Tuesday, October 07, 2008

ಕೋಲೂ ಕೊಟ್ಟು ಏಟ್ ತಿನ್ನೋದಂದ್ರೆ ಇದೇ

೧೦ನೇ ತರಗತಿ. ೧೯೯೯ನೇ ಇಸವಿ. ಮೊದಲನೇ ಕನ್ನಡ ಕ್ಲಾಸು.

ಏಕಾಂಬರೇಶ್ವರ ಅಂತ ಗುರುಗಳ ಹೆಸರು. ನಮ್ಮ ತರಗತಿಗೆ ಬರ್ತಾ ಇರೋದು ಇದೆ ಮೊದಲು. ಅವರು ಯಾವಾಗಲು ತೃತೀಯ ಭಾಷೆ ಕನ್ನಡ ತೆಗೆದುಕೊಳ್ಳುತ್ತಾ ಇದ್ದರು. ನಮ್ಮ ತರಗತಿ ಬಹಳ ಕೆಟ್ಟ ಹೆಸರು ತೆಗೆದುಕೊಂಡ ಕಾರಣ ಅವರನ್ನು ಕನ್ನಡ ಗದ್ಯ ತೆಗೆದುಕೊಳ್ಳೋದಕ್ಕೆ ನಮ್ಮ ತರಗತಿಗೆ ನೇಮಿಸಿದ್ದರು.

ಆ ಗುರುಗಳೋ, ನಮಗೆ ಹೊಡೆಯುವುದಕ್ಕೆ ಕಾಯ್ತಾ ಕೂತಿರೋರು. ನಮಗೆ ೮ ಹಾಗು ೯ನೇ ತರಗತಿ ತೆಗೆದುಕೊಂಡ ಕೆ.ಶೇಷಾದ್ರಿ ಈಗ ಬರೀ ಪದ್ಯ ತೆಗೆದುಕೋತ ಇದ್ದರು.

ಹುಡುಗರೆಲ್ಲ ಒಳಗೊಳಗೇ ಈ ಗುರುಗಳಿಗೆ ಬೈಕೋತ ಇದ್ದರು. ಜರದ ಹಾಕ್ಕೊಂಡ್ ಬರ್ತಾನೆ. ಇವನನ್ನ ನೋಡಿ ನಾವೇನ್ ಕಲಿಯೋದು ಅಂತ. ಅದೆಲ್ಲ ಬೇರೆ ವಿಚಾರ. ಸದ್ಯಕ್ಕೆ ಈಗ ವಿಷಯಕ್ಕೆ ಬರೋಣ. ಈ ವಿಷಯ ನಾನು ನಿಮ್ಮಲ್ಲಿ ಕೆಲವರಿಗೆ ಹೇಳಿರಬಹುದು. ಆದರು ಪರವಾಗಿಲ್ಲ. ಇನ್ನೊಮ್ಮೆ ಹೇಳ್ಬಿಡ್ತೀನಿ.

ಮೊದಲನೇ ಕ್ಲಾಸಲ್ಲೇ ಇವರಿಗೆ ನಾನೇನು ಅಂತ ತಿಳಿಸಬೇಕು ಅಂತ ಅವರಿಗೆ ಇತ್ತೇನೋ? ಬರ್ತ್ ಬರ್ತಾನೆ ಅದೇನೋ ಬ್ರಿಡ್ಜ್ ಕೋರ್ಸ್ ಅಂತೆ. ನಮ್ಮ ಪ್ರಾರ್ಥಮಿಕ ವಿಷಯಗಳ ಬಗ್ಗೆ ಒಂದು ಸಣ್ಣ ಪರೀಕ್ಷೆ.

ಮಕ್ಕಳಾ, ಎರಡು ವರ್ಷದಿಂದ ಬೇಜಾನ್ ಆಟ ಆಡಿದ್ದೀರಾ. ನಿಮ್ಮನ್ನ ಒಂದ್ ಕೈ ನೋಡ್ಕೋಬೇಕು ಅಂತ ನನ್ನ ಈ ಸರ್ತಿ ನಿಮ್ಮ ಕ್ಲಾಸ್ ಗೆ ಕನ್ನಡ ಕಲ್ಸ್ಕೊದಕ್ಕೆ ಹಾಕಿದ್ದರೆ. ನೋಡೋಣ! ನನ್ನ ಕ್ಲಾಸಲ್ಲಿ ನೀವ್ ಅದೇನ್ ಕಿಸೀತೀರೋ ಅಂತ. ಹೀಗೆ ಒಂದ್ ೫ ನಿಮಿಷ ಬೆದರಿಸಿದರು.

"ಈವತ್ತು ನಿಮಗೆ ಬ್ರಿಡ್ಜ್ ಕೋರ್ಸ್. ಸರಳ ಪ್ರಶ್ನೆಗಳನ್ನ ಕೇಳ್ತೀನಿ. ಉತ್ತರ ಹೇಳದಿದ್ದರೆ ಇರತ್ತೆ ನಿಮಗೆ ಬೆಂಡು."
"ಸರಿ ಸಾರ್!"
(ಒಬ್ಬನ್ನ ಎಬ್ಬಿಸಿ) "ಹ! ನೀನ್ ಎದ್ದೇಳೋ! ಸ್ವರಗಳು ಎಂದರೆ ಏನು?"

ಸಾಮನ್ಯ ವಿದ್ಯಾರ್ಥಿಗಳು ಇಂತ ವಿವರಣೆಗಳನ್ನೆಲ್ಲ ಬಾಯಿಪಾಠ ಮಾಡಿರುತ್ತಾರೆ. ಆ ರೀತಿ ಎಬ್ಬಿಸಿದ್ದರಿಂದ, ಹಾಗು ಅವರು ಈ ಮುನ್ನ ನೀಡಿದ ಬೆದರಿಕೆಗೆ ಹೆದರಿ ಅವನ ಬಾಯಿ ಮಂಕು ಹಿಡಿಯಿತು. ಅವನು ನಿರುತ್ತರನಾದ. ಅವನ ಪಕ್ಕದವನನ್ನು ಎಬ್ಬಿಸಿದರು. ಉಹೂ! ಅವನಿಗೂ ಗೊತ್ತಿಲ್ಲ. ಇನ್ನೊಬ್ಬನನ್ನು ಎಬ್ಬಿಸಿದರು, ಇಲ್ಲ, ಮತ್ತೊಬ್ಬ, ಮಗದೊಬ್ಬ! ಒಟ್ಟು ಸುಮಾರು ೨೦ ಜನ ಏನೂ ಹೇಳಲಿಲ್ಲ. ಅಲ್ಲಿಲ್ಲಿ ಒಬ್ಬಿಬ್ಬರು ಬೆಬ್ಬೆಬ್ಬೆ ಎಂದರೆ ಹೊರತು ಯಾವ ಉತ್ತರವೂ ಇಲ್ಲ.

ಇನ್ನೊಬ್ಬನನ್ನು ಎಬ್ಬಿಸಿದರು. ಪುಣ್ಯಕ್ಕೆ ಅವನು ಬಾಯಿ ಬಿಟ್ಟ.

"ಸ್ವತಂತ್ರವಾಗಿ ಉಚ್ಚರಿಸಲ್ಪಡುವ ಪದಗಳನ್ನು ಸ್ವರಗಳೆನ್ನುತ್ತಾರೆ."

"ಅಹಾ? ಹೌದಾ? ನಿಂತ್ಕೋ ಮಗನೆ!, ನೀನ್ ಹೇಳೋ ಬದ್ಮಾಶ್" ಅಂತ ನನ್ನನ್ನ ಎಬ್ಬಿಸಿದರು.

ನನಗೂ ಮೊದಲು ತಲೆ ಕೆರೆದುಕೊಳ್ತಾ ಇದ್ದೆ. ಇವನು ನನಗೆ ಒಂದು ಸುಳಿವು ಕೊಟ್ಟ. ಅವನ ತಪ್ಪನ್ನು ನಾನು ಮುಚ್ಚಿ ಸರಿಯಾಗಿ ಉತ್ತರ ಕೊಟ್ಟೆ.

"ಸ್ವತಂತ್ರವಾಗಿ ಉಚ್ಚರಿಸಲ್ಪಡುವ ಅಕ್ಷರಗಳನ್ನು ಸ್ವರಗಳೆನ್ನುತ್ತಾರೆ."
"ಅಹಾ! ಇಷ್ಟ ದೊಡ್ಡ ಕ್ಲಾಸಿಗೆ ನೀನೊಬ್ಬ ಸರಿಯಾದ ಉತ್ತರ ಕೊಟ್ಟೆ ನೋಡು" [ನನ್ನ ಸಹಪಾಠಿಗಳೆಲ್ಲ ನನ್ನನ್ನೇ ಗುರಾಯ್ಸ್ತಾ ಇದ್ದರು. ಇವ್ನ್ಯಾಕ್ ಉತ್ತರ ಕೊಡಕ್ಕೆ ಹೋದ, ಬಡ್ಡಿ ಮಗ ಅಂತ]

ಅವರು ಮುಂದುವರಿಸಿದರು. "ಬಾ! ಇಲ್ಲಿ ನಿಂತಿದ್ದಾರಲ್ಲ! ಎಲ್ಲಾರಿಗೂ ಎರಡ ಎರಡ ಏಟ್ ಕೊಟ್ಟ ಬಾ ಕಪಾಳಕ್ಕೆ"

ನಾನ್ ದಂಗುಬಡಿದು ನಿಂತೆ. ಇವರಿಗೆಲ್ಲ ನಾನ್ ಕಪಾಳಕ್ಕೆ ಹೊಡೆದರೆ ಇವರುಗಳು ನನ್ನ ಸುಮ್ನೆ ಬಿಡ್ತಾರ?ಈ ಕ್ಲಾಸ್ ಆದ್ಮೇಲೆ ನಂಗೆ ನಾಲ್ಕ್ ಇಕ್ಕ್ತಾರೆ ಕಪಾಳಕ್ಕೆ ಅಂದ್ಕೊಂಡು ಸುಮ್ನಿದ್ದೆ.

"ಬಾರೋ! ಹೇಳಿದ್ದ ಕೇಳಿಲ್ವಾ? ಎಲ್ಲರ್ಗೂ ಹೊಡ್ಕೊಂಡ್ ಬಾ!" [ =) ]

ತಡ ಮಾಡಿದ್ರೆ ಸರಿ ಇರಲ್ಲ ಅಂತ ಶುರು ಮಾಡಿದೆ. ಮೊದ್ಲು ನಂಗ್ ಉತ್ತರ ಕೊಡಕ್ಕೆ ಸಹಾಯ ಮಾಡಿದ್ದನಲ್ಲ, ಅವನಿಗೆ ಹೊಡೆದೆ. ಸುಮ್ನೆ ಹೀಗೆ ಮಗು ಗೆ ಹೊಡಿಯೋ ಹಾಗೆ ಹೊಡೆದೆ ಎರಡೂ ಕೆನ್ನೆಗೆ.

"ಏಯ್! ಏನೋ ಹೊಡೀತೀಯ ನೀನು? ಚೆನ್ನಾಗಿ ಹೊಡೀಬೇಕು! ಚುರ್ರ್ರ್ರ್ರ್ ಅನ್ನಬೇಕು ಹೊಡ್ಸ್ಕೊಂದವ್ನಿಗೆ. ಸರಿ. ಅವನು ಸುಮಾರಾಗಿ ಉತ್ತರ ಹೇಳಿದ್ಡ್ನಲ್ವ? ಅವ್ನಿಗಷ್ಟ ಸಾಕು. ಮುಂದಿನವ್ನ್ಗೆ ಸರಿ ಬಿಡು ಹೇಳ್ತೀನಿ."

ಮುಂದಿನವ್ನ್ಗೂ ನಾನ್ ನಿಧಾನಕ್ಕೆ ಕಪಾಳಕ್ಕೆ ಹೊಡೆದೆ.

"ಏಯ್! ಬಾರೋ ಇಲ್ಲಿ! ನಿಂಗೆ ಅರ್ಥ ಆಗಲ್ಲ.ಹೇಗ್ ಬಿಡ್ಬೇಕು ಅಂತ ಹೇಳ್ತೀನಿ. ನೋಡು!" ಅಂತ ಬಂದ್ ನನ್ನ ಕಪಾಳಕ್ಕೆ ಒಂದ್ ಬಿಟ್ಟರು.

ಯಪ್ಪಾ! ನನಗಿನ್ನೂ ನೆನಪಿದೆ. ಆ ದಿನ ಮಧ್ಯಾಹ್ನದ ತನಕ ನಂಗೆ ಜ್ವರ ಬಂದ್ಬಿಟ್ಟಿತ್ತು.

"ಹೀಗ್ ಹೊಡೀಬೇಕು! ಹೀಗೆ!" ಅಂತ ಇನ್ನೊಂದ್ ಬಿಟ್ಟರು.

ಆವಾಗಿಂದ ತೊಗೋ, ಎಲ್ಲಾರಿಗೂ ಸರಿ ರಪ ರಪಾ ಅಂತ ಕಪಾಳ ಮೋಕ್ಷ ಕೊಡ್ತಾ ಬಂದೆ. ೨೫ ಜನರಿಗೆ ಸರಿಯಾಗಿ ಬಿಟ್ಟೆ ಕೆನ್ನೆಗೆ! ಆ ಥರ ಈವತ್ತಿನವರೆಗೂ ಯಾರಿಗೂ ಹೊಡೆದಿಲ್ಲ. ಎಲ್ಲಾ ಏಕಾಂಬರೇಶ್ವರ ಮಹಿಮೆ.

ಆ ವರ್ಷ ಅದೇ ಕೊನೆ ಅವ್ರ ಕೈಲಿ ಒದೆ ತಿನ್ನ್ಸ್ಕೊಂಡಿದ್ದು. ಸಾಕಪ್ಪಾ ಸಾಕು.

ಈ ಪ್ರಸಂಗ ಆದ್ಮೇಲೆ ಯಾರೂ ನಂಗ್ ಹೊಡೀಲಿಲ್ಲ ಅನ್ನೋದು ಬೇಕಿಲ್ಲ! ಸಾರ್ ಕೊಟ್ಟಿದ್ದೆ ಬೇಜಾನ್ ಆಯ್ತು ಅಂತ ಎಲ್ಲಾರು ಖುಷಿ ಪಟ್ಟರು. ಇದನ್ನ ನಾನು ನನ್ನ ಇನ್ನೊಂದ್ ಬ್ಲಾಗಲ್ಲಿ ಬರೀಬೇಕಿತ್ತು. ಕನ್ನಡ ಕ್ಲಾಸಲ್ಲಿ ನಡೆದಿದ್ದಲ್ವ?? ಇಲ್ಲೇ ಬರೆದರೆ ಚೆನ್ನ ಅನ್ನಿಸ್ತು.

ನಿಮಗೆ ಓದಿ ಖುಷಿ ಕೊಟ್ಟಿದ್ದರೆ ಈ ಲೇಖನ ಸಾರ್ಥಕ.

2 comments: