Monday, January 19, 2009

ಮತಾಂತರ, ವರ್ಣಾಶ್ರಮ ಧರ್ಮ ಹಾಗು ಅಸ್ಪೃಶ್ಯತೆ. ಭಾಗ ೨

ಒಂದೇ ಅಂಕಣದಲ್ಲಿ ಬರೆಯ ಹೋದ ವಿಚಾರವನ್ನು ಎರಡು ಭಾಗವನ್ನಾಗಿ ಬಿಡಿಸಲು ಬ್ಲಾಗರ್ ನ ಕೆಲವು ಅಡಚಣೆಗಳಾದವು. ವರ್ಣಾಶ್ರಮ ಧರ್ಮದಲ್ಲಿ ತಾರತಮ್ಯ ಹೇಗೆ ಹುಟ್ಟಿರಬಹುದು ಎಂಬ ಪ್ರಶ್ನೆಯಿಂದ ಮುಕ್ತಾಯಗೊಳಿಸಿದ್ದ ಕಳೆದ ಅಂಕಣವನ್ನು ನಮ್ಮ ಕಥೆಯಿಂದ ಮುಂದುವರೆಸೋಣ.

ರೀತಿ ಎಲ್ಲರೂ ತಮ್ಮ ತಮ್ಮ ಕೆಲಸಗಳನ್ನು ಮಾಡಿಕೊಂಡು ಹೋಗ್ತಾ ಇದ್ದರು. ಕಾಲಕ್ರಮೇಣ ಆಯಾ ಕುಟುಂಬಗಳು ಆಯಾ ಕೆಲಸಗಳನ್ನು ಮಾಡುವುದು ಪದ್ಧತಿಯಂತೆ ಬೆಳೆದು ಬಂತು. ನಾಲ್ಕು ಕುಟುಂಬಗಳು ನಾಲ್ಕು ವರ್ಗಗಳಾಗ, ವರ್ಗಗಳೇ ವರ್ಣಗಳೆಂದು ಆಚರಣೆಗೆ ಬಂತು. ಅವೇ:
. ಬ್ರಾಹ್ಮಣರು: ಯಾವುದೇ ಪೂಜೆ ಪುನಸ್ಕಾರಗಳನ್ನು ಮಾಡುವಾಗ ಇವರನ್ನು ಕರೆತರುವುದು. ಆಧ್ಯಾತ್ಮ, ತತ್ವ, ಜಿಜ್ಞಾಸೆ, ರೀತಿ ಹಲವು ವಿಚಾರಗಳ ಏಳಿಗೆಗೆ ಕಾರಣೀಭೂತರು ಕುಟುಂಬದವರು. ಬಹುಪಾಲು ಸಮಾಜದ ವಿಧಿವಿಧಾನಗಳನ್ನು ರೂಪಿಸುತ್ತಿದ್ದವರು ಕ್ಷತ್ರಿಯರಾದರೂ ಪರೋಕ್ಷವಾಗಿ ಅವರಿಗೆ ಸಲಹೆ ಸೂಚನೆ ಕೊಡುತ್ತಿದ್ದವರು ಇವರುಗಳು.
. ಕ್ಷತ್ರಿಯರು: ಸಮಾಜದ ಒಳಿತು ಕೆಡುಕುಗಳನ್ನು ರೂಪಿಸುವರು, ಅದರ ರಕ್ಷಕರು ಇವರುಗಳು. ಊರನ್ನು ಕಾಪಾಡುವವರು. ಒಟ್ಟಿನಲ್ಲಿ ಎಲ್ಲ ರೀತಿಯ ರಕ್ಷಣೆ, ಎಲ್ಲ ಕುಟುಂಬಗಳು ಸಾವಕಾಶವಾಗಿ ಜೀವಿಸಲು ಬೇಕಾದ ಸೌಲಭ್ಯಗಳನ್ನು ಒದಗಿಸಬೇಕಾದದ್ದು ಇವರ ಕರ್ತವ್ಯ.
. ವೈಶ್ಯರು: ವ್ಯಾಪಾರ, ಉದ್ದಿಮೆ, ವಹಿವಾಟುಗಳನ್ನು ನೋಡಿಕೊಳ್ಳಲು ವರ್ಗವನ್ನು ನೇಮಿಸಲಾಗಿತ್ತು. ಸಾಮಾನು, ಸರಂಜಾಮುಗಳು ಖಾಲಿಯಾದಾಗ ಪಕ್ಕದ ಊರಿಗೆ ಹೋಗಿ ತರುವುದು, ಇಲ್ಲಿ ಅದನ್ನು ತಂದು ವ್ಯಾಪಾರ ಮಾಡಿ ತಮ್ಮ ಜೀವನ ನಡೆಸುವುದು .
. ಶೂದ್ರರು: ಸಮಾಜದ ಶುದ್ದಿ, ಇವರ ಕೆಲಸ. ಕಸ ಗುಡಿಸುವುದು, ಬಟ್ಟೆ ಒಗೆಯುವುದು, ಕ್ಷೌರ, ಈ ರೀತಿ ಹಲವು ಕೆಲಸಗಳನ್ನು ಮಾಡುವುದು.

ಇಲ್ಲಿ ಕೆಲಸದ ಆಧಾರದ ಮೇಲೆ ರೀತಿ ವರ್ಗಗಳನ್ನು ನಿಯೋಜಿಸಲ್ಪಟ್ಟಿದೆಯೇ ಹೊರತು ಇಲ್ಲಿ ಯಾವುದೇ ತಾರತಮ್ಯಗಳಿಲ್ಲ. ವೇದಗಳ ಕಾಲದಲ್ಲಿ ಈ ರೀತಿ ತಾರತಮ್ಯಗಳಾವುದೂ ಕಂಡು ಬರುವುದಿಲ್ಲ ಎಂದು ಮೇಲೆ ಹೇಳಿದಂತೆ ಹಲವು ಜಿಜ್ನಾಸಿಗಳು ಉದಾಹರಿಸಿದ್ದಾರೆ.

ಈ ರೀತಿ ತಾರತಮ್ಯ ಹೇಗೆ ಹುಟ್ಟಿಕೊಂಡಿತು? ನನಗೆ ನಮ್ಮ ಹೆಚ್. ನರಸಿಂಹಯ್ಯ ನವರ ವೈಚಾರಿಕತೆ ಇಲ್ಲಿ ಸಹಾಯ ಮಾಡುತ್ತದೆ. ನಮ್ಮ PUC ಮೊದಲ ವರ್ಷದಲ್ಲಿ ಓದಿದ ಜ್ಞಾಪಕ. ಅವರ ವೈಚಾರಿಕತೆ ಪ್ರಬಂಧದಲ್ಲಿ ಅವರು ಒಂದು ಸಣ್ಣ ಕಥೆ ಹೇಳುತ್ತಾರೆ.

ಒಂದು ಬ್ರಾಹ್ಮಣ ಕುಟುಂಬ. ಮನೆಯ ಯಜಮಾನ ತನ್ನ ತಂದೆಯ ತಿಥಿ ಮಾಡುವಾಗ ಮನೆಯ ಬೆಕ್ಕು ಅಲ್ಲಿ ಇಲ್ಲಿ ಓಡಾಡಿ ತೊಂದರೆ ಮಾಡೀತು ಎಂದು ಅದನ್ನು ಮನೆಯ ಒಂದು ಕಂಭಕ್ಕೆ ಕಟ್ಟುತ್ತಿದ್ದನಂತೆ. ಅವನ ಕಾಲಾನಂತರ ಅವನ ಮಗ ಅವನ ತಿಥಿ ಮಾಡುವಾಗ ಮನೆಯ ಬೆಕ್ಕು ಸತ್ತಿತೆಂದು ಪಕ್ಕದ ಮನೆಯ ಬೆಕ್ಕನ್ನು ತಂದು ತಿಥಿ ಮಾಡುತ್ತಿದ್ದನಂತೆ.

ಒಂದು ಕೆಲಸವನ್ನು ಮಾಡುವಾಗ ಅದೇಕೆ ನಾವು ಹಾಗೆ ಮಾಡುತ್ತಿದ್ದೀವಿ ಎಂದು ತಿಳಿಯದವರಿಗೆ ಹೇಳದೆ ಹೋದರೆ ಆಗುವುದೇ ಹೀಗೆ. ಒಂದು ವೇಳೆ ಆ ಬ್ರಾಹ್ಮಣ ತನ್ನ ಮಗನಿಗೆ ಬೆಕ್ಕನ್ನು ಕಟ್ಟುತ್ತಿದ್ದ ಕಾರಣ ಹೇಳಿದ್ದರೆ ಈ ರೀತಿ ಆಗುತ್ತಿರಲಿಲ್ಲ. ಇದೇ ರೀತಿ ನಮ್ಮ ಕಥೆಯಲ್ಲಿ ಈ ರೀತಿ ನಡೆದಿರಬಹುದು.

ಒಬ್ಬ ಶೂದ್ರ ತನ್ನ ಕೆಲಸಗಳನ್ನ ಮುಗಿಸಿ ಮನೆಯ ಹಾದಿ ಹಿಡಿದಿದ್ದನು. ಕೆಲಸ ಮುಗಿಸಿ ಮಲಿನವಾಗಿದ್ದ ಶೂದ್ರನನ್ನು ಬ್ರಾಹ್ಮಣನು ತನ್ನ ಮಗನೊಂದಿಗೆ ಅದೇ ದಾರಿಯಲ್ಲಿ ನಡೆದುಬರುವಾಗ ಅಕಸ್ಮಾತ್ ಈ ಬ್ರಾಹ್ಮಣನ ಮಗನು ಅವನನ್ನು ಮುಟ್ಟಿದ. ಮಲಿನವಾಗಿದ್ದ ಅವನನ್ನು ಮುಟ್ಟಬೇಡ ಎಂದು ಹೇಳದೇ, "ಅವನನ್ನು ಮುಟ್ಟಬೇಡ" ಎಂದಷ್ಟೇ ಹೇಳಿರಬಹುದು. ಮುಂದೆ ಆ ಮಗನ ಮಗ, ತನ್ನ ಅಪ್ಪನ ಜೊತೆ ಬರುವಾಗ ಅವನೂ ಅದನ್ನೇ ಹೇಳಿರಬಹುದು. ಹೀಗೆ ಬೆಳೆದುಬಂದು ಶೂದ್ರರನ್ನು ಮುಟ್ಟಬಾರದೆಂಬ ಪ್ರತೀತಿ ಹುಟ್ಟಿರಬಹುದು.

ಹೀಗೆ ಆಗುತ್ತಿರಲು, ನಮ್ಮ ನಿಮ್ಮಂತಹ ಯಾರೋ ಒಬ್ಬ ತನ್ನಪ್ಪನನ್ನ ಯಾಕೆ ಅವನನ್ನು ಮುಟ್ಟಬಾರದೆಂದು ಕೇಳಿರಬಹುದು. ತನ್ನಪ್ಪ ಹಾಗೆ ಹೇಳಿಕೊಟ್ಟಿದ್ದಾಗ ಪ್ರಶ್ನೆ ಕೇಳದ ಅವನು, ಹಾರಿಕೆ ಉತ್ತರ ಕೊಟ್ಟಿರಬಹುದು. "ಭಾರೀ ಪ್ರಶ್ನೆ ಕೇಳಿಬಿಟ್ಟ! ಬುದ್ಧಿವಂತ! ಸುಮ್ನೆ ಬಾರೋ! ನನಗೆ ಎದುರಾಡ್ತಾನೆ!" ಎಂದು ಅವನನ್ನು ಎಳೆದುಕೊಂಡು ಹೋಗಿರಬಹುದು. ಈ ರೀತಿ ಹಲವಾರು ಪ್ರತೀತಿಗಳು ಕಾರಣ ತಿಳಿಯದೆ ಹುಟ್ಟಿರಬಹುದು.


ಈ ರೀತಿ ನಡೆಯದೇ, ಪ್ರತಿಯೊಂದಕ್ಕೂ ತಕ್ಕ ಕಾರಣ, ಅದನ್ನು ಯಾಕೆ ಮಾಡುತ್ತಿದ್ದೇವೆ ಎಂದು ವಿವರಿಸಿದ್ದರೆ, ಹೀಗಾಗುತ್ತಿರಲಿಲ್ಲವೇನೋ?

ಮೊನ್ನೆ ಹೀಗೆ ಚಾಮರಾಜಪೇಟೆಯಲ್ಲಿ ನಡ್ಕೊಂಡ್ ಬರ್ತಿದ್ದಾಗ ರಾಷ್ಟ್ರೋತ್ತಾನ ಪರಿಷತ್ತಿನ ಒಂದು ಪುಸ್ತಕ ಮಳಿಗೆಯಲ್ಲಿ ಕಳೆದ ಅಂಕಣದಲ್ಲಿ ವಿವರಿಸಿದ್ದಂತೆ, ಮತಾಂತರದ ವಿರುದ್ಧ ನಿಂತ ಬಣದ ಅಂಕಣಗಳು ಒಂದು ಪುಸ್ತಕವಾಗಿ ಬಿಡುಗಡೆಯಾಗಿದೆ. ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ ಇವರಿಂದ ಈ ಪುಸ್ತಕವು ಬಿಡುಗಡೆಯಾಗಿದೆ. ಮತಾಂತರದ ಪರವಾಗಿ ಯಾವ ಲೇಖನವು ಇಲ್ಲ. ಅಷ್ಟಕ್ಕೂ ಅದರ ಪರ ಯಾರೂ ಬರೆದಿಲ್ಲ. ಎಲ್ಲ ಬರೀ ಭೈರಪ್ಪನವರನ್ನು ಹಳಿದಿದ್ದಾರೆ. ಆಸಕ್ತರು ಕೊಂಡುಕೊಳ್ಳಬಹುದು. ಬೆಲೆ ನೂರು ರೂಪಾಯಿಗಳು.

ಹೀಗೆ ಬೆಳೆದು ಬಂದ ಪ್ರವೃತ್ತಿಯಿಂದ ಶೂದ್ರರು ಹೀನರು ಎಂಬ ಪ್ರತೀತಿ ಹುಟ್ಟಿತು. ಎಲ್ಲ ವರ್ಗಗಳಲ್ಲಿ ಒಳ ಪಂಗಡಗಳಾದವು. ಬ್ರಾಹ್ಮಣರಲ್ಲಿ ಸ್ಮಾರ್ತ, ವೈಷ್ಣವ, ಶಿವಳ್ಳಿ, ಹವ್ಯಕ, ಮಾಧ್ವ, ಹೀಗೆ ಹಲವಾರು ಆದರೆ, ಕ್ಷತ್ರಿಯರಲ್ಲಿ ಕೂಡ ಹಲವು ಪಂಗಡಗಳಾದವು. ಗೌಡ, ಜಮೀನ್ದಾರ, ಹೀಗೆ ಹಲವು ಎಂದು ತಿಳಿಯೋಣ, ವೈಶ್ಯರಲ್ಲಿ, ಶೆಟ್ಟರು, ಬಣಜಿಗರು, ಶೂದ್ರರಲ್ಲಿ ಮಾದಿಗ, ಹೊಲೆಯ, ನಾಯಿಂದ, ಹೀಗೆ ಹಲವಾರು ಪಂಗಡಗಳು ಹುಟ್ಟಿಕೊಂಡವು.

ಒಂದು ವರ್ಗದಲ್ಲೇ ಹಲವು ತಾರತಮ್ಯ ಹುಟ್ಟಿಕೊಂಡಿದ್ದು ವೈದಿಕ ಧರ್ಮವನ್ನು ಹಳಿಯುವವರಿಗೆ ಒಂದು ಕಾರಣ ಮಾಡಿಕೊಟ್ಟಿತು. ಒಳಜಗಳಗಳಿಂದ ಕಿತ್ತಾಡಿಕೊಳ್ಳುತ್ತಿದ್ದ ವೈದಿಕ ಧರ್ಮಿಯರನ್ನು ನೋಡಿ ಹೊರಗಿನಿಂದ ಬಂದ ಮುಸಲ್ಮಾನರು, ಕ್ರೈಸ್ತರು, ಇದರ ಲಾಭ ಪಡೆಯಲು ಶುರು ಮಾಡಿದರು. ಒಬ್ಬರನ್ನೊಬ್ಬರು ಎತ್ತಿಕಟ್ಟಿ ತಮ್ಮ ಬೇಳೆ ಬೇಯಿಸಲು ಶುರು ಮಾಡಿದರು. ಹಲವಾರು ಸಿದ್ಧಾಂತಗಳನ್ನು ತಂದರು. ಆರ್ಯರು, ಮೂಲತಃ ಭಾರತೀಯರಲ್ಲ, ಅವರುಗಳು ಐರೋಪ್ಯ ರಾಷ್ಟ್ರಗಳಿಂದ ಇಲ್ಲಿಗೆ ವಲಸೆ ಬಂದಿದ್ದರು ಹಾಗೆ ಹೀಗೆ ಎಂದು.