಅಂದ್ರೆ ನೀನ್ ಯಾಕ್ ಹೀಗ್ ಆಡ್ತೀಯ?

ಹೆಂಗಸು: ಇದ್ದಿದ್ದ್ ಇದ್ದ ಹಾಗೆ ಅಂತೀಯಲಾ, ನಿಂಗ್ ಯಾರ್ ಹೇಳಿದ್ದು?

ಹಸು: ಇನ್ನ್ ಯಾರು? ನನ್ ಗಂಡ, ಅದೇ, ಯಮನ ವಾಹನ, ಕೋಣನೇ ಹೇಳಿದ್ದು... ಈವತ್ತ್ ರಾತ್ರಿ ಯಮ ಬಂದು ನಿನ್ನ್ ಗಂಡನ ಪ್ರಾಣ ಹೊತ್ತ್ಕೊಂಡ್ ಹೋಗ್ತಾನಂತೆ.

ಹೆಂಗಸು: ಅಯ್ಯೋ ಅಯ್ಯೋ ಅಯ್ಯೋ!! ಇಷ್ಟ್ ಬೇಗ ನಾನ್ ಮುಂಡೆ ಆಗೋಗ್ತೀನ? ನನ್ನ ಗಂಡಂಗೆ ಇಷ್ಟೇನಾ ಆಯುಷ್ಯ ಇರೋದು? ಇದಕ್ಕೇನು ಮಾಡಕ್ಕಾಗಲ್ವಾ? ಅಯ್ಯೋ ದೇವ್ರೇ... ಇದೇನ್ ಗತಿ ತಂದೆ ನಂಗೆ?

ಹಸು: ನಿನ್ನ್ ಸ್ಥಿತಿ ನೋಡಿ ಅಯ್ಯೋ ಪಾಪ ಅನ್ನ್ಸತ್ತೆ...ನಿಂಗ್ ಸಹಾಯ ಮಾಡ್ಬೇಕು ಅಂತಾನೂ ಅನ್ನ್ಸತ್ತೆ. ಆದ್ರೆ ಏನ್ ಮಾಡೋದು? ವಿಧಿ...

ಹೆಂಗಸು: ಇದಕ್ಕೆ ಏನಾದ್ರೂ ಉಪಾಯ ಇದ್ಯಾ? ನಿನ್ನ್ ದಮ್ಮಯ್ಯ ಅಂತೀನಿ... ನಂಗೆ ಸಹಾಯ ಮಾಡು...

ಸ್ವಲ್ಪ ಹೊತ್ತು ಯೋಚಿಸಿದ ಹಸು,

ಹಸು: ನೋಡಮ್ಮ, ಒಂದ್ ಉಪಾಯ ಮಾಡಬಹುದು... ಈಗ ನೀನು ಹಾಲು ಕರ್ಕೊಂಡು ಮನೆಗೆ ತೊಗೊಂಡ್ ಹೋಗ್ತೀಯಲ್ಲಾ? ಅದನ್ನ ಮನೆ ಒಳಗ್ ಒಯ್ಯಬೇಡ. ಹಾಗೆ ಹೊಸಿಲಲ್ಲಿ ಇಡು. ಯಮ ಬಂದವನು ಒಳಗೆ ಬರೋಕೆ ಮುಂಚೆ, ಹೊಸಿಲಲ್ಲಿ ಹಾಲು ನೋಡ್ತಾನಲ್ಲ, ಅದನ್ನ ಕುಡೀತಾನೆ. ಹಾಲು ಕುಡಿದ ಮೇಲೆ ಅವನಿಗೆ ಅದೇ ಮನೆ ಯಜಮಾನನ್ ಪ್ರಾಣ ಹೇಗ್ ತೊಗೊಂಡ್ ಹೋಗ್ತಾನೆ? ಉಂಡ ಮನೆಗೆ ದ್ರೋಹ ಮಾಡಿದ ಹಾಗಾಗಲ್ವಾ? ಹಾಗೆ ವಾಪಸ್ ಹೋಗ್ತಾನೆ. ನಿನ್ನ್ ಗಂಡನ ಪ್ರಾಣಾನೂ ಉಳಿಯತ್ತೆ.

ಅವಳು ಹಾಗೇ ಮಾಡ್ತಾಳೆ. ಯಮ ಬರ್ತಾನೆ. ಹೊಸಿಲಲ್ಲಿ ಹಾಲು ನೋಡ್ತಾನೆ. ಕುಡೀತಾನೆ. ಹಾಲು ಕುಡಿದ ಋಣ ಅವನನ್ನ ಕರ್ಮಭ್ರಷ್ಟನನ್ನಾಗಿ ಮಾಡುತ್ತದೆ. ಮಾರನೆ ದಿನವೂ ಬರುತ್ತಾನೆ, ಆ ದಿನವೂ ಹಾಲಿರುತ್ತದೆ, ಕುಡಿದ ಮೇಲೆ ವಾಪಸ್ ಹೋಗುತ್ತಾನೆ. ಹೀಗೆ ಸುಮಾರು ದಿನ ನಡೆಯುತ್ತದೆ.

ಕೊನೆಗೆ ಯಮನಿಗೆ ಇದರಲ್ಲೇನೋ ಮಸಲತ್ತಿದೆ ಎಂದು ತಿಳಿಯುತ್ತದೆ. ಇದನ್ನು ಹೇಗಾದರೂ ಮಾಡಿ ಪತ್ತೆ ಹಚ್ಚಬೇಕೆಂದು ಉಪಾಯವಾಗಿ ಆ ಗೃಹಿಣಿಯ ಮೆನೆಗೆ ಮಾರುವೇಷದಲ್ಲಿ ಹೋಗುತ್ತಾನೆ. ಲೋಕಾಭಿರಾಮವಾಗಿ ಮಾತನಾಡುತ್ತ ಈ ವಿಷಯಕ್ಕೆ ಹೇಗೋ ಬರುತ್ತಾನೆ. ಇವನ ಸೌಮ್ಯ ಗುಣಕ್ಕೆ ಮೆಚ್ಚಿ ಅವಳು ಗುಟ್ಟನ್ನು ಬಿಚ್ಚಿಡುತ್ತಾ ಇದೇ ವೃತ್ತಾಂತವನ್ನು ಯಮನಿಗೊಪ್ಪಿಸುತಾಳೆ.

ಇದನ್ನು ತಿಳಿದ ಯಮನು ಕುಪಿತನಾದನು. ಇನ್ನು ಮುಂದೆ ಹೀಗಾಗದಿರಲು ಮನುಷ್ಯನ ಬಿಟ್ಟು ಎಲ್ಲಾ ಪ್ರಾಣಿಗಳಿಗೂ ಮಾತು ನಿಂತು ಹೋಗಲಿ ಎಂದು ಶಾಪವಿಟ್ಟನು.

ಅಂದಿನಿಂದ ಮನುಷ್ಯನ ಹೊರತಾಗಿ ಎಲ್ಲಾ ಪ್ರಾಣಿಗಳ ಬಾಯಿ ಬಿದ್ದು ಹೋಯಿತು.