Sunday, January 24, 2010

ಕಂಗ್ಲಿಷ್: ಒಂದು ಅಧ್ಯಯನ.

ನಿಮಗೆಲ್ಲಾ ತಿಳಿದಿರುವ ಹಾಗೆ ಕಂಗ್ಲಿಷ್ ಎಂದರೆ ಇಂಗ್ಲಿಷ್ ಅಥವಾ ಆಂಗ್ಲ ಭಾಷೆ ಹಾಗು ಕನ್ನಡ ಭಾಷೆಯ ಮಿಶ್ರಣ. ಇದರಲ್ಲಿ ಕನ್ನಡಕ್ಕಿಂತ ಇಂಗ್ಲಿಷ್ ಹೆಚ್ಚು ಬೆರೆತಿರುವುದರಿಂದ 'ಇನ್ನಡ' ಎನ್ನದೇ ಕಂಗ್ಲಿಷ್ ಎಂದಿರಲೂ ಬಹುದು.

ಇದರ ಬಳಕೆ ಇಂದಿನ ದಿನಗಳಲ್ಲಿ ಎಷ್ಟು ಪ್ರಧಾನವಾಗಿಬಿಟ್ಟಿದೆ ಎಂದರೆ ಸ್ಪಷ್ಟ ಹಾಗು ಸುಲಲಿತ ಕನ್ನಡವನ್ನು ಯಾರಾದರೂ ಅಪ್ಪಿ ತಪ್ಪಿ ಆಡಿಬಿಟ್ಟರೆ, ಎಲ್ಲರೂ ಕಕಮಕರಾಗಿಬಿಡುತ್ತಾರೆ. ಎಲ್ಲಿಯೋ ಪರದೇಶದಿಂದ ಬಂದವನಿಗೆ ಬೀರುವ ನೋಟ ಇವರಿಗೆ ಪ್ರಾಪ್ತವಾಗಿಬಿಡುತ್ತದೆ.

ಮೊನ್ನೆ ಮೊನ್ನೆ ನಮ್ಮ ತೀ. ನಂ. ಶ್ರೀ ರವರ 'ನಂಟರು' ಪ್ರಬಂಧ ಸಂಕಲನ (ಅಥವಾ ನನ್ನ ಪ್ರಕಾರ ಅಂದಿನ ಬ್ಲಾಗು) ಓದುವಾಗ ಅವರ 'ಕಾಸಿನ ಸಂಘ' ಓದುತ್ತಿರುವಾಗ ಈ ಅಂಕಣ ಬರೆಯುವ ಹಂಬಲ ಉಂಟಾಯಿತು.

ಇದರ ಅಧ್ಯಯನ ಮಾಡುವ ಮುನ್ನ ಕೆಲವು ಉದಾಹರಣೆಗಳನ್ನು ನೋಡೋಣ.

೧. ಹೇಯ್! ಈಗ time ಎಷ್ಟಾಯ್ತು?
೨. ಈಗ ಸ್ವಲ್ಪ snacksu, coffee, tea ಕುಡ್ಕೊಂಡ್ ಬರೋಣ?
೩. ಬಟ್ಟೆ wash ಮಾಡಿದ್ದೀನಿ, ಸ್ವಲ್ಪ iron ಮಾಡ್ಬಿದ್ತೀರಾ?
೪. ನಂಗೆ ಸೀರೆ ಅಂದ್ರೆ allergy you know? ಯಾರು ಆ old model dress ಎಲ್ಲಾ ಹಾಕ್ಕೋತಾರೆ?
೫. ಹೇಯ್ come ya! ಈಗ shopping ಮಾಡಿ ಬರೋಣ.

ಇವು ಕೇವಲ ಉದಾಹರಣೆಗಳಷ್ಟೇ. ಬಸ್ಸಿನಲ್ಲಿಯೋ, ಕಾಲೇಜಿನಲ್ಲಿಯೋ ಅಥವಾ ಜನ ಹೆಚ್ಚು ಸೇರುವ ಯಾವುದೇ ಜಾಗಕ್ಕೆ ಹೋಗಿ ನೋಡಿದರೂ ಇಂತಹ ಲೆಕ್ಕವಿಲ್ಲದಷ್ಟು ಉದಾಹರಣೆಗಳು ನಮಗೆ ಸಿಗುತ್ತವೆ.

ಕಂಗ್ಲಿಷಿನ ಉಗಮ:

ಈ ಕಂಗ್ಲಿಷ್ ಯಾವ ಕಾಲಘಟ್ಟದಿಂದ ಉದಯಿಸಿರಬಹುದು? ಆಂಗ್ಲರು ನಮ್ಮ ದೇಶಕ್ಕೆ ಬರುವ ಮುಂಚೆಯಂತೂ ಇದು ಬಂದಿರುವುದು ಶಕ್ಯವಿಲ್ಲ. ಐರೊಪ್ಯ ರಾಷ್ಟ್ರಗಳು ನಮ್ಮ ದೇಶಕ್ಕೆ ಬಂದಿದ್ದು ೧೬ನೇ ಶತಮಾನದಲ್ಲಾದರೂ, ಅವರ ಸರ್ಕಾರ ಸ್ಥಾಪಿತವಾದದ್ದು ೧೭ನೇ ಶತಮಾನದಲ್ಲಿ. ಕರ್ನಾಟಕಕ್ಕೆ ಬ್ರಿಟೀಷರ ಕಿರುಕುಳ ಶುರುವಾದದ್ದು ೧೮ನೇ ಶತಮಾನದಲ್ಲಿಯೇ ಎಂದು ಹೇಳಬೇಕು. ನಮ್ಮ ಕಿತ್ತೂರು ರಾಣಿ ಚೆನ್ನಮ್ಮ, ಒನಕೆ ಓಬವ್ವ, ಇವರೆಲ್ಲರೂ ೧೮ ನೇ ಶತಮಾನದವರೇ. ಹೈದರ್ ಅಲಿ, ಟಿಪ್ಪು ಸುಲ್ತಾನ್ ಇಬ್ಬರೂ ೧೮ ನೇ ಶತಮಾನ ಮುಗಿಯುವುದರೊಳಗೆ ಬ್ರಿಟೀಷರ ಮೇಲೆ ಯುದ್ಧ ಹೂಡಿ ಸತ್ತವರು. ನಮ್ಮ ಈ ಕಂಗ್ಲಿಷ್ ಪ್ರಾರಂಭವಾಗಿದ್ದರೆ ಇದರ ನಂತರವಷ್ಟೇ ಸಾಧ್ಯ.

ಬ್ರಿಟೀಷರು ಆಗ ನಮ್ಮನ್ನಾಳುತ್ತಿದ್ದರೂ ಅವರವರ ನಡುವೆ ಮಾತ್ರ ಆಂಗ್ಲ ಭಾಷೆ ಬಳಸುತ್ತಿದ್ದಿರಬೇಕು. ಪ್ರಜೆಗಳಿಗೆ ಇಂಗ್ಲಿಷ್ ಹೇರಲಿಲ್ಲ. ಇದರ ಬಗೆಗೆ ಯಾವುದೇ ಮಾಹಿತಿ ನನ್ನ ಬಳಿಯಿಲ್ಲವಷ್ಟೇ. ಅವರ ತಂತ್ರ ಕುತಂತ್ರಗಳೇನಿದ್ದರೂ ವಿಭಿನ್ನ ರೀತಿಯವು. ಅದರ ಬಗ್ಗೆ ಈಗ ಚರ್ಚೆ ಬೇಡ.

೧೯ನೇ ಶತಮಾನದ ಮಧ್ಯಂತರದ ಮೇಲೆ ಹಲವಾರು ಭಾರತೀಯರು ಉನ್ನತ ವ್ಯಾಸಂಗಕ್ಕಾಗಿ ಯೂರೋಪ್ ಗೆ ಮುಖ ಮಾಡಿದ ಕಾಲ. ಸುಮಾರು ಭಾರತೀಯರು ಲಂಡನ್ನಿಗೆ ಹೋಗಿರುವುದು ನಮಗೆಲ್ಲರಿಗೂ ತಿಳಿದ ವಿಷಯ. ರಾಜಾ ರಾಮ್ ಮೋಹನ್ ರಾಯ್, ಮಹಾತ್ಮಾ ಗಾಂಧಿ, ಜವಾಹರ್ ಲಾಲ ನೆಹರು, ಸರ್. ಎಂ. ವಿಶ್ವೇಶ್ವರಯ್ಯ ಇನ್ನೂ ಹಲವರ ಉದಾಹರಣೆ ನಮಗೆ ಇತಿಹಾಸದಿಂದ ಸಿಗುತ್ತದೆ.

ಹೊರದೇಶಕ್ಕೆ ಹೋದರೆ (ಸಮುದ್ರ ದಾಟಿದರೆ), ಧರ್ಮದಿಂದ ಉಚ್ಚಾಟನೆ ಆಗುತ್ತಿದ್ದ ಕಾಲ ಒಂದಿತ್ತು. ಕ್ರಮೇಣ ಹೊರದೇಶದಲ್ಲಿ ಓದಿ ಬಂದವರಿಗೆ ಭಾರಿ ಮನ್ನಣೆ ದೊರೆಯುವಂತಾಯಿತು. "ಓಹೋ! ಅವರು ಲಂಡನ್ನಿನಲ್ಲಿ ಓದಿ ಬಂದವರು! ಬಹಳ ಮೇಧಾವಿ ಇರಬೇಕು." ಎಂಬ ಮಾತುಗಳು ದಿನೇ ದಿನೇ ಬಹಳವಾಗುತ್ತಾ ಬಂತು.

ಹೀಗೆ ಬ್ರಿಟನ್ನಿಗೆ ಹೋಗಿ ಬಂದ ಹಲವರಲ್ಲಿ ಒಂದು ರೀತಿಯ ಜಂಭ. ತಮಗೆ ಇಂಗ್ಲಿಷ್ ಗೊತ್ತು. ಇತರರಿಗೆ ತಿಳಿದಿಲ್ಲ. ತಮ್ಮ ನಗರದಲ್ಲೇ ಅಥವಾ ಆಸುಪಾಸಿನಲ್ಲಿ ಯಾರಾದರು ಒಬ್ಬರು ವಿದೇಶ ಸುತ್ತಿ ಬಂದವರಿದ್ದರೆ ಅವರೊಡನೆ ಮಾತ್ರ ಮಾತು, ಇತರರೊಡನೆ ಮೂದಲಿಕೆ ಹೆಚ್ಚುತ್ತಾ ಬಂತು.

ಇದನ್ನು ಕಂಡ ಸಾಮಾನ್ಯ ಜನರು, ತಮಗೆ ತಿಳಿಯದ ಭಾಷೆ ಅರಿಯಲು ಅದನ್ನೇ ಮಾತನಾಡುವ ಜನರನ್ನು ಹೆಚ್ಚು ಮರ್ಯಾದೆಯಿಂದ ಮಾತನಾಡಲು ತೊಡಗಿದರು. ಹಾಗು ಹೀಗೂ ಸ್ವಲ್ಪ ಸಮಯ ಅವರೊಂದಿಗೆ ಕಳೆದರೆ ತಮ್ಮ ಜನ್ಮ ಉದ್ಧಾರವಾಗುವುದು ಎಂಬ ಭ್ರಮೆ ಅವರಿಗೆ ಬಂತು. ಮಾತನಾಡುವಾಗ ಅಲ್ಲಿ ಇಲ್ಲಿ ಅವರ ಬಾಯಿಂದ ಹೋರಾಟ ಕೆಲವು ಆಂಗ್ಲ ಪದಗಳು ಇವರ ಕಿವಿಗೆ ಬಿದ್ದು ಅದರ ಅರ್ಥವನ್ನು ಅವರಿಂದ ಎದ್ದು ಬಿದ್ದು ಪಡೆದು ತಮ್ಮ ಇತರ ಸ್ನೇಹಿತರ ಮುಂದೆ ಬಡಾಯಿ ಕೊಚ್ಚಲು ಉಪಯೋಗಿಸುತ್ತಿದ್ದರು.

ಇವೇ ಪದಗಳು ಮುಂದೆ ಕನ್ನಡ ವಾಕ್ಯಗಳಲ್ಲಿಯೇ ಬೆರೆತು ಈ ಹೊಸ ಕಂಗ್ಲಿಷ್ ಆಯಿತು ಎನ್ನುವುದು ನನ್ನ ನಂಬಿಕೆ.

ಕಂಗ್ಲಿಷ್ ಬೆಳವಣಿಗೆ:

ಉಗಮದ ಮಾತಾಯಿತು. ಇದು ಹೇಗೆ ಬೆಳೆಯಿತು? ಅಥವಾ, ಇದರ ಬೆಳವಣಿಗೆಗೆ ಹೇಗೆ ಪ್ರೋತ್ಸಾಹ ಸಿಕ್ಕಿರಬಹುದು? ನನಗೆ ಹೊಳೆಯುತ್ತಿರುವ ಕಾರಣಗಳೆಂದರೆ:

೧. ಮೊದಲೇ ಹೇಳಿದಂತೆ, ವಿದೇಶಿ ವಿದ್ಯಾರ್ಥಿಗಳು ಹೆಚ್ಚುತ್ತಾ ಹೋಗಿ ಅವರ ಮಾತೃಭಾಷೆಯ ಬಳಕೆಯಲ್ಲೆಲ್ಲ ಇಂಗ್ಲೀಷನ್ನು ತುರುಕುತ್ತಿದ್ದಿರಬೇಕು.
೨. ಅದನ್ನು ಕೇಳಿದ ಇಲ್ಲಿಯ ಜನ ಅದರ ಉಪಯೋಗದಲ್ಲಿ ಏನೋ ಒಂದು ಸಂತೋಷವನ್ನು ಮನಗಂಡು ಉಪಯೋಗಿಸುತ್ತಿದ್ದಿರಬಹುದು.
೩. ಹಲಕೆಲವು ವಿದೇಶಿ ವಸ್ತುಗಳು ಇಲ್ಲಿಗೆ ಬಂದು ಅವಕ್ಕೆ ಇಲ್ಲಿ ಸಮನಾದ ವಸ್ತುಗಳು ಇರದಿದ್ದುದ್ದರಿಂದ ಅವಕ್ಕೆ ಕನ್ನಡದಲ್ಲಿ ಹೊಸ ಪದವನ್ನು ಆವಿಷ್ಕರಿಸದೇ ಅದೇ ಹೆಸರನ್ನು ಇಲ್ಲಿಯೂ ಕಾಪಾಡಿಕೊಂಡು ಬಂದಿರಬಹುದು. ಉದಾ: ಬಸ್ಸು, ಟ್ರೇನು,ಇಂಜಿನ್, ಟೇಪ್ ರೆಕಾರ್ಡರ್, ಇತ್ಯಾದಿ ಹಲವು ವಸ್ತುಗಳು.
೪. ಈ ಮೇಲೆ ಹೇಳಿದ ಪದಗಳಿಗೆ ಕನ್ನಡ ಪದಗಳನ್ನು ಸೃಷ್ಟಿಸಿದರೂ ಜನರಿಗೆ ಅದು ಕ್ಲಿಷ್ಟವಾಗಿ ಕಂಡಿದ್ದಿರಬೇಕು. ಇತರ ಹಲವು ಕನ್ನಡ ಪದಗಳನ್ನು ಉಚ್ಚರಿಸಲು ಹೆಚ್ಚು ಸಮಯ ತೆಗೆದುಕೊಳ್ಳುವುದರಿಂದ ಜನರು ಅದರ ಆಂಗ್ಲ ಸಮನ್ವಿತ ಪದದ ಮೊರೆ ಹೋಗಿರಲೂ ಬಹುದು. ಉದಾ: ಬಸ್ಸು ಎನ್ನುವ ಬದಲು ಯಾರು ಷಟ್ಚಕ್ರ ವಾಹನ ಎನ್ನುತ್ತಾರೆ?
೫. ಮೇಲೆ ಹೇಳಿದ ಕಾರಣ ಬರೀ ವಿದೇಶಿ ವಸ್ತುಗಳಿಗೆ ಸೀಮಿತವಾಗಿರಬೇಕೆಂದಲ್ಲ. ಆ ಪದ ಕನ್ನಡದಲ್ಲಿ ಬಹಳ ಹಿಂದಿನಿಂದ ಬಳಕೆಯಾಗುತ್ತಿದ್ದರೂ ಆಂಗ್ಲ ಭಾಷೆಯಲ್ಲಿ ಅದಕ್ಕೆ ಒಂದು ಪುಟ್ಟ ಪದವಿದ್ದರೆ ಜನ ಅದಕ್ಕೆ ಮೊರೆ ಹೋಗುವುದನ್ನು ನಾವು ನೋಡಿದ್ದೇವೆ. ಉದಾ: ಕನ್ನಡದ ಹುರುಳೀಕಾಯಿ ಎಂದರೆ ಕೆಲವರಿಗೆ ಅರ್ಥವಾಗುವುದಿಲ್ಲ; beans ಎಂದರೆ ಎಲ್ಲರಿಗೂ ಅರ್ಥವಾಗುತ್ತದೆ. ಇಂತಹ ವಸ್ತುಗಳನ್ನು ಮಾರಾಟ ಮಾಡುವವರೂ ಆಂಗ್ಲ ಭಾಷೆಯ ಮೊರೆ ಹೋದದ್ದರಿಂದ ಜನರಿಗೆ ಅದರ ಕನ್ನಡ ಪದ ಮರೆತೇ ಹೋಗಿರಬೇಕು.
೬. ಕೆಲವರಲ್ಲಿ ತಮ್ಮ ಮಾತೃಭಾಷೆಯಲ್ಲಿ ಮಾತನಾಡುವುದೆಂದರೆ ಅದೇನೋ ಮುಜುಗರ. ಕೀಳರಿಮೆ ಸ್ವಭಾವ. ಅಂಥವರನ್ನು ನೀವೂ ಕಂಡಿರುತ್ತೀರಷ್ಟೇ. ಅವರ ಬಾಯಲ್ಲಿ ಹೊರಬರುವ ಇಂಗ್ಲಿಷ್ ಹೆಚ್ಚಿನ ಪಕ್ಷ ಕಂಗ್ಲಿಷ್ಷೇ ಆಗಿರುತ್ತದಷ್ಟೇ. ಆ ಪ್ರಯೋಗದ ಎರಡು ಉದಾಹರಣೆ: ೧) Please give me some teaಅ. ೨) You today wonly comeಅ. ಪ್ರತೀ ವಾಕ್ಯದ ಕೊನೆಯಲ್ಲಿ ಕನ್ನಡದ ತಂತು ನಿಮಗೆ ಕಾಣಸಿಗುತ್ತದೆ. ೧೦೦ಕ್ಕೆ ೯೫ ಪ್ರತಿಶತ ಇಂಥವರಿಂದಲೇ ಕಂಗ್ಲಿಷ್ ಉದ್ಧಾರವಾಗುತ್ತಿರುವುದು.

ಇನ್ನೂ ಹಲವು ಕಾರಣಗಳಿರಬಹುದು. ಇವು ಪ್ರಮುಖವಾದವೆಂದು ನನ್ನ ಅನಿಸಿಕೆ. ನಿಮ್ಮ ಬಳಿ ಬೇರೆ ಕಾರಣಗಳಿದ್ದರೆ ಖಂಡಿತ ತಿಳಿಸಿ.

ಪರಿಹಾರ/ಸಲಹೆ:

ಅಪ್ಪಟ ಕನ್ನಡ ಪಂಡಿತರಿಗೆ, ಭಕ್ತರಿಗೆ ಈ ಕಂಗ್ಲಿಷ್ ಹಾವಳಿ ಎಂದಿನಿಂದಲೂ ಬೇಸರ ತಂದಿದೆ. ಒಂದೇ ವಾಕ್ಯದಲ್ಲಿ ಎರಡು ಭಾಷೆಯ ಪದಗಳನ್ನು ಬಳಸುವ ಬಗ್ಗೆ ಅವರಿಗೆ ವಿಪರೀತ ಕೋಪವಿದೆ. ಇದರ ಬಗ್ಗೆ ನನ್ನ ಅನಿಸಿಕೆ ಇಲ್ಲಿ ವ್ಯಕ್ತವಾಗಿದೆ.

೧. ಕನ್ನಡದಲ್ಲಿ ಮಾತನಾಡುವಾಗ ಆದಷ್ಟೂ ಅನ್ಯ ಭಾಷೆಯ ಪದಗಳನ್ನು ಬಳಸುವುದನ್ನು ನಿಲ್ಲಿಸಿ. ಇದು ಇಂಗ್ಲಿಷ್ ಒಂದಕ್ಕೆ ಸೀಮಿತವಾಗಿಲ್ಲ. ಇತರ ಭಾಷೆಗಳಿಗೂ ಅನ್ವಯಿಸುತ್ತದೆ.
೨. ನಾಮಪದಗಳನ್ನು ಹಾಗೆಯೇ ಕರೆಯುವುದು ಉತ್ತಮ. iPod ಗೆ ಕನ್ನಡ ಸಮನಾದ ಪದವಿಲ್ಲವೆಂದು ಅದಕ್ಕೆ ಒಂದು ಕನ್ನಡ ಪದ ಹುಡುಕುವುದು ಆಭಾಸಕ್ಕೆ ಎಡೆ ಮಾಡಿಕೊಟ್ಟ ಹಾಗಾಗುವ ಸಾಧ್ಯತೆಯೇ ಹೆಚ್ಚು. ಹಾಗೊಂದು ವೇಳೆ ಈ ಪ್ರಯತ್ನದಲ್ಲಿ ನಾವು ಸಫಲರಾಗಿ ಅದು ಎಲ್ಲರ ಬಾಯಲ್ಲಿ ನಲಿದಾಡಿದರೆ ಅದಕ್ಕಿಂತ ಹೆಚ್ಚು ಭಾಗ್ಯ ಯಾವುದಿದೆ? ಆದರೆ ಆ ಸಂಭವ ಕಡಿಮೆ ಎಂದು ನನ್ನ ಅನಿಸಿಕೆ.
೩. ಈ ಮೇಲೆ ಹೇಳಿದ ಭಾಗಕ್ಕೆ ಕೆಲವು ಕನ್ನಡ ಪಂಡಿತರ ವಿರೋಧವುಂಟು. ಅವರು ಪ್ರತಿ ಪದವನ್ನು ಕನ್ನಡೀಕರಿಸಿ ಆಡಿದರೆ ಸಂತೋಷ; ಜನರಿಗೆ ಅರ್ಥ/ಇಷ್ಟವಾಗದಿದ್ದ ಪಕ್ಷ, ಯಾರೂ ಏನು ಮಾಡುವ ಹಾಗಿಲ್ಲ.

ಕನ್ನಡವೂ ವಿರಾಜಮಾನವಾಗಿ ಆಡಲ್ಪದುತ್ತಿದ್ದ ಕಾಲವೊಂದಿತ್ತು. ಆಗ ಯಾವ ಪರಕೀಯರ ಕಾಟಗಳಿರಲಿಲ್ಲ. ಇಂದು ಇಂಗ್ಲಿಷಿನದ್ದೇ ಸಾಮ್ರಾಜ್ಯ. ಮುಂದೊಂದು ದಿನ ಕನ್ನಡ ತನ್ನ ಪೂರ್ವ ಸ್ಥಿತಿಗೆ ಮರಳುತ್ತದೆ ಎಂಬ ಪ್ರಬಲ ಆಶಯದೊಂದಿಗೆ ಈ ಅಂಕಣವನ್ನು ಮುಗಿಸುತ್ತೇನೆ.

Wednesday, January 13, 2010

ಕೃಷ್ಣದೇವರಾಯನ ೫೦೦ನೇ ಪಟ್ಟಾಭಿಷೇಕ ಮಹೋತ್ಸವ, ಒಂದು ವರದಿ.

ನಿನ್ನೆ ನಡೆದ ಕೃಷ್ಣದೇವರಾಯನ ಪಟ್ಟಾಭಿಷೇಕ ಮಹೋತ್ಸವದ ೫೦೦ನೇ ವರ್ಷಾಚರಣೆ ಸಂಭ್ರಮವನ್ನು ನೋಡಲು ನಾನು ನಿನ್ನೆಯ ದಿನ ಕಂಠೀರವ ಹೊರಾಂಗಣ ಮೈದಾನಕ್ಕೆ ಹೊರಟೆ. ಇದೇ ಸಂಸರ್ಭದಲ್ಲಿ ವಿವೇಕಾನಂದ ಜಯಂತಿಯೂ ಬಂದದ್ದರಿಂದ ಕಾರ್ಯಕ್ರಮಕ್ಕೆ ಇನ್ನೂ ಮೆರಗು ಬಂದಿತ್ತು.

೪ ಗಂಟೆಗೆ ಪ್ರಾರಂಭವಾಗಬೇಕಿದ್ದ ಕಾರ್ಯಕ್ರಮವು ೪:೧೦ಕ್ಕೆ ಆರಂಭವಾಯಿತು. ಅಭ್ಯಾಗತರನ್ನು ಕಾಯುವಲ್ಲಿ ಆ ಹತ್ತು ನಿಮಿಷಗಳು ಕಳೆದವು. ಅವರು ಬರದಿದ್ದನ್ನು ನೋಡಿ ಅಲ್ಲಿಯವರೆಗೂ ನೆರೆದಿರುವ ಸಮೂಹಕ್ಕೆ ಗಾಯನವಾದರೂ ಮನರಂಜನೆಯನ್ನು ನೀಡಲಿ ಎಂಬುದು ಅವರ ಆಶಯವಾಗಿತ್ತು.

ಮನೆಯಿಂದ ಹೊರಡುವ ಮುನ್ನ ಅಭ್ಯಾಗತರ ಪಟ್ಟಿಯನ್ನು ಓದಿದ್ದೆ.
೧. ಕರ್ನಾಟಕದ ಮುಖ್ಯಮಂತ್ರಿ ಶ್ರೀ|| ಬಿ. ಎಸ್. ಯಡಿಯೂರಪ್ಪ.
೨. ಆರ್ಟ್ ಆಫ್ ಲಿವಿಂಗ್ ನ ಸಂಸ್ಥಾಪಕರಾದ ಪೂಜ್ಯ ಶ್ರೀ|| ಶ್ರೀ|| ರವಿಶಂಕರ್ ಗುರೂಜಿ
೩. ಸ್ಥಳೀಯ ಶಾಸಕ ಶ್ರೀ|| ರೋಶನ್ ಬೇಗ್.
೪. ಉನ್ನತ ಶಿಕ್ಷಣ ಮಂತ್ರಿ ಶ್ರೀ|| ಅರವಿಂದ ಲಿಂಬಾವಳಿ.
೫. ಪ್ರವಾಸೋದ್ಯಮ ಹಾಗು ಕನ್ನಡ ಏಳಿಗೆ ಮಂತ್ರಿ ಶ್ರೀ|| ಜನಾರ್ಧನ ರೆಡ್ಡಿ.
೬. ಕೇಂದ್ರ ಉನ್ನತ ಶಿಕ್ಷಣ ಇಲಾಖೆಯ ವತಿಯಿಂದ ಆಗಮಿಸಿದ್ದ ಶ್ರೀ|| ಕೆ. ಏನ್. ರಘುನಂದನ್

ಇನ್ನೂ ಹಲವರು.

೩:೫೦ಕ್ಕೆ ಕಾರ್ಪೋರೇಶನ್ ತಲುಪಿದ ನಾನು ದೊಡ್ಡ ಹೆಜ್ಜೆ ಹಾಕುತ್ತ ಸರಿಯಾಗಿ ೪ ಗಂಟೆಗೆ ಸಭಾಂಗಣ ಸೇರಿದೆ. ಅಲ್ಲೇ ನೆರೆದಿದ್ದ ಒಬ್ಬ ಸಂಚಾರಿ ಆರಕ್ಷಕರನ್ನು ಕುರಿತು ಒಳಗೆ ಹೋಗಲು ದಾರಿ ಯಾವುದೆಂದು ಕೇಳಿ ತಿಳಿದು ಹೊರಟೆ. ಅದು ವಿದ್ಯಾರ್ಥಿಗಳ ಗುಂಪು. ಅವರಲ್ಲಿಯೇ ನಾನು ಒಬ್ಬನಾಗಿ ಕುಳಿತೆ.

ಸಭಾಂಗಣಕ್ಕೆ ಆಗಮಿಸಿದ ವಿದ್ಯಾರ್ಥಿಗಳನೇಕರಲ್ಲಿ ಸಭ್ಯತೆ ಕಾಣಿಸಲಿಲ್ಲ. ಅಸಭ್ಯವಾಗಿ ಶಿಳ್ಳೆ ಹೊಡೆಯುತ್ತ ವೇದಿಕೆಯ ಮೇಲೆ ನೆರೆದಿರುವ ಸಂಗೀತಗಾರರನ್ನು ಹೀಯಾಳಿಸುತ್ತ ಕಾಲ ಕಳೆಯುತ್ತಿದ್ದರು. ಮೇಲಿನ ಅಂಕಣದಿಂದ ಕಾಗದದ ಕ್ಷಿಪಣಿಗಳು, ಉಂಡೆಗಳು ಎಸೆಯಲ್ಪಟ್ಟವು. ನನ್ನ ಪಕ್ಕದಲ್ಲೇ ಓರ್ವ ಆರಕ್ಷಕ ಬಂದು ಕುಳಿತರೂ ಇವು ನಿಲ್ಲಲಿಲ್ಲ.

ಎಂ. ಡಿ. ಪಲ್ಲವಿಯವರ ಗಾಯನ ಶುರುವಾಯಿತು. ಮೊದಲಿಗೆ ಡಿ. ಎಸ್. ಕರ್ಕಿಯವರ 'ಹಚ್ಚೇವು ಕನ್ನಡದ ದೀಪ' ಹಾಡಲು ಕೆಲವು ವಿದ್ಯಾರ್ಥಿಗಳು ಚಪ್ಪಾಳೆಗಳ ಸುರಿಮಳೆಗೈದರು. ನಂತರ ರಾಷ್ಟ್ರಕವಿ ಕುವೆಂಪು ವಿರಚಿತ 'ಎಲ್ಲಾದರೂ ಇರು, ಎಂತಾದರು ಇರು' ಹಾಡು ಹಾಡುವಾಗಲಂತೂ ಜನ ಕೇಕೆ ಹಾಕಲು ಮುಂದಾದರು. ಇದರ ಜೊತೆ ಹೊರವಲಯದಲ್ಲಿ ಡೊಳ್ಳು ಕುಣಿತವೂ ಸಾಗುತ್ತಲಿತ್ತು.

ಇಷ್ಟರಲ್ಲಿಯೇ ಬಲಿಷ್ಠ ಸುತ್ತುಗಾವಲಿನೊಂದಿಗೆ ಮುಖ್ಯ ಮಂತ್ರಿಗಳ ಆಗಮನ. ಹಾಡಿನ ನಂತರ ವೇದಿಕೆಯನ್ನು ಭಾಷಣಗಳಿಗೆ ಅನುವು ಮಾಡಿಕೊಡಲಾಯಿತು. ನಿರೂಪಣೆಯ ಕಾರ್ಯವನ್ನು ಹೊತ್ತವರು ಕನ್ನಡ ಚಿತ್ರರಂಗದ ಖ್ಯಾತ ತಾರೆ ವಿನಯಾ ಪ್ರಸಾದ್ ರವರು. ಈ ಕಾರ್ಯಕ್ರಮಕ್ಕೆ ಬೆನ್ನೆಲುಬಾದವರು ಸಂಭ್ರಮ ಸುರಭ ಸಂಸ್ಥೆಯ ಸಂಜೀವ್ ಕುಲಕರ್ಣಿಯವರು.

ಅಭ್ಯಾಗತರಲ್ಲಿ ಶ್ರೀ|| ರವಿಶಂಕರರನ್ನು ಹೊರತು ಪಡಿಸಿ ಎಲ್ಲರೂ ಇದ್ದರು. ರಾಜಾಜಿನಗರ ಶಾಸಕರಾದ ನೆ. ಲ. ನರೇಂದ್ರ ಬಾಬುರವರು ಜೊತೆಗೊಂಡರು. ಮೊದಲಿಗೆ ಇವರೆಲ್ಲ ದೀಪ ಬೆಳಗಿಸಿದರು. ಇದಾದ ನಂತರ ನಾಡಗೀತೆ ಹಾಡಲನುವಾದರು. ಈ ಬಡ ವಿದ್ಯಾರ್ಥಿಗಳಿಗೆ ನಾಡಗೀತೆಯ ಸಂದರ್ಭದಲ್ಲಿ ನಿಂತುಕೊಳ್ಳಬೇಕೆನ್ನುವ ಕನಿಷ್ಠ ಸೌಜನ್ಯವನ್ನೂ ಅವರ ಶಿಕ್ಷಕರು ಹೇಳಿಕೊಟ್ಟಿಲ್ಲವೇ? ನಾನೊಬ್ಬನೇ ನಿಂತಾಗ ನನಗೊಮ್ಮೆ ಭ್ರಾಂತಿಯೆದುರಾಯಿತು. ನಂತರ ಧ್ವನಿವರ್ಧಕದಲ್ಲಿ ವಿನಯಾ ಪ್ರಸಾದರು ಹೇಳಿದ ನಂತರವಷ್ಟೇ ಅವರು ಎದ್ದು ನಿಂತದ್ದು. ರಾಜ್ಯ ಸರ್ಕಾರದ ನಾಡಗೀತೆಯಲ್ಲಿ ಕೆಲವು ಹೊಸ ಪದಗಳನ್ನು ಸೇರಿಸಿರುವುದು ನನಗೆ ಕಂಡುಬಂದಿತು.

ನಂತರ ಮುಖ್ಯಮಂತ್ರಿಗಳು ರಾಜ ಶೈಲಿಯಲ್ಲಿ ರೇಶಿಮೆ ವಸ್ತ್ರದಲ್ಲಿ ಮುದ್ರಿಸಿದ ಕೃಷ್ಣದೇವರಾಯರ ಪಟ್ಟಾಭಿಷೇಕ ಮಹೋತ್ಸವದ ಒಕ್ಕಣೆಯನ್ನು ನುಡಿದರು.

ನಂತರ ಮಾತನಾಡಿದ ಕೆ. ಎನ್. ರಘುನಂದನರವರು ಕೃಷ್ಣದೇವರಾಯರ ಬಗ್ಗೆ ಹಾಗು ವಿವೇಕಾನಂದರ ಬಗ್ಗೆ ಸವಿವರವಾಗಿ ಎಲ್ಲರಿಗೂ ತಿಳಿಯುವಂತೆ ಗುಣಗಾನ ಮಾಡಿದರು. ಆದರೆ ನಮ್ಮ ಸುತ್ತಮುತ್ತಲಿದ್ದ ಯಾವುದೇ ವಿದ್ಯಾರ್ಥಿಗಳು ಅದನ್ನು ಕಿವಿಯ ಮೇಲೆ ಹಾಕಿಕೊಂಡರೆಂದು ನನಗನ್ನಿಸಲಿಲ್ಲ. ಎಲ್ಲರೂ ಅವರವರಲ್ಲೇ ಗುಸು ಗುಸು ಪಿಸ ಪಿಸ ಮುಂದುವರೆಸಿದ್ದರು. ನನ್ನ ಹಿಂದೆಯೇ ಕುಳಿತ ಅವರ ಶಿಕ್ಷಕರೊಬ್ಬರು ಕಾಗದದ ಕ್ಷಿಪಣಿಗಳನ್ನು ತಯಾರು ಮಾಡಿ ಗುಂಪಿನತ್ತ, ಕೆಲವೊಮ್ಮೆ ಆರಕ್ಷಕರತ್ತ ತೂರುತಿದ್ದರು. ಇನ್ನು ವಿದ್ಯಾರ್ಥಿಗಳನ್ನು ಕೇಳಬೇಕೆ? ಅವರು ಇವರನ್ನು ಹುರಿದುಂಬಿಸುತ್ತಿದ್ದರು.

ಇದೇ ವೇಳೆ ಒಂದು ಸುಸಂಧರ್ಭ ಒದಗಿ ಬಂತು. ನಮ್ಮೊಟ್ಟಿಗೆ ಕುಳಿತಿದ್ದ ಸುಮಾರು ಐವತ್ತು ಮೀರಿದ ದಂಪತಿಗಳಿಬ್ಬರು ಮೈದಾನಕ್ಕೆ ಅಂಟಿದಂತಿದ್ದ ಬಾಗಿಲ ಬಳಿ ಇರುವ ಆರಕ್ಷಕರನ್ನು ಕೇಳಿ ಮೈದಾನಕ್ಕೆ ಹೋಗಬಹುದೇ ಎಂದು ಕೇಳಿದರು. ಅವರು ಅವರದೇ ತಲೆನೋವಿನಲ್ಲಿ ಹೋಗಿ, ಪರವಾಗಿಲ್ಲವೆಂದರು. ಆನೆಯ ಜೊತೆ ಬಾಲದಂತೆ ನಾನು ಅವರೊಂದಿಗೆ ನಡೆದುಬಿಟ್ಟೆನು.

ನನ್ನ ಸೌಭಾಗ್ಯಕ್ಕೆ ನನಗೆ ಪತ್ರಕರ್ತರ ಹಿಂಬದಿಯಲ್ಲಿಯೇ ಆಸನ ದೊರೆಯಿತು. ವೇದಿಕೆಯ ಮೇಲೆ ನೆರೆದಿರುವರೆಲ್ಲರೂ ಇನ್ನೂ ಸ್ಪಷ್ಟವಾಗಿ ಕಾಣಿಸತೊಡಗಿದರು.

ರಘುನಂದನರು ಸುಮಾರು ೪೦ ನಿಮಿಷಕ್ಕೂ ಹೆಚ್ಚು ತಮ್ಮ ಅಮೋಘ ಭಾಷಣವನ್ನು ಮಾಡಿದರು. ಬ್ರಹ್ಮ ತೇಜಸ್ಸನ್ನು ವಿವೇಕಾನಂದರು ಹಾಗು ಕ್ಷಾತ್ರ ತೇಜಸ್ಸನ್ನು ಕೃಷ್ಣದೇವರಾಯ ಪ್ರತಿನಿಧಿಸುವಲ್ಲಿ ಯಾವುದೇ ಸಂಶಯವಿಲ್ಲ. ಇಂದಿನ ಯುವ ಪೀಳಿಗೆಗೆ ಅದು ಮಾರ್ಗದರ್ಶಿಯಾಗಲಿ ಎಂದು ಹಾರೈಸಿದರು. ವಿಜಯನಗರವನ್ನು ವೀಕ್ಷಿಸಲು ಬಂದ ಪರದೇಶದ ರಾಯಭಾರಿಗಳು ಅದನ್ನು ಬಣ್ಣಿಸಿದ ರೀತಿಯನ್ನು ವಿವರಿಸಿದರು.

ನಂತರ ಉನ್ನತ ಶಿಕ್ಷಣ ಮಂತ್ರಿಗಳು, ಅರವಿಂದ ಲಿಂಬಾವಳಿ ಅವರು ಹಂಪೆಯಲ್ಲಿ ಕೃಷ್ಣದೇವರಾಯನ ಹೆಸರಿನಲ್ಲಿ ಮಾಡಬೇಕೆಂದಿರುವ ಮ್ಯೂಸಿಯುಂಗಾಗಿ ವಿಶ್ವವಿದ್ಯಾಲಯದ ವತಿಯಿಂದ ಯಾವುದೇ ಸಹಾಯವಾಗಲಿ ಮಾಡಲು ತಯಾರಿದ್ದೇವೆ ಎಂದು ಘೋಷಿಸಿದರು.

ಜನಾರ್ಧನ ರೆಡ್ಡಿಗಳು ನಂತರ ಮಾತನಾಡಿ ಕೃಷ್ಣದೇವರಾಯನ ಕಾಲದ ವಿಜಯನಗರ, ಇಂದು ಮರುಕಳಿಸುವ ದಿನ ಹೆಚ್ಚೇನೂ ದೂರವಿಲ್ಲ. ರಾಜ್ಯದಲ್ಲಿ ವ್ಯವಹರಿಸಲು ದೊಡ್ಡ ದೊಡ್ಡ ಕುಳರಾದ ಲಕ್ಷ್ಮಿ ಮಿತ್ತಲ್, ಜಿಂದಾಲ್, ಪೆಸ್ಕೋ(??) ಕಂಪನಿಗಳು ಮುಂದಾಗುತ್ತಿರುವಲ್ಲಿ ನಮಗೆಲ್ಲ ಸಂತಸ ತಂದಿದೆ ಎಂದು ಕೊಂಡಾಡಿದರು.

ಈ ಮೂವರಲ್ಲಿ ಕಂಡ ಸಮಾನಂಶವೆಂದರೆ, ಅವರು ಮುಖ್ಯ ಮಂತ್ರಿಗಳನ್ನು ಸಂಬೋಧಿಸುತ್ತಿದ್ದ ಶೈಲಿ. ನಾಟಕೀಯವೆನ್ನುವಂತೆ ಯಡಿಯೂರಪ್ಪನವರನ್ನು ಎರಡು ಮೂರು ಬಿರುದುಗಳಿಂದ ಮೊದಲು ಕರೆದಿದ್ದು ನೋಡಿ ನನಗಂತೂ ನಗು ಬಂತು.

ಮುಖ್ಯ ಮಂತ್ರಿಗಳು ಈಗ ಮಾತನಾಡಿದರು. ವಿದ್ಯಾರ್ಥಿಗಳೆಲ್ಲರೂ ತಮ್ಮ ವಿದ್ಯಾರ್ಥಿ ದೆಸೆಯಲ್ಲಿರುವಾಗ ಒಮ್ಮೆಯಾದರೂ ಹಂಪಿಯನ್ನು ನೋಡಲು ಬರಬೇಕು. ಅದಕ್ಕೆ ನಮ್ಮ ಸರಕಾರ ಶ್ರಮವಹಿಸಿ ಕೆಲಸ ಮಾಡುತ್ತದೆ. ವಿಜಯನಗರದ ಹಿರಿಮೆ ಗರಿಮೆಯ ಬಗ್ಗೆ ಮಾತನಾಡಿದ ಅವರು, ಅದೇ ಸುವರ್ಣ ಯುಗ ಇನ್ನೊಮ್ಮೆ ಮರುಕಳಿಸಲಿದೆ ಎಂದು ಹೇಳಿದರು. ಆ ನಿಟ್ಟಿನಲ್ಲಿ ನಮ್ಮ ಸರಕಾರ, ತನ್ನೆಲ್ಲ ಮಂತ್ರಿವರ್ಯರ ಜೊತೆ ತೀವ್ರ ಗತಿಯಲ್ಲಿ ಕಾರ್ಯವಹಿಸಲಿದೆಯೆಂದರು.

ಆನಂತರ ಮಾತನಾಡಿದ ಶಿವಾಜಿನಗರದ ಶಾಸಕ ರೋಶನ್ ಬೇಗ್ ರವರು ತಮ್ಮ ಅಜ್ಞಾನವನ್ನು ಜಗವೆಲ್ಲ ಪಸರಿಸಿದರು. ಬಹುಷಃ ಅವರು ಕನ್ನಡ ಸಿನೆಮಗಳನ್ನೇ ನೋಡಿಲ್ಲವೆನ್ನಿಸುತ್ತದೆ. ಎಲ್ಲರಿಗೂ ಶುಭ ಕೋರಿದ ಅವರು ಹೇಳಿದ್ದು "ನಾನು ನಿಮ್ಮ ಟೈಮ್ ಅನ್ನು ಹೆಚ್ಚಿಗೆ ವ್ಯರ್ಥ ಮಾಡುವುದಿಲ್ಲ. ಮುಖ್ಯಮಂತ್ರಿಗಳಿಗೆ ನನ್ನ ಒಂದೇ ಸಲಹೆ ಏನೆಂದರೆ 'ನಮ್ಮ ಸಂಜಯ್ ಖಾನ್', ಏನು 'ಟಿಪ್ಪು ಸುಲ್ತಾನ್' ರ ಬಗ್ಗೆ ಒಂದು ಸೀರಿಯಲ್ ಮಾಡಿದರು, ಹಾಗೆ ಕೃಷ್ಣದೇವರಾಯರ ಕುರಿತು ಒಂದು ಸಿನಿಮಾನೋ ಸೀರಿಯಲನ್ನೋ ಮಾಡಬೇಕು" ಎಂದು ವಿನಂತಿಸಿದರು. ಡಾ|| ರಾಜಕುಮಾರ್ ಅವರು ೭೦ ರ ದಶಕದಲ್ಲಿ ಮಾಡಿದ ಕೃಷ್ಣದೇವರಾಯ ಸಿನಿಮಾದ ಬಗ್ಗೆ ಇವರಿಗೆ ತಿಳಿದೇ ಇಲ್ಲವೆನಿಸುತ್ತದೆ. ಇವರ ಕನ್ನಡವೂ ಅಷ್ಟೇ. ಎಲ್ಲಾದ್ರೂ ಉನ್ನತ ಶಿಕ್ಷಣ ಮಂತ್ರಿಗಳು, ಪ್ರವಾಸೋದ್ಯಮ ಸಚಿವರೂ ಎನ್ನುತ್ತಿದ್ದಾರೆ, ಇವರು Higher Education Minister ಮತ್ತೆ Tourism Minister ಎಂದೇ ಸಂಬೋಧಿಸುತ್ತಿದ್ದರು.

ಇವರೆಲ್ಲರ ಭಾಷಣದ ನಂತರ ಚಿಕ್ಕದಾಗಿ ವಂದನಾರ್ಪಣೆಯನ್ನು ಮಾಡಿ, ಸಾಂಸ್ಕೃತಿಕ ಕಾರ್ಯಕ್ರಮಗಳು ಮುಂದುವರಿದವು. ಮೊದಲಿಗೆ ಬಿ. ಜಯಶ್ರಿಯವರಿಂದ ರಂಗಗೀತೆಗಳು. ಮೊದಲ ಬಾರಿಗೆ ಅಂತಹ ದೊಡ್ಡ ಆವರಣದಲ್ಲಿ ರಂಗಗೀತೆಗಳನ್ನು ಅವರ ಉಚ್ಚ ಕಂಠದಿಂದ ಕೇಳಲು ಮನ ಪುಳಕವಾಯಿತು. ಅವರ ಉತ್ಸಾಹ ನಮ್ಮಲ್ಲಿಯೂ ಮೂಡುವಂತೆ ಅವರ ಬಳಗದೆಲ್ಲರೂ ಹಾಡಿದರು. ಒಟ್ಟು ಮೂರು ಗೀತೆಗಳನ್ನು ಅವರು ಹಾಡಿದರು.

೧. ಯಾವುದೇ ನಾಟಕದ ಆದಿಯಲ್ಲಿ ಹಾಡುವ 'ಗಜವದನಾ ಹೇರಂಬ, ವಿಜಯಧ್ವಜ ಶತರವಿಪ್ರತಿಭ'
೨. ಹೆಚ್. ಎಸ್. ವೆಂಕಟೇಶ ಮೂರ್ತಿ ವಿರಚಿತ 'ಈ ಯಮ್ಮ ನೋಡೇ ನಿಂತ ಭಂಗಿ'
೩. ನಾಗಮಂಡಲ ನಾಟಕದ ಸಿ. ಅಶ್ವಥ್ ಸಂಗೀತದ 'ಹಿಂಗಿದ್ದಳೊಬ್ಬಳು ಹುಡುಗಿ'
೪. 'ಸಾವಿರದ ಶರಣವ್ವ ಕರಿಮಾಯಿ ತಾಯಿ' (ನಾಟಕ, ರಚನೆ, ಸಂಗೀತ ತಿಳಿದಿಲ್ಲ, ಕ್ಷಮಿಸಿ...)

ಈ ಎಲ್ಲ ಹಾಡುಗಳಿಗೂ ಸಭೆ ಶಿಳ್ಳೆ, ಕರತಾಡನ ಹೊಡೆದು ಸ್ವಾಗತಿಸಿತು. ಉತ್ಸಾಹದಲ್ಲಿ ನಾಟಕರಂಗವನ್ನು ಮೀರಿಸುವವರಿಲ್ಲವೆಂದು ನನಗನ್ನಿಸಿತು.

ನಂದಿತಾರವರು ಹಾಡಲು ಈಗ ಸಭೆಗೆ ಬಂದರು. ೩ ಸಿನಿಮಾ ಹಾಡುಗಳನ್ನು ಹಾಡಿದರು. ಎಲ್ಲವೂ ಕನ್ನಡ, ಕರ್ನಾಟಕಕ್ಕೆ ಸಂಬಂಧಿಸಿದ್ದವು.

೧. ಜೀವನದಿ ಚಿತ್ರದ 'ಕನ್ನಡ ನಾಡಿನ ಜೀವನದಿ ಓ ಕಾವೇರಿ'
೨. ಉಪಾಸನೆ ಚಿತ್ರದ 'ಭಾರತ ಭೂಶಿರ ಮಂದಿರ ಸುಂದರಿ'
೩. ಅಮೃತಘಳಿಗೆ ಚಿತ್ರದ 'ಹಿಂದೂಸ್ಥಾನವು ಎಂದು ಮರೆಯದ ಭಾರತ ರತ್ನವು ನೀನಾಗು'

ರಾಜೇಶ್ ಕೃಷ್ಣ ರವರು ಕೂಡ ಈ ಹಾಡುಗಳನ್ನು ಹಾಡಲು ಬರಬೇಕಿತ್ತು. ಅವರ ಕಾರ್ಯಕ್ರಮವೂ ಇದೆಯೆಂದು ಪತ್ರಿಕೆಗಳು ಹೇಳಿದ್ದರೂ ಅವರು ಕಾರಣಾಂತರಗಳಿಂದ ಬರಲಾಗಲಿಲ್ಲ. ಸಭೆ ಎಂದಿನಂತೆ ಚಪ್ಪಾಳೆ, ಶಿಳ್ಳೆ ಮುಂದುವರಿಸಿದರು.

ಆಮೇಲೆ, ವಿನಯ್ ಕುಮಾರ್ ರವರು, 'ಕೋಡಗನ ಕೋಳಿ ನುಂಗಿತ್ತ' ಹಾಡು ಹಾಡಿದರು. ಈ ಹಾಡಿಗಂತೂ 'ಜನ ರೈಲು' ಮೈದಾನದ ಸುತ್ತ ಓಡಾಡಿತು. ನಂತರ ಎಂ. ಡಿ. ಪಲ್ಲವಿಯವರು ದ. ರಾ. ಬೇಂದ್ರೆ ಅವರ 'ನಾಕು ತಂತಿ' ಯನ್ನು ಹಿಂದುಸ್ತಾನಿ ಶೈಲಿಯಲ್ಲಿ ಹಾಡಿದರು.

ಎಂ. ಎಸ್. ನರಸಿಂಹ ಮೂರ್ತಿ ಹಾಗು ಗಂಗಾವತಿ ಬೀಚಿ ಎಂದು ಪ್ರಸಿದ್ದವಾಗಿರುವ ಪ್ರಾಣೇಶಾಚಾರರು ನಗೆ ಚಟಾಕಿಗಳಿಂದ ಸಭೆಯ ಮೈ ಪುಳಕಿಸಿದರು.

ಹಂಸಲೇಖ ರವರ 'ಭರತಭೂಮಿ ವರಪುತ್ರ' ನಾಟಕ ನಂತರ ಮೂಡಿಬಂತು. ಎಲ್ಲರಲ್ಲಿಯೂ ವಿಷೆಶತಹ ಮಕ್ಕಳಲ್ಲಿ ದೇಶಭಕ್ತಿ ಜಾಗೃತಗೊಳಿಸಲು ಈ ನಾಟಕ ಒಂದು ಒಳ್ಳೆಯ ಮಾಧ್ಯಮ. ಆದರೆ ನೀವು ಒಮ್ಮೆ ಈ ನಾಟಕ ನೋಡಿ ಬನ್ನಿ.

ಮುಂದುವರಿದಂತೆ, ಲೆಜರ್ ಶೋ, ಬಿತ್ತರವಾಯಿತು. ಒಂದು ಎಲೆಕ್ಟ್ರೋ ಹಾಡಿಗೆ ಹೊಗೆಯಲ್ಲಿ ಬೆಳಕು ಮೂಡಿಬಂದ ರೀತಿ ಎಲ್ಲರೂ ಮೂಗಿನಮೇಲೆ ಬೆರಳಿಡುವಂತೆ ಮಾಡಿತು. ಇದೇ ಲೆಜರ್ ಶೋ ಮುಂದುವರಿದು, ವಿಜಯನಗರ ಸಾಮ್ರಾಜ್ಯ, ಕೃಷ್ಣದೇವರಾಯ, ಹಂಪೆಯ ಒಂದು ಕಿರುಚಿತ್ರ ಮೂಡಿಬಂತು.

ಇವೆಲ್ಲ ಆದಮೇಲೆ ಕೃಷ್ಣದೇವರಾಯನ ಕುರಿತು ಒಂದು ನೃತ್ಯರೂಪಕ ಸುಮಾರು ಅರ್ಧಗಂಟೆಗೂ ಮೀರಿ ಮೂಡಿಬಂತು. ಸಾರಾಂಶ ಇಷ್ಟು. ಕೃಷ್ಣದೇವರಾಯ ತನ್ನ ಆಸ್ಥಾನವನ್ನು ನಡೆಸಿಕೊಂಡು ಬಂದ ರೀತಿ, ತನ್ನ ಅಷ್ಟ ದಿಗ್ಗಜರ ಕುರಿತು ತೋರುವ ಆದರ ಇವೆಲಾಲ್ ಚಿತ್ರಿತವಾದವು. 'ಪಾರಿಜಾತ ಪರಿಣಯ' ನೋಡುತ್ತಿದ್ದ ವೇಳೆ, ಬೇಹುಗಾರನ ಸುದ್ದಿ ಬಂದು ಒರಿಸ್ಸಾ ದೇಶದ ರಾಜ ಗಜಪತಿ ದಂಡೆತ್ತಿ ಬರುವ ಸುದ್ದಿ ಕೇಳಿ ಯುದ್ಧಕ್ಕೆ ಸನ್ನದ್ಧನಾಗುತ್ತಾನೆ. ಅವನನ್ನು ಪರಾಕ್ರಮದಲ್ಲಿ ಸೋಲಿಸಿ ಬಿಜಯನ್ಗೈದು ಬರುತ್ತಾನೆ. ಆಗ ಸಭೆ ಅವನನ್ನು ಬರಮಾಡುವ ರೀತಿ, ಬಿಜಾಪುರದ, ಗೋಲಕೊಂಡದ ಹಾಗು ಅಹ್ಮೆದ್ ನಗರದ ಸುಲ್ತಾನರು, ಅವನಿಗೆ ಕಪ್ಪ ಕಾಣಿಕೆ ಸಲ್ಲಿಸುವ ಸನ್ನಿವೇಶ. ನೃತ್ಯರೂಪಕಗಳಲ್ಲಿ ಹೆಚ್ಚು ತಿಳಿವಿಲ್ಲದ ನನಗೆ ಅಷ್ಟಾಗಿ ಗೊತ್ತಾಗಲಿಲ್ಲ. ತಿಳಿವಿದ್ದವರು ಖುಷಿಪಟ್ಟರು ಎಂದು ಭಾವಿಸುತ್ತೇನೆ. ಈ ನೃತ್ಯರೂಪಕದ ರೂವಾರಿ ಡಾ|| ಮಾಯಾ ರಾವ್.

ಹಂಸಲೇಖ, ಮಾಯಾ ರಾವ್ ರವರಿಗೆ ಅರವಿಂದ ಲಿಂಬಾವಳಿ, ಜನಾರ್ಧನರೆಡ್ಡಿ, ಹಾಗು ವಿಶ್ವೇಶ್ವರ ಹೆಗ್ಗಡೆ ಕಾಗೇರಿ ರವರು ಸಮ್ಮಾನಿಸಿದರು.

ಇದೆಲ್ಲದರ ನಂತರ ಲೆಜರ್ ಶೋ ಮುಂದುವರೆಯಿತು. ಸರಕಾರದ ಲೋಕೋಪಯೋಗಿ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡುವ ಕಿರುಚಿತ್ರ ಲೆಜರ್ ನಲ್ಲಿ ಬಿತ್ತರವಾಯಿತು. ಪಟಾಕಿಗಳನ್ನು ಸಿಡಿಸುವ ಮೂಲಕ ಕಾರ್ಯಕ್ರಮಕ್ಕೆ ತೆರೆಯೆಳೆಯಲಾಯಿತು.