Showing posts with label ಚಿತ್ರ. Show all posts
Showing posts with label ಚಿತ್ರ. Show all posts

Thursday, December 17, 2009

ಸೋನು ನಿಗಮ್ ಹಾಗು ಕನ್ನಡ ಹಾಡುಗಳು.

ಈ ಬ್ಲಾಗನ್ನು ಓದುವ ಹಲವರಿಗೆ ನನ್ನ ಸಾಷ್ಟಾಂಗ ನಮಸ್ಕಾರಗಳು. ನನ್ನ ಸೋಂಬೇರಿತನವನ್ನು  ಮನ್ನಿಸಿ.

ಕನ್ನಡ ಚಿತ್ರಗೀತೆಗಳು  ಹಾಗು ಪರಕೀಯ ಗಾಯಕರು ಎಂದು ಪ್ರಕಟವಾಗಬೇಕಿದ್ದ ಈ ಅಂಕಣವು ಹಂತ ಹಂತವಾಗಿ ತೆರೆದುಕೊಳ್ಳಲಿದೆ. ಇದಕ್ಕೆ ಪ್ರೇರಣೆ ಸೀನಈ ಹಳೆಯ ಅಂಕಣ.

ಕನ್ನಡ ಚಿತ್ರಗೀತೆಗಳಲ್ಲಿ ಎಂದಿನಂತೆ ಪರಕೀಯ ಗಾಯಕರ ಹಾವಳಿ ಇದ್ದಿದ್ದೇ. ಇತ್ತೀಚಿನ ದಿನಗಳಲ್ಲಿ ಅದು ಇನ್ನು ಹೆಚ್ಚಿದೆ ಎನ್ನುವ ಮಾತು ಆಗಾಗ ಕೇಳಿಬರುತ್ತದೆ. ಇದರ ಇತಿಹಾಸವನ್ನು ಸ್ವಲ್ಪ ಮಟ್ಟಿಗೆ ತಿಳಿದುಕೊಳ್ಳೋಣ.

೧೯೩೪ನೇ ಇಸವಿಯಿಂದ ಪ್ರಾರಂಭವಾದ ಕನ್ನಡ ಚಿತ್ರರಂಗ, ಮೂಕಿಯಿಂದ ಟಾಕಿಯಾದದ್ದು ಸರಿ ಸುಮಾರು ೫೦ನೆ ದಶಕದಲ್ಲಿ ಎಂದು ಹಲವರ ಅಂಬೋಣ. [ಆಸಕ್ತರು ಜಾಲದಲ್ಲಿ ಹುಡುಕಾಡಿ] ಆಗಿನ ಕಾಲದಿಂದಲೂ ಕನ್ನಡದಲ್ಲಿ ಪರಕೀಯರ ಹಾಡುಗಾರಿಕೆಯೇ. ಸೀರ್ಕಾಳಿ ಗೋವಿಂದನ್, ಘಂಟಸಾಲ, ಪಿ ಸುಶೀಲ, ಹಲವರು. ಆಗಿನ ಕಾಲದಲ್ಲಿ ಕರ್ನಾಟಕದಲ್ಲಿ ಸ್ಟೂಡಿಯೋ ವ್ಯವಸ್ತೆಯಿಲ್ಲದಿರುವುದೂ ಇದಕ್ಕೆ ಒಂದು ಪ್ರಮುಖ ಕಾರಣವಾಗಿರಬಹುದು. ಇದೇ ಸಾಲಿನಲ್ಲಿ ಬರುವವರು ಪಿ. ಬಿ. ಶ್ರೀನಿವಾಸ್, ಎಸ್. ಜಾನಕಿ, ಎಸ್. ಪಿ. ಬಾಲಸುಬ್ರಮಣ್ಯಂ, ಎಸ್. ಪಿ. ಶೈಲಜಾ, ಎಲ್. ಆರ್. ಈಶ್ವರಿ, ವಾಣಿ ಜಯರಾಂ, ಕೆ. ಎಸ್. ಚಿತ್ರ, ಕೆ. ಜೆ. ಏಸುದಾಸ್, ಇನ್ನು ಹಲವರು.

ಇವರೆಲ್ಲ ದಕ್ಷಿಣ ಭಾರತದ ಪ್ರಮುಖರಾಯ್ತು.

ಉತ್ತರ ಭಾರತದವರ ಕಡೆ ಮುಖ ಮಾಡಿದರೆ ನಮಗೆ ಸಿಗುವುದು, ಮೊಹಮ್ಮದ್ ರಫಿ (ಒಂದು ಹಾಡು), ಕಿಶೋರ್ ಕುಮಾರ್ (೧ ಹಾಡು), ಲತಾ ಮಂಗೇಶ್ಕರ್ (೧ ಹಾಡು) ಆಶಾ ಭೋಂಸ್ಲೆ (೧ ಹಾಡು), ಮನ್ನಾ ಡೇ (೨-೩ ಹಾಡು). ಇವರೆಲ್ಲ ಹಳಬರು. ಹೊಸಬರಲ್ಲಿ ಕುಮಾರ್ ಸಾಣು, ಉದಿತ್ ನಾರಾಯಣ್, ಸೋನು ನಿಗಮ್, ಅಲ್ಕಾ ಯಾಗ್ನಿಕ್, ಸಾಧನ ಸರ್ಗಂ, ಕುನಾಲ್ ಗಾಂಜಾವಾಲ, ಅನುರಾಧ ಪೌದ್ವಾಲ್, ಕವಿತಾ ಕೃಷ್ಣಮೂರ್ತಿ, ಶ್ರೇಯಾ ಘೋಶಾಲ್, ಕೈಲಾಶ್ ಖೇರ್, ಶಾನ್ ಪ್ರಮುಖರು.

ಇವರ ಬಗ್ಗೆ ಇನ್ನೊಮ್ಮೆ ಯಾವಾಗಲಾದರು ಹೇಳಿದರಾಯ್ತು. ಈಗ ಈ ಅಂಕಣದ ಕೇಂದ್ರ ಬಿಂದು, ಸೋನು ನಿಗಮರ ಬಗ್ಗೆ ಬರೆಯೋಣ.

ಹೆಚ್ಚಿನ ಪಕ್ಷ ಉತ್ತರ ಭಾರತದ ಎಲ್ಲರೂ ಮೂಗಿನಿಂದಲೇ ಹಾಡುತ್ತಾರೆ. ಶ್ರೇಯಾ ಘೋಶಾಲ್ ಒಬ್ಬರು ಅಪವಾದ. ನಮ್ಮ ಸೋನು ನಿಗಮರಂತು ಮೂಗೀಶ್ವರನ ಅಪರಾವತಾರ. ಸರಿ ಸುಮಾರು ೨೦೦೦ ನೇ ಇಸವಿಯಿಂದ ಕನ್ನಡದಲ್ಲಿ ಹಾಡಲು ಬಂದ ಸೋನುವನ್ನು ಇಲ್ಲಿಯ ಹೆಚ್ಚಿನ ಜನ ಅಭಿನಂದಿಸಿದರು. ಸೋನು, ಹಿಂದಿಯಲ್ಲಿ ಉತ್ತಮ ಹಾಡುಗಾರ ನಿಜ. ಆದರೆ ಅವರನ್ನು ಕನ್ನಡಕ್ಕೆ ತಂದವರು ಕನ್ನಡದ ಉಚ್ಚ್ಹಾರವನ್ನು ಸರಿಯಾಗಿ ಕಲಿಸದೇ ಹಾಡಿಸುವುದು ಅಪರಾಧವೇ ಸರಿ.

೨೦೦೬ ನೇ ಇಸವಿಯ ತನಕ ವರ್ಷಕ್ಕೆ ೨-೩ ಕನ್ನಡ ಹಾಡುಗಳನ್ನು ಹಾಡುತ್ತಿದ್ದ ಸೋನು, ಏಕ ದಂ, ಪ್ರಸಿದ್ಧರಾದದ್ದು ಮುಂಗಾರು ಮಳೆಯ ಹಾಡುಗಳಿಂದ.

೨೦೦೬ರ ತನಕ ಸೋನು ನಿಗಮರ ಕೆಲವು ಪ್ರಸಿದ್ಧ ಕನ್ನಡ ಹಾಡುಗಳೆಂದರೆ:
೧. ಟೈಟಾನಿಕ್ ಹೀರೋಯಿನ್ ನನ್ನ ಚೆಲುವೆ (ಚಿತ್ರ: ಸ್ನೇಹ ಲೋಕ, ಸಾಹಿತ್ಯ, ಸಂಗೀತ: ಹಂಸಲೇಖ)
೨. ಮೊನಾಲೀಸಾ ಮೊನಾಲೀಸಾ (ಚಿತ್ರ: ಮೋನಲೀಸ, ಸಂಗೀತ: ವಲೀಶ ಸಂದೀಪ್)
೩. ಅಂಟ್ ಅಂಟ್ ಅಂಟ್ (ಚಿತ್ರ: ಸೂಪರ್ ಸ್ಟಾರ್,  ಸಾಹಿತ್ಯ, ಸಂಗೀತ: ಹಂಸಲೇಖ)
೪. ಉಸಿರೇ, ಉಸಿರೇ (ಚಿತ್ರ: ಹುಚ್ಚ, ಸಂಗೀತ: ರಾಜೇಶ್ ರಾಮನಾಥ್) 

ನಿಮಗೆ ತಿಳಿದಿರುವ ಹಲವಾರು ಹಾಡುಗಳನ್ನು ನಾನು ಬಿಟ್ಟಿರಬಹುದು. ಕ್ಷಮೆಯಿರಲಿ.

ಈ ಮೇಲ್ಕಂಡ ಹಾಡುಗಳೆಲ್ಲದರ ಸಾಹಿತ್ಯ, ಎಷ್ಟು ಬಾರಿ ಕೇಳಿದರು ಬೇಜಾರಾಗುವುದಿಲ್ಲ. (ನನ್ನ ಅಭಿಪ್ರಾಯದಲ್ಲಿ ೪ ನೇ ಹಾಡು, ಉಸಿರೇ, ಉಸಿರೇ ಕೂಡ ಕೇಳಲಾಗುವುದಿಲ್ಲ, ಆದರೆ ಹಲವರಿಗೆ ಹಾಗನ್ನಿಸುವುದಿಲ್ಲ, ಇರಲಿ...)

ಆದರೆ ಈ ಮುಂಗಾರು ಮಳೆ ಚಿತ್ರ ಬಂತು ನೋಡಿ, ಅದರ ಹಾಡುಗಳು ಪ್ರಸಿದ್ಧವಾಗಿದ್ದೆ ಆಗಿದ್ದು, ಸೋನು ನಿಗಮರ ಕನ್ನಡ ಹಾಡುಗಾರಿಕೆ ಬೇರೆಯದೇ ಮಟ್ಟವನ್ನು ಮುಟ್ಟಿತು. ಆ ಚಿತ್ರವನ್ನು ಜನ ಅದ್ಯಾಕೆ ಅಷ್ಟು ಹಚ್ಚಿಕೊಂಡರು ಎಂದು ನನಗೆ ಇನ್ನೂ ಸ್ಪಷ್ಟವಾಗಿಲ್ಲ. ಆ ಚಿತ್ರದಲ್ಲಿ ಇಷ್ಟವಾಗಬಹುದಾದದ್ದು ಒಂದಿದ್ದರೆ ಅಲ್ಲಿನ ಛಾಯಾಗ್ರಹಣ. ಅದೊಂದು ಬಿಟ್ಟರೆ ಆ ಚಿತ್ರದ ಗಣೇಶ್, ಪೂಜಾ ಗಾಂಧಿ ಅಭಿನಯವಾಗಲಿ, ಮನೋ ಮೂರ್ತಿಗಳ ಸಂಗೀತವಾಗಲಿ, ಯೋಗರಾಜಭಟ್ಟರ ನಿರ್ದೇಶನವಾಗಲಿ, ಭಟ್ಟರ ಹಾಗು ಕಾಯ್ಕಿಣಿಯವರ ಸಾಹಿತ್ಯವಾಗಲಿ  ದೈನ್ಯವೆನ್ನಿಸುತ್ತದೆ. ಕಥೆಯಂತೂ ಬಾಲಿಶವಾಗಿದೆ. ಇರಲಿ ಬಿಡಿ. ನಾವು ಈಗ ಮುಂಗಾರು ಮಳೆಯ ವಿಮರ್ಶೆ ಮಾಡುತ್ತಿಲ್ಲ.

ಇದಾದನಂತರ ಬಂದ ಸೋನು ನಿಗಮರ ಕೆಲವು ಹಾಡುಗಳ ಸಾಹಿತ್ಯದ ಬಗ್ಗೆ ನಾನು ಬರೆಯಲಿಚ್ಚಿಸುತ್ತೇನೆ. ಇಲ್ಲಿ ಒಂದು ವಿಷಯ ಸ್ಪಷ್ಟಪಡಿಸುತ್ತೇನೆ. ನನಗೆ ಇಲ್ಲಿ ಜಯಂತ ಕಾಯ್ಕಿಣಿಯವರ ಬಗ್ಗೆ ಅಪಾರ ಗೌರವವಿದೆ. ಮನೋ ಮೂರ್ತಿ ಹಾಗು ಸೋನು ನಿಗಮರ ಬಗ್ಗೆ ಯಾವುದೇ ವೈಷಮ್ಯವಿಲ್ಲ. ಹಾಗೆಯೇ ಈ ಹಾಡುಗಳನ್ನು ಹೊರತರುವಲ್ಲಿ ಕಷ್ಟಪಟ್ಟ ಎಲ್ಲರ ಬಗ್ಗೆ ನನ್ನ ಗೌರವ, ಸಹಾನುಭೂತಿ, ಕಳಕಳಿ ಇದೇ. ಯಾರೂ ಅನ್ಯತಾ ಭಾವಿಸಬಾರದೆಂದು ವಿನಂತಿ.

ಮೊದಲೇ ಹೇಳಿದಂತೆ, ಮುಂಗಾರು ಮಳೆಯ ನಂತರ ಬಂದ ಹೆಚ್ಚಿನ ಸೋನು ಹಾಡುಗಳು ಒಂದೇ ಕಾಯ್ಕಿಣಿಯವರು ಬರೆದದ್ದು ಅಥವಾ ಮನೋ ಮೂರ್ತಿ ಸಂಗೀತ ಸಂಯೋಜಿಸಿದ್ದು ಅಥವಾ ಎರಡೂ. ಇತರರೂ ಮಾಡಿದ್ದಾರೆ ಆದರೆ ಇವರುಗಳು ಜಾಸ್ತಿ. ಈ ಎಲ್ಲಾ ಹಾಡುಗಳಲ್ಲಿ ಒಂದು ಪ್ರಮುಖ ಗುಣ, ಹಾಡಿನ ದೈನ್ಯತೆ. ಹೆಚ್ಚಿನ ಪಕ್ಷ ಎಲ್ಲ ಹಾಡುಗಳಲ್ಲಿಯೂ ದೈನ್ಯತೆ ಎದ್ದು ಕಾಣುತ್ತದೆ. ಹಲವನ್ನು ಇಲ್ಲಿ ಉದಾಹರಿಸುತ್ತೇನೆ.

೧. ಚಿತ್ರ: ಮುಂಗಾರು ಮಳೆ
     ಹಾಡು: ಅನಿಸುತಿದೆ ಯಾಕೋ ಇಂದು...
     ಸಾಹಿತ್ಯ: ಜಯಂತ್ ಕಾಯ್ಕಿಣಿ.
     ಸಂಗೀತ: ಮನೋ ಮೂರ್ತಿ.
      ದೈನ್ಯತೆಯ ಪರಮಾವಧಿಯ ಸಾಲುಗಳು:  "ನೀನೇನೆ ನನ್ನವಳೆಂದು..." "ಇನ್ನ್ಯಾರ ಕನಸಲೋ ನೀನು ಬಂದರೆ ತಳಮಳ" "ನನ್ನ ಹೆಸರ ಕೂಗೆ ಒಮ್ಮೆ ಹಾಗೆ ಸುಮ್ಮನೆ"

೨. ಚಿತ್ರ: ಗಾಳಿಪಟ
     ಹಾಡು: ಮಿಂಚಾಗಿ ನೀನು ಬರಲು
     ಸಂಗೀತ: ಹರಿಕೃಷ್ಣ
     ದೈನ್ಯತೆಯ ಪರಮಾವಧಿ: "ನಾ ನಿನ್ನ ಕನಸಿಗೆ ಚಂದಾದಾರನು, ಚಂದಾ ಬಾಕಿ ನೀಡಲು ಬಂದೇ ಬರುವೆನು"
     ನನ್ನ ಅನಿಸಿಕೆ: ಅಯ್ಯೋ ಬೇಡ ಬಿಡು ಗುರು. ನಿಂಗ್ ಫ್ರೀಯಾಗೆ ಕೊಡ್ತೀನಿ. ನನ್ನ ಗೆಳೆಯ ಸೀನ ಇದಕ್ಕೆ ಅಣಕ ಹಾಡಿದ್ದ. "ನಾ ನಿನ್ನ ಚಪ್ಪಲಿಯ ಚಮ್ಮಾರನು, ಕಿತ್ತೋದ್ ಚಪ್ಪಲಿ ಹೊಲಿಯಲು ಬಂದೇ ಬರುವೆನು... ಯಪ್ಪಾ!!)

೩. ಚಿತ್ರ: ನವಗ್ರಹ
     ಹಾಡು: ಕಣ್ಣ ಕಣ್ಣ ಸಲಿಗೆ
     ಸಂಗೀತ: ಹರಿಕೃಷ್ಣ
     ದೈನ್ಯತೆಯ ಪರಮಾವಧಿ: ಇಡೀ ಹಾಡೇ ದೈನ್ಯವಾಗಿದೆ. ಅದರಲ್ಲಿಯೂ ಎರಡನೆಯ ಚರಣದಲ್ಲಿ "ಪ್ರೀತೀ ಮಾಡೇ" ಅಂತೂ ಅರಚಿಕೊಳ್ಳುವಂತಿದೆ. ಈ ಹಾಡು ಕೇಳಿದಾಗಲೆಲ್ಲ ಮೈ ಪರಚಿಕೊಳ್ಳುವಂತಾಗುತ್ತದೆ.

೪. ಚಿತ್ರ: ಸರ್ಕಸ್
     ಹಾಡು: ಪಿಸುಗುಡಲೇ... ಸವಿ ಮಾತೊಂದ...
     ಸಂಗೀತ: ಎಮಿಲ್
     ದೈನ್ಯತೆಯ ಪರಮಾವಧಿ: ಅಸಂಬದ್ಧ ಕಲ್ಪನೆಗಳು. "ನನ್ನ ನೂರು ಆಸೆಗೆಲ್ಲ, ಕೋಟಿ ಕೋಟಿ ಬಣ್ಣಗಳ ಕನಸಿನ ಅಂಗಿಯ ತೊಡಿಸಿ...."
     ಅಣಕ: ಇನ್ನ್ ಏನ್ ಏನ್ ಆಸೆ ಎಲ್ಲ ಇಟ್ಟುಕೊಂಡು ಇದ್ದೀಯ  ಸಿವಾ?

೫. ಚಿತ್ರ: ಮಳೆಯಲಿ... ಜೊತೆಯಲಿ...
     ಹಾಡು: ನೀ ಸನಿಹಕೆ ಬಂದರೆ...
     ಸಂಗೀತ: ಹರಿಕೃಷ್ಣ
     ದೈನ್ಯತೆಯ ಪರಮಾವಧಿ: ಶೀರ್ಷಿಕೆಯೇ ಹೇಳುತ್ತದೆ. "ನೀ ಸನಿಹಕೆ ಬಂದರೆ ಹೃದಯದ ಗತಿ ಏನು?"
     ಅಣಕ: ಹುಡ್ಗೀರ, ಇವನ್ ಹತ್ರ ಹೋಗಬೇಡಿರಮ್ಮ.

ಹೇಳುತ್ತಾ ಹೋದರೆ ಈ ಸರತಿ ತುಂಬಿ ಹೋಗಬಹುದು. ಸೋನು, ಮನೋ, ಕಾಯ್ಕಿಣಿ ತ್ರಯರು ಹೊರತಂದ ಆಲ್ಬಮ್ "ನೀನೆ, ಬರಿ ನೀನೆ" ಅಲ್ಲಿ ದೈನ್ಯತೆಯನ್ನು ಯಥೇಚ್ಚವಾಗಿ ಕಾಣಬಹುದು. ಇದರಲ್ಲಿ ಇನ್ನು ಹಲವು ಗಾಯಕರ ಪಾತ್ರವೂ ಇದೇ. ಆದರೆ ಸೋನು ನಿಗಮ್ ಎಲ್ಲರನ್ನು ಮೀರಿಸಿದ್ದಾರೆ. ದೈನ್ಯತೆಯಲ್ಲಿ.

ಮೇಲೆ ಹೇಳಿದ ಹಾಡುಗಳು ಶೇಕಡಾ ೯೮% ಜನರಿಗೆ ಅಚ್ಚು ಮೆಚ್ಚು. ಅದು ಅವರ ಇಚ್ಛೆ. ನನ್ನ ಅಭಿಪ್ರಾಯವನ್ನು ಇಲ್ಲಿ ನಿರ್ದಾಕ್ಷಿಣ್ಯವಾಗಿ ಮಂಡಿಸಿದ್ದೇನೆ. ಅಂಕಣವನ್ನು ಓದಿ ನೋವಾಗಿದ್ದರೆ ಕ್ಷಮೆಯಿರಲಿ.

ಕೊನೆಯದಾಗಿ ಒಂದು ಮಾತು. ಈ ಎಲ್ಲ ಹಾಡುಗಳನ್ನು ಇಷ್ಟಪಡುವವರು ದೈನ್ಯತೆಯೇ ಸಂಗೀತ, ದೈನ್ಯತೆಯೇ ಮಾಧುರ್ಯವೆಂದು (Melody) ತಿಳಿದಿದ್ದಾರೆ.  ಹಾಗೆಂದು ಘಂಟಾಘೋಷವಾಗಿ ಎಲ್ಲ ಕಡೆ ಹೇಳಿಕೊಂಡು ಬರುತ್ತಾರೆ. ಇಂಥವರಿಗೆ ನನ್ನದೊಂದು ಸಲಹೆ. ದೈನ್ಯತೆಯನ್ನು ಮೀರಿ ಸಂಗೀತವಿದೆ. ಅದರಲ್ಲಿ ಬರಿಯ ಸಂತೋಷವಿದೆ. ಉದಾಹರಣೆಗೆ ಹಂಸಲೇಖರ ಹಾಡುಗಳನ್ನು ಕೇಳಿ, ಸಾಧು ಕೋಕಿಲರವರ ಹಲವು ಹಾಡುಗಳನ್ನು ಕೇಳಿ. (ಹೌದು, ಸಾಧು ಅವರು ಕೆಲವು ಹಾಡುಗಳನ್ನು ಅಚ್ಚು ಇಳಿಸುತ್ತಾರೆ. ಆದರೂ ಅವರ ಹಲವು ಹಾಡುಗಳಲ್ಲಿ ಆನಂದವಿದೆ, ಉದಾ: ಗಂಡುಗಲಿಯ ಹಾಡುಗಳು, ಸವ್ಯಸಾಚಿಯ ಹಾಡುಗಳು, ನೋ. ೧ ಚಿತ್ರದ ಹಾಡುಗಳು, ಇಂತಿ ನಿನ್ನ ಪ್ರೀತಿಯ ಹಾಗು ದೇವ್ರು ಚಿತ್ರದ ಹಾಡುಗಳು) ಕೇಳಿ ನೋಡಿ. ಈ ಹಾಡುಗಳಲ್ಲಿ ದೈನ್ಯತೆ ಇಲ್ಲ. ಹಾಗೆಂದು ಇವರಾರೂ ದೈನ್ಯತೆಯ ಹಾಡುಗಳನ್ನು ಮಾಡಿದವರೇ ಅಲ್ಲವೆಂದಲ್ಲ. ಅತಿ ವಿರಳ. ಇಲ್ಲವೆಂದೇ ಹೇಳಬಹುದು. ವಯ್ಯಕ್ತಿಕವಾಗಿ ನನಗೆ ಇಂತಹ ಹಾಡುಗಳು ಇಷ್ಟವಾಗುತ್ತವೆ.

ಸರಿ. ಸೋನು (ನೋಸು??) ನಿಗಮರ ಅಭಿಮಾನಿಗಳೇ, ಅನಿಸಿಕೆ ಬರೆಯಲು ತಯಾರಾ?

Saturday, August 01, 2009

ಉಪೇಂದ್ರ ನಿರ್ದೇಶನದ ಅಭಿನಯದ ಹೊಸ ಚಿತ್ರ.

ತಡವಾಗಿ ಹೇಳ್ತಾ ಇರೋದಕ್ಕೆ ಕ್ಷಮೆ ಇರಲಿ. ನಿನ್ನೆ ಪ್ರಜಾವಾಣಿ ಕೊನೆ ಪುಟ ಓದ್ತಾ ಇದ್ದಾಗ ಇದನ್ನು ನೋಡಿ ಬಹಳನೇ ಖುಷಿ ಆಯಿತು.

ಉಪೇಂದ್ರ ತಮ್ಮ ಹೊಸ ನಿರ್ದೇಶನದ ಚಿತ್ರ ತಯಾರಿಸೋಕೆ ನಿರ್ಧಾರ ಮಾಡಿದ ಹಾಗಿದೆ. ಎಲ್ಲ ಹಳೆಯ ನಿರ್ಧಾರಗಳನ್ನು ಹುಸಿಯಾಗಿಸಿ ಒಂದು ಹೊಸ ಚಿತ್ರ ತಯಾರಿಸಲು ಮುಂದಾಗಿದ್ದಾರೆ ಎಂದು ಹೇಳಲು ಹೊಸ ಮಾಹಿತಿ ದೊರಕಿದೆ. ಪ್ರಜಾವಾಣಿಯಲ್ಲಿ ಖಾತೆ ಇಲ್ಲದವರಿಗೆ ಅದರ ನಕಲನ್ನು ನಾನು ತೆಗೆದಿದ್ದೇನೆ ಆದರೆ ಅದರ ಸಂಪೂರ್ಣ ಹಕ್ಕುಗಳು ಪ್ರಜಾವಾಣಿ ಹಾಗು ಈ ಚಿತ್ರದ ನಿರ್ಮಾಪಕರಿಗೆ ಸಲ್ಲುತ್ತದೆ.


ಈ ಹಿಂದೆ ಅವರು ನಿರ್ದೇಶನ ಮಾಡುತ್ತಿದ್ದರೆ ಎಂದು ಹೇಳುವ ೨-೩ ಸುದ್ದಿ ಗಾಂಧಿನಗರಿಯಲ್ಲಿ ಓಡಾಡುತ್ತಿತ್ತು.
೧. ತಮಸೋಮಾ ಜ್ಯೋತಿರ್ಗಮಯ, ನಾಯಕನಾಗಿ ಶಿವರಾಜ್ ಕುಮಾರ್ , ನಾಯಕಿಯಾಗಿ ಪ್ರಿಯಾಂಕ (ಉಪೇಂದ್ರ ರ ಹೆಂಡತಿ) ಅಭಿನಯಿಸುತ್ತಾರೆ ಎಂದು ಇತ್ತು.
೨. ಲಂಡನ್ ಗೌಡ, ಉಪೇಂದ್ರ ನಾಯಕರಾಗಿ ಸ್ನೇಹ ಉಳ್ಳಾಲ್ ನಾಯಕಿಯಾಗಿ ಅಭಿನಯಿಸುತ್ತಾರೆ ಎಂದು ಇತ್ತು. (ಕೋಣೆಗೆ ತಿಳಿಯಿತು, ಇದು, ಯಾವುದೋ ಹಿಂದಿ ಸಿನೆಮಾ ದ ರಿಮೇಕ್ ಎಂದು.
೩. ಇದೀಗ ನಿನ್ನೆಯಿಂದ ಚಾಲ್ತಿಯಲ್ಲಿರುವ, ಉಪೇಂದ್ರ ಅಭಿನಯದ, ಅವರದೇ ನಿರ್ದೇಶನದ ಸೂಪರ್ ಅನ್ನುವ ಚಿಹ್ನೆಯ ಚಿತ್ರ.

ನಿನ್ನೆ ಈ ಸುದ್ದಿ ಕೇಳಿ ಮಜ್ಜಿಗೆ ಕುಡಿದಷ್ಟು ಸಂತೋಷ ಆಯ್ತು. (ನಂಗೆ ಹಾಲು ಕುಡಿಯೋದು ಅಷ್ಟಕ್ಕೆ ಅಷ್ಟೆ). =)

ಈ ಮೇಲಿನ ಮೂರು ಚಿತ್ರಗಳಲ್ಲಿ ಮೂರನೆಯದು ಹೆಚ್ಚು ಪ್ರಸ್ತುತ ಎನ್ನಿಸುತ್ತದೆ. ಕಾರಣಗಳು ಇಂತಿವೆ.

೧. ಮುಖ್ಯವಾಗಿ, ಮೊದಲೆರಡೂ ಉದ್ದ ಹೆಸರಿನ ಚಿತ್ರಗಳು. ಉಪೇಂದ್ರ ತಮ್ಮ ಚಿತ್ರಗಳಿಗೆ ಚಿಕ್ಕದಾಗಿ ಚೊಕ್ಕವಾಗಿ ಹೆಸರು ಇಡುವುದು ಹಿಂದಿನಿಂದ ಬಂದ ಪದ್ಧತಿ. (ತರ್ಲೆ ನನ್ ಮಗ, ಆಪರೇಷನ್ ಅಂತ ಇದಕ್ಕೆ ಅಪವಾದ), ಬೇರೆ ಎಲ್ಲ ಸಿನಿಮಾ ತೆಗೆದುಕೊಂಡರೂ ಹೆಸರು ಕೇಳಿದ ತಕ್ಷಣ ಸಿನಿಮಾ ನೋಡುವ, ಎನ್ನಿಸುವಂಥ ಶೀರ್ಷಿಕೆಗಳು. ಕೆಲವು ಚಿತ್ರಗಳ ಹೆಸರನ್ನು ಉಚ್ಚರಿಸಲು ತಡಬಡಾಯಿಸುತ್ತಾ ಇದ್ದರು. (ಉದಾ: ಶ್!, ಸ್ವಸ್ತಿಕ್,) ಇದು ಅದೇ ಸಾಲಿಗೆ ಸೇರುವ ಶೀರ್ಷಿಕೆ.

೨. ಮೊದಲೆರಡು ಚಿತ್ರಗಳ ಯಾವುದೇ ಪೋಸ್ಟರ್ ಇದುವರೆಗೆ ಕಂಡಿಲ್ಲ. ಇದು ಸುದ್ದಿ ಮಾಡಿದ್ದೆ ಪೋಸ್ಟರ್ನಿಂದ. ಅದಕ್ಕೆ ಇದು ಅತಿ ಶೀಘ್ರದಲ್ಲಿ ಸೆಟ್ಟೇರಲಿರುವ ಚಿತ್ರ ಎಂದು ನನ್ನ ಅಂಬೋಣ.

೩. ಚಿತ್ರದ ಪೋಸ್ತೆರಿನಲ್ಲೂ ಸುಮಾರು ವಿಶೇಷಗಳು ಇರುತ್ತವೆ. ಇದರಲ್ಲೂ ಅಂತ ಟಿಪಿಕಲ್ ಉಪೇಂದ್ರ ರ ವಿಶೇಷತೆಯನ್ನು ನಾವು ಕಾಣಬಹುದು.

ಇದು ಇನ್ನು ಹಲವು ಭಾಷೆಗಳಲ್ಲಿ ತೆರೆ ಕಂಡರೂ , ಇದು ಕನ್ನಡ ಸಿನಿಮಾ, ಕನ್ನಡಿಗನ ಸಿನಿಮಾ, ಕನ್ನಡಿಗರ ಸಿನಿಮಾ ಅನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.

ಅದಕ್ಕೆ ಇದು ಪಕ್ಕಾ ಉಪೇಂದ್ರರ ಚಿತ್ರ ಎಂದು ಖಚಿತ ಪಡಿಸಿಕೊಳ್ಳುತ್ತ, ಈ ಚಿತ್ರ ಸೆಟ್ಟೇರಿ, ಬಿಡುಗಡೆ ಆಗಿ ಶತದಿನೋತ್ಸವ ಆಚರಿಸಲಿ ಎಂದು ಕೋರುತ್ತ ಈ ಅಂಕಣವನ್ನು ಮುಗಿಸುತ್ತೇನೆ.

Monday, April 13, 2009

ಉಪೇಂದ್ರ ನಿರ್ದೇಶನದ ಹೊಸ ಚಿತ್ರ : ಲಂಡನ್ ಗೌಡ

ಉಪೇಂದ್ರ ಅವರು 'ತಮಸೋಮಾ ಜ್ಯೋತಿರ್ಗಮಯ' ಅನ್ನೋ ಚಿತ್ರ ನಿರ್ದೇಶಿಸುತ್ತಿದ್ದಾರೆ ಅಂತ ವರ್ಷದ ಹಿಂದೆ ಒಂದು ಸುದ್ದಿ ಬಂದಿತ್ತು. ಗಾಳಿಸುದ್ದಿಗಳು ಬಹು ಬೇಗ ಹರಡಿತ್ತು. ಒಮ್ಮೆ ಆ ಚಿತ್ರದಲ್ಲಿ ಉಪೇಂದ್ರ ದಂಪತಿಗಳು ಅಭಿನಯಿಸುತ್ತಾರೆ ಅಂತ ಇದ್ದರೆ, ಇನ್ನೊಮ್ಮೆ ಆ ಚಿತ್ರದ ನಾಯಕ ಶಿವರಾಜಕುಮಾರ್ ಅಂತ ಇತ್ತು.

ಇವೆಲ್ಲ ಸುದ್ದಿ ಆದಮೇಲೆ ಈಗ, ಒಂದು ವಾರದ ಹಿಂದೆ ತಾಜಾ ಸುದ್ದಿಯೊಂದು ಬಂದಿದೆ. ಅದೇನೆಂದರೆ, ಉಪೇಂದ್ರ ತಮ್ಮದೇ ನಿರ್ದೇಶನದಲ್ಲಿ ೧೦ ವರ್ಷಕ್ಕೂ ಮೇಲ್ಪಟ್ಟು ಒಂದು ಸಿನೆಮ ಮಾಡುತ್ತಿದ್ದರೆ. ಅದರ ಹೆಸರು ಲಂಡನ್ ಗೌಡ ಎಂದು. ನಾಯಕ ಅವರೇ, ನಾಯಕಿ ಕನ್ನಡದವರೇ ಆದ ಸ್ನೇಹ ಉಳ್ಳಾಲ್ ಎಂದು.

ಕೆಲವರು ಉಪೇಂದ್ರ ಈ ಚಿತ್ರ ನಿರ್ದೇಶನ ಮಾಡುವುದಿಲ್ಲ ಅಂದರೆ, ಇನ್ನು ಕೆಲವರು ಅವರು ಮಾಡುತ್ತಾರೆ ಅನ್ನುತ್ತಾರೆ. ಅದೇನೆಂದು ಕಾದು ನೋಡಬೇಕು. ಆದರೆ ಕಥೆ, ಚಿತ್ರಕಥೆ, ಉಪೇಂದ್ರರದ್ದೇ ಆಗಿರುತ್ತದೆ.

ಅವರು ಈ ಸಿನಿಮಾಕ್ಕೆ 'ಲಂಡನ್ ಗೌಡ' ಎಂದೆ ಏಕೆ ಹೆಸರಿಟ್ಟರು? ದುಬೈ ಬಾಬು ತರಹದ್ದೇ ಒಂದು ಹೆಸರು ಇಡಲು ಹೋಗಿ ಹೀಗಿತ್ತಿದ್ದರೆ ಎಂದು ಕೆಲವರು ಹೇಳುತ್ತಾರೆ. ನನಗೇನೋ ಹಾಗನ್ನಿಸುವುದಿಲ್ಲ. ಉಪೇಂದ್ರ ಯಾವಾಗಲು ತಮ್ಮ ಕಥೆಗೆ ವಿಶಿಷ್ಟ ಹೆಸರಿಡುತ್ತಾರೆ ಎಂದು ನನ್ನ ನಂಬಿಕೆ. ಕೆಲವರಿಗೆ ಅದು ವಿಚಿತ್ರವೂ ಆಗಬಹುದು, ಹೇಸಿಗೆಯೂ ಆಗಬಹುದು. ಏನೇ ಇರಲಿ. ನನ್ನ ಮಟ್ಟಿಗೆ ಆ ಹೆಸರಿಡಲು ಒಂದು ವಿಚಿತ್ರ ಕಾರಣವೆಂದರೆ

'ಲಂಡನ್ ಗೌಡ' ಈ ಹೆಸರಲ್ಲಿ ಮೊದಲ ಅಕ್ಷರಗಳ ವ್ಯಂಜನ ಭಾಗವನ್ನು ಪರಸ್ಪರ ಬದಲಾಯಿಸಿ. ಸ್ವರವು ಹಾಗೆಯೇ ಇರಲಿ. ಆಗ ನಿಮಗೆ ಉಪೇಂದ್ರರ ರಸಿಕತನ ತಿಳಿಯುವುದು. ಅದನ್ನು ನಾನು ಇಲ್ಲಿ ಬರೆಯುವುದಿಲ್ಲ. ಬರೆದರೆ ಕೆಲವರಿಗೆ ಮುಜುಗರವಾಗಬಹುದು.

ಉದಾಹರಣೆಗೆ : 'ದುಬೈ ಬಾಬು'ವನ್ನು ಇದೇ ರೀತಿ ಬದಲಾಯಿಸಿದರೆ, 'ಬುಬೈ ದಾಬು' ಎಂದಾಗುತ್ತಾರೆ. ಹೀಗೆ ಲಂಡನ್ ಗೌಡಕ್ಕೂ ಮಾಡಿ ನೋಡಿ.

=) ಮುಂದಿನ ಅಂಕಣದಲ್ಲಿ ಸಿಗೋಣ.

Sunday, July 13, 2008

ಬಸ್ಸುಗಳಲ್ಲಿ ಕಿಟಕಿಗಳು ಇರೋದು ಉಗಿಯೋಕಾ?

ನಿನ್ನೆ ಕಚೇರಿ ಮುಗ್ಸ್ಕೊಂಡು ಮನೆಗೆ ಹೊರಟಿದ್ದೆ! ಇನ್ನೇನು ಬಸ್ ಹತ್ತಬೇಕು ಅನ್ನೋವಷ್ಟರಲ್ಲಿ ಯಾವನೋ ಪಿಚಕ್ ಅಂತ ಉಗೀಬೇಕ? ಪಾನ್ ಪರಾಗೋ ಮಾನಿಕ್ಚಂದೋ ಬಾಯಿಗೆ ಹಾಕ್ಕೊಂಡಿದ್ದ ಅನ್ನ್ಸತ್ತೆ, ಬಡ್ಡಿ ಮಗ! ಶರ್ಟ್ ಮೇಲೆ ಬಿದ್ದ್ಬಿದ್ತು! ಬಸ್ ಹತ್ಹ್ಥಿದೊನೆ ಆ ನನ್ನ ಮಗಂಗೆ ತರಾಟೆಗೆ ತೊಗೊಂಡೆ. ನಾನ್ ಅಂದ್ಕೊಂಡಿದ್ದ ಹಾಗೆ ಅವ್ನು ಒಬ್ಬ ಮಾರವಾಡಿ. ಈ ಉತ್ತರ ಭಾರತದವರಲ್ಲಿ ಹೆಚ್ಚಿನ ಜನರದ್ದು ಇದೇ ಗೋಳು.

ಇದಕ್ಕೆ ನಿಮ್ಮ ಪ್ರಕಾರ ಏನ್ ಪರಿಹಾರ ಇರಬಹುದು? ಅಭಿಪ್ರಾಯ ತಿಳಿಸಿ.

ಅಂದಹಾಗೆ ನಿನ್ನೆ ಮೆರವಣಿಗೆ ನೋಡಿದೆ. ಒಮ್ಮೆ ನೋಡೋದಕ್ಕೆ ಏನು ಅಡ್ಡಿ ಇಲ್ಲ. ಕಥೆ ಸಾಮಾನ್ಯವಾಗಿದೆ. ನಿರೂಪಣೆ ಅಧ್ಭುತ. ಪುರುಸು ಹೊತ್ತಿದ್ದರೆ ಹೋಗಿ ನೋಡಿ. ಇಂದು ಮಿಂಚಿನ ಓಟ (ಶಂಕರ್ ನಾಗ್ ಅಲ್ಲ, ಚಿನ್ನೇಗೌಡರ ಸುಪುತ್ರರು). ಏನೇನು ಚೆನ್ನಾಗಿಲ್ಲ! ನಿಮಗೆ ತಲೆ ಕೆದದಿದ್ದ್ರೆ ನಿಮ್ಮ ಪುಣ್ಯ! ದಯವಿಟ್ಟು ತಮ್ಮ ತಲೆಯನ್ನು ಉಳಿಸಿಕೊಳ್ಳಿ! ಇಂಥ ಚಿತ್ರಗಳಿಗೆ ಹೋಗಬೇಡಿ.