Friday, October 31, 2008

ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ - ರಾಜ್ಯೋತ್ಸವಕ್ಕೆ ಉಡುಗೊರೆ

ಇಂದು ಎಲ್ಲ ಕನ್ನಡ ಅಭಿಮಾನಿಯೂ ಸಂತೋಷ ಪಡುವ ವಿಷಯ. ಕಾರಣ ರಾಜ್ಯೋತ್ಸವಕ್ಕೆ ಉಡುಗೊರೆಯಂತೆ ನಮ್ಮ ಭಾಷೆಗೆ ಶಾಸ್ತ್ರೀಯ ಸ್ಥಾನ ದೊರಕಿದೆ. ಹಾಗೆಂದು ಮುಂಚೆ ಅದು ಶಾಸ್ತ್ರೀಯ ಭಾಷೆಯಾಗಿರಲಿಲ್ಲವೆಂದಲ್ಲ. ಅದು ಎಂದೆಂದಿಗೂ ಶಾಸ್ತ್ರೀಯ ಭಾಷೆಯೇ. ಅದು ಯಾವುದೇ ಸರಕಾರದಿಂದ ಮನ್ನಣೆ ಪಡೆದು ಶಾಸ್ತ್ರೀಯ ಭಾಷೆ ಎನಿಸಿಕೊಳ್ಳಬೇಕಾಗಿಲ್ಲ. ದೊರೆತರೂ ನಮಗೆ ಖುಷಿಯೇ. ನಮ್ಮ ಭಾಷೆಗೆ ಯಾವುದೇ ಮನ್ನಣೆ ದೊರೆತರೂ ಖುಷಿ ಪಡುವುದು ನಮ್ಮ ಧರ್ಮ.

ನಮ್ಮ ಇತಿಹಾಸ ಪುರಾತನವಾದದ್ದು. ನಮ್ಮ ನಾಡು, ನಮ್ಮ ಜನ, ನಮ್ಮ ಸಂಸ್ಕೃತಿಯ ದ್ಯೋತಕವೇ ನಮ್ಮ ಭಾಷೆ. ಅದಕ್ಕೆ ನಮ್ಮ ನಾಡಿನ ಏಕೀಕರಣದ ಸಿಂಧುವಾದ ಹಿಂದಿನ ದಿನ ಅದು ದೊರಕ್ಕಿದ್ದು ನಮ್ಮ ಸಂತೋಷವನ್ನು ನೂರ್ಮಡಿಗೊಳಿಸಿದೆ.

ಇದರಿಂದ ಏನು ಉಪಯೋಗವೆಂದು ನೀವು ಕೇಳಬಹುದು.
೧. ದೇಶದಲ್ಲಿ ನಮ್ಮ ಭಾಷೆಗೆ ಇನ್ನೊಂದು ಗರಿ ಮೂಡಿದೆ.
೨. ನಮ್ಮ ಭಾಷೆಯನ್ನೂ ಇನ್ನು ಉದ್ಧಾರ ಮಾಡಲು ಸದವಕಾಶಗಳು ಹಾಗು ಪ್ರೋತ್ಸಾಹ ಸಿಗಲಿದೆ.

ಇನ್ನು ಹಲವಾರು ಉಪಯೋಗಗಳಿರಬಹುದು. ನನ್ನ ತಲೆಗೆ ಹೊಳೆಯುತ್ತಿರುವುದು ಇಷ್ಟು ಮಾತ್ರ. ನಮ್ಮ ನೆರೆಯ ಆಂಧ್ರಪ್ರದೇಶದ ತೆಲುಗಿಗೂ ಕೂಡ ಶಾಸ್ತ್ರೀಯ ಭಾಷೆ ಸ್ಥಾನ ದೊರಕಿದೆ. ಅವರಿಗೂ ಹೃತ್ಪೂರ್ವಕ ಅಭಿನಂದನೆಗಳು.

ಎಲ್ಲರು ಖುಷಿಯಾಗಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಿ.

ಜೈ ಕರ್ನಾಟಕ ಮಾತೆ. ಜೈ ಹಿಂದ್.

Tuesday, October 28, 2008

ಸಂಗಮ - ವಿಮರ್ಶೆ

ಈ ಅಂಕಣ ಶುಕ್ರವಾರಾನೆ ಬರೀಬೇಕಂತ ಇದ್ದೆ. ಕಾರಣಾಂತರಗಳಿಂದ ಆಗ್ಲಿಲ್ಲ.

ಸಿನಿಮಾ ಬಗ್ಗೆ ಹೇಳಬೇಕಾದದ್ದು ಏನು ಇಲ್ಲ. ಇನ್ನೊಂದು ತಿಪ್ಪೆ ಸಿನಿಮಾ. ನಾನು ನೋಡಿರೋ ತಿಪ್ಪೆ ಸಿನಿಮಾಗಳಿಗೆ ಲೆಖ್ಖ ನೇ ಇಲ್ಲ ಬಿಡಿ. ಒಂದ್ ನಯಾ ಪೈಸ ಕಥೆ ಇಲ್ಲ. ನಾಯಕ, ನಾಯಕಿಗಳಿಗಂತೂ ಮೊದಲೇ ಕೆಲಸ ಇಲ್ಲ. ಐದು ನಿಮಿಷದಲ್ಲಿ ಮುಗಿಸಬಹುದಾದ ಕಥೇನ ೨:೩೦ ಗಂಟೆ ಕುಯ್ಯ್ದಿದ್ದಾರೆ.

ಆ ಕಥೆ ಅನ್ನೋ ಕಥೆ ನ ಹೇಳ್ತೀನಿ ಕೇಳಿ. ನಾಯಕ ಗಣೇಶ್ (ಸಿನೆಮಾದಲ್ಲಿ 'ಬಾಲು') ರಿಯಲ್ ಎಸ್ಟೇಟ್ ಉದ್ಯಮಿ. ಆದರೆ ಅವನು ಆ ಕೆಲಸ ಮಾಡೋಕಿಂತ ಬ್ರೋಕರ್ ಕೆಲಸಾನೇ ಜಾಸ್ತಿ. ಒಂದ್ ಹುಡುಗಿಗೆ ಗಂಡು ಕೂಡಿದರೆ, ಆ ಗಂಡಿನ ಪೂರ್ವಾಪರ ವಿಚಾರ್ಸ್ಕೊಂಡ್ ಬರೋದು, ಆ ಹುಡುಗಿಗೆ ಅವಳಿಗಿಷ್ಟ ಇರೋ ಗಂಡನ್ನು ಹುಡುಕೋದು, ಇತ್ಯಾದಿ ಕೆಲಸಗಳು.

ನಾಯಕಿ ವೇದಿಕಾ (ಸಿನೆಮಾದಲ್ಲಿ ಮಹಾಲಕ್ಷ್ಮಿ ಅಲಿಯಾಸ್ ಲಚ್ಚಿ ) , ತನ್ನ ಗಂಡ ಸಾಫ್ಟ್ವೇರ್ ಇಂಜಿನಿಯರೇ ಆಗಿರಬೇಕು, ವಿದೇಶದಲ್ಲೇ ಸೆಟ್ಟಲ್ ಆಗಿರಬೇಕು, ಕೈತುಂಬ ಸಂಬಳ ತರಬೇಕು ಅಂತ ಬಹಳ ಯೋಜನೆಗಳನ್ನ ಹಾಕಿಕೊಂಡಿರುವ ಹುಡುಗಿ. ಅದಕ್ಕೋಸ್ಕರ ಏನೇನೋ ವ್ರತಗಳನ್ನ ಮಾಡೋಳು. ಈ ಬಾಲು ಅವಳ ಸಹಾಯಕ್ಕೆ ಬರ್ತಾನಾದ್ರು ಅವನಿಗೆ ಅವಳಮೆಲೆಯಾಗಲಿ, ಅವಳಿಗೆ ಅವನ ಮೇಲಾಗಲಿ ಪ್ರೇಮಾಂಕುರವಾಗುವುದಿಲ್ಲ. ಅವಳ ವ್ರತಕ್ಕೆ ಸಹಾಯ ಮಾಡುವ ಸಮಯದಲ್ಲಿ ಅವಳಿಗೆ ಅವನ ಮೇಲೆ ಪ್ರೀತಿಯುಂಟಾಗಿ, ಇಷ್ಟರಲ್ಲೇ ಅವನು ಅವಳಿಗೆ ಜರ್ಮನಿ ಗಂಡು ನೋಡಿ, ಅವಳು ಅದನ್ನು ಎಲ್ಲರೆದುರು ನಿರಾಕರಿಸುವುದಿಲ್ಲ. ಆದರೂ ಅವಳು ಬಾಲುವನ್ನು ಪ್ರೀತಿಸುವುದನ್ನು ನಿಲ್ಲಿಸುವುದಿಲ್ಲ. ಅವಳ ರೀತಿಯೇ ಒಂದು ಅತಿರೇಕಕ್ಕೆ ಎಡೆಮಾಡಿಕೊಡುತ್ತದೆ. ಇವನು ಪಕ್ಕಾ ಜೆಂಟಲ್ ಮ್ಯಾನ್ ರೀತಿಯಲ್ಲಿ ಆಡ್ತಾನೆ. ಆದರೂ ಕೋಪ ಮಾಡ್ಕೋತಾನೆ. ಈ ಎಲ್ಲ ಅಸಂಬದ್ದಗಳ ನಡುವೆ ಆ ಮದುವೆ ದಿನ ಬಂದೇಬಿಡುತ್ತದೆ. ಅಲ್ಲಿ ನಡೆಯುವ ನಾಟಕ ಮಾತ್ರ ತೋರಿಸಿದ್ದಾರೆ ಸರಿ ಹೋಗುತ್ತಿತ್ತು.

ಈ ನಡುವೆ ಕೋಮಲ್ ನಗಿಸುವಲ್ಲಿ ಬಹಳವಾಗಿ ಎಡವಿದ್ದಾರೆ. ಆದರೂ ಕೆಲವು ದೃಶ್ಯಗಳು ನಗಿಸುತ್ತವೆ. ಸಾಧು ಕೋಕಿಲ ಪರವಾಗಿಲ್ಲ. ಮೈನ ಚಂದ್ರು ಖೋಜ ಪಾತ್ರದಲ್ಲಿ ನ್ಯಾಯ ಸಲ್ಲಿಸಿದ್ದಾರಾದರೂ ಅವರ ಪಾತ್ರವೇ ಬೇಡವಾಗಿತ್ತು ಎಂದರೂ ಅತಿಶಯವಲ್ಲ.

ಸಂಗೀತಕ್ಕೆ ಬಂದರೆ ತೆಲುಗಿನ ದೇವಿಶ್ರೀಪ್ರಸಾದರ ಹಾಡುಗಳಲ್ಲಿ ಎರಡು ಕೇಳಬಹುದು. ಆದರು ಕನ್ನಡದವರಿಗೆ ಆದ್ಯತೆ ಕೊಟ್ಟಿದ್ದಾರೆ ಅವು ಇನ್ನೂ ಸಹನೀಯವಾಗುತ್ತಿತ್ತೋ ಏನೋ? ಅವರೇ ಹಾಡಿರುವ ಹಾಡಲ್ಲಿ ಕೆಲವು ಉಚ್ಚಾರ ತೆಲುಗಿನದು ಎಂದು ಗೊತ್ತಾಗುತದೆ.

ನಾಯಕಿ ವೇದಿಕಾರವರಿಂದ ಏನನ್ನು ಅಪೇಕ್ಷಿಸಲು ಸಾಧ್ಯವಿಲ್ಲ. ಇಲ್ಲಿ ನಿರ್ದೇಶಕರೇ ಎಡವಿದ್ದಾರೆ. ಅವರ ಬೇರೆ ಸಿನಿಮಾ ಬಂದರೆ ಅಲ್ಲಿಂದ ಅವರ ಅಭಿನಯವನ್ನು ಅಳೆಯಬಹುದು. ಒಟ್ಟಾರೆ ಹೇಳಬೇಕೆಂದರೆ ಹಾಡಿನಲ್ಲಿ ಕುಣಿಯುವುದಕ್ಕೆ ಮಾತ್ರ ಇಲ್ಲಿ ಅವರನ್ನು ಬಳಸಲಾಗಿದೆ.

ಗಣೇಶ್ ಬಗ್ಗೆ ಏನ್ ಹೇಳಿದರೂ ವಾಕರಿಕೆ ಬರುತ್ತದೆ. ಇದು ಅವರ ೪ನೇ ನಿಶ್ಚಿತಾರ್ತೋತ್ತರ ಸಿನಿಮಾ. (post engagement syndrome cinema). ಅಂದರೆ, ನಿಶ್ಚಿತಾರ್ಥ ಆದಮೇಲೆ ಹುಡುಗಿಯ ಮನ ಸೆಳೆಯುವ ಚಿತ್ರ. (ಮುಂಗಾರು ಮಳೆ, ಅರಮನೆ, ಬೊಂಬಾಟ್, ಮುಂಚಿನ ಮೂರು ಚಿತ್ರಗಳು, ಇದೇ ಕಾರಣಕ್ಕೆ ಈ ಮೇಲಿನ ಮೂರು ಚಿತ್ರಗಳು ನನಗೆ ಇಷ್ಟ ಆಗಲಿಲ್ಲ) ಇವರು ಹೀಗೆ ಮಾಡ್ತಾ ಇದ್ದರೆ ಗೋಲ್ಡನ್ ಸ್ಟಾರ್ ಹೋಗಿ ಗುಲ್ದು ಸ್ಟಾರ್ ಆಗೋದ್ರಲ್ಲಿ ಏನು ಅನುಮಾನಾನೆ ಇಲ್ಲ. ಚಿತ್ರಗಳನ್ನು ಎದ್ವಾತದ್ವ ಸೆಲೆಕ್ಟ್ ಮಾಡ್ತಾ ಇದ್ದಾರೆ. ಹುಶಾರಾಗಿರೋದು ಒಳ್ಳೇದು ಅಂತ ಒಂದು ಸಲಹೆ ಕೊಡಬಹುದು ಏನಂತೀರಾ?

ಚಿತ್ರ ನೀವು ನೋಡಿಲ್ಲದಿದ್ದರೆ ನೋಡದಿರುವುದೇ ಲೇಸು. ನೋಡಿದ್ದರೆ ನಿಮ್ಮ ಅನಿಸಿಕೆ ಬರೆಯಿರಿ.

Tuesday, October 07, 2008

ಕೋಲೂ ಕೊಟ್ಟು ಏಟ್ ತಿನ್ನೋದಂದ್ರೆ ಇದೇ

೧೦ನೇ ತರಗತಿ. ೧೯೯೯ನೇ ಇಸವಿ. ಮೊದಲನೇ ಕನ್ನಡ ಕ್ಲಾಸು.

ಏಕಾಂಬರೇಶ್ವರ ಅಂತ ಗುರುಗಳ ಹೆಸರು. ನಮ್ಮ ತರಗತಿಗೆ ಬರ್ತಾ ಇರೋದು ಇದೆ ಮೊದಲು. ಅವರು ಯಾವಾಗಲು ತೃತೀಯ ಭಾಷೆ ಕನ್ನಡ ತೆಗೆದುಕೊಳ್ಳುತ್ತಾ ಇದ್ದರು. ನಮ್ಮ ತರಗತಿ ಬಹಳ ಕೆಟ್ಟ ಹೆಸರು ತೆಗೆದುಕೊಂಡ ಕಾರಣ ಅವರನ್ನು ಕನ್ನಡ ಗದ್ಯ ತೆಗೆದುಕೊಳ್ಳೋದಕ್ಕೆ ನಮ್ಮ ತರಗತಿಗೆ ನೇಮಿಸಿದ್ದರು.

ಆ ಗುರುಗಳೋ, ನಮಗೆ ಹೊಡೆಯುವುದಕ್ಕೆ ಕಾಯ್ತಾ ಕೂತಿರೋರು. ನಮಗೆ ೮ ಹಾಗು ೯ನೇ ತರಗತಿ ತೆಗೆದುಕೊಂಡ ಕೆ.ಶೇಷಾದ್ರಿ ಈಗ ಬರೀ ಪದ್ಯ ತೆಗೆದುಕೋತ ಇದ್ದರು.

ಹುಡುಗರೆಲ್ಲ ಒಳಗೊಳಗೇ ಈ ಗುರುಗಳಿಗೆ ಬೈಕೋತ ಇದ್ದರು. ಜರದ ಹಾಕ್ಕೊಂಡ್ ಬರ್ತಾನೆ. ಇವನನ್ನ ನೋಡಿ ನಾವೇನ್ ಕಲಿಯೋದು ಅಂತ. ಅದೆಲ್ಲ ಬೇರೆ ವಿಚಾರ. ಸದ್ಯಕ್ಕೆ ಈಗ ವಿಷಯಕ್ಕೆ ಬರೋಣ. ಈ ವಿಷಯ ನಾನು ನಿಮ್ಮಲ್ಲಿ ಕೆಲವರಿಗೆ ಹೇಳಿರಬಹುದು. ಆದರು ಪರವಾಗಿಲ್ಲ. ಇನ್ನೊಮ್ಮೆ ಹೇಳ್ಬಿಡ್ತೀನಿ.

ಮೊದಲನೇ ಕ್ಲಾಸಲ್ಲೇ ಇವರಿಗೆ ನಾನೇನು ಅಂತ ತಿಳಿಸಬೇಕು ಅಂತ ಅವರಿಗೆ ಇತ್ತೇನೋ? ಬರ್ತ್ ಬರ್ತಾನೆ ಅದೇನೋ ಬ್ರಿಡ್ಜ್ ಕೋರ್ಸ್ ಅಂತೆ. ನಮ್ಮ ಪ್ರಾರ್ಥಮಿಕ ವಿಷಯಗಳ ಬಗ್ಗೆ ಒಂದು ಸಣ್ಣ ಪರೀಕ್ಷೆ.

ಮಕ್ಕಳಾ, ಎರಡು ವರ್ಷದಿಂದ ಬೇಜಾನ್ ಆಟ ಆಡಿದ್ದೀರಾ. ನಿಮ್ಮನ್ನ ಒಂದ್ ಕೈ ನೋಡ್ಕೋಬೇಕು ಅಂತ ನನ್ನ ಈ ಸರ್ತಿ ನಿಮ್ಮ ಕ್ಲಾಸ್ ಗೆ ಕನ್ನಡ ಕಲ್ಸ್ಕೊದಕ್ಕೆ ಹಾಕಿದ್ದರೆ. ನೋಡೋಣ! ನನ್ನ ಕ್ಲಾಸಲ್ಲಿ ನೀವ್ ಅದೇನ್ ಕಿಸೀತೀರೋ ಅಂತ. ಹೀಗೆ ಒಂದ್ ೫ ನಿಮಿಷ ಬೆದರಿಸಿದರು.

"ಈವತ್ತು ನಿಮಗೆ ಬ್ರಿಡ್ಜ್ ಕೋರ್ಸ್. ಸರಳ ಪ್ರಶ್ನೆಗಳನ್ನ ಕೇಳ್ತೀನಿ. ಉತ್ತರ ಹೇಳದಿದ್ದರೆ ಇರತ್ತೆ ನಿಮಗೆ ಬೆಂಡು."
"ಸರಿ ಸಾರ್!"
(ಒಬ್ಬನ್ನ ಎಬ್ಬಿಸಿ) "ಹ! ನೀನ್ ಎದ್ದೇಳೋ! ಸ್ವರಗಳು ಎಂದರೆ ಏನು?"

ಸಾಮನ್ಯ ವಿದ್ಯಾರ್ಥಿಗಳು ಇಂತ ವಿವರಣೆಗಳನ್ನೆಲ್ಲ ಬಾಯಿಪಾಠ ಮಾಡಿರುತ್ತಾರೆ. ಆ ರೀತಿ ಎಬ್ಬಿಸಿದ್ದರಿಂದ, ಹಾಗು ಅವರು ಈ ಮುನ್ನ ನೀಡಿದ ಬೆದರಿಕೆಗೆ ಹೆದರಿ ಅವನ ಬಾಯಿ ಮಂಕು ಹಿಡಿಯಿತು. ಅವನು ನಿರುತ್ತರನಾದ. ಅವನ ಪಕ್ಕದವನನ್ನು ಎಬ್ಬಿಸಿದರು. ಉಹೂ! ಅವನಿಗೂ ಗೊತ್ತಿಲ್ಲ. ಇನ್ನೊಬ್ಬನನ್ನು ಎಬ್ಬಿಸಿದರು, ಇಲ್ಲ, ಮತ್ತೊಬ್ಬ, ಮಗದೊಬ್ಬ! ಒಟ್ಟು ಸುಮಾರು ೨೦ ಜನ ಏನೂ ಹೇಳಲಿಲ್ಲ. ಅಲ್ಲಿಲ್ಲಿ ಒಬ್ಬಿಬ್ಬರು ಬೆಬ್ಬೆಬ್ಬೆ ಎಂದರೆ ಹೊರತು ಯಾವ ಉತ್ತರವೂ ಇಲ್ಲ.

ಇನ್ನೊಬ್ಬನನ್ನು ಎಬ್ಬಿಸಿದರು. ಪುಣ್ಯಕ್ಕೆ ಅವನು ಬಾಯಿ ಬಿಟ್ಟ.

"ಸ್ವತಂತ್ರವಾಗಿ ಉಚ್ಚರಿಸಲ್ಪಡುವ ಪದಗಳನ್ನು ಸ್ವರಗಳೆನ್ನುತ್ತಾರೆ."

"ಅಹಾ? ಹೌದಾ? ನಿಂತ್ಕೋ ಮಗನೆ!, ನೀನ್ ಹೇಳೋ ಬದ್ಮಾಶ್" ಅಂತ ನನ್ನನ್ನ ಎಬ್ಬಿಸಿದರು.

ನನಗೂ ಮೊದಲು ತಲೆ ಕೆರೆದುಕೊಳ್ತಾ ಇದ್ದೆ. ಇವನು ನನಗೆ ಒಂದು ಸುಳಿವು ಕೊಟ್ಟ. ಅವನ ತಪ್ಪನ್ನು ನಾನು ಮುಚ್ಚಿ ಸರಿಯಾಗಿ ಉತ್ತರ ಕೊಟ್ಟೆ.

"ಸ್ವತಂತ್ರವಾಗಿ ಉಚ್ಚರಿಸಲ್ಪಡುವ ಅಕ್ಷರಗಳನ್ನು ಸ್ವರಗಳೆನ್ನುತ್ತಾರೆ."
"ಅಹಾ! ಇಷ್ಟ ದೊಡ್ಡ ಕ್ಲಾಸಿಗೆ ನೀನೊಬ್ಬ ಸರಿಯಾದ ಉತ್ತರ ಕೊಟ್ಟೆ ನೋಡು" [ನನ್ನ ಸಹಪಾಠಿಗಳೆಲ್ಲ ನನ್ನನ್ನೇ ಗುರಾಯ್ಸ್ತಾ ಇದ್ದರು. ಇವ್ನ್ಯಾಕ್ ಉತ್ತರ ಕೊಡಕ್ಕೆ ಹೋದ, ಬಡ್ಡಿ ಮಗ ಅಂತ]

ಅವರು ಮುಂದುವರಿಸಿದರು. "ಬಾ! ಇಲ್ಲಿ ನಿಂತಿದ್ದಾರಲ್ಲ! ಎಲ್ಲಾರಿಗೂ ಎರಡ ಎರಡ ಏಟ್ ಕೊಟ್ಟ ಬಾ ಕಪಾಳಕ್ಕೆ"

ನಾನ್ ದಂಗುಬಡಿದು ನಿಂತೆ. ಇವರಿಗೆಲ್ಲ ನಾನ್ ಕಪಾಳಕ್ಕೆ ಹೊಡೆದರೆ ಇವರುಗಳು ನನ್ನ ಸುಮ್ನೆ ಬಿಡ್ತಾರ?ಈ ಕ್ಲಾಸ್ ಆದ್ಮೇಲೆ ನಂಗೆ ನಾಲ್ಕ್ ಇಕ್ಕ್ತಾರೆ ಕಪಾಳಕ್ಕೆ ಅಂದ್ಕೊಂಡು ಸುಮ್ನಿದ್ದೆ.

"ಬಾರೋ! ಹೇಳಿದ್ದ ಕೇಳಿಲ್ವಾ? ಎಲ್ಲರ್ಗೂ ಹೊಡ್ಕೊಂಡ್ ಬಾ!" [ =) ]

ತಡ ಮಾಡಿದ್ರೆ ಸರಿ ಇರಲ್ಲ ಅಂತ ಶುರು ಮಾಡಿದೆ. ಮೊದ್ಲು ನಂಗ್ ಉತ್ತರ ಕೊಡಕ್ಕೆ ಸಹಾಯ ಮಾಡಿದ್ದನಲ್ಲ, ಅವನಿಗೆ ಹೊಡೆದೆ. ಸುಮ್ನೆ ಹೀಗೆ ಮಗು ಗೆ ಹೊಡಿಯೋ ಹಾಗೆ ಹೊಡೆದೆ ಎರಡೂ ಕೆನ್ನೆಗೆ.

"ಏಯ್! ಏನೋ ಹೊಡೀತೀಯ ನೀನು? ಚೆನ್ನಾಗಿ ಹೊಡೀಬೇಕು! ಚುರ್ರ್ರ್ರ್ರ್ ಅನ್ನಬೇಕು ಹೊಡ್ಸ್ಕೊಂದವ್ನಿಗೆ. ಸರಿ. ಅವನು ಸುಮಾರಾಗಿ ಉತ್ತರ ಹೇಳಿದ್ಡ್ನಲ್ವ? ಅವ್ನಿಗಷ್ಟ ಸಾಕು. ಮುಂದಿನವ್ನ್ಗೆ ಸರಿ ಬಿಡು ಹೇಳ್ತೀನಿ."

ಮುಂದಿನವ್ನ್ಗೂ ನಾನ್ ನಿಧಾನಕ್ಕೆ ಕಪಾಳಕ್ಕೆ ಹೊಡೆದೆ.

"ಏಯ್! ಬಾರೋ ಇಲ್ಲಿ! ನಿಂಗೆ ಅರ್ಥ ಆಗಲ್ಲ.ಹೇಗ್ ಬಿಡ್ಬೇಕು ಅಂತ ಹೇಳ್ತೀನಿ. ನೋಡು!" ಅಂತ ಬಂದ್ ನನ್ನ ಕಪಾಳಕ್ಕೆ ಒಂದ್ ಬಿಟ್ಟರು.

ಯಪ್ಪಾ! ನನಗಿನ್ನೂ ನೆನಪಿದೆ. ಆ ದಿನ ಮಧ್ಯಾಹ್ನದ ತನಕ ನಂಗೆ ಜ್ವರ ಬಂದ್ಬಿಟ್ಟಿತ್ತು.

"ಹೀಗ್ ಹೊಡೀಬೇಕು! ಹೀಗೆ!" ಅಂತ ಇನ್ನೊಂದ್ ಬಿಟ್ಟರು.

ಆವಾಗಿಂದ ತೊಗೋ, ಎಲ್ಲಾರಿಗೂ ಸರಿ ರಪ ರಪಾ ಅಂತ ಕಪಾಳ ಮೋಕ್ಷ ಕೊಡ್ತಾ ಬಂದೆ. ೨೫ ಜನರಿಗೆ ಸರಿಯಾಗಿ ಬಿಟ್ಟೆ ಕೆನ್ನೆಗೆ! ಆ ಥರ ಈವತ್ತಿನವರೆಗೂ ಯಾರಿಗೂ ಹೊಡೆದಿಲ್ಲ. ಎಲ್ಲಾ ಏಕಾಂಬರೇಶ್ವರ ಮಹಿಮೆ.

ಆ ವರ್ಷ ಅದೇ ಕೊನೆ ಅವ್ರ ಕೈಲಿ ಒದೆ ತಿನ್ನ್ಸ್ಕೊಂಡಿದ್ದು. ಸಾಕಪ್ಪಾ ಸಾಕು.

ಈ ಪ್ರಸಂಗ ಆದ್ಮೇಲೆ ಯಾರೂ ನಂಗ್ ಹೊಡೀಲಿಲ್ಲ ಅನ್ನೋದು ಬೇಕಿಲ್ಲ! ಸಾರ್ ಕೊಟ್ಟಿದ್ದೆ ಬೇಜಾನ್ ಆಯ್ತು ಅಂತ ಎಲ್ಲಾರು ಖುಷಿ ಪಟ್ಟರು. ಇದನ್ನ ನಾನು ನನ್ನ ಇನ್ನೊಂದ್ ಬ್ಲಾಗಲ್ಲಿ ಬರೀಬೇಕಿತ್ತು. ಕನ್ನಡ ಕ್ಲಾಸಲ್ಲಿ ನಡೆದಿದ್ದಲ್ವ?? ಇಲ್ಲೇ ಬರೆದರೆ ಚೆನ್ನ ಅನ್ನಿಸ್ತು.

ನಿಮಗೆ ಓದಿ ಖುಷಿ ಕೊಟ್ಟಿದ್ದರೆ ಈ ಲೇಖನ ಸಾರ್ಥಕ.

Sunday, October 05, 2008

ವಂಶಿ - ವಿಮರ್ಶೆ

ಈವತ್ತ್ ಮಧ್ಯಾಹ್ನ ವಂಶಿ ನೋಡ್ಕೊಂಡ್ ಬಂದ್ವಿ ನಾವ್ ಸಿಸ್ಯಂದ್ರು. ಚೆನ್ನಾಗಿದೆ. ಪುನೀತ್ ರಾಜಕುಮಾರ್ ರ ಬೇರೆ ಚಿತ್ರಕ್ಕೆ ಹೋಲಿಸಿದರೆ ಈ ಚಿತ್ರದಲ್ಲಿ ಸ್ವಲ್ಪ ಹೊಡೆದಾಟ ಬಡಿದಾಟ ಹೆಚ್ಚು ಅನ್ನಿಸಬಹುದು ಆದರೆ ನೀವು ಇಷ್ಟ ಪದೊದ್ರಲ್ಲಿ ಸಂಶಯ ನೇ ಇಲ್ಲ.

ಕಥೆ ಮಾಮೂಲಿ. ಕೋಪಿಷ್ಠ ಮಗ. ಸಾಧ್ವಿ ತಾಯಿ, ಕನಸಿನ ಪೋಲಿಸ್ ಕೆಲಸ, ರೌಡಿಗಳು, ಲಾಂಗು, ಮಚ್ಚು, ಹೊಡೆದಾಟ, ಬಡಿದಾಟ. ಕಥೆಯ ಬಗ್ಗೆ ತೆರೆಯ ಮೇಲೆ ನೋಡಿ ಆನಂದಿಸಿ. ಪುನೀತ್ ಚಿತ್ರಗಳಲ್ಲಿ ಹೆಚ್ಚಾಗಿರದ ಲಾಂಗು ಮಚ್ಚು ಇಲ್ಲಿ ಸ್ವಲ್ಪ ತೋರಿಸಲಾಗಿದೆ. ಚಕ್ರೇಶ್ವರಿ ಕಂಬ್ಯ್ನೆಸ್ ಲಾಂಛನದಲ್ಲಿ ತಯಾರಾದ ಈ ಚಿತ್ರದ ನಿರ್ದೇಶಕರು ಖುಷಿ, ಮಿಲನ ಖ್ಯಾತಿಯ ಪ್ರಕಾಶ್ (ಪುನೀತ್ ಕಸಿನ್). ಅವರ ಚಿತ್ರಗಳಲ್ಲಿರುವಂತೆ ಮಸಾಲೆ ಸಾಕಷ್ಟಿದೆ. ಒಂದು ಲೋಪವೇನೆಂದರೆ ಅವರ ಎಲ್ಲ ಚಿತ್ರಗಳಲ್ಲಿರುವಂತೆ ಇಲ್ಲಿ ಒಂದು ಕ್ಯಾಬರೆ ಅಥವಾ ಪುಬ್ಬಲ್ಲೋ ಡಿಸ್ಕೊಥೆಕ್ಕಲ್ಲೋ ಒಂದು ಹಾಡು ಇದ್ದೆ ಇರುತ್ತದೆ. ಈ ಚಿತ್ರದಲ್ಲಿ ಇಲ್ಲ. ಕಾರಣ ಬಹುಷಃ ಇದು ರಾಜಕುಮಾರ್ ಸಂಸ್ಥೆಯ ಚಿತ್ರ ಅಂತ ಇರಬಹುದು.

ಪುನೀತ್, ಪ್ರಕಾಶ್ ಇಬ್ಬರೂ ಒಟ್ಟಿಗೆ ಕೆಲಸ ಮಾಡ್ತಾ ಇರೋದ್ರಲ್ಲಿ ಇದು ಎರಡನೇ ಚಿತ್ರ. ಮೊದಲ ಚಿತ್ರ ಮಿಲನ, ಒಳ್ಳೆ ಕಮಾಯಿ ಮಾಡ್ತು. ಈ ಚಿತ್ರವು ಶತದಿನೋತ್ಸವ ಆಚರಿಸೋದ್ರಲ್ಲಿ ಯಾವ ಅನುಮಾನಾನೂ ಇಲ್ಲ ಅನೋದಕ್ಕೆ ಚಿತ್ರಮಂದಿರದ ಟಿಕೆಟ್ಗಳು ಖಾಲಿಯಾಗಿ ಬ್ಲಾಕ್ ಕೂಡ ಸಿಗದಿರುವುದು ಸಾಕ್ಷಿ.

ಅಭಿನಯದ ಮಟ್ಟಿಗೆ ಹೇಳುವದಾದರೆ ಪುನೀತ್ ಎಂದಿನಂತೆ ಮಿಂಚಿದ್ದಾರೆ. ಕೋಪ ಎಲ್ಲರ ಮೇಲೂ ಹರಿದು ಬರುತ್ತದೆ. ಅವರ ತಾಯಿಯೂ ಹೊರತಲ್ಲ. ನಟನೆಯಲ್ಲಿ ಮಾಗುತ್ತಿದ್ದಾರೆ. ಅವರ ಮ್ಯಾನರಿಸಂಗಳು ಈ ಚಿತ್ರದಲ್ಲೂ ಕಾಣಸಿಗುತ್ತವೆ. ಕಟ್ಟಾ ಪೋಲಿಸ್ ಅಧಿಕಾರಿಯ ಖದರ್ರು, ನ್ಯಾಯ ನೀತಿಯ ಮೇಲೆ ತನಗಿರುವ ಗುರವ ಸೂಚಿಸುವಲ್ಲಿ ಕೂಡ ಮಿಂಚಿದ್ದಾರೆ. ಥಿಯೇಟರಲ್ಲಿ ನಾಯಕಿಯ ಹೆಗಲ ಮೇಲೆ ಕೈ ಹಾಕುವ ದೃಶ್ಯ ನಗೆ ಉಕ್ಕಿಸುತ್ತದೆ. ಸಿನೆಮಾದಲ್ಲಿ ಹೊಡೆದಾಟ ಹೆಚ್ಚಿದ್ದರೆ ಅದು ನಿರ್ದೇಶಕರ ಪ್ರಭಾವವೇ ಹೊರತು ಇನ್ನ್ಯಾವುದೂ ಅಲ್ಲ.

ನಾಯಕಿ ನಿಖಿತಾ ಭರವಸೆ ಮೂಡಿಸುತ್ತಾರೆ. ಚಿತ್ರದುದ್ದಕ್ಕೂ ಲವಲವಿಕೆಯಿಂದ ಪುಟಿಯುತ್ತ, ಹೊಡೆದಾಟದ ದೃಶ್ಯಕ್ಕೆ ಒಂದು ಕಡಿವಾಣದಂತೆ ಕಾಣುತ್ತಾರೆ. ಪಕ್ಕಾ ರಾಜಕುಮಾರ್ ಫಿಲ್ಮಿನ ಹೀರೋಯಿನ್ ಥರ. ಡಾನ್ಸ್ ಅಲ್ಲಿ ಪುನೀತ್ ಜೊತೆ ಮಿಂಚಿದ್ದಾರೆ. ಈ ಮುನ್ನ ಅವರನ್ನು ನೀ ಟಾಟಾ ನಾ ಬಿರ್ಲಾ ಚಿತ್ರದಲ್ಲಿ ನೋಡಿದ ನೆನಪು. ಅಲ್ಲಿ ಹೀಗೆ ಇತ್ತು ಅವರ ನಟನೆ. ಮುಂದೆ ಒಳ್ಳೆ ನಟಿಯಾಗಬಹುದೋ ಏನೋ ಗೊತ್ತಿಲ್ಲ. ಕಾದು ನೋಡೋಣ.

ಲಕ್ಷ್ಮಿಯ ಮಟ್ಟಿಗೆ ಏನು ಹೇಳುವಂತಿಲ್ಲ. ಮಾಗಿದ ಅಭಿನಯ. ಪಕ್ಕಾ ಅಮ್ಮನ ಪಾತ್ರ. ಮಗನನ್ನು ತಂದೆಯ ಸಹಾಯವಿಲ್ಲದೆ ಬೆಳೆಸುವ ಪಾತ್ರ. ಮಗ ಗಲಾಟೆಗೆ ಹೋದ ಏನು ಮರುಗುವ ಪಾತ್ರ. ಚೆನ್ನಾಗಿ ಅಭಿನಯಿಸಿದ್ದಾರೆ.

ಕಾಮಿಡಿ ಗೆ ಕೋಮಲ್ ಇದ್ದಾರೆ. maಕ್ಕಳನ್ನು ಕಿಡ್ನಾಪ್ ಮಾಡುತ್ತಾ, ರೌಡಿ ಹೆಸರು ಹೇಳಿಕೊಂಡು ರೋಲ್ ಕಾಲ್ ಮಾಡೋ ಪಾತ್ರ. ಖಳನಾಯಕರ ಪಾತ್ರದಲ್ಲಿ ಅವಿನಾಶ್, ಸೈನೈಡ್ ಕಾಳೇ, ಅಭಿನಯ ಚೆನ್ನಾಗಿದೆ. ಮಿಕ್ಕ ಪೋಷಕ ಪಾತ್ರಗಳು ತಮ್ಮ ಪಾತ್ರಕ್ಕೆ ಎಷ್ಟು ಬೇಕೋ ಅಷ್ಟು ನ್ಯಾಯ ಒದಗಿಸಿವೆ.

ಆರ್. ಪಿ. ಪಟ್ನಾಯಕ್ ಹಾಡುಗಳಲ್ಲಿ ಎರಡು ಗುನುಗುನಿಸಲು ಅರ್ಹ. ಅವೇ "ಜೊತೆ ಜೊತೆಯಲಿ" ಹಾಗು "ಭುವನಂ ಗಗನಂ". ಮಿಕ್ಕಾಗಿ ಅಮಲೂ ಅಮಲೂ, ಮಾಯಗಾತಿ ನಿಂಗವ್ವ, ಸೋನು ನಿಗಮ್ ರ ಒಂದು ಹಾಡು ಕೆಲಳದ್ದಿ ಕೇಳಲು ಅಡ್ಡಿ ಇಲ್ಲ.

ಒಟ್ಟಿನಲ್ಲಿ ಹೇಳಬೇಕೆಂದರೆ, ಚಿತ್ರ ಒಮ್ಮೆ ಹೋಗಿ ಆರಾಮಾಗಿ ನೋಡಬಹುದು. ರೇಟಿಂಗ್ ಕೇಳಿದರೆ ಐದರಲ್ಲಿ ಮೂರು.