Sunday, December 12, 2010

ಪ್ರಾಣಿಗಳೇಕೆ ಮಾತನಾಡುವುದಿಲ್ಲ? - ಒಂದು ಜಾನಪದ ಕಥೆ.

ಇಂದು ಮಧ್ಯಾಹ್ನ ಹೀಗೆ ಮನೆಯಲ್ಲಿ ಹರಟೆ ಹೊಡೆಯುತ್ತಿರುವಾಗ ಮಾವನ ಬಾಯಿಂದ ಹೊಮ್ಮಿ ಬಂದ ಕಥೆ. ಚಿಕ್ಕದಾಗಿ ಚೊಕ್ಕವಾಗಿ ಹೇಳ್ತೀನಿ. ಕೇಳಿ...

ಒಂದಾನೊಂದು ಕಾಲದಲ್ಲಿ, ತುಂಬಾ ಹಿಂದೆ, ತುಂಬಾಂದ್ರೆ ತುಂಬಾ ಹಿಂದೆ ಪ್ರಾಣಿಗಳೆಲ್ಲ ಮಾತಾಡ್ತಾ ಇದ್ದವು. ಎಲ್ಲಾ ಭಾಷೇನೂ ಮಾತಾಡ್ತಾ ಇದ್ದವು. ಜನರೂ, ಪ್ರಾಣಿಗಳು, ಒಬ್ಬರಿಗೊಬ್ಬರು ಮಾತಾಡುತ್ತ ಕಾಲ ಕಳೀತಾ ಇದ್ದರು. ಎಲ್ಲಾ ಸುಭಿಕ್ಷವಾಗಿದ್ದವು.

ಹೀಗಿರೋವಾಗ, ಒಂದಿನ ಏನಾಯ್ತು ಗೊತ್ತ? ಒಂದೂರಲ್ಲಿ ಒಬ್ಬ ಗೃಹಿಣಿ ಸಂಜೆ ಹಾಲು ಕರೆಯೋಕೆ ಅಂತ ಹಟ್ಟಿ ಕಡೆ ಬಂದಳು. ಪ್ರತೀ ದಿನ ಚೆನ್ನಾಗಿ ಮಾತಾಡ್ತಾ ಇದ್ದ ಹಸು, ಈವತ್ತು ಹೇಳಿದ್ದ ಮಾತು ಕೇಳಿ ಅವಳು ಕಂಗಾಲಾದಳು.

ಹಸು: ಹೂ ಹೂ, ಕರಿ ಕರಿ... ಈವತ್ತು ನಿನ್ ಗಂಡನ ಕೊನೆ ದಿನ ಅಲ್ವಾ? ಹೊಟ್ಟೆ ತುಂಬಾ ಹಾಲು ಕೊಡು ಅವನಿಗೆ.

ಹೆಂಗಸು: ಏಯ್! ನಿನ್ಗೆನಾಗಿದೆ ಈವತ್ತು? ಬುದ್ಧಿ ನೆಟ್ಟಗಿದ್ಯಾ ಹೆಂಗೆ?

ಹಸು: ನನಗೇನಾಗಿದೆ? ಚೆನ್ನಾಗೆ ಇದ್ದೀನಿ...

ಹೆಂಗಸು: ಮತ್ತೆ? ಏನೇನೋ ವಟಗುಟ್ಟುತ್ತಾ ಇದ್ದೀಯ?

ಹಸು: ಅಯ್ಯೋ! ಇರೋ ವಿಷಯ ಹೇಳ್ದೆ.

ಹೆಂಗಸು: ಇರೋ ವಿಷ್ಯ? ಅದೇನ್ ಸ್ವಲ್ಪ ಬಿಡಿಸಿ ಹೇಳು.

ಹಸು: ನಾಳೆ ಬೆಳಿಗ್ಗೆ ಹೊತ್ತಿಗೆ ನಿನ್ ಗಂಡ ಶಿವನ ಪಾದ ಸೇರ್ಕೊತಾನೆ. ನೋಡ್ಕೋ ಅಂದೇ ಅಷ್ಟೇ.

ಹೆಂಗಸು: ಏಯ್! ನಾಲಗೆ ಬಿಗಿ ಹಿಡಿದ್ ಮಾತಾಡು. ಇಷ್ಟ್ ವರ್ಷ ದಂಡಿ ದಂಡಿ ಬೂಸಾ, ಹುಲ್ಲು ಹಾಕಿದ್ದಕ್ಕೆ ಈ ಥರ ಶಾಪ ಹಾಕ್ತ ಇದ್ದೀಯ ನಂಗೆ? ನಾನೇನ್ ಕಮ್ಮಿ ಮಾಡಿದ್ದೆ ನಿಂಗೆ?

ಹಸು: ಇದೊಳ್ಳೆ ಕಥೆ ಆಯ್ತಲ್ಲ? ಇದ್ದಿದ್ದ್ ಇದ್ದ ಹಾಗ್ ಹೇಳಿದ್ರೆ ಎದ್ದ ಬಂದ್ ಎದೆಗ್ ಒದ್ದರಂತೆ. ಹಾಗಾಯ್ತು ಕಥೆ. ಏನೋ ನೀನು ನಮ್ಮ ಯಜಮಾಂತಿ. ಮುಂಚೆನೇ ತಿಲಿಸನ ಅಂದ್ರೆ ನೀನ್ ಯಾಕ್ ಹೀಗ್ ಆಡ್ತೀಯ?

ಹೆಂಗಸು: ಇದ್ದಿದ್ದ್ ಇದ್ದ ಹಾಗೆ ಅಂತೀಯಲಾ, ನಿಂಗ್ ಯಾರ್ ಹೇಳಿದ್ದು?

ಹಸು: ಇನ್ನ್ ಯಾರು? ನನ್ ಗಂಡ, ಅದೇ, ಯಮನ ವಾಹನ, ಕೋಣನೇ ಹೇಳಿದ್ದು... ಈವತ್ತ್ ರಾತ್ರಿ ಯಮ ಬಂದು ನಿನ್ನ್ ಗಂಡನ ಪ್ರಾಣ ಹೊತ್ತ್ಕೊಂಡ್ ಹೋಗ್ತಾನಂತೆ.

ಹೆಂಗಸು: ಅಯ್ಯೋ ಅಯ್ಯೋ ಅಯ್ಯೋ!! ಇಷ್ಟ್ ಬೇಗ ನಾನ್ ಮುಂಡೆ ಆಗೋಗ್ತೀನ? ನನ್ನ ಗಂಡಂಗೆ ಇಷ್ಟೇನಾ ಆಯುಷ್ಯ ಇರೋದು? ಇದಕ್ಕೇನು ಮಾಡಕ್ಕಾಗಲ್ವಾ? ಅಯ್ಯೋ ದೇವ್ರೇ... ಇದೇನ್ ಗತಿ ತಂದೆ ನಂಗೆ?

ಹಸು: ನಿನ್ನ್ ಸ್ಥಿತಿ ನೋಡಿ ಅಯ್ಯೋ ಪಾಪ ಅನ್ನ್ಸತ್ತೆ...ನಿಂಗ್ ಸಹಾಯ ಮಾಡ್ಬೇಕು ಅಂತಾನೂ ಅನ್ನ್ಸತ್ತೆ. ಆದ್ರೆ ಏನ್ ಮಾಡೋದು? ವಿಧಿ...

ಹೆಂಗಸು: ಇದಕ್ಕೆ ಏನಾದ್ರೂ ಉಪಾಯ ಇದ್ಯಾ? ನಿನ್ನ್ ದಮ್ಮಯ್ಯ ಅಂತೀನಿ... ನಂಗೆ ಸಹಾಯ ಮಾಡು...

ಸ್ವಲ್ಪ ಹೊತ್ತು ಯೋಚಿಸಿದ ಹಸು,

ಹಸು: ನೋಡಮ್ಮ, ಒಂದ್ ಉಪಾಯ ಮಾಡಬಹುದು... ಈಗ ನೀನು ಹಾಲು ಕರ್ಕೊಂಡು ಮನೆಗೆ ತೊಗೊಂಡ್ ಹೋಗ್ತೀಯಲ್ಲಾ? ಅದನ್ನ ಮನೆ ಒಳಗ್ ಒಯ್ಯಬೇಡ. ಹಾಗೆ ಹೊಸಿಲಲ್ಲಿ ಇಡು. ಯಮ ಬಂದವನು ಒಳಗೆ ಬರೋಕೆ ಮುಂಚೆ, ಹೊಸಿಲಲ್ಲಿ ಹಾಲು ನೋಡ್ತಾನಲ್ಲ, ಅದನ್ನ ಕುಡೀತಾನೆ. ಹಾಲು ಕುಡಿದ ಮೇಲೆ ಅವನಿಗೆ ಅದೇ ಮನೆ ಯಜಮಾನನ್ ಪ್ರಾಣ ಹೇಗ್ ತೊಗೊಂಡ್ ಹೋಗ್ತಾನೆ? ಉಂಡ ಮನೆಗೆ ದ್ರೋಹ ಮಾಡಿದ ಹಾಗಾಗಲ್ವಾ? ಹಾಗೆ ವಾಪಸ್ ಹೋಗ್ತಾನೆ. ನಿನ್ನ್ ಗಂಡನ ಪ್ರಾಣಾನೂ ಉಳಿಯತ್ತೆ.

ಅವಳು ಹಾಗೇ ಮಾಡ್ತಾಳೆ. ಯಮ ಬರ್ತಾನೆ. ಹೊಸಿಲಲ್ಲಿ ಹಾಲು ನೋಡ್ತಾನೆ. ಕುಡೀತಾನೆ. ಹಾಲು ಕುಡಿದ ಋಣ ಅವನನ್ನ ಕರ್ಮಭ್ರಷ್ಟನನ್ನಾಗಿ ಮಾಡುತ್ತದೆ. ಮಾರನೆ ದಿನವೂ ಬರುತ್ತಾನೆ, ಆ ದಿನವೂ ಹಾಲಿರುತ್ತದೆ, ಕುಡಿದ ಮೇಲೆ ವಾಪಸ್ ಹೋಗುತ್ತಾನೆ. ಹೀಗೆ ಸುಮಾರು ದಿನ ನಡೆಯುತ್ತದೆ.

ಕೊನೆಗೆ ಯಮನಿಗೆ ಇದರಲ್ಲೇನೋ ಮಸಲತ್ತಿದೆ ಎಂದು ತಿಳಿಯುತ್ತದೆ. ಇದನ್ನು ಹೇಗಾದರೂ ಮಾಡಿ ಪತ್ತೆ ಹಚ್ಚಬೇಕೆಂದು ಉಪಾಯವಾಗಿ ಆ ಗೃಹಿಣಿಯ ಮೆನೆಗೆ ಮಾರುವೇಷದಲ್ಲಿ ಹೋಗುತ್ತಾನೆ. ಲೋಕಾಭಿರಾಮವಾಗಿ ಮಾತನಾಡುತ್ತ ಈ ವಿಷಯಕ್ಕೆ ಹೇಗೋ ಬರುತ್ತಾನೆ. ಇವನ ಸೌಮ್ಯ ಗುಣಕ್ಕೆ ಮೆಚ್ಚಿ ಅವಳು ಗುಟ್ಟನ್ನು ಬಿಚ್ಚಿಡುತ್ತಾ ಇದೇ ವೃತ್ತಾಂತವನ್ನು ಯಮನಿಗೊಪ್ಪಿಸುತಾಳೆ.

ಇದನ್ನು ತಿಳಿದ ಯಮನು ಕುಪಿತನಾದನು. ಇನ್ನು ಮುಂದೆ ಹೀಗಾಗದಿರಲು ಮನುಷ್ಯನ ಬಿಟ್ಟು ಎಲ್ಲಾ ಪ್ರಾಣಿಗಳಿಗೂ ಮಾತು ನಿಂತು ಹೋಗಲಿ ಎಂದು ಶಾಪವಿಟ್ಟನು.

ಅಂದಿನಿಂದ ಮನುಷ್ಯನ ಹೊರತಾಗಿ ಎಲ್ಲಾ ಪ್ರಾಣಿಗಳ ಬಾಯಿ ಬಿದ್ದು ಹೋಯಿತು.

Saturday, September 18, 2010

Director's Special: ಸಿನಿಮಾ ಮಾಡಲಾಗದ ಕಥೆಗಳು ಮತ್ತಿತರ ಲೇಖನಗಳು - ಒಂದು ನೋಟ.

೨ ವಾರಗಳ ಹಿಂದೆಯೇ ಬರಬೇಕಿದ್ದ ಈ ಅಂಕಣಕ್ಕೆ ನನ್ನ ಸೋಂಬೇರಿತನವೇ ಹೊಣೆ.

ಇದನ್ನು ವಿಮರ್ಶೆ ಎನ್ನಬೇಕೋ ಅನಿಸಿಕೆ ಎನ್ನಬೇಕೋ ತಿಳಿಯದೇ ಒಂದು ನೋಟ ಎಂದು ಉದ್ಧರಿಸಿರುವೆನಷ್ಟೇ. ವಿಮರ್ಶೆ ಎಂದರೆ ನನಗೆ ಕೆಲವೊಮ್ಮೆ ಭಯವಾಗುವುದುಂಟು. ನಾನು ವಿಮರ್ಶೆ ಎಂದು ಬರೆದೆನೆಂದರೆ ಹೆಚ್ಚಾಗಿ ಅದರ ಬಗ್ಗೆ ತಿರಸ್ಕಾರವೇ ಇರುತ್ತದೆ. ನನಗೆ ಅದು ಬಹಳವಾಗಿ ಹಿಡಿಸಿದರೆ ಅದರ ವಿಮರ್ಶೆಯ ಗೊಡವೆಗೆ ಹೋಗುವುದಿಲ್ಲ. ಏಕೆಂದರೆ, ಒಂದು ವಿಮರ್ಶೆಯನ್ನು ಬರೆದೆನೆಂದರೆ, ಅದರ ಬಗ್ಗೆ ಅಭಿಮಾನ ಮುಂಚಿನಂತಿರುವುದಿಲ್ಲ. ಇವೆಲ್ಲವನ್ನೂ ಮೀರಿ ಈ ಅಂಕಣವನ್ನು ಬರೆಯುತ್ತಿರುವೆನಾದ್ದರಿಂದ ಇದಕ್ಕೆ ಒಂದು ಹಿನ್ನೆಲೆಯನ್ನು ಬರೆಯೋಣ.

ಸದಭಿರುಚಿಯ ಕನ್ನಡ ಸಿನೆಮಾಗಳ ವೀಕ್ಷಕರಿಗೆ ಗುರುಪ್ರಸಾದರು ಅಪರಿಚಿತರೇನಲ್ಲ. ಅವರ 'ಮಠ' ಹಾಗು 'ಎದ್ದೇಳು ಮಂಜುನಾಥ' ಅವರ ಪ್ರತಿಭೆಗೆ ಸಾಕ್ಷಿ. ನನ್ನ ನೆಚ್ಚಿನ ನಿರ್ದೇಶಕರಲ್ಲಿ, ಅಗ್ರಗಣ್ಯರ ಸ್ಥಾನದಲ್ಲಿ ಇವರೂ ಒಬ್ಬರು. ೨ ವಾರದ ಹಿಂದೆ ಅವರ 'ಸಿನಿಮಾ ಮಾಡಲಾಗದ ಕಥೆಗಳು' ಹೊತ್ತಿಗೆ ಬಿಡುಗಡೆಯಾಯಿತು ಎಂದು ಪ್ರಜಾವಾಣಿಯ 'ಸಿನೆಮ ರಂಜನೆ'ಯಲ್ಲಿ ಓದಿ ಆ ಸಂಜೆಯೇ ಗಾಂಧಿನಗರದ 'ನವಕರ್ನಾಟಕ ಪ್ರಕಾಶನ'ದಲ್ಲಿ ಆ ಪುಸ್ತಕ ಕೊಂಡಮೇಲಷ್ಟೇ ಸಮಾಧಾನವಾದುದು. ವರ್ಷದ ಹಿಂದೆಯೇ ಅದರ ಬಗ್ಗೆ ಓದಿ ಇದ್ದ ಬದ್ದ ಪುಸ್ತಕಾಲಯಗಳಲೆಲ್ಲಾ ಹುಡುಕಾಡಿದ್ದಷ್ಟೇ ಬಂತು.

ಪೀಠಿಕೆ ಸಾಕು. ವಿಚಾರಕ್ಕೆ ಬರೋಣ. ಈ ಪುಸ್ತಕಗಳಲ್ಲಿ ಅವರ ೧೮ ಅಂಕಣಗಳಿವೆ. ಮಹಾಭಾರತದ ೧೮ ಅಧ್ಯಾಯಗಳ ತರಹ. ಹೆಹ್ಹೆಹ್ಹೆ. ಹಲವು ಹಿಂದೆಯೇ ಕೆಲವು ಪತ್ರಿಕೆಗಳಲ್ಲಿ ಪ್ರಕಟಗೊಂಡವು, ಕೆಲವು ಹೊಸತು. ಇವರ ಕಾವ್ಯನಾಮ ಶಾರದಾಸುತ. ನಿಜಕ್ಕೂ ಸರಸ್ವತಿ ಪುತ್ರರೇ. ತಮ್ಮ ಹತ್ತಿರದ ಬಳಗದವರಿಗೆಲ್ಲ ವಿಭಿನ್ನವಾಗಿ ಅರ್ಪಿಸುತ್ತ, ಪುಸ್ತಕವನ್ನು ಕೊಂಡು ಓದುವ ನಮಗೂ ಅರ್ಪಿಸುತ್ತಾರೆ. ಕೊನೆಗೆ ಶಾರದೆಗೂ.

ಈ ಎರಡು ವಾರಗಳಲ್ಲಿ ಇದನ್ನು ಓದಿ ೧೦ ದಿನದ ಮೇಲಾಯಿತು. ಕಥೆಗಳು ಜ್ಞಾಪಕವಿದ್ದರೂ, ಅದರಲ್ಲಿ ನನಗೆ ಬಹಳ ಇಷ್ಟವಾದ ಸಂಭಾಷಣೆಗಳು ಕೆಲವು ಮರೆತು ಹೋದಂತಿವೆ. ಈ ಅಂಕಣವು ಆ ಸಂಭಾಷಣೆಗಳನ್ನು ಭಟ್ಟಿ ಇಳಿಸುವುದಿಲ್ಲ. ಇನ್ನೊಮ್ಮೆ ಮೆಲುಕು ಹಾಕಿದಲ್ಲಿ ಕ್ಷಣಮಾತ್ರದಲ್ಲಿ ನೆನಪಿಗೆ ಬರುವುವು. ನಾನು ಬರೆಯಬೇಕೆಂದು ಕೊಂಡ ಕೆಲವು ಸಾಲುಗಳು ಬರದೆ ಇರಬಹುದು. ನೆನಪಾದಾಗ, ಮಗದೊಮ್ಮೆ ಓದಿದಾಗ, ಅವಶ್ಯವಾಗಿ ಅದರ ಬಗ್ಗೆ ಇದೇ ಅಂಕಣದಲ್ಲಿ ಬರೆಯುವೆನು.

ಈ ಕಥೆಗಳಲ್ಲಿ ಕೆಲವು ಕಚಗುಳಿ ಕೊಡುವಂತವುವು, ಎಲ್ಲವೂ ಅನುಭವಗಳು ಹಾಗು ಕೆಲವು ಸಾಮಾನ್ಯ ಕಥೆಯಾಗಿದ್ದರೂ, ನಿರೂಪಣೆಯಲ್ಲಿ ವಿಭಿನ್ನ ಜಾಡು ಹೊಂದಿರುವಂಥವು. ಕೊನೆಗೆ ಒಂದು ಸಂದರ್ಶನ.

ತಡಮಾಡದೆ ಪುಸ್ತಕಕ್ಕೆ ಇಳಿಯೋಣ.

ಲೇಖಕರು: ಗುರುಪ್ರಸಾದ್.
ಪುಸ್ತಕ: Director's Special
ಅಡಿಪಟ್ಟಿ: ಸಿನಿಮ ಮಾಡಲಾಗದ ಕಥೆಗಳು ಮತ್ತಿತರ ಲೇಖನಗಳು.
ಬೆಲೆ: ೧೫೦ ರೂಪಾಯಿಗಳು.

ಮೊದಲ ಮೂರು ಅಂಕಣಗಳು: ಇವೆಲ್ಲ ಒಟ್ಟುಗೂಡಿ ಒಂದು ಕಥೆ. ೨೦೦೫ರಲ್ಲಿ ರೂಪತಾರಕ್ಕೆ ಬರೆದ ಅಂಕಣಗಳು. ಆಸ್ಪತ್ರೆ ನರ್ಸೊಬ್ಬಳು (ಜಿನ್ಸಿ) ಆತ್ಮಹತ್ಯೆ ಮಾಡಿಕೊಂಡ ಸಾಮಾನ್ಯ ದಾರುಣ ಕಥೆ. ಶುರುವಿನಲ್ಲಿ ರಸವತ್ತಾಗಿ ಬಣ್ಣಿಸುವ ಈ ಕಥೆಯ ಮೊದಲ ಅಂಕಣದ ಕೊನೆಯಲ್ಲಿ ಎಣಿಸಲಾರದ ತಿರುವು ಸಿಕ್ಕು ಕಥೆಯು ರೋಚಕವಾಗುತ್ತದೆ. 'ಮಣಿ ಚಿತ್ರ ತಾಳ್' ಎಂಬ ಮಲಯಾಳಿ ಚಿತ್ರದ ಕಥೆಗಾರರನ್ನು ಹುಡುಕಿ ಕೇರಳಕ್ಕೆ ಹೊರಟ ಗುರು, ಬಸ್ಸಿನಲ್ಲಿ ಸಿಕ್ಕ ಈ ನರ್ಸಿನ ಕಥೆ ಹುಡುಕಿಕೊಂಡು ಬರೆದಂತಿದೆ. ಮೊದಲ ಅಂಕಣದಲ್ಲಿ ಗುರು ರ ಅನುಭವವಾದರೆ, ಮಿಕ್ಕೆರಡು ಅಂಕಣಗಳು ಆ ನರ್ಸಿನ ಗೋರಿಯ ಚೀತ್ಕಾರಗಳು.

ಈ ಕಥೆಯಲ್ಲಿ ನನಗೆ ಅಚ್ಚರಿಯಾದ ಒಂದು ಅಂಶವೆಂದರೆ, ಗುರುಪ್ರಸಾದರಿಗೆ 'ಆಪ್ತಮಿತ್ರ' ಚಿತ್ರ ಇಷ್ಟವಾದುದು. ಬುದ್ಧಿವಂತರು ರೀಮೇಕ್ ಮಾಡಬಾರದು; ದಡ್ಡರು ಸ್ವಮೇಕ್ ಮಾಡಬಾರದು ಎಂದ ಗುರು ಗೆ, ಆಪ್ತಮಿತ್ರ ಇಷ್ಟವಾದುದು ಅಚ್ಚರಿಯೇ. ವಯ್ಯಕ್ತಿಕವಾಗಿ ನನಗೆ ಆ ಚಿತ್ರ ಹಿಡಿಸಲಿಲ್ಲ. ಅದರ ಬಗ್ಗೆ ಚರ್ಚೆ ಮಾಡಲು ಈ ಅಂಕಣವನ್ನು ಉಪಯೋಗಿಸಲಿಚ್ಚಿಸುವುದಿಲ್ಲ. ಏನಿದ್ದರೂ ಅದು ಈ ಕಥೆಯಲ್ಲಿ ಗೌಣ.

ಜಿನ್ಸಿ ಹಾಗು ಅವಳ ಪ್ರಿಯಕರನ ಸಂಭಾಷಣೆಗಳು ನಿಮ್ಮ ಮೆದುಳಿನಲ್ಲಿ ಹೊಸ ಆಲೋಚನೆಗಳು ತಂದರೆ ಅದರಲ್ಲಿ ಆಶ್ಚರ್ಯವಿಲ್ಲವಷ್ಟೇ.

ನಾಲ್ಕನೇ ಅಂಕಣ: ಲೇಖಕರೇ ಹೇಳಿಕೊಳ್ಳುವಂತೆ, ಈ ಕಥೆ, ಅವರಿಗೆ ಒಬ್ಬರೇ ಕೂತು ಗುಂಡು ಹಾಕುವಾಗ ಹೊಳೆದ ಕಥೆ. ಆ ಎಣ್ಣೆಯ ಗುಣ ಪೂರ್ತಿಯಾಗಿ ಈ ಕಥೆಗೆ ಎರಕ ಹೊಯ್ಯ್ದಂತಿದೆ. ಪ್ರತಿಯೊಬ್ಬ ಗಂಡ, ಹೆಂಡತಿ (ಕಡೆ ಪಕ್ಷ, ಹೆಚ್ಚಿನವರು) ತಮ್ಮ ಜೀವನದ ಯಾವುದಾದರೂ ಒಂದು ಹಂತದಲ್ಲಿ ಯೋಚಿಸುವ ಒಂದು ತಂತುವನ್ನು ಆಧಾರವಾಗಿಟ್ಟುಕೊಂಡು ಬರೆದ ಕಥೆ. ದಿನೇ ದಿನೇ ಹೊಸ ಮುಖದ ಅರ್ಧಾಂಗಿಯ ಪಡೆವ ಕಥೆ. ಇಂತಹ ಕಥೆಗೆ ಗುರು ಅವರು ಕೊಟ್ಟ ಕೊನೆಯೇ ಸರಿಯಾದುದು. ಅದನ್ನು ಓದಿಯೇ ಸವಿಯಬೇಕು.

ಈ ಕಥೆಯ ಜಾಣ, ಜಗತ್ತಿನ ಎಲ್ಲ ಗಂಡಂದಿರ ಪ್ರತೀಕ.

ಐದನೇ ಅಂಕಣ: ನರಕಕ್ಕೂ ಸ್ವರ್ಗಕ್ಕೂ ಇರುವ ವ್ಯತ್ಯಾಸವನ್ನು ಚಿಕ್ಕದಾಗಿ ಚೊಕ್ಕವಾಗಿ ಈ ಕಥೆಯಲ್ಲಿ ನಿರೂಪಿಸಿದ್ದಾರೆ ಗುರು. ಈ ಕಥೆಯಲ್ಲಿ ಬರುವ ಭಗ್ನ ಪ್ರೇಮಿ ಗಿರಿಧರ ಹಾಗು ಅಪಘಾತ ಮೃತ ನಂದಿನಿ ಈ ದೃಷ್ಠಾಂತಕ್ಕೆ ಸಾಕ್ಷಿಯಾಗುತ್ತಾರೆ. ನರಕದ ವರ್ಣನೆ, ಭೂಮಿಯ ಜೊತೆ ಅದರ ಹೋಲಿಕೆ, ನರಕದ ಹಿಟ್ಲರ್ ಹುಣಸೆ ಮರ, ನರಕದಿಂದ ಸ್ವರ್ಗಕ್ಕೆ ಹೋಗುವ ಪರಿ, ಲೇಖಕರ ಕ್ರಿಯಾಶೀಲತೆಗೆ ಒಂದು ಸಾಕ್ಷಿ.

ಆರನೇ ಅಂಕಣ: ಜಲಪ್ರಳಯದ ಕಥನ. ೨೦೦೮ರಲ್ಲಿ ಮಯುರಕ್ಕೆ ಬರೆದ ಕಥೆ. ಪ್ರಳಯದ ಕೊನೆಯ ಹಂತ ನಮ್ಮ ಬೆಂಗಳೂರಿನಲ್ಲಿ. ಕಥಾನಾಯಕ, ಭಾರಧ್ವಾಜ ಸನಾತನಿ ಹಾಗು ಈಜುಗಾರ. ಆಟ ಹಲಸೂರಿನಿಂದ ಯೆಶವಂತಪುರದ ವರೆಗೂ ಈಜಬಲ್ಲ. ನಾಯಕಿ ಭವತಿ. ಭಾರಧ್ವಾಜ ಭಾವತಿಯರು, ಪ್ರಕೃತಿ ಹಾಗು ಪುರುಷರಾಗಿ ವಿಶ್ವಮಾನವನನ್ನು ಹಡೆವ ಕಥೆಯೇ ಇದು. ಹೊಸ, ಆದರ್ಶ ಸಮಾಜವನ್ನು ಕಟ್ಟುವ ಕನಸನ್ನು ಹೊಂದಿದೆ. ಭಗವಂತನ ನಿಟ್ಟುಸಿರು ಈ ಕಥೆಗೆ ಮಂಗಳ ಹಾಡುತ್ತದೆ.

ಏಳನೇ ಅಂಕಣ: ೨೦೦೯ ರಲ್ಲಿ ಚಿತ್ತಾರಕ್ಕೆ ಬರೆದುಕೊಟ್ಟ ಕಥೆ. ಗುರು ಪ್ರಕಾರ ಇದು ಸತ್ಯ ಕಥೆ. ಆದರೆ ಅವರ ಅಭಿಮಾನಿಗಳಿಗೆ ಅದು ನಂಬಲಸದಳ. ಶಿಷ್ಯನ ವೃದ್ಧಿಯನ್ನು ಕಂಡು ಸಹಿಸದ ಗುರು ಅವನನ್ನು ಕೂಪಕ್ಕೆ ತಳ್ಳುವ ಕಥೆ. ಫೋನ್ ಮಾಡಿ ಕಾಡುವ ಶಿಷ್ಯ. ಶಿಷ್ಯ ವೃತ್ತಿ ಮಾಡಿಕೊಂಡಿರುತ್ತೇನೆ ಎಂಬ ಭರವಸೆ ಇತ್ತ ಮೇಲೆಯೇ ಶಿಷ್ಯನಾಗಿ ಸ್ವೀಕರಿಸುವ ಗುರು, ಅವನ ಏಳಿಗೆ ಕಂಡು ಕೊಂಚ ಕರುಬುತ್ತಾನೆ. ಕೊನೆಯಲ್ಲಿ ಅವನನ್ನು ಕಳಿಸಬೇಕಾದಲ್ಲಿಗೆ ಕಳಿಸಿ ನೆಮ್ಮದಿಯ ಉಸಿರು ಬಿಡುತ್ತಾನೆ. ಇದಕ್ಕಿಂತ ಹೆಚ್ಚು ಹೇಳಿದಲ್ಲಿ ನಿಮ್ಮ ಆಸಕ್ತಿ ಕರಗುತ್ತದೆ. ನೀವೇ ಕಥೆ ಓದಿ.

ಎಂಟನೆ ಅಂಕಣ: ಹೋಟೆಲ್ಲಿನ ಪುರಾಣ. ಲಾಬಿಯಲ್ಲಿ ಕುಳಿತು ಇತರ ಟೇಬಲ್ಲಿನತ್ತ ಕಣ್ಣು ಹಾಯಿಸುತ್ತ ಗೆಳತಿಗಾಗಿ ಕಾಯುತ್ತ ಕೂರುವ ನಿರ್ದೇಶಕರು. ಇನ್ನೊಂದು ಜೋಡಿಯನ್ನು ನೋಡಿ ಮರುಗುವವರು. ಕೊನೆಯಲ್ಲಿ ಒಂದು ಊಹಿಸಬಹುದಾದ ತಿರುವು. ಓಡಿಸಿಕೊಂಡು ಹೋಗುವ ಕಥೆ.

ಒಂಬತ್ತನೇ ಅಂಕಣ: ೨೦೦೯ರಲ್ಲಿ ಪ್ರಜಾವಾಣಿಯಲ್ಲಿ ಪ್ರಕಟಿಸಿದ ಕಥೆ. ನಿಜವಾದ ಜ್ಞಾನಾರ್ಜನೆ ಹೇಗೆ ಮಾಡಬೇಕು ಎಂದು ಕಲಿಸುವ ಕಥೆ. ಮಲ್ಲೇಪುರಂ ಜೀ. ವೆಂಕಟೇಶ್ ರವರು ತಮಗೆ ಕಲಿಸಿ ಕೊಟ್ಟ ಪಾಠವನ್ನು ಇಲ್ಲಿ ಬೇರೆಯದೇ ರೀತಿಯಲ್ಲಿ ಸ್ವಾಮಿ ಹಾಗು ಮಾನಸಿಯ ಸಂಭಾಷಣೆಯಲ್ಲಿ ಕೊಟ್ಟಿದ್ದಾರೆ. ಸ್ವಾಮಿಗಳಿಗೆ ಆಲುಗಡ್ಡೆ ಕೊಂಡು ಹೋಗುವುದು ಭೈರಪ್ಪ ನವರ 'ನಿರಾಕರಣ' ದಲ್ಲಿ ಓದಿದ್ದ ಜ್ಞಾಪಕ. ಗುರು ಕೂಡ ಅದರಿಂದಲೇ ಸ್ಪೂರ್ತಿ ಹೊಂದಿರಬಹುದು.

ಹತ್ತನೇ ಅಂಕಣ: ೨೦೦೫ ರಲ್ಲಿ ರೂಪತಾರಕ್ಕೆ ಬರೆದ ಅಂಕಣ. ಕನ್ನಡದಲ್ಲಿ ಕಥೆ ಇಲ್ಲ ಎಂದು ಸುಮಾರು ವರ್ಷಗಳ ಹಿಂದೆ ನಮ್ಮ ಎನ್. ಎಸ್. ರಾವ್ ರ ಸುಪುತ್ರ ಎನ್. ಓಂಪ್ರಕಾಶ್ ರಾವ್ ರವರು ಬಾಯಿ ಬಡಿದು ಕೊಳ್ಳುತ್ತಿದ್ದಾಗ ಬರೆದ ಕಥೆ. ರಾಮಾಯಣದಲ್ಲಿ ಹೇಳದಿದ್ದ ರಾಮನ ಕಲ್ಪಿತ ಕಥೆ. ರಾಮನು ಹೇಗೆ ಕಾಮನೆಗಳನ್ನು ನಿಗ್ರಹಿಸಿ, ಏಕ ಪತ್ನಿ ವ್ರತವನ್ನು ಆಚರಿಸುತ್ತಿದ್ದನೆಂದು ಸುಂದರವಾಗಿ ಚಿತ್ರಿಸುವ ಕಥೆ. ಕಥೆಯಲ್ಲಿ ಬರುವ ಶ್ಯಾಮಲೆಯ ಹಾಗು ಅನಂಗಪಾತ್ರ ಇಷ್ಟವಾಗುವುದು. ಜೈ ಶ್ರೀರಾಮ್.

ಹನ್ನೊಂದನೇ ಅಂಕಣ: ತಮ್ಮ ತಂಗಿಯ ಮದುವೆ ಪ್ರಕರಣವನ್ನು ಸವಿಸ್ತಾರವಾಗಿ ಎಲ್ಲರಿಗೂ ಹಿಡಿಸುವಂತೆ ಇಲ್ಲಿ ಗುರು ಕೊಟ್ಟಿದ್ದಾರೆ. ಉಗಾದಿಯ ದಿನ ಬರೆದ ಈ ಅಂಕಣ, ಉಗಾದಿಯ ಹಲವಾರು ಅರ್ಥಗಳನ್ನು ಮೆಲುಕು ಹಾಕುತ್ತದೆ. ಅಣ್ಣ ತಂಗಿ ಕಥೆ ಸಿನೆಮಾಗಳಲ್ಲಿ ತೋರಿಸುವಂತಲ್ಲದೆ ಸಹಜವಾಗಿ ಮೂಡಿಬಂದಿದೆ.

ಹನ್ನೆರಡನೆಯ ಅಂಕಣ: ತಮ್ಮ ಸ್ನೇಹಿತರ ಗರ್ವ ಎಂಬ ಪತ್ರಿಕೆಯ ಮೊದಲ ಪ್ರತಿಗೆ ಮಧ್ಯ ರಾತ್ರಿ ಕಳೆದು ಬರೆದ ಕಥೆ. ಪೂರ್ತಿ ಕಥೆಯನ್ನೋದಿದ ಮೇಲೆ ತಿಳಿಯುತ್ತದೆ ಇದೊಂದು ಸ್ವಗತ. ಎಲ್ಲರ ಮನದಲ್ಲಿಯೂ ಇಂತಹ ಸ್ವಗತಗಳು ಹಲವಿವೆ. ಈ ಸ್ವಗತದಿಂದಲೇ ಪತ್ರಿಕೆಯ ಓದುಗನನ್ನು ಸ್ವಾಗತಿಸುವ ಅಂಕಣ. ಸಂಭಾಷಣೆ ಓದಿಯೇ ಆನಂದಿಸ ತಕ್ಕದ್ದು.

ಹದಿಮೂರನೇ ಅಂಕಣ: ೨೦೦೫ರಲ್ಲಿ ರೂಪತಾರಕ್ಕೆ ಬರೆದುದು. ಒಬ್ಬ ಹತಾಶ ಪ್ರೇಕ್ಷಕನ ಸಾಕ್ಷಾತ್ ದರ್ಶನ ಮಾಡಿಸುತ್ತಾರೆ. ಹೊಣೆಯರಿಯದ ನಿರ್ದೇಶಕರ ಅಸಡ್ಡೆಗೆ ಈ ಕಥೆ ಕನ್ನಡಿ ಹಿಡಿಯುತ್ತದೆ. ಸಿನಿಮ ಹೇಗೆ ಮಾಡಬೇಕೆಂಬ ಜಿಜ್ಞಾಸೆಯನ್ನು ಇಲ್ಲಿ ಕಾಣಬಹುದು. ಹಲವಾರು ಉದಾಹರಣೆಗಳ ಸಹಿತ. ಅಂಕಣದ ಮೊದಲಿಗೆ ಹಾಗು ಕೊನೆಯಲ್ಲಿ ಬರುವ ಎರಡೂ ಪ್ರಸಂಗಗಳು ನಗಿಸುತ್ತವೆ. ಹೆಚ್ಚೇಕೆ? ನೀವೇ ಓದಿ ನೋಡಿ.

ಹದಿನಾಲ್ಕನೇ ಅಂಕಣ: ೨೦೦೬ರಲ್ಲಿ ರೂಪತಾರಕ್ಕೆ ಬರೆದುದು. ಈ ಅಂಕಣವನ್ನು ಎರಡು ಪ್ರಸಂಗಗಳಲ್ಲಿ ಪ್ರೇಮವನ್ನು ಬಣ್ಣಿಸಲು ವ್ಯಯಿಸಿದ್ದಾರೆ. ಒಂದು ಓರ್ವ ಹಿರಿಯ ಕಲಾವಿದೆಯದ್ದು. ನನಗನಿಸಿದ ಮಟ್ಟಿಗೆ ಅದು 'ಭಾರ್ಗವಿ ನಾರಾಯಣ್', ರಂಗ ಕರ್ಮಿ ನಾಣಿಯವರ ಪತ್ನಿ. ಇನ್ನೊಂದು ತಮ್ಮದೇ ಸ್ವಂತ ಅನುಭವ. ಎರಡೂ ಮೊದಲ ಪ್ರೇಮ. ಎರಡರ ಹೋಲಿಕೆಯನ್ನೂ ಲೇಖಕರು ಮಾಡುತ್ತಾರೆ. ಎರಡೂ ದುಖಾಂತದಲ್ಲಿ ಕೊನೆಗೊಳ್ಳುತ್ತದೆ.

ಹದಿನೈದನೇ ಹಾಗು ಹದಿನಾರನೇ ಅಂಕಣ: ಮಠ ಚಿತ್ರಕ್ಕೆ ಮೀಸಲು. ಸೆನ್ಸಾರ್ ಸ್ಕ್ರಿಪ್ಟು ನೋಡಿ ಸಿನಿಮಾ ನೋಡದೆಯೇ ಕೆಂಗಣ್ಣಿಗೆ ಗುರಿಯಾದದ್ದು, ಸಿನಿಮಾ ನೋಡಿ ಆನಂದಿಸಿದ್ದು, ನಿರ್ದೇಶಕರು ಅದರ ಪೂರ್ವ ತಯಾರಿಗೆ ಎರಡು ಸೂಟ್ ಕೇಸು ಸಾಕ್ಷಿ ಪುರಾವೆಗಳನ್ನು ಹೊತ್ತು ಕೊಂಡು ಹೋದದ್ದು ಎಲ್ಲವು ನಗಿಸುತ್ತದೆ. ತನ್ನ ಸ್ವ ಸಾಮರ್ಥದ ಮೇಲೆ ನಂಬಿಕೆ ಇರುವ ನಿರ್ದೇಶಕನ ಧೈರ್ಯ, ನಿಮ್ಮನ್ನು ಎರಡೂವರೆ ಗಂಟೆ ಖುಷಿ ಪಡಿಸುತ್ತೇನೆ ಎನ್ನುವ ಅಚಲ ವಿಶ್ವಾಸ, ಗುರು ಅವರ ಬಗ್ಗೆ ನಮ್ಮಲ್ಲಿ ಗೌರವ ನೂರ್ಮಡಿಸುವಂತೆ ಮಾಡುತ್ತದೆ.

ಹದಿನೇಳನೆ ಅಂಕಣ: ಸಿನಿಮಲೋಕದ ಹಲವು ಸತ್ಯಗಳನ್ನು ಹೊರಗೆಡಹುತ್ತಾ ಅದರ ವಿವಿಧ ರಂಗುಗಳ ಬಣ್ಣನೆ ಮಾಡುತ್ತಾರೆ ಗುರು. ಬ್ಲಾಕ್ ಎಂಬ ಹಿಂದಿ ಸಿನಿಮಾ ಬಿಡುಗಡೆ ಆದ ಸಮಯ. ಅವರು ಅ ಚಿತ್ರದ ಬಗ್ಗೆ ಬಹಳ ಖುಷಿಯಲ್ಲಿದ್ದಾರೆ. ನನಗೆ ತಿಳಿದ ಮಟ್ಟಿಗೆ ಅದು ಹೆಲ್ಲೇನ್ ಕೆಲ್ಲರ್ ರ ಕಥೆ. ನಾನು ಆ ಚಿತ್ರ ನೋಡಿಲ್ಲ. ಅದರ ಬಗ್ಗೆ ಇಲ್ಲಿ ಬರೆಯಲಿಚ್ಚಿಸುವುದೂ ಇಲ್ಲ.

ಹದಿನೆಂಟನೆ ಅಂಕಣ: ಇದು ಒಂದು ಸಂದರ್ಶನ. ಸಂಯುಕ್ತ ಕರ್ನಾಟಕದಲ್ಲಿ ಇದೇ(2010) ಜೂನ್ ನಲ್ಲಿ ಪ್ರಕಟವಾದುದು. ಇಲ್ಲಿ ಗುರು ತಮ್ಮ ಇಲ್ಲಿಯವರೆಗಿನ ಹಾದಿ, ಮುಂದಿನ ಗುರು ಎಲ್ಲವನ್ನು ಹೊರಗೆಡಹಿದ್ದಾರೆ. ಕನ್ನಡದಲ್ಲಿ ೨೦ ಸಿನಿಮಾ ಮಾಡುವ ಇರಾದೆ ಓದಿ ಬಹಳವೇ ಖುಷಿ ಆಯಿತು. ಇನ್ನೊಂದು ಕಡೆ ಬೇಜಾರೂ ಆಯಿತು. ಇನ್ನೂ ಹೆಚ್ಚು ಚಿತ್ರಗಳು ಅವರ ಬತ್ತಳಿಕೆಯಿಂದ ಬರಲಿ. ಅವರ ಸತತ ಅಧ್ಯಯನ, ೫೦೦೦ಕ್ಕೂ ಹೆಚ್ಚು ಚಿತ್ರ ವೀಕ್ಷಣೆಯ ಅನುಭವ, ಕನ್ನಡ ಚಿತ್ರಗಳ ಬಗೆಗೆ ಅವರಲ್ಲಿರುವ ಕಳಕಳಿ ಯಾರನ್ನಾದರೂ ಮೆಚ್ಚಿಸುವಂಥಹದ್ದೆ.ಚಿತ್ರರಂಗದ ಅವರ ಕೆಲ ಅನುಭವಗಳು, ಅವರ ಉಪೇಂದ್ರರ ನಡುವಿನ ಸಂಬಂಧ, ಎಲ್ಲದರ ಬಗ್ಗೆ ಮಾತನಾಡುತ್ತಾರೆ. ಕಡೆಗೆ ಆಸ್ಕರ್ ಪ್ರಶಸ್ತಿಗೂ ಕಣ್ಣು ಹಾಕಿದ್ದಾರೆ. ಅವರು ಇಚ್ಚಿಸುವ ಎಲ್ಲವೂ ಅವರಿಗೆ ದಕ್ಕಲಿ ಎಂದು ನಾವು ಹಾರೈಸುತ್ತೇವೆ. aಆದರೆ ಅವರು ಕನ್ನಡ ಚಿತ್ರಗಳನ್ನೇ ಯಾವಾಗಲು ಮಾಡಲಿ ಎಂಬುದು ನಮ್ಮ ಆಸೆಯಷ್ಟೇ.

ಗುರು ಅವರಲ್ಲಿ ಕಾಣಬಹುದಾದ ಇನ್ನೊಂದು ಪ್ರಮುಖ ಅಂಶವೇನೆಂದರೆ, ತನ್ನ ಸಾಮರ್ಥ್ಯದ ಬಗ್ಗೆ ಅಚಲ ವಿಶ್ವಾಸವಿರುವುದು. ಅವರ ಈ ಗುಣ ನಮಗೆ ದೇವುಡು ರನ್ನು ಭೈರಪ್ಪನವರನ್ನು ನೆನೆಯುವಂತೆ ಮಾಡುತ್ತದೆ. ಇವರುಗಳಂತೆಯೇ ಗುರು ರವರ ಕನ್ನಡ ಅಸ್ಖಲಿತವಾದುದು.

ಕಡೆಯದಾಗಿ ಯಾವುದೇ ಪುಸ್ತಕದ ಬಗ್ಗೆ ಎಷ್ಟೇ ವಿಮರ್ಶೆ ಬರೆದರೂ ಅದನ್ನು ಓದಿದಂತಾಗುವುದಿಲ್ಲ. ನಿಮ್ಮಲ್ಲಿ ನನ್ನ ಅರಿಕೆಯೇನೆಂದರೆ ಈ ಪುಸ್ತಕವನ್ನು ಕೊಂಡು ಓದಿ. ನೀವು ಖಂಡಿತ ಇಷ್ಟ ಪಡುತ್ತೀರ. ನಿಮಗೆ ಗುರುಪ್ರಸಾದರ ಬಗ್ಗೆ ಒಲವಿದ್ದಲ್ಲಿ ನೀವು ಖಂಡಿತ ಆ ಕೆಲಸವನ್ನು ಮಾಡುವಿರೆಂದು ನನಗೆ ತಿಳಿದಿದೆ. ಓದಿದ ಮೇಲೆ ಇಲ್ಲಿ ಬಂದು ಒಂದು ಕಾಮೆಂಟ್ ಬರೆಯಿರಿ. ಅವರಿಂದ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಪುಸ್ತಕಗಳೂ ಚಿತ್ರಗಳೂ ಬರಲಿ.

ಸರಿ ಮುಂದಿನ ಅಂಕಣದಲ್ಲಿ ಮತ್ತೆ ಭೇಟಿಯಾಗುತ್ತೇನೆ. ಬರ್ಲಾ?

ವಿಶೇಷ ಸೂಚನೆ: ಕೆಲವು ಕಡೆ ಉತ್ಪ್ರೇಕ್ಷೆ ಎನಿಸುವಂತೆ ಬರೆಯಲಾಗಿದೆ ಎಂದೆನಿಸಿದರೆ, ಅದು ಈ ಪುಸ್ತಕದ ಗುಣ. ಇದಕ್ಕೆ ನಾನು ಜವಾಬ್ದಾರನಲ್ಲ.

Saturday, August 28, 2010

ಲೈಫು ಇಷ್ಟೇನೇ...

ಇತ್ತೀಚಿಗೆ ಈ ಹಾಡು ಎಲ್ಲಾ ಕಡೆ ಕೇಳಿ ಬರ್ತಾ ಇರತ್ತೆ. ನಾನು ಇದನ್ನ ಒಂದ್ ಸರ್ತಿನೂ ಕೇಳಿಲ್ಲ... ಇದರ ಸಾಹಿತ್ಯ ಒಂದು ಬಾರಿಯೂ ನಾನು ಕೇಳಿಲ್ಲ... ಎಲ್ಲ ಹೋದರೂ ಜನ ಈ ಹಾಡ್ ಬಗ್ಗೆ ಮಾತಾಡ್ತಾ ಇರ್ತಾರೆ. ಅದರ್ ಬಗ್ಗೆ ಕೇಳೀ ಕೇಳೀ ನನ್ನ ತಲೇಲಿ ಇದರ ಒಂದು ಅಣಕ ಹೊಳೆಯಿತು. ಅದನ್ನ ಇಲ್ಲಿ ಬಿಚ್ಚಿಡೋ ಪ್ರಯತ್ನ. ಮೂರು ಸಾಲುಗಳಷ್ಟೇ. ಹೆಚ್ಚಿಗೆ ಹೊಳೆದರೆ ಮುಂದೆ ನೋಡೋಣ.

ಕಾಯ್ಕಿಣಿ ಕೈಲಿ ಪದ್ಯ ಬರೆಸಿ,
ಮನೋ ಮೂರ್ತಿ ಮ್ಯೂಸಿಕ್ ಕೊಟ್ಟು
ಸೋನು ನಿಗಮ್ ಕೈಲಿ ಹಾಡ್ಸೋ ಲೈಫು ಇಷ್ಟೇನೇ...

ಯೋಗರಾಜ್ ಭಟ್ತ್ರಿಗ್ ಚಿತ್ರ ಕೊಟ್ಟು
ಕಿತ್ತೋಗಿರೋ ಡೈಲಾಗ್ ಬರ್ಸಿ
ಡೆಸ್ಪೋ ಗಣೇಶ್ ಬಾಯಲಿ ಹೇಳ್ಸೋ ಲೈಫು ಇಷ್ಟೇನೇ...

ಇಂಥ ಕಿತ್ತೋದ್ ಪದ್ಯ ಬರದು,
ಫೇಸ್ಬುಕ್ ಟ್ವಿಟ್ಟರಲ್ಲಿ ಕೊರ್ದು,
ನಾನೇ ಗ್ರೇಟು ಅಂತ ಕೊಚ್ಚೋ ಲೈಫು ಇಷ್ಟೇನೇ...

Thursday, February 18, 2010

ಡಿ. ಎನ್. ಶಂಕರ್ ಭಟ್ಟರ ಕನ್ನಡ. ಒಂದು ವಿಮರ್ಶೆ. ಭಾಗ ೧

ಮಯೂರದಲ್ಲಿ ಡಿ. ಎನ್. ಶಂಕರ ಭಟ್ಟರ ಸಂದರ್ಶನವನ್ನೋದುತ್ತಿದ್ದಾಗ ಹೊಳೆದ ಈ ಲೇಖನ ಈಗ ನಿಮ್ಮ ಮುಂದೆ.

ಈ ತಿಂಗಳ ಮಯೂರವನ್ನು ಕೈಗೆತ್ತಿಕೊಂಡಾಗ ಅದರ ನವನೀತ ಅಂಕಣದಲ್ಲಿ ಪ್ರಕಟಗೊಂಡ ಈ ತಲೆಬರಹ ನನ್ನ ಗಮನವನ್ನು ಸೆಳೆಯಿತು. "ಓದುಕನ್ನಡವೇ ಬರಹಕನ್ನಡ".
ಸಂದರ್ಶಿತರು: ಡಿ. ಎನ್. ಶಂಕರ್ ಭಟ್,
ಸಂದರ್ಶಕರು: ಮೇಟಿ ಮಲ್ಲಿಕಾರ್ಜುನ, ಎಸ್. ಸಿರಾಜ್ ಅಹಮದ್.

ಆಸಕ್ತರು ಈ ಅಂಕಣವನ್ನು ಒಮ್ಮೆ ಓದಿ ಈ ಲೇಖನವನ್ನು ಓದಬೇಕಾಗಿ ಪ್ರಾರ್ಥನೆ.

ಡಿ. ಎನ್. ಶಂಕರ್ ಭಟ್ಟರು ಆಂಗ್ಲ ಭಾಷೆಯಲ್ಲಿ ಮಹಾನ್ ಪಂಡಿತರು. ಅವರ ಹಲವು ಪುಸ್ತಕಗಳು ಜಗದ್ವಿಖ್ಯಾತವಾಗಿವೆಯೆಂದು ಈ ಲೇಖನ ಹೇಳುತ್ತದೆ. ಅವರು ೭೦ರ ದಶಕದಲ್ಲಿ ಕನ್ನಡದಲ್ಲಿ ಬರೆಯಲು ಆರಂಭಿಸಿದ್ದರಾದರೂ ಹೆಚ್ಚಿನ ಸ್ಪೂರ್ತಿ, ಸಹಕಾರ ದೊರೆಯದ ಕಾರಣ ಆಂಗ್ಲಕ್ಕೆ ಅಂಟಿಕೊಂಡರು ಎಂದು ಹೇಳಿಕೊಂಡಿದ್ದಾರೆ. ಈಗ ಪ್ರೊ|| ಚಂದ್ರಶೇಖರ್ ಕಂಬಾರರ ನಲ್ಮೆಯ ಒತ್ತಾಯದ ಮೇರೆಗೆ ಕನ್ನಡ ಭಾಷೆಯ ಬಗೆಗೆ ವಿಸ್ತೃತ ಸಂಶೋಧನೆಗೈಯಲು ತೊಡಗಿದ್ದಾರೆ. ಈ ಸಂಶೋಧನೆಯ ಫಲಿತಾಂಶಗಳೇ ಅವರ ಹಲವು ಪುಸ್ತಕಗಳು

೧. ಕನ್ನಡ ನುಡಿ ನಡೆದು ಬಂದ ದಾರಿ.
೨. ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ.
೩. ಕನ್ನಡ ಬರಹವನ್ನು ಸರಿಪಡಿಸೋಣ.
೪. ಬಾಶೆಯ ಬಗೆಗೆ ನೀವೇನು ಬಲ್ಲಿರಿ?
೫. ಕನ್ನಡ ವಾಕ್ಯಗಳ ಒಳರಚನೆ.
೬. ಕನ್ನಡದ ಸರ್ವನಾಮಗಳು. (ಅರ್ಕ ಒತ್ತು ಅಲ್ಲ, ರ ಕಾರಕ್ಕೆ ವ ಒತ್ತು.)
೭. ಕನ್ನಡ ಬಾಶೆಯ ಕಲ್ಪಿತ ಚರಿತ್ರೆ
೮. ಕನ್ನಡ ಶಬ್ದ ರಚನೆ.

ಇನ್ನು ಹಲವು. ಏನ್ ಗುರು ತಂಡದವರು ಈ ಎಲ್ಲ ಹೊತ್ತಿಗೆಗಳನ್ನು ವಿದ್ಯುನ್ಮಾನ ರೂಪದಲ್ಲಿ ಹೊರತಂದಿದ್ದಾರೆ. ಅವುಗಳನ್ನು ನೀವು ಇಲ್ಲಿಂದ ಡೌನ್ಲೋಡ್ ಮಾಡಬಹುದು. (ನಾನು ಈ ಪುಸ್ತಕಗಳನ್ನು ಡೌನ್ಲೋಡ್ ಮಾಡಲು ನೋಡಿದೆ. ಸರ್ವರ್ ಎರರ್ ಒದಗಿತು. ಇನ್ನೊಮ್ಮ್ಮೆ ನೋಡಲಾಗಲಿಲ್ಲ).

ಈ ನಿಟ್ಟಿನಲ್ಲಿ ಏನ್ ಗುರು ತಂಡ ಒಂದು ಸಭೆಯನ್ನು ಏರ್ಪಡಿಸಿತ್ತು. ಅದರ ಬಗ್ಗೆ ಹೆಚ್ಚಿನ ಮಾಹಿತಿಗೆ ಈ ತಂತುವನ್ನು ನೋಡಿ.

ಡಿ. ಏನ್. ಶಂಕರ್ ಭಟ್ ರ ಈಗಿನ ಕನ್ನಡದ ಮೇಲಿನ ಆರೋಪಗಳು.
೧. ಇದು ಕನ್ನಡವಲ್ಲ, ಸಂಸ್ಕೃತ.
೨. ಹೆಚ್ಚಾಗಿ ಸಂಸ್ಕೃತ ಪದಗಳನ್ನೇ ಅವಲಂಬಿತವಾಗಿರುವ ನಮ್ಮ ಇಂದಿನ ಕನ್ನಡವನ್ನು ನಾವು ಕನ್ನಡೀಕರಿಸಬೇಕು.
೩. ವ್ಯಾಕರಣವೂ ಸಂಸ್ಕೃತಮಯವಾಗಿದೆ. ಅದರ ಶುದ್ಧೀಕರಣವೂ ಸಾಗಬೇಕು.
೪. ಆಡುಭಾಷೆಯಲ್ಲಿ ಮಹಾಪ್ರಾಣಗಳನ್ನು ಬಳಸುವುದಿಲ್ಲ. ಅದೆಲ್ಲ ಬರಿಯ ಲಿಖಿತ ರೂಪದಲ್ಲಿವೆಯಷ್ಟೇ. ಹಾಗಾಗಿ ಇವನ್ನೆಲ್ಲ ನಮ್ಮ ಕನ್ನಡದಿಂದ ತೆಗೆದುಹಾಕಬೇಕು.
೫. ಪಠ್ಯ ಪುಸ್ತಕಗಳು ಕನ್ನಡದಲ್ಲಿ ಹೊರಬರುತ್ತಿಲ್ಲ. ಅದರಲ್ಲಿಯೂ ವೈಜ್ಞಾನಿಕ ವಿಷಯಗಳಿಗೆ ಸಂಬಂಧ ಪಟ್ಟಂತೆ ಕನ್ನಡದಲ್ಲಿ ಕಲಿಯಲು ಯಾವುದೇ ಸೌಲಭ್ಯಗಳಿರುವುದಿಲ್ಲ. ಇವೆಲ್ಲವನ್ನೂ ತೊಡೆದು ಹಾಕಲು ಕನ್ನಡದಲ್ಲಿ ಅದೂ ಆಡುಗನ್ನಡದಲ್ಲಿ ಹೆಚ್ಚಿನ ಪುಸ್ತಕಗಳನ್ನು ಹೊರತರಬೇಕು.
೬. ಹೊಸ ಹೊಸ ಕನ್ನಡ ಪದಗಳ ಆವಿಷ್ಕಾರ ಆಗಬೇಕು. ಇದು ನಡೆಯುತ್ತಲೇ ಇರಬೇಕು.
೭. ಹಳ್ಳಿ ಮಕ್ಕಳು, ಕೆಳ ವರ್ಗದವರು ಈಗಿನ ಪಠ್ಯ ಪುಸ್ತಕಗಳಲ್ಲಿ ಸಿಗುವ ಮಹಾಪ್ರಾಣಗಳಿಂದ ನಲುಗಿ ಹೋಗಿದ್ದಾರೆ. ಅದರಿಂದ ಅವರು ಶೈಕ್ಷಣಿಕವಾಗಿ ಮೇಲೆ ಬರಲಾಗುತ್ತಿಲ್ಲ. ಹೀಗಾಗಿ ಮಹಾಪ್ರಾಣಗಳನ್ನು ತೆಗೆದುಹಾಕಬೇಕು.

ಇನ್ನು ಹಲವು. ಇವು ಮುಖ್ಯವಾದವು.

ಇನ್ನು ನನ್ನ ನಿಲುವನ್ನು ಸ್ಪಷ್ಟಪಡಿಸುತ್ತೇನೆ. ನಾನು ಕನ್ನಡಕ್ಕೆ ಈ ಮಟ್ಟದ ಬದಲಾವಣೆಯಾಗುವುದನ್ನು ಪೂರ್ಣವಾಗಿ ಖಂಡಿಸುತ್ತೇನೆ. ಈ ಮೇಲೆ ಹೇಳಿರುವ ಅಂಶಗಳಿಗೆ ನನ್ನ ಉತ್ತರವನ್ನು ಈಗ ಕೊಡಲಿಚ್ಚಿಸುತ್ತೇನೆ.

೧. ಇದು ಕನ್ನಡವಲ್ಲ, ಸಂಸ್ಕೃತ: ಸ್ವಾಮಿ, ಕನ್ನಡದಲ್ಲಿ ಸಂಸ್ಕೃತ ಬಹಳಷ್ಟಿರಬಹುದು. ಆದರೆ ಕನ್ನದವೆಂದೂ ಸಂಸ್ಕ್ರುತವಗಲಾರದು. ಕನ್ನಡಕ್ಕೆ ಅದರದ್ದೇ ಸ್ಥಾನಮಾನಗಳಿವೆ. ಸಂಸ್ಕೃತಕ್ಕೂ ಅದರದ್ದೇ ಸ್ಥಾನಮಾನಗಳಿವೆ. ಎರಡು ಭಾಷೆಗಳನ್ನು ಈ ರೀತಿ ಏಕೆ ಹೋಲಿಸುತ್ತೀರಿ?ಸಂಸ್ಕೃತ ಭಾರತದ ಭಾಷೆ. ಅದರಿಂದ ಸ್ಪೂರ್ತಿ ಪಡೆಯದ ಭಾರತದ (ಅಷ್ಟೇ ಏಕೆ? ವಿಶ್ವದ) ಭಾಷೆಯೆಷ್ಟಿದೆ? ನಮ್ಮ ಕನ್ನಡವೂ ಇದೇ ರೀತಿ ಸಂಸ್ಕೃತದಿಂದ ಬಹಳ ಪಡೆದುಕೊಂಡಿದೆ. ಹಾಗೆಯೇ ಸಂಸ್ಕೃತವೂ ಇತರ ಭಾಷೆಗಳಿಂದ ಹೆಚ್ಚಲ್ಲದಿದ್ದರೂ ಅಷ್ಟು ಇಷ್ಟು ಪಡೆದುಕೊಂಡಿದೆ. ಭಾಷೆಗಳು ಬೆಳೆಯುವುದೇ ಹಾಗೆ ಅಲ್ಲವೇ?

೨. ಕನ್ನಡದ ಹೆಚ್ಚಿನ ಪದಗಳು ಸಂಸ್ಕೃತದಿಂದ ಆಯ್ದವಾಗಿವೆ. ಅವನ್ನು ಕನ್ನಡೀಕರಿಸಬೇಕು: ಕನ್ನಡೀಕರಿಸುವುದೆಂದರೆ ಏನು?ಹೊಸ ಪದಗಳನ್ನು ಹುಟ್ಟು ಹಾಕುವುದು. ಇದಕ್ಕೂ ಸಂಸ್ಕೃತಕ್ಕೂ ಏಕೆ ಥಳುಕು ಹಾಕುವಿರಿ? ಕೆಲವಕ್ಕೆ ಹಳಗನ್ನಡ ಪದಗಳನ್ನು ಹೊಂದಿಸಬಹುದು. ಇತ್ತೀಚಿನ ವಿಜ್ಞಾನ ಸಂಬಂಧೀ ಪದಗಳಿಗೆ ಏನು ಮಾಡುವಿರಿ?

ಉದಾಹರಣೆ: ನೀವು 'ಉದಾಹರಣೆ' ಎನ್ನುವ ಬದಲು 'ಎತ್ತುಗೆ' ಎನ್ನಲು ಪ್ರೋತ್ಸಾಹಿಸುತ್ತೀರಿ. ಹೆಚ್ಚಿನ ಜನಕ್ಕೆ ಉದಾಹರಣೆ ಎಂದೇ ಅಭ್ಯಾಸವಾಗಿರುವಾಗ ಯಾರು ಎತ್ತುಗೆ ಎನ್ನುತ್ತಾರೆ?

ಮುಂದುವರೆಯುವುದು...

Monday, February 08, 2010

ಸದಾನಂದ

ಸ್ಮಶಾನದಲ್ಲಿ ಅವನು ಅಳುತ್ತಾ ಕೂತಿದ್ದ. ಅವನ ತಂದೆ, ಅವನಿಗಿದ್ದ ಒಂದೇ ಆಸರೆ, ಅವನನ್ನಗಲಿದ್ದ. ತನಗಿನ್ನಾರು ದಿಕ್ಕು? ತಾನಿನ್ನು ಒಬ್ಬಂಟಿ ಎಂದು ಮರುಗುತ್ತಿದ್ದ.

ಸ್ಮಶಾನದ ಚಂಡಾಳ ಇವನನ್ನೇ ದಿಟ್ಟಿಸಿ ನೋಡುತ್ತಿದ್ದ. ಅವನ ಕೆಲಸವೆಲ್ಲ ಮುಗಿದಿತ್ತು. ಆ ದಿನ ಹೆಣ ಸುಟ್ಟು, ೩-೪ ಹೆಣಗಳನ್ನು ಹೂತಿದ್ದ.

ಇವನ ಬಳಿ ಬಂದು ಕೇಳಿದ: "ಯಾಕ್ ಮರಿ ಅಳತ ಇದ್ದೀಯ? ಮನೆಗ್ ಒಗಾಕಿಲ್ವ?"

"ನಮ್ಮಯ್ಯ ಸತ್ತ್ಹೊಗವ್ರೆ! ನಂಗ್ಯಾರು ಗತಿ ಇಲ್ಲ. ಮನೆಗ್ ಹೋದ್ರೆ ಬರೀ ಅಯ್ಯನ್ನ್ ನೆನಪೆ ಬತ್ತೈತೆ. ನಾ ಮನೆಗ್ ಹೊಗಾಕಿಲ್ಲ"

"ಹಂಗಲ್ಲ ಅನ್ನ್ಬ್ಯಾಡದು ಮಗಾ! ಮೇಲಿರೋ ನಿಮ್ಮಯ್ಯನ್ಗೆ ಸಿಟ್ಟ ಬರಾಕಿಲ್ವ? ಓಗು! ಮನೆಗ್ ಹೋಗಿ ಸಂದಾಗ್ ಬದುಕು"

"ನಾ ಒಗಾಕಿಲ್ಲಂದ್ರೆ ಒಗಾಕಿಲ್ಲ".

"ನೀ ಹೀಂಗ್ ಹೇಳಿದ್ರೆ ಹೋಗಲ್ಲ. ಇಲ್ ಬಾ. ಇದ ನೋಡು. ಏನಿದು?"

"ತಲೆ ಬುಲ್ಡೆ ಕಣ್ ಏಳು".

"ಇದ ಯಾವಗಾನ ಅತ್ತಿದ್ದೂ ಬೇಜಾರ್ ಮಾಡ್ಕಂದಿದ್ದೂ ನೀ ಕಂಡೀಯ?"

"ಏಯ್! ಆದ ಯಾಕ್ ಬೇಜಾರ್ ಮಾಡ್ಕತ್ತದೆ? ಅದ್ಕೆನ್ ಬುದ್ದಿ ಐತಾ?"

"ಅದೇ ನಾನು ಏಳೋದು. ನೀ ಬ್ಯಾಜಾರ್ ಮಾಡ್ಕಂದ್ರೂ, ಸಿಟ್ಟ ಮಾಡ್ಕಂದ್ರೂ ಏನೇ ಮಾಡ್ಕಂದ್ರೂ ಈ ತಲೆ ಬುಲ್ಡೆ ಮಾತ್ರ ಯಾವಾಗಲೂ ನಗ್ತಾ ಇರ್ತದೆ. ಅಳೋ ತಲೆ ಬುಲ್ಡೆ ನ ಯಾರೂ ಇಲ್ಲೀಗಂಟ ಕಂಡೇ ಇಲ್ಲ. ತಿಳ್ಕ. ನೀ ಹೆಂಗೆ ಇರು, ಈ ಬುಲ್ಡೆ ಮಾತ್ರ ಯಾವಾಗಲೂ ನಗ್ತಾನೆ ಇರ್ತೈತೆ. ಹಂಗೆ ಏನೇ ಆದ್ರೂ ನೀನು ನಗ್ತಾನೆ ಇರ್ಬೇಕು. ಈಗ ನಿಮ್ಮಪ್ಪ ಸತ್ತೋದ್ರು ಅಂತ ನೀ ಸುಮ್ಕಿದ್ದ್ರೆ ನೀನು ಸತ್ತ್ಹೊಯ್ತೀ. ನಿಮ್ಮಪ್ಪ ನಿನ್ನ ಕಷ್ಟ ಪಟ್ಟು ಸಾಕಿದ್ದು ಇದ್ಕೆಯ? ಹೋಗು. ಕಷ್ಟ ಪಟ್ಟು ದುಡಿದು ನಿಮ್ಮಪ್ಪನ್ ಋಣ ತೀರ್ಸೋಗು. "

ಬಾಳಿನಲ್ಲಿ ಏನೋ ಹೊಸ ಅರ್ಥ ಕಂಡ ಆ ಹುಡುಗ ಮುನ್ನಡೆದ.

Sunday, January 24, 2010

ಕಂಗ್ಲಿಷ್: ಒಂದು ಅಧ್ಯಯನ.

ನಿಮಗೆಲ್ಲಾ ತಿಳಿದಿರುವ ಹಾಗೆ ಕಂಗ್ಲಿಷ್ ಎಂದರೆ ಇಂಗ್ಲಿಷ್ ಅಥವಾ ಆಂಗ್ಲ ಭಾಷೆ ಹಾಗು ಕನ್ನಡ ಭಾಷೆಯ ಮಿಶ್ರಣ. ಇದರಲ್ಲಿ ಕನ್ನಡಕ್ಕಿಂತ ಇಂಗ್ಲಿಷ್ ಹೆಚ್ಚು ಬೆರೆತಿರುವುದರಿಂದ 'ಇನ್ನಡ' ಎನ್ನದೇ ಕಂಗ್ಲಿಷ್ ಎಂದಿರಲೂ ಬಹುದು.

ಇದರ ಬಳಕೆ ಇಂದಿನ ದಿನಗಳಲ್ಲಿ ಎಷ್ಟು ಪ್ರಧಾನವಾಗಿಬಿಟ್ಟಿದೆ ಎಂದರೆ ಸ್ಪಷ್ಟ ಹಾಗು ಸುಲಲಿತ ಕನ್ನಡವನ್ನು ಯಾರಾದರೂ ಅಪ್ಪಿ ತಪ್ಪಿ ಆಡಿಬಿಟ್ಟರೆ, ಎಲ್ಲರೂ ಕಕಮಕರಾಗಿಬಿಡುತ್ತಾರೆ. ಎಲ್ಲಿಯೋ ಪರದೇಶದಿಂದ ಬಂದವನಿಗೆ ಬೀರುವ ನೋಟ ಇವರಿಗೆ ಪ್ರಾಪ್ತವಾಗಿಬಿಡುತ್ತದೆ.

ಮೊನ್ನೆ ಮೊನ್ನೆ ನಮ್ಮ ತೀ. ನಂ. ಶ್ರೀ ರವರ 'ನಂಟರು' ಪ್ರಬಂಧ ಸಂಕಲನ (ಅಥವಾ ನನ್ನ ಪ್ರಕಾರ ಅಂದಿನ ಬ್ಲಾಗು) ಓದುವಾಗ ಅವರ 'ಕಾಸಿನ ಸಂಘ' ಓದುತ್ತಿರುವಾಗ ಈ ಅಂಕಣ ಬರೆಯುವ ಹಂಬಲ ಉಂಟಾಯಿತು.

ಇದರ ಅಧ್ಯಯನ ಮಾಡುವ ಮುನ್ನ ಕೆಲವು ಉದಾಹರಣೆಗಳನ್ನು ನೋಡೋಣ.

೧. ಹೇಯ್! ಈಗ time ಎಷ್ಟಾಯ್ತು?
೨. ಈಗ ಸ್ವಲ್ಪ snacksu, coffee, tea ಕುಡ್ಕೊಂಡ್ ಬರೋಣ?
೩. ಬಟ್ಟೆ wash ಮಾಡಿದ್ದೀನಿ, ಸ್ವಲ್ಪ iron ಮಾಡ್ಬಿದ್ತೀರಾ?
೪. ನಂಗೆ ಸೀರೆ ಅಂದ್ರೆ allergy you know? ಯಾರು ಆ old model dress ಎಲ್ಲಾ ಹಾಕ್ಕೋತಾರೆ?
೫. ಹೇಯ್ come ya! ಈಗ shopping ಮಾಡಿ ಬರೋಣ.

ಇವು ಕೇವಲ ಉದಾಹರಣೆಗಳಷ್ಟೇ. ಬಸ್ಸಿನಲ್ಲಿಯೋ, ಕಾಲೇಜಿನಲ್ಲಿಯೋ ಅಥವಾ ಜನ ಹೆಚ್ಚು ಸೇರುವ ಯಾವುದೇ ಜಾಗಕ್ಕೆ ಹೋಗಿ ನೋಡಿದರೂ ಇಂತಹ ಲೆಕ್ಕವಿಲ್ಲದಷ್ಟು ಉದಾಹರಣೆಗಳು ನಮಗೆ ಸಿಗುತ್ತವೆ.

ಕಂಗ್ಲಿಷಿನ ಉಗಮ:

ಈ ಕಂಗ್ಲಿಷ್ ಯಾವ ಕಾಲಘಟ್ಟದಿಂದ ಉದಯಿಸಿರಬಹುದು? ಆಂಗ್ಲರು ನಮ್ಮ ದೇಶಕ್ಕೆ ಬರುವ ಮುಂಚೆಯಂತೂ ಇದು ಬಂದಿರುವುದು ಶಕ್ಯವಿಲ್ಲ. ಐರೊಪ್ಯ ರಾಷ್ಟ್ರಗಳು ನಮ್ಮ ದೇಶಕ್ಕೆ ಬಂದಿದ್ದು ೧೬ನೇ ಶತಮಾನದಲ್ಲಾದರೂ, ಅವರ ಸರ್ಕಾರ ಸ್ಥಾಪಿತವಾದದ್ದು ೧೭ನೇ ಶತಮಾನದಲ್ಲಿ. ಕರ್ನಾಟಕಕ್ಕೆ ಬ್ರಿಟೀಷರ ಕಿರುಕುಳ ಶುರುವಾದದ್ದು ೧೮ನೇ ಶತಮಾನದಲ್ಲಿಯೇ ಎಂದು ಹೇಳಬೇಕು. ನಮ್ಮ ಕಿತ್ತೂರು ರಾಣಿ ಚೆನ್ನಮ್ಮ, ಒನಕೆ ಓಬವ್ವ, ಇವರೆಲ್ಲರೂ ೧೮ ನೇ ಶತಮಾನದವರೇ. ಹೈದರ್ ಅಲಿ, ಟಿಪ್ಪು ಸುಲ್ತಾನ್ ಇಬ್ಬರೂ ೧೮ ನೇ ಶತಮಾನ ಮುಗಿಯುವುದರೊಳಗೆ ಬ್ರಿಟೀಷರ ಮೇಲೆ ಯುದ್ಧ ಹೂಡಿ ಸತ್ತವರು. ನಮ್ಮ ಈ ಕಂಗ್ಲಿಷ್ ಪ್ರಾರಂಭವಾಗಿದ್ದರೆ ಇದರ ನಂತರವಷ್ಟೇ ಸಾಧ್ಯ.

ಬ್ರಿಟೀಷರು ಆಗ ನಮ್ಮನ್ನಾಳುತ್ತಿದ್ದರೂ ಅವರವರ ನಡುವೆ ಮಾತ್ರ ಆಂಗ್ಲ ಭಾಷೆ ಬಳಸುತ್ತಿದ್ದಿರಬೇಕು. ಪ್ರಜೆಗಳಿಗೆ ಇಂಗ್ಲಿಷ್ ಹೇರಲಿಲ್ಲ. ಇದರ ಬಗೆಗೆ ಯಾವುದೇ ಮಾಹಿತಿ ನನ್ನ ಬಳಿಯಿಲ್ಲವಷ್ಟೇ. ಅವರ ತಂತ್ರ ಕುತಂತ್ರಗಳೇನಿದ್ದರೂ ವಿಭಿನ್ನ ರೀತಿಯವು. ಅದರ ಬಗ್ಗೆ ಈಗ ಚರ್ಚೆ ಬೇಡ.

೧೯ನೇ ಶತಮಾನದ ಮಧ್ಯಂತರದ ಮೇಲೆ ಹಲವಾರು ಭಾರತೀಯರು ಉನ್ನತ ವ್ಯಾಸಂಗಕ್ಕಾಗಿ ಯೂರೋಪ್ ಗೆ ಮುಖ ಮಾಡಿದ ಕಾಲ. ಸುಮಾರು ಭಾರತೀಯರು ಲಂಡನ್ನಿಗೆ ಹೋಗಿರುವುದು ನಮಗೆಲ್ಲರಿಗೂ ತಿಳಿದ ವಿಷಯ. ರಾಜಾ ರಾಮ್ ಮೋಹನ್ ರಾಯ್, ಮಹಾತ್ಮಾ ಗಾಂಧಿ, ಜವಾಹರ್ ಲಾಲ ನೆಹರು, ಸರ್. ಎಂ. ವಿಶ್ವೇಶ್ವರಯ್ಯ ಇನ್ನೂ ಹಲವರ ಉದಾಹರಣೆ ನಮಗೆ ಇತಿಹಾಸದಿಂದ ಸಿಗುತ್ತದೆ.

ಹೊರದೇಶಕ್ಕೆ ಹೋದರೆ (ಸಮುದ್ರ ದಾಟಿದರೆ), ಧರ್ಮದಿಂದ ಉಚ್ಚಾಟನೆ ಆಗುತ್ತಿದ್ದ ಕಾಲ ಒಂದಿತ್ತು. ಕ್ರಮೇಣ ಹೊರದೇಶದಲ್ಲಿ ಓದಿ ಬಂದವರಿಗೆ ಭಾರಿ ಮನ್ನಣೆ ದೊರೆಯುವಂತಾಯಿತು. "ಓಹೋ! ಅವರು ಲಂಡನ್ನಿನಲ್ಲಿ ಓದಿ ಬಂದವರು! ಬಹಳ ಮೇಧಾವಿ ಇರಬೇಕು." ಎಂಬ ಮಾತುಗಳು ದಿನೇ ದಿನೇ ಬಹಳವಾಗುತ್ತಾ ಬಂತು.

ಹೀಗೆ ಬ್ರಿಟನ್ನಿಗೆ ಹೋಗಿ ಬಂದ ಹಲವರಲ್ಲಿ ಒಂದು ರೀತಿಯ ಜಂಭ. ತಮಗೆ ಇಂಗ್ಲಿಷ್ ಗೊತ್ತು. ಇತರರಿಗೆ ತಿಳಿದಿಲ್ಲ. ತಮ್ಮ ನಗರದಲ್ಲೇ ಅಥವಾ ಆಸುಪಾಸಿನಲ್ಲಿ ಯಾರಾದರು ಒಬ್ಬರು ವಿದೇಶ ಸುತ್ತಿ ಬಂದವರಿದ್ದರೆ ಅವರೊಡನೆ ಮಾತ್ರ ಮಾತು, ಇತರರೊಡನೆ ಮೂದಲಿಕೆ ಹೆಚ್ಚುತ್ತಾ ಬಂತು.

ಇದನ್ನು ಕಂಡ ಸಾಮಾನ್ಯ ಜನರು, ತಮಗೆ ತಿಳಿಯದ ಭಾಷೆ ಅರಿಯಲು ಅದನ್ನೇ ಮಾತನಾಡುವ ಜನರನ್ನು ಹೆಚ್ಚು ಮರ್ಯಾದೆಯಿಂದ ಮಾತನಾಡಲು ತೊಡಗಿದರು. ಹಾಗು ಹೀಗೂ ಸ್ವಲ್ಪ ಸಮಯ ಅವರೊಂದಿಗೆ ಕಳೆದರೆ ತಮ್ಮ ಜನ್ಮ ಉದ್ಧಾರವಾಗುವುದು ಎಂಬ ಭ್ರಮೆ ಅವರಿಗೆ ಬಂತು. ಮಾತನಾಡುವಾಗ ಅಲ್ಲಿ ಇಲ್ಲಿ ಅವರ ಬಾಯಿಂದ ಹೋರಾಟ ಕೆಲವು ಆಂಗ್ಲ ಪದಗಳು ಇವರ ಕಿವಿಗೆ ಬಿದ್ದು ಅದರ ಅರ್ಥವನ್ನು ಅವರಿಂದ ಎದ್ದು ಬಿದ್ದು ಪಡೆದು ತಮ್ಮ ಇತರ ಸ್ನೇಹಿತರ ಮುಂದೆ ಬಡಾಯಿ ಕೊಚ್ಚಲು ಉಪಯೋಗಿಸುತ್ತಿದ್ದರು.

ಇವೇ ಪದಗಳು ಮುಂದೆ ಕನ್ನಡ ವಾಕ್ಯಗಳಲ್ಲಿಯೇ ಬೆರೆತು ಈ ಹೊಸ ಕಂಗ್ಲಿಷ್ ಆಯಿತು ಎನ್ನುವುದು ನನ್ನ ನಂಬಿಕೆ.

ಕಂಗ್ಲಿಷ್ ಬೆಳವಣಿಗೆ:

ಉಗಮದ ಮಾತಾಯಿತು. ಇದು ಹೇಗೆ ಬೆಳೆಯಿತು? ಅಥವಾ, ಇದರ ಬೆಳವಣಿಗೆಗೆ ಹೇಗೆ ಪ್ರೋತ್ಸಾಹ ಸಿಕ್ಕಿರಬಹುದು? ನನಗೆ ಹೊಳೆಯುತ್ತಿರುವ ಕಾರಣಗಳೆಂದರೆ:

೧. ಮೊದಲೇ ಹೇಳಿದಂತೆ, ವಿದೇಶಿ ವಿದ್ಯಾರ್ಥಿಗಳು ಹೆಚ್ಚುತ್ತಾ ಹೋಗಿ ಅವರ ಮಾತೃಭಾಷೆಯ ಬಳಕೆಯಲ್ಲೆಲ್ಲ ಇಂಗ್ಲೀಷನ್ನು ತುರುಕುತ್ತಿದ್ದಿರಬೇಕು.
೨. ಅದನ್ನು ಕೇಳಿದ ಇಲ್ಲಿಯ ಜನ ಅದರ ಉಪಯೋಗದಲ್ಲಿ ಏನೋ ಒಂದು ಸಂತೋಷವನ್ನು ಮನಗಂಡು ಉಪಯೋಗಿಸುತ್ತಿದ್ದಿರಬಹುದು.
೩. ಹಲಕೆಲವು ವಿದೇಶಿ ವಸ್ತುಗಳು ಇಲ್ಲಿಗೆ ಬಂದು ಅವಕ್ಕೆ ಇಲ್ಲಿ ಸಮನಾದ ವಸ್ತುಗಳು ಇರದಿದ್ದುದ್ದರಿಂದ ಅವಕ್ಕೆ ಕನ್ನಡದಲ್ಲಿ ಹೊಸ ಪದವನ್ನು ಆವಿಷ್ಕರಿಸದೇ ಅದೇ ಹೆಸರನ್ನು ಇಲ್ಲಿಯೂ ಕಾಪಾಡಿಕೊಂಡು ಬಂದಿರಬಹುದು. ಉದಾ: ಬಸ್ಸು, ಟ್ರೇನು,ಇಂಜಿನ್, ಟೇಪ್ ರೆಕಾರ್ಡರ್, ಇತ್ಯಾದಿ ಹಲವು ವಸ್ತುಗಳು.
೪. ಈ ಮೇಲೆ ಹೇಳಿದ ಪದಗಳಿಗೆ ಕನ್ನಡ ಪದಗಳನ್ನು ಸೃಷ್ಟಿಸಿದರೂ ಜನರಿಗೆ ಅದು ಕ್ಲಿಷ್ಟವಾಗಿ ಕಂಡಿದ್ದಿರಬೇಕು. ಇತರ ಹಲವು ಕನ್ನಡ ಪದಗಳನ್ನು ಉಚ್ಚರಿಸಲು ಹೆಚ್ಚು ಸಮಯ ತೆಗೆದುಕೊಳ್ಳುವುದರಿಂದ ಜನರು ಅದರ ಆಂಗ್ಲ ಸಮನ್ವಿತ ಪದದ ಮೊರೆ ಹೋಗಿರಲೂ ಬಹುದು. ಉದಾ: ಬಸ್ಸು ಎನ್ನುವ ಬದಲು ಯಾರು ಷಟ್ಚಕ್ರ ವಾಹನ ಎನ್ನುತ್ತಾರೆ?
೫. ಮೇಲೆ ಹೇಳಿದ ಕಾರಣ ಬರೀ ವಿದೇಶಿ ವಸ್ತುಗಳಿಗೆ ಸೀಮಿತವಾಗಿರಬೇಕೆಂದಲ್ಲ. ಆ ಪದ ಕನ್ನಡದಲ್ಲಿ ಬಹಳ ಹಿಂದಿನಿಂದ ಬಳಕೆಯಾಗುತ್ತಿದ್ದರೂ ಆಂಗ್ಲ ಭಾಷೆಯಲ್ಲಿ ಅದಕ್ಕೆ ಒಂದು ಪುಟ್ಟ ಪದವಿದ್ದರೆ ಜನ ಅದಕ್ಕೆ ಮೊರೆ ಹೋಗುವುದನ್ನು ನಾವು ನೋಡಿದ್ದೇವೆ. ಉದಾ: ಕನ್ನಡದ ಹುರುಳೀಕಾಯಿ ಎಂದರೆ ಕೆಲವರಿಗೆ ಅರ್ಥವಾಗುವುದಿಲ್ಲ; beans ಎಂದರೆ ಎಲ್ಲರಿಗೂ ಅರ್ಥವಾಗುತ್ತದೆ. ಇಂತಹ ವಸ್ತುಗಳನ್ನು ಮಾರಾಟ ಮಾಡುವವರೂ ಆಂಗ್ಲ ಭಾಷೆಯ ಮೊರೆ ಹೋದದ್ದರಿಂದ ಜನರಿಗೆ ಅದರ ಕನ್ನಡ ಪದ ಮರೆತೇ ಹೋಗಿರಬೇಕು.
೬. ಕೆಲವರಲ್ಲಿ ತಮ್ಮ ಮಾತೃಭಾಷೆಯಲ್ಲಿ ಮಾತನಾಡುವುದೆಂದರೆ ಅದೇನೋ ಮುಜುಗರ. ಕೀಳರಿಮೆ ಸ್ವಭಾವ. ಅಂಥವರನ್ನು ನೀವೂ ಕಂಡಿರುತ್ತೀರಷ್ಟೇ. ಅವರ ಬಾಯಲ್ಲಿ ಹೊರಬರುವ ಇಂಗ್ಲಿಷ್ ಹೆಚ್ಚಿನ ಪಕ್ಷ ಕಂಗ್ಲಿಷ್ಷೇ ಆಗಿರುತ್ತದಷ್ಟೇ. ಆ ಪ್ರಯೋಗದ ಎರಡು ಉದಾಹರಣೆ: ೧) Please give me some teaಅ. ೨) You today wonly comeಅ. ಪ್ರತೀ ವಾಕ್ಯದ ಕೊನೆಯಲ್ಲಿ ಕನ್ನಡದ ತಂತು ನಿಮಗೆ ಕಾಣಸಿಗುತ್ತದೆ. ೧೦೦ಕ್ಕೆ ೯೫ ಪ್ರತಿಶತ ಇಂಥವರಿಂದಲೇ ಕಂಗ್ಲಿಷ್ ಉದ್ಧಾರವಾಗುತ್ತಿರುವುದು.

ಇನ್ನೂ ಹಲವು ಕಾರಣಗಳಿರಬಹುದು. ಇವು ಪ್ರಮುಖವಾದವೆಂದು ನನ್ನ ಅನಿಸಿಕೆ. ನಿಮ್ಮ ಬಳಿ ಬೇರೆ ಕಾರಣಗಳಿದ್ದರೆ ಖಂಡಿತ ತಿಳಿಸಿ.

ಪರಿಹಾರ/ಸಲಹೆ:

ಅಪ್ಪಟ ಕನ್ನಡ ಪಂಡಿತರಿಗೆ, ಭಕ್ತರಿಗೆ ಈ ಕಂಗ್ಲಿಷ್ ಹಾವಳಿ ಎಂದಿನಿಂದಲೂ ಬೇಸರ ತಂದಿದೆ. ಒಂದೇ ವಾಕ್ಯದಲ್ಲಿ ಎರಡು ಭಾಷೆಯ ಪದಗಳನ್ನು ಬಳಸುವ ಬಗ್ಗೆ ಅವರಿಗೆ ವಿಪರೀತ ಕೋಪವಿದೆ. ಇದರ ಬಗ್ಗೆ ನನ್ನ ಅನಿಸಿಕೆ ಇಲ್ಲಿ ವ್ಯಕ್ತವಾಗಿದೆ.

೧. ಕನ್ನಡದಲ್ಲಿ ಮಾತನಾಡುವಾಗ ಆದಷ್ಟೂ ಅನ್ಯ ಭಾಷೆಯ ಪದಗಳನ್ನು ಬಳಸುವುದನ್ನು ನಿಲ್ಲಿಸಿ. ಇದು ಇಂಗ್ಲಿಷ್ ಒಂದಕ್ಕೆ ಸೀಮಿತವಾಗಿಲ್ಲ. ಇತರ ಭಾಷೆಗಳಿಗೂ ಅನ್ವಯಿಸುತ್ತದೆ.
೨. ನಾಮಪದಗಳನ್ನು ಹಾಗೆಯೇ ಕರೆಯುವುದು ಉತ್ತಮ. iPod ಗೆ ಕನ್ನಡ ಸಮನಾದ ಪದವಿಲ್ಲವೆಂದು ಅದಕ್ಕೆ ಒಂದು ಕನ್ನಡ ಪದ ಹುಡುಕುವುದು ಆಭಾಸಕ್ಕೆ ಎಡೆ ಮಾಡಿಕೊಟ್ಟ ಹಾಗಾಗುವ ಸಾಧ್ಯತೆಯೇ ಹೆಚ್ಚು. ಹಾಗೊಂದು ವೇಳೆ ಈ ಪ್ರಯತ್ನದಲ್ಲಿ ನಾವು ಸಫಲರಾಗಿ ಅದು ಎಲ್ಲರ ಬಾಯಲ್ಲಿ ನಲಿದಾಡಿದರೆ ಅದಕ್ಕಿಂತ ಹೆಚ್ಚು ಭಾಗ್ಯ ಯಾವುದಿದೆ? ಆದರೆ ಆ ಸಂಭವ ಕಡಿಮೆ ಎಂದು ನನ್ನ ಅನಿಸಿಕೆ.
೩. ಈ ಮೇಲೆ ಹೇಳಿದ ಭಾಗಕ್ಕೆ ಕೆಲವು ಕನ್ನಡ ಪಂಡಿತರ ವಿರೋಧವುಂಟು. ಅವರು ಪ್ರತಿ ಪದವನ್ನು ಕನ್ನಡೀಕರಿಸಿ ಆಡಿದರೆ ಸಂತೋಷ; ಜನರಿಗೆ ಅರ್ಥ/ಇಷ್ಟವಾಗದಿದ್ದ ಪಕ್ಷ, ಯಾರೂ ಏನು ಮಾಡುವ ಹಾಗಿಲ್ಲ.

ಕನ್ನಡವೂ ವಿರಾಜಮಾನವಾಗಿ ಆಡಲ್ಪದುತ್ತಿದ್ದ ಕಾಲವೊಂದಿತ್ತು. ಆಗ ಯಾವ ಪರಕೀಯರ ಕಾಟಗಳಿರಲಿಲ್ಲ. ಇಂದು ಇಂಗ್ಲಿಷಿನದ್ದೇ ಸಾಮ್ರಾಜ್ಯ. ಮುಂದೊಂದು ದಿನ ಕನ್ನಡ ತನ್ನ ಪೂರ್ವ ಸ್ಥಿತಿಗೆ ಮರಳುತ್ತದೆ ಎಂಬ ಪ್ರಬಲ ಆಶಯದೊಂದಿಗೆ ಈ ಅಂಕಣವನ್ನು ಮುಗಿಸುತ್ತೇನೆ.

Wednesday, January 13, 2010

ಕೃಷ್ಣದೇವರಾಯನ ೫೦೦ನೇ ಪಟ್ಟಾಭಿಷೇಕ ಮಹೋತ್ಸವ, ಒಂದು ವರದಿ.

ನಿನ್ನೆ ನಡೆದ ಕೃಷ್ಣದೇವರಾಯನ ಪಟ್ಟಾಭಿಷೇಕ ಮಹೋತ್ಸವದ ೫೦೦ನೇ ವರ್ಷಾಚರಣೆ ಸಂಭ್ರಮವನ್ನು ನೋಡಲು ನಾನು ನಿನ್ನೆಯ ದಿನ ಕಂಠೀರವ ಹೊರಾಂಗಣ ಮೈದಾನಕ್ಕೆ ಹೊರಟೆ. ಇದೇ ಸಂಸರ್ಭದಲ್ಲಿ ವಿವೇಕಾನಂದ ಜಯಂತಿಯೂ ಬಂದದ್ದರಿಂದ ಕಾರ್ಯಕ್ರಮಕ್ಕೆ ಇನ್ನೂ ಮೆರಗು ಬಂದಿತ್ತು.

೪ ಗಂಟೆಗೆ ಪ್ರಾರಂಭವಾಗಬೇಕಿದ್ದ ಕಾರ್ಯಕ್ರಮವು ೪:೧೦ಕ್ಕೆ ಆರಂಭವಾಯಿತು. ಅಭ್ಯಾಗತರನ್ನು ಕಾಯುವಲ್ಲಿ ಆ ಹತ್ತು ನಿಮಿಷಗಳು ಕಳೆದವು. ಅವರು ಬರದಿದ್ದನ್ನು ನೋಡಿ ಅಲ್ಲಿಯವರೆಗೂ ನೆರೆದಿರುವ ಸಮೂಹಕ್ಕೆ ಗಾಯನವಾದರೂ ಮನರಂಜನೆಯನ್ನು ನೀಡಲಿ ಎಂಬುದು ಅವರ ಆಶಯವಾಗಿತ್ತು.

ಮನೆಯಿಂದ ಹೊರಡುವ ಮುನ್ನ ಅಭ್ಯಾಗತರ ಪಟ್ಟಿಯನ್ನು ಓದಿದ್ದೆ.
೧. ಕರ್ನಾಟಕದ ಮುಖ್ಯಮಂತ್ರಿ ಶ್ರೀ|| ಬಿ. ಎಸ್. ಯಡಿಯೂರಪ್ಪ.
೨. ಆರ್ಟ್ ಆಫ್ ಲಿವಿಂಗ್ ನ ಸಂಸ್ಥಾಪಕರಾದ ಪೂಜ್ಯ ಶ್ರೀ|| ಶ್ರೀ|| ರವಿಶಂಕರ್ ಗುರೂಜಿ
೩. ಸ್ಥಳೀಯ ಶಾಸಕ ಶ್ರೀ|| ರೋಶನ್ ಬೇಗ್.
೪. ಉನ್ನತ ಶಿಕ್ಷಣ ಮಂತ್ರಿ ಶ್ರೀ|| ಅರವಿಂದ ಲಿಂಬಾವಳಿ.
೫. ಪ್ರವಾಸೋದ್ಯಮ ಹಾಗು ಕನ್ನಡ ಏಳಿಗೆ ಮಂತ್ರಿ ಶ್ರೀ|| ಜನಾರ್ಧನ ರೆಡ್ಡಿ.
೬. ಕೇಂದ್ರ ಉನ್ನತ ಶಿಕ್ಷಣ ಇಲಾಖೆಯ ವತಿಯಿಂದ ಆಗಮಿಸಿದ್ದ ಶ್ರೀ|| ಕೆ. ಏನ್. ರಘುನಂದನ್

ಇನ್ನೂ ಹಲವರು.

೩:೫೦ಕ್ಕೆ ಕಾರ್ಪೋರೇಶನ್ ತಲುಪಿದ ನಾನು ದೊಡ್ಡ ಹೆಜ್ಜೆ ಹಾಕುತ್ತ ಸರಿಯಾಗಿ ೪ ಗಂಟೆಗೆ ಸಭಾಂಗಣ ಸೇರಿದೆ. ಅಲ್ಲೇ ನೆರೆದಿದ್ದ ಒಬ್ಬ ಸಂಚಾರಿ ಆರಕ್ಷಕರನ್ನು ಕುರಿತು ಒಳಗೆ ಹೋಗಲು ದಾರಿ ಯಾವುದೆಂದು ಕೇಳಿ ತಿಳಿದು ಹೊರಟೆ. ಅದು ವಿದ್ಯಾರ್ಥಿಗಳ ಗುಂಪು. ಅವರಲ್ಲಿಯೇ ನಾನು ಒಬ್ಬನಾಗಿ ಕುಳಿತೆ.

ಸಭಾಂಗಣಕ್ಕೆ ಆಗಮಿಸಿದ ವಿದ್ಯಾರ್ಥಿಗಳನೇಕರಲ್ಲಿ ಸಭ್ಯತೆ ಕಾಣಿಸಲಿಲ್ಲ. ಅಸಭ್ಯವಾಗಿ ಶಿಳ್ಳೆ ಹೊಡೆಯುತ್ತ ವೇದಿಕೆಯ ಮೇಲೆ ನೆರೆದಿರುವ ಸಂಗೀತಗಾರರನ್ನು ಹೀಯಾಳಿಸುತ್ತ ಕಾಲ ಕಳೆಯುತ್ತಿದ್ದರು. ಮೇಲಿನ ಅಂಕಣದಿಂದ ಕಾಗದದ ಕ್ಷಿಪಣಿಗಳು, ಉಂಡೆಗಳು ಎಸೆಯಲ್ಪಟ್ಟವು. ನನ್ನ ಪಕ್ಕದಲ್ಲೇ ಓರ್ವ ಆರಕ್ಷಕ ಬಂದು ಕುಳಿತರೂ ಇವು ನಿಲ್ಲಲಿಲ್ಲ.

ಎಂ. ಡಿ. ಪಲ್ಲವಿಯವರ ಗಾಯನ ಶುರುವಾಯಿತು. ಮೊದಲಿಗೆ ಡಿ. ಎಸ್. ಕರ್ಕಿಯವರ 'ಹಚ್ಚೇವು ಕನ್ನಡದ ದೀಪ' ಹಾಡಲು ಕೆಲವು ವಿದ್ಯಾರ್ಥಿಗಳು ಚಪ್ಪಾಳೆಗಳ ಸುರಿಮಳೆಗೈದರು. ನಂತರ ರಾಷ್ಟ್ರಕವಿ ಕುವೆಂಪು ವಿರಚಿತ 'ಎಲ್ಲಾದರೂ ಇರು, ಎಂತಾದರು ಇರು' ಹಾಡು ಹಾಡುವಾಗಲಂತೂ ಜನ ಕೇಕೆ ಹಾಕಲು ಮುಂದಾದರು. ಇದರ ಜೊತೆ ಹೊರವಲಯದಲ್ಲಿ ಡೊಳ್ಳು ಕುಣಿತವೂ ಸಾಗುತ್ತಲಿತ್ತು.

ಇಷ್ಟರಲ್ಲಿಯೇ ಬಲಿಷ್ಠ ಸುತ್ತುಗಾವಲಿನೊಂದಿಗೆ ಮುಖ್ಯ ಮಂತ್ರಿಗಳ ಆಗಮನ. ಹಾಡಿನ ನಂತರ ವೇದಿಕೆಯನ್ನು ಭಾಷಣಗಳಿಗೆ ಅನುವು ಮಾಡಿಕೊಡಲಾಯಿತು. ನಿರೂಪಣೆಯ ಕಾರ್ಯವನ್ನು ಹೊತ್ತವರು ಕನ್ನಡ ಚಿತ್ರರಂಗದ ಖ್ಯಾತ ತಾರೆ ವಿನಯಾ ಪ್ರಸಾದ್ ರವರು. ಈ ಕಾರ್ಯಕ್ರಮಕ್ಕೆ ಬೆನ್ನೆಲುಬಾದವರು ಸಂಭ್ರಮ ಸುರಭ ಸಂಸ್ಥೆಯ ಸಂಜೀವ್ ಕುಲಕರ್ಣಿಯವರು.

ಅಭ್ಯಾಗತರಲ್ಲಿ ಶ್ರೀ|| ರವಿಶಂಕರರನ್ನು ಹೊರತು ಪಡಿಸಿ ಎಲ್ಲರೂ ಇದ್ದರು. ರಾಜಾಜಿನಗರ ಶಾಸಕರಾದ ನೆ. ಲ. ನರೇಂದ್ರ ಬಾಬುರವರು ಜೊತೆಗೊಂಡರು. ಮೊದಲಿಗೆ ಇವರೆಲ್ಲ ದೀಪ ಬೆಳಗಿಸಿದರು. ಇದಾದ ನಂತರ ನಾಡಗೀತೆ ಹಾಡಲನುವಾದರು. ಈ ಬಡ ವಿದ್ಯಾರ್ಥಿಗಳಿಗೆ ನಾಡಗೀತೆಯ ಸಂದರ್ಭದಲ್ಲಿ ನಿಂತುಕೊಳ್ಳಬೇಕೆನ್ನುವ ಕನಿಷ್ಠ ಸೌಜನ್ಯವನ್ನೂ ಅವರ ಶಿಕ್ಷಕರು ಹೇಳಿಕೊಟ್ಟಿಲ್ಲವೇ? ನಾನೊಬ್ಬನೇ ನಿಂತಾಗ ನನಗೊಮ್ಮೆ ಭ್ರಾಂತಿಯೆದುರಾಯಿತು. ನಂತರ ಧ್ವನಿವರ್ಧಕದಲ್ಲಿ ವಿನಯಾ ಪ್ರಸಾದರು ಹೇಳಿದ ನಂತರವಷ್ಟೇ ಅವರು ಎದ್ದು ನಿಂತದ್ದು. ರಾಜ್ಯ ಸರ್ಕಾರದ ನಾಡಗೀತೆಯಲ್ಲಿ ಕೆಲವು ಹೊಸ ಪದಗಳನ್ನು ಸೇರಿಸಿರುವುದು ನನಗೆ ಕಂಡುಬಂದಿತು.

ನಂತರ ಮುಖ್ಯಮಂತ್ರಿಗಳು ರಾಜ ಶೈಲಿಯಲ್ಲಿ ರೇಶಿಮೆ ವಸ್ತ್ರದಲ್ಲಿ ಮುದ್ರಿಸಿದ ಕೃಷ್ಣದೇವರಾಯರ ಪಟ್ಟಾಭಿಷೇಕ ಮಹೋತ್ಸವದ ಒಕ್ಕಣೆಯನ್ನು ನುಡಿದರು.

ನಂತರ ಮಾತನಾಡಿದ ಕೆ. ಎನ್. ರಘುನಂದನರವರು ಕೃಷ್ಣದೇವರಾಯರ ಬಗ್ಗೆ ಹಾಗು ವಿವೇಕಾನಂದರ ಬಗ್ಗೆ ಸವಿವರವಾಗಿ ಎಲ್ಲರಿಗೂ ತಿಳಿಯುವಂತೆ ಗುಣಗಾನ ಮಾಡಿದರು. ಆದರೆ ನಮ್ಮ ಸುತ್ತಮುತ್ತಲಿದ್ದ ಯಾವುದೇ ವಿದ್ಯಾರ್ಥಿಗಳು ಅದನ್ನು ಕಿವಿಯ ಮೇಲೆ ಹಾಕಿಕೊಂಡರೆಂದು ನನಗನ್ನಿಸಲಿಲ್ಲ. ಎಲ್ಲರೂ ಅವರವರಲ್ಲೇ ಗುಸು ಗುಸು ಪಿಸ ಪಿಸ ಮುಂದುವರೆಸಿದ್ದರು. ನನ್ನ ಹಿಂದೆಯೇ ಕುಳಿತ ಅವರ ಶಿಕ್ಷಕರೊಬ್ಬರು ಕಾಗದದ ಕ್ಷಿಪಣಿಗಳನ್ನು ತಯಾರು ಮಾಡಿ ಗುಂಪಿನತ್ತ, ಕೆಲವೊಮ್ಮೆ ಆರಕ್ಷಕರತ್ತ ತೂರುತಿದ್ದರು. ಇನ್ನು ವಿದ್ಯಾರ್ಥಿಗಳನ್ನು ಕೇಳಬೇಕೆ? ಅವರು ಇವರನ್ನು ಹುರಿದುಂಬಿಸುತ್ತಿದ್ದರು.

ಇದೇ ವೇಳೆ ಒಂದು ಸುಸಂಧರ್ಭ ಒದಗಿ ಬಂತು. ನಮ್ಮೊಟ್ಟಿಗೆ ಕುಳಿತಿದ್ದ ಸುಮಾರು ಐವತ್ತು ಮೀರಿದ ದಂಪತಿಗಳಿಬ್ಬರು ಮೈದಾನಕ್ಕೆ ಅಂಟಿದಂತಿದ್ದ ಬಾಗಿಲ ಬಳಿ ಇರುವ ಆರಕ್ಷಕರನ್ನು ಕೇಳಿ ಮೈದಾನಕ್ಕೆ ಹೋಗಬಹುದೇ ಎಂದು ಕೇಳಿದರು. ಅವರು ಅವರದೇ ತಲೆನೋವಿನಲ್ಲಿ ಹೋಗಿ, ಪರವಾಗಿಲ್ಲವೆಂದರು. ಆನೆಯ ಜೊತೆ ಬಾಲದಂತೆ ನಾನು ಅವರೊಂದಿಗೆ ನಡೆದುಬಿಟ್ಟೆನು.

ನನ್ನ ಸೌಭಾಗ್ಯಕ್ಕೆ ನನಗೆ ಪತ್ರಕರ್ತರ ಹಿಂಬದಿಯಲ್ಲಿಯೇ ಆಸನ ದೊರೆಯಿತು. ವೇದಿಕೆಯ ಮೇಲೆ ನೆರೆದಿರುವರೆಲ್ಲರೂ ಇನ್ನೂ ಸ್ಪಷ್ಟವಾಗಿ ಕಾಣಿಸತೊಡಗಿದರು.

ರಘುನಂದನರು ಸುಮಾರು ೪೦ ನಿಮಿಷಕ್ಕೂ ಹೆಚ್ಚು ತಮ್ಮ ಅಮೋಘ ಭಾಷಣವನ್ನು ಮಾಡಿದರು. ಬ್ರಹ್ಮ ತೇಜಸ್ಸನ್ನು ವಿವೇಕಾನಂದರು ಹಾಗು ಕ್ಷಾತ್ರ ತೇಜಸ್ಸನ್ನು ಕೃಷ್ಣದೇವರಾಯ ಪ್ರತಿನಿಧಿಸುವಲ್ಲಿ ಯಾವುದೇ ಸಂಶಯವಿಲ್ಲ. ಇಂದಿನ ಯುವ ಪೀಳಿಗೆಗೆ ಅದು ಮಾರ್ಗದರ್ಶಿಯಾಗಲಿ ಎಂದು ಹಾರೈಸಿದರು. ವಿಜಯನಗರವನ್ನು ವೀಕ್ಷಿಸಲು ಬಂದ ಪರದೇಶದ ರಾಯಭಾರಿಗಳು ಅದನ್ನು ಬಣ್ಣಿಸಿದ ರೀತಿಯನ್ನು ವಿವರಿಸಿದರು.

ನಂತರ ಉನ್ನತ ಶಿಕ್ಷಣ ಮಂತ್ರಿಗಳು, ಅರವಿಂದ ಲಿಂಬಾವಳಿ ಅವರು ಹಂಪೆಯಲ್ಲಿ ಕೃಷ್ಣದೇವರಾಯನ ಹೆಸರಿನಲ್ಲಿ ಮಾಡಬೇಕೆಂದಿರುವ ಮ್ಯೂಸಿಯುಂಗಾಗಿ ವಿಶ್ವವಿದ್ಯಾಲಯದ ವತಿಯಿಂದ ಯಾವುದೇ ಸಹಾಯವಾಗಲಿ ಮಾಡಲು ತಯಾರಿದ್ದೇವೆ ಎಂದು ಘೋಷಿಸಿದರು.

ಜನಾರ್ಧನ ರೆಡ್ಡಿಗಳು ನಂತರ ಮಾತನಾಡಿ ಕೃಷ್ಣದೇವರಾಯನ ಕಾಲದ ವಿಜಯನಗರ, ಇಂದು ಮರುಕಳಿಸುವ ದಿನ ಹೆಚ್ಚೇನೂ ದೂರವಿಲ್ಲ. ರಾಜ್ಯದಲ್ಲಿ ವ್ಯವಹರಿಸಲು ದೊಡ್ಡ ದೊಡ್ಡ ಕುಳರಾದ ಲಕ್ಷ್ಮಿ ಮಿತ್ತಲ್, ಜಿಂದಾಲ್, ಪೆಸ್ಕೋ(??) ಕಂಪನಿಗಳು ಮುಂದಾಗುತ್ತಿರುವಲ್ಲಿ ನಮಗೆಲ್ಲ ಸಂತಸ ತಂದಿದೆ ಎಂದು ಕೊಂಡಾಡಿದರು.

ಈ ಮೂವರಲ್ಲಿ ಕಂಡ ಸಮಾನಂಶವೆಂದರೆ, ಅವರು ಮುಖ್ಯ ಮಂತ್ರಿಗಳನ್ನು ಸಂಬೋಧಿಸುತ್ತಿದ್ದ ಶೈಲಿ. ನಾಟಕೀಯವೆನ್ನುವಂತೆ ಯಡಿಯೂರಪ್ಪನವರನ್ನು ಎರಡು ಮೂರು ಬಿರುದುಗಳಿಂದ ಮೊದಲು ಕರೆದಿದ್ದು ನೋಡಿ ನನಗಂತೂ ನಗು ಬಂತು.

ಮುಖ್ಯ ಮಂತ್ರಿಗಳು ಈಗ ಮಾತನಾಡಿದರು. ವಿದ್ಯಾರ್ಥಿಗಳೆಲ್ಲರೂ ತಮ್ಮ ವಿದ್ಯಾರ್ಥಿ ದೆಸೆಯಲ್ಲಿರುವಾಗ ಒಮ್ಮೆಯಾದರೂ ಹಂಪಿಯನ್ನು ನೋಡಲು ಬರಬೇಕು. ಅದಕ್ಕೆ ನಮ್ಮ ಸರಕಾರ ಶ್ರಮವಹಿಸಿ ಕೆಲಸ ಮಾಡುತ್ತದೆ. ವಿಜಯನಗರದ ಹಿರಿಮೆ ಗರಿಮೆಯ ಬಗ್ಗೆ ಮಾತನಾಡಿದ ಅವರು, ಅದೇ ಸುವರ್ಣ ಯುಗ ಇನ್ನೊಮ್ಮೆ ಮರುಕಳಿಸಲಿದೆ ಎಂದು ಹೇಳಿದರು. ಆ ನಿಟ್ಟಿನಲ್ಲಿ ನಮ್ಮ ಸರಕಾರ, ತನ್ನೆಲ್ಲ ಮಂತ್ರಿವರ್ಯರ ಜೊತೆ ತೀವ್ರ ಗತಿಯಲ್ಲಿ ಕಾರ್ಯವಹಿಸಲಿದೆಯೆಂದರು.

ಆನಂತರ ಮಾತನಾಡಿದ ಶಿವಾಜಿನಗರದ ಶಾಸಕ ರೋಶನ್ ಬೇಗ್ ರವರು ತಮ್ಮ ಅಜ್ಞಾನವನ್ನು ಜಗವೆಲ್ಲ ಪಸರಿಸಿದರು. ಬಹುಷಃ ಅವರು ಕನ್ನಡ ಸಿನೆಮಗಳನ್ನೇ ನೋಡಿಲ್ಲವೆನ್ನಿಸುತ್ತದೆ. ಎಲ್ಲರಿಗೂ ಶುಭ ಕೋರಿದ ಅವರು ಹೇಳಿದ್ದು "ನಾನು ನಿಮ್ಮ ಟೈಮ್ ಅನ್ನು ಹೆಚ್ಚಿಗೆ ವ್ಯರ್ಥ ಮಾಡುವುದಿಲ್ಲ. ಮುಖ್ಯಮಂತ್ರಿಗಳಿಗೆ ನನ್ನ ಒಂದೇ ಸಲಹೆ ಏನೆಂದರೆ 'ನಮ್ಮ ಸಂಜಯ್ ಖಾನ್', ಏನು 'ಟಿಪ್ಪು ಸುಲ್ತಾನ್' ರ ಬಗ್ಗೆ ಒಂದು ಸೀರಿಯಲ್ ಮಾಡಿದರು, ಹಾಗೆ ಕೃಷ್ಣದೇವರಾಯರ ಕುರಿತು ಒಂದು ಸಿನಿಮಾನೋ ಸೀರಿಯಲನ್ನೋ ಮಾಡಬೇಕು" ಎಂದು ವಿನಂತಿಸಿದರು. ಡಾ|| ರಾಜಕುಮಾರ್ ಅವರು ೭೦ ರ ದಶಕದಲ್ಲಿ ಮಾಡಿದ ಕೃಷ್ಣದೇವರಾಯ ಸಿನಿಮಾದ ಬಗ್ಗೆ ಇವರಿಗೆ ತಿಳಿದೇ ಇಲ್ಲವೆನಿಸುತ್ತದೆ. ಇವರ ಕನ್ನಡವೂ ಅಷ್ಟೇ. ಎಲ್ಲಾದ್ರೂ ಉನ್ನತ ಶಿಕ್ಷಣ ಮಂತ್ರಿಗಳು, ಪ್ರವಾಸೋದ್ಯಮ ಸಚಿವರೂ ಎನ್ನುತ್ತಿದ್ದಾರೆ, ಇವರು Higher Education Minister ಮತ್ತೆ Tourism Minister ಎಂದೇ ಸಂಬೋಧಿಸುತ್ತಿದ್ದರು.

ಇವರೆಲ್ಲರ ಭಾಷಣದ ನಂತರ ಚಿಕ್ಕದಾಗಿ ವಂದನಾರ್ಪಣೆಯನ್ನು ಮಾಡಿ, ಸಾಂಸ್ಕೃತಿಕ ಕಾರ್ಯಕ್ರಮಗಳು ಮುಂದುವರಿದವು. ಮೊದಲಿಗೆ ಬಿ. ಜಯಶ್ರಿಯವರಿಂದ ರಂಗಗೀತೆಗಳು. ಮೊದಲ ಬಾರಿಗೆ ಅಂತಹ ದೊಡ್ಡ ಆವರಣದಲ್ಲಿ ರಂಗಗೀತೆಗಳನ್ನು ಅವರ ಉಚ್ಚ ಕಂಠದಿಂದ ಕೇಳಲು ಮನ ಪುಳಕವಾಯಿತು. ಅವರ ಉತ್ಸಾಹ ನಮ್ಮಲ್ಲಿಯೂ ಮೂಡುವಂತೆ ಅವರ ಬಳಗದೆಲ್ಲರೂ ಹಾಡಿದರು. ಒಟ್ಟು ಮೂರು ಗೀತೆಗಳನ್ನು ಅವರು ಹಾಡಿದರು.

೧. ಯಾವುದೇ ನಾಟಕದ ಆದಿಯಲ್ಲಿ ಹಾಡುವ 'ಗಜವದನಾ ಹೇರಂಬ, ವಿಜಯಧ್ವಜ ಶತರವಿಪ್ರತಿಭ'
೨. ಹೆಚ್. ಎಸ್. ವೆಂಕಟೇಶ ಮೂರ್ತಿ ವಿರಚಿತ 'ಈ ಯಮ್ಮ ನೋಡೇ ನಿಂತ ಭಂಗಿ'
೩. ನಾಗಮಂಡಲ ನಾಟಕದ ಸಿ. ಅಶ್ವಥ್ ಸಂಗೀತದ 'ಹಿಂಗಿದ್ದಳೊಬ್ಬಳು ಹುಡುಗಿ'
೪. 'ಸಾವಿರದ ಶರಣವ್ವ ಕರಿಮಾಯಿ ತಾಯಿ' (ನಾಟಕ, ರಚನೆ, ಸಂಗೀತ ತಿಳಿದಿಲ್ಲ, ಕ್ಷಮಿಸಿ...)

ಈ ಎಲ್ಲ ಹಾಡುಗಳಿಗೂ ಸಭೆ ಶಿಳ್ಳೆ, ಕರತಾಡನ ಹೊಡೆದು ಸ್ವಾಗತಿಸಿತು. ಉತ್ಸಾಹದಲ್ಲಿ ನಾಟಕರಂಗವನ್ನು ಮೀರಿಸುವವರಿಲ್ಲವೆಂದು ನನಗನ್ನಿಸಿತು.

ನಂದಿತಾರವರು ಹಾಡಲು ಈಗ ಸಭೆಗೆ ಬಂದರು. ೩ ಸಿನಿಮಾ ಹಾಡುಗಳನ್ನು ಹಾಡಿದರು. ಎಲ್ಲವೂ ಕನ್ನಡ, ಕರ್ನಾಟಕಕ್ಕೆ ಸಂಬಂಧಿಸಿದ್ದವು.

೧. ಜೀವನದಿ ಚಿತ್ರದ 'ಕನ್ನಡ ನಾಡಿನ ಜೀವನದಿ ಓ ಕಾವೇರಿ'
೨. ಉಪಾಸನೆ ಚಿತ್ರದ 'ಭಾರತ ಭೂಶಿರ ಮಂದಿರ ಸುಂದರಿ'
೩. ಅಮೃತಘಳಿಗೆ ಚಿತ್ರದ 'ಹಿಂದೂಸ್ಥಾನವು ಎಂದು ಮರೆಯದ ಭಾರತ ರತ್ನವು ನೀನಾಗು'

ರಾಜೇಶ್ ಕೃಷ್ಣ ರವರು ಕೂಡ ಈ ಹಾಡುಗಳನ್ನು ಹಾಡಲು ಬರಬೇಕಿತ್ತು. ಅವರ ಕಾರ್ಯಕ್ರಮವೂ ಇದೆಯೆಂದು ಪತ್ರಿಕೆಗಳು ಹೇಳಿದ್ದರೂ ಅವರು ಕಾರಣಾಂತರಗಳಿಂದ ಬರಲಾಗಲಿಲ್ಲ. ಸಭೆ ಎಂದಿನಂತೆ ಚಪ್ಪಾಳೆ, ಶಿಳ್ಳೆ ಮುಂದುವರಿಸಿದರು.

ಆಮೇಲೆ, ವಿನಯ್ ಕುಮಾರ್ ರವರು, 'ಕೋಡಗನ ಕೋಳಿ ನುಂಗಿತ್ತ' ಹಾಡು ಹಾಡಿದರು. ಈ ಹಾಡಿಗಂತೂ 'ಜನ ರೈಲು' ಮೈದಾನದ ಸುತ್ತ ಓಡಾಡಿತು. ನಂತರ ಎಂ. ಡಿ. ಪಲ್ಲವಿಯವರು ದ. ರಾ. ಬೇಂದ್ರೆ ಅವರ 'ನಾಕು ತಂತಿ' ಯನ್ನು ಹಿಂದುಸ್ತಾನಿ ಶೈಲಿಯಲ್ಲಿ ಹಾಡಿದರು.

ಎಂ. ಎಸ್. ನರಸಿಂಹ ಮೂರ್ತಿ ಹಾಗು ಗಂಗಾವತಿ ಬೀಚಿ ಎಂದು ಪ್ರಸಿದ್ದವಾಗಿರುವ ಪ್ರಾಣೇಶಾಚಾರರು ನಗೆ ಚಟಾಕಿಗಳಿಂದ ಸಭೆಯ ಮೈ ಪುಳಕಿಸಿದರು.

ಹಂಸಲೇಖ ರವರ 'ಭರತಭೂಮಿ ವರಪುತ್ರ' ನಾಟಕ ನಂತರ ಮೂಡಿಬಂತು. ಎಲ್ಲರಲ್ಲಿಯೂ ವಿಷೆಶತಹ ಮಕ್ಕಳಲ್ಲಿ ದೇಶಭಕ್ತಿ ಜಾಗೃತಗೊಳಿಸಲು ಈ ನಾಟಕ ಒಂದು ಒಳ್ಳೆಯ ಮಾಧ್ಯಮ. ಆದರೆ ನೀವು ಒಮ್ಮೆ ಈ ನಾಟಕ ನೋಡಿ ಬನ್ನಿ.

ಮುಂದುವರಿದಂತೆ, ಲೆಜರ್ ಶೋ, ಬಿತ್ತರವಾಯಿತು. ಒಂದು ಎಲೆಕ್ಟ್ರೋ ಹಾಡಿಗೆ ಹೊಗೆಯಲ್ಲಿ ಬೆಳಕು ಮೂಡಿಬಂದ ರೀತಿ ಎಲ್ಲರೂ ಮೂಗಿನಮೇಲೆ ಬೆರಳಿಡುವಂತೆ ಮಾಡಿತು. ಇದೇ ಲೆಜರ್ ಶೋ ಮುಂದುವರಿದು, ವಿಜಯನಗರ ಸಾಮ್ರಾಜ್ಯ, ಕೃಷ್ಣದೇವರಾಯ, ಹಂಪೆಯ ಒಂದು ಕಿರುಚಿತ್ರ ಮೂಡಿಬಂತು.

ಇವೆಲ್ಲ ಆದಮೇಲೆ ಕೃಷ್ಣದೇವರಾಯನ ಕುರಿತು ಒಂದು ನೃತ್ಯರೂಪಕ ಸುಮಾರು ಅರ್ಧಗಂಟೆಗೂ ಮೀರಿ ಮೂಡಿಬಂತು. ಸಾರಾಂಶ ಇಷ್ಟು. ಕೃಷ್ಣದೇವರಾಯ ತನ್ನ ಆಸ್ಥಾನವನ್ನು ನಡೆಸಿಕೊಂಡು ಬಂದ ರೀತಿ, ತನ್ನ ಅಷ್ಟ ದಿಗ್ಗಜರ ಕುರಿತು ತೋರುವ ಆದರ ಇವೆಲಾಲ್ ಚಿತ್ರಿತವಾದವು. 'ಪಾರಿಜಾತ ಪರಿಣಯ' ನೋಡುತ್ತಿದ್ದ ವೇಳೆ, ಬೇಹುಗಾರನ ಸುದ್ದಿ ಬಂದು ಒರಿಸ್ಸಾ ದೇಶದ ರಾಜ ಗಜಪತಿ ದಂಡೆತ್ತಿ ಬರುವ ಸುದ್ದಿ ಕೇಳಿ ಯುದ್ಧಕ್ಕೆ ಸನ್ನದ್ಧನಾಗುತ್ತಾನೆ. ಅವನನ್ನು ಪರಾಕ್ರಮದಲ್ಲಿ ಸೋಲಿಸಿ ಬಿಜಯನ್ಗೈದು ಬರುತ್ತಾನೆ. ಆಗ ಸಭೆ ಅವನನ್ನು ಬರಮಾಡುವ ರೀತಿ, ಬಿಜಾಪುರದ, ಗೋಲಕೊಂಡದ ಹಾಗು ಅಹ್ಮೆದ್ ನಗರದ ಸುಲ್ತಾನರು, ಅವನಿಗೆ ಕಪ್ಪ ಕಾಣಿಕೆ ಸಲ್ಲಿಸುವ ಸನ್ನಿವೇಶ. ನೃತ್ಯರೂಪಕಗಳಲ್ಲಿ ಹೆಚ್ಚು ತಿಳಿವಿಲ್ಲದ ನನಗೆ ಅಷ್ಟಾಗಿ ಗೊತ್ತಾಗಲಿಲ್ಲ. ತಿಳಿವಿದ್ದವರು ಖುಷಿಪಟ್ಟರು ಎಂದು ಭಾವಿಸುತ್ತೇನೆ. ಈ ನೃತ್ಯರೂಪಕದ ರೂವಾರಿ ಡಾ|| ಮಾಯಾ ರಾವ್.

ಹಂಸಲೇಖ, ಮಾಯಾ ರಾವ್ ರವರಿಗೆ ಅರವಿಂದ ಲಿಂಬಾವಳಿ, ಜನಾರ್ಧನರೆಡ್ಡಿ, ಹಾಗು ವಿಶ್ವೇಶ್ವರ ಹೆಗ್ಗಡೆ ಕಾಗೇರಿ ರವರು ಸಮ್ಮಾನಿಸಿದರು.

ಇದೆಲ್ಲದರ ನಂತರ ಲೆಜರ್ ಶೋ ಮುಂದುವರೆಯಿತು. ಸರಕಾರದ ಲೋಕೋಪಯೋಗಿ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡುವ ಕಿರುಚಿತ್ರ ಲೆಜರ್ ನಲ್ಲಿ ಬಿತ್ತರವಾಯಿತು. ಪಟಾಕಿಗಳನ್ನು ಸಿಡಿಸುವ ಮೂಲಕ ಕಾರ್ಯಕ್ರಮಕ್ಕೆ ತೆರೆಯೆಳೆಯಲಾಯಿತು.