Saturday, June 06, 2009

ಸಂಸ್ಕೃತ ವೇದ ವಿಶ್ವವಿದ್ಯಾಲಯ ಏಕೆ ಬೇಡ?

ನಮ್ಮ ಕರ್ನಾಟಕ ಸರಕಾರ ರಾಜ್ಯದಲ್ಲಿ ಒಂದು ಸಂಸ್ಕೃತ ವೇದ ವಿಶ್ವವಿದ್ಯಾಲಯ ತೆರೆಯಬೇಕೆಂಬ ನಿರ್ಧಾರ ಕೈಗೊಂಡಿದೆ. ನಿಜಕ್ಕೂ ವೈಯ್ಯಕ್ತಿಕವಾಗಿ ನನಗೆ ಈ ನಿರ್ಧಾರ ಸಂತಸ ತಂದಿದೆ.

ಇನ್ನೂ ಹೆಚ್ಚಿನ ಆನಂದ ಎಂದರೆ ನಮ್ಮ ರಾಜ್ಯಪಾಲರು ಇದಕ್ಕೆ ತಮ್ಮ ಅನುಮೋದನೆ ಕೊಟ್ಟಿದ್ದಾರೆ.

ಆದರೆ ನಮ್ಮ ಕೆಲ ಬಂಡಾಯ ಸಾಹಿತಿಗಳು ಇದಾಗುವುದು ಬೇಡ ಎಂದು ತಕರಾರು ಎತ್ತಿದ್ದಾರೆ. ಅವರ ನಿಲುವೇ ನನಗೆ ಅಷ್ಟಾಗಿ ಅರ್ಥವಾಗುತ್ತಿಲ್ಲ.

ಪ್ರಜಾವಾಣಿಯಲ್ಲಿ ಒಂದು ವಾರದ ಹಿಂದೆ ಪ್ರಕಟವಾದ ಡಾ|| ಚಂದ್ರಶೇಖರ ಕಂಬಾರ ರ ಲೇಖನ ಓದಿ ಜನ ಯಾಕೆ ಈ ರೀತಿ ಯೋಚಿಸುತ್ತಾರೆ ಎಂದು ಖೇದವಾಯಿತು. ಇದನ್ನೇ ಅವರ ಹಲವಾರು ಮಿತ್ರರೂ (ಜೀಎಸ್ಸ್ಎಸ್ಸ್, ಚೆನ್ನವೀರ ಕಣವಿ, ಎಂ ಎಂ ಕಲ್ಬುರ್ಗಿ, ಕೆ. ಎಸ್. ಭಗವಾನ್, ಹಂ. ಪಾ. ನಾಗರಾಜಯ್ಯ, ಇನ್ನೂ ಹಲವರು...) ಇಂದಿನ ಪ್ರಜಾವಾಣಿಯ ಕಂತಿನಲ್ಲಿ ಪ್ರತಿಧ್ವನಿಸಿದ್ದಾರೆ. ಈ ಬಂಡಾಯ ಸಾಹಿತಿಗಳು ಎತ್ತುವ ಮಾತುಗಳೇನೆಂದರೆ:

೧. ಕನ್ನಡಕ್ಕೆ ಕಳೆದ ವರ್ಷವಷ್ಟೇ ಶಾಸ್ತ್ರೀಯ ಭಾಷೆಯ ಸ್ಥಾನ ದೊರೆತಿದೆ. ಕನ್ನಡ ಪರ ಕೆಲಸ ಮಾಡುವುದು ಬಿಟ್ಟು ಸಂಸ್ಕೃತದ ಉದ್ಧಾರದಲ್ಲಿ ಸರಕಾರ ತೊಡಗಿದೆ.

೨. ಸಂಸ್ಕೃತ ಸತ್ತ ಭಾಷೆ. ಅದರ ಅಧ್ಯಯನ ಮಾಡುವುದರಲ್ಲಿ ಯಾವ ಅರ್ಥವೂ ಇಲ್ಲ. ಸರಕಾರ ಜನರ ದುಡ್ಡು ಪೋಲು ಮಾಡುತ್ತಿದೆ.

೩. ಸಂಸ್ಕೃತ ಬರೀ ಒಂದು ಸಮುದಾಯಕ್ಕೆ ಮಾತ್ರ ಸೀಮಿತವಾದ ಭಾಷೆ. ಸರ್ಕಾರ ಆ ಸಮುದಾಯಕ್ಕೆ ಪುಷ್ಟಿ ಕೊಡಲು ಈ ರೀತಿ ಮಾಡುತ್ತಿದೆ.

೪.ನಮ್ಮ ಭಾಷೆಯ ಅಕ್ಕ ತಂಗಿಯರಾದ ತುಳು, ಕೊಂಕಣಿಗಳನ್ನು ಉದ್ಧಾರ ಮಾಡುವ ಬದಲು ಈ ನಿರ್ಧಾರವೆಕೆ ತೆಗೆದುಕೊಂಡಿತು?

೫. ಕೆಲವರು ಲ್ಯಾಟಿನ್, ಉರ್ದು, ಪಾಳಿ, ಎಲ್ಲದಕ್ಕೂ ಒಂದೊಂದು ಅಥವಾ ಎಲ್ಲವನ್ನೂ ಒಗ್ಗೂಡಿಸಿ ಒಂದು ಮಿಶ್ರ ವಿಶ್ವವಿದ್ಯಾಲಯ ತೆರೆಯಬೇಕೆಂದು ಆಗ್ರಹಿಸಿದ್ದಾರೆ.

೬. ಭಾರತದಲ್ಲಿ ಈಗಾಗಲೇ ೧೨ ಸಂಸ್ಕೃತ ವಿಶ್ವವಿದ್ಯಾಲಯ ತೆರೆಯಲಾಗಿದೆ. ಇನ್ನೊಂದು ಬೇಕಿತ್ತೆ?

೭. ಬರಿಯ ಸಂಸ್ಕೃತ ವಿಶ್ವವಿದ್ಯಾಲಯ ಮಾಡದೆ ಅದಕ್ಕೆ ವೇದದ ಅಡಿಪತ್ತಿ ಕೊಟ್ಟಿರುವುದು ಎಷ್ಟರ ಮಟ್ಟಿಗೆ ಸರಿ?

ಇನ್ನೂ ಹಲವು ಅಂಶಗಳು ಇವೆ. ಇವು ಮುಖ್ಯವಾದವು.

ಇವನ್ನು ಒಂದೊಂದಾಗಿ ತೆಗೆದುಕೊಳ್ಳೋಣ.

ಮೊದಲನೆಯದು. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ ದೊರಕಿದೆ. ಅದರ ಪರವಾಗಿ ಕೆಲಸ ಮಾಡುವುದು ಬಿಟ್ಟು ಸಂಸ್ಕೃತದ ಅಡಿಯಾಳಾಗಬೇಕಾ? ಯಾಕೆ ಈ ರೀತಿ ಯೋಚಿಸುತ್ತೀರಾ? ಕನ್ನಡ ದ್ರಾವಿಡ ಭಾಷೆಯಾದರೂ ಸಂಸ್ಕೃತದಿಂದ ಅದು ಪಡೆದಿರುವ ಸಂಪತ್ತು ಅಮೂಲ್ಯ. ಅದನ್ನು ಎರವಲು ಎಂದುಕೊಂಡರೆ ಅದು ನಿಮ್ಮ ತಪ್ಪು. ಕನ್ನಡ ಸ್ವತಂತ್ರ ಭಾಷೆ ಎಂದು ನಾನೂ ಒಪ್ಪುತ್ತೇನೆ ಹಾಗು ಪ್ರತಿಪಾದಿಸುತ್ತೇನೆ, ಆದರೆ ಸಂಸ್ಕೃತದಿಂದ ಅದು ಸಾಕಷ್ಟು ಪ್ರೇರಿತವಾಗಿದೆ ಎಂದೂ ನಾನು ಮಾತ್ರ ಅಲ್ಲ, ಎಲ್ಲ ಕನ್ನಡಾಭಿಮಾನಿಯೂ ಒಪ್ಪಲೇಬೇಕಾದ ಮಾತು. ಸಂಸ್ಕೃತ ಭಾರತೀಯ ಭಾಷೆಗಳ ತಾಯಿ. ಅದರಿಂದ ಪ್ರೇರಿತರಾಗದ ಭಾಷೆಯೇ ಇಲ್ಲ. ಭಾಷೆಯ ಬೆಳವಣಿಗೆಯ ರೀತಿಯೇ ಹಾಗೆ. ಈ ಸರಕಾರ ಕನ್ನಡ ಪರ ಕೆಲಸ ಮಾದುತ್ತಿಲ್ಲವೆನ್ದಾದಲ್ಲಿ ಅದನ್ನು ಖಂಡಿಸಬೇಕೆ ಹೊರತು ಇದು ಸಂಸ್ಕೃತ ವೇದ ವಿ. ವಿ.ಯೊಂದನ್ನು ತರುತ್ತಿದೆ ಎಂದರೆ ಅದಕ್ಕೆ ಅಡ್ಡಿ ಮಾಡುವುದು ಕನ್ನಡತನವಲ್ಲ.

ಎರಡನೆಯದಾಗಿ, ಸಂಸ್ಕೃತ ಸತ್ತ ಭಾಷೆ. ಅದರ ಅಧ್ಯಯನದಲ್ಲಿ ಯಾವುದೇ ಉಪಯೋಗವಿಲ್ಲ. ಜನರ ಹಣ ಸರ್ಕಾರ ಪೋಲು ಮಾಡುತ್ತಿದೆ. ಸಂಸ್ಕೃತ ಸತ್ತದ್ದೇ ಆದರೆ, ಸಾಯಿಸಿದ್ದು ಯಾರು? ಅದನ್ನು ಮಾತನಾಡದ ನಾವು. ಯಾವುದೋ ಒಂದು ಶ್ಲೋಕದಲ್ಲಿ ಸಂಸ್ಕೃತವನ್ನು ಸರಿಯಾಗಿ ಉಚ್ಚಾರ ಮಾಡದಿದ್ದರೆ ಅವನು ನರಕಕ್ಕೆ ಹೋಗುತ್ತಾನೆ ಎನ್ನುವ ಮಾತನ್ನು ಕಟ್ಟಿಕೊಂಡು ಸಾಮಾನ್ಯರು ಅದನ್ನು ಸರಳಗೊಳಿಸಿ ಪ್ರಾಕೃತ ಎಂದರು. ಅದನ್ನೇ ಸ್ವಲ್ಪ ಬದಲಾಯಿಸಿ ಪಾಳಿ ಮಾಡಿದರು. ಹೀಗೆ ಸಂಸ್ಕೃತ ಹಲವು ಕವಲು ಒಡೆದು ಹಲವು ಭಾಷೆಗೆ ದಾರಿ ಮಾಡಿಕೊಟ್ಟಿತು. ಆ ಶ್ಲೋಕದ ಭಾವ, ಉಚ್ಚಾರ ಸರಿಯಾಗಿರಬೇಕು ಎಂದು ಸಾರುವುದಿತ್ತೇ ಹೊರತು ನರಕಕ್ಕೆ ಹೋಗುವುದಲ್ಲ. ಸಾಮನ್ಯ ಜನರು ಇದನ್ನೇ ತಪ್ಪಾಗಿ ತಿಳಿದು ಅದನ್ನು ಉಪಯೋಗಕ್ಕೆ ಬಾರದ ಭಾಷೆಯನ್ನಾಗಿ ಮಾಡಿಬಿಟ್ಟರು. ಸಂಸ್ಕೃತ ಸತ್ತ ಭಾಷೆಯಾದರೆ, ನಮ್ಮದೇ ಕರ್ನಾಟಕದಲ್ಲಿ ಇರುವ ಮತ್ತೂರಿನಲ್ಲಿ ಮಾತನಾಡುವ ಭಾಷೆಗೆ ಏನೆಂದು ಹೇಳುತ್ತಾರೆ?

ಸಂಸ್ಕೃತದ ಅಧ್ಯಯನದಲ್ಲಿ ಯಾವುದೇ ಉಪಯೋಗವಿಲ್ಲ ಎನ್ನುವವರು, ಸಂಸೃತವನ್ನು ಮೇಲ್ಪದರದ ಮಟ್ಟಿಗಾದರೂ ತಿಳಿದು ಈ ಮಾತನ್ನಾಡಿದ್ದಾರೆ ಎಂದು ಅನ್ನಿಸುವುದಿಲ್ಲ. ಸಂಸ್ಕೃತದಷ್ಟು ವ್ಯಾಕರಣಬದ್ಧವಾದ ಭಾಷೆ ಈ ಭೂಮಿ ಮೇಲೆ ಇನ್ನೊಂದಿಲ್ಲ. ಅದರ ಒಂದೊಂದು ಪದವೂ ಅರ್ಥಬದ್ಧ, ಪ್ರಮಾಣಬದ್ಧ. ಇಂಗ್ಲೀಷಿನಲ್ಲಿ ನೀವು ಹೇಳುವ ಹಾಗೆ 'Completely Etymological'. ಇದನ್ನು ನೀವು ಯಾವುದೇ ಶಾಸ್ತ್ರಜ್ಞರೊಂದಿಗೆ ಚರ್ಚಿಸಬಹುದು. ಅದರ ಪ್ರತಿಯೊಂದು ಧಾತುವೂ ಪ್ರಮಾಣಬದ್ಧ. ಅದನ್ನು ಕಲಿಯುವುದೂ ಒಂದು ಕಲೆ. ತಿಳಿಯದೆ, ನಮ್ಮದೇ ಭಾಷೆಗೆ ಈ ರೀತಿ ಅಪಮಾನ ಮಾಡುವುದು ಎಷ್ಟರ ಮಟ್ಟಿಗೆ ಸರಿ? ಜನರ ತೆರಿಗೆ ಹಣ ಸರ್ಕಾರ ವ್ಯರ್ಥ ಮಾಡುತ್ತಿದೆ ಎನ್ನುವ ಇವರು, ನಮ್ಮ ರಾಜಕಾರಣಿಗಳು ಪೋಲು ಮಾಡುತ್ತಿರುವ ಕೋಟ್ಯಾಂತರ ರುಪಾಯಿಗಳನ್ನು ನೋಡಿಲ್ಲವೇನು? ಅದಕ್ಕೆ ಬಾಯಿ ಮುಚ್ಚಿಕೊಂಡು ಹೇಗೆ ಸುಮ್ಮನಿದ್ದಾರೆ ಇವರು?

ಮೂರನೆಯದಾಗಿ, ಸಂಸ್ಕೃತ ಬರೀ ಒಂದು ಸಮುದಾಯದ ಭಾಷೆ. ಆ ಸಮುದಾಯಕ್ಕೆ ಪುಷ್ಟಿ ಕೊಡಲು ಸರ್ಕಾರ ಈ ರೀತಿಯ ನಿಲುವನ್ನು ತೆಗೆದುಕೊಂಡಿದೆ ಎನ್ನುವ ಮಾತು. ನೇರವಾಗಿ ಬ್ರಾಹ್ಮಣರ ಭಾಷೆಯೇನ್ನಲೂ ಹಿಂಜರಿಯುವ ಇವರನ್ನು ಏನೆನ್ನಬೇಕು? ಅದನ್ನು ಬರಿಯ ಬ್ರಾಹ್ಮಣರ ಭಾಷೆಯನ್ನಾಗಿ ಮಾಡಿದವರು ಯಾರು? ಅದನ್ನು ಉಪಯೋಗಿಸದೆ ಬಿಟ್ಟ (ಅವರೇ ಹೇಳಿಕೊಳ್ಳುವಂತೆ, ಇತರ ಸಮುದಾಯದವರು). ಬ್ರಾಹ್ಮಣರೇನಾದರು ಇವರಿಗೆ ಸಂಸ್ಕೃತ ಉಪಯೋಗಿಸಬೇಡಿ ಎಂದಿದ್ದರೆ? ವೇದ ಉಪನಿಷತ್ತು ಏಕೆ? ರಾಮಾಯಣ ಬರೆದಿದ್ದು ಪೂರ್ವಾಶ್ರಮದಲ್ಲಿ ಶೂದ್ರನಾಗಿದ್ದ (ಬೇಡ) ವಾಲ್ಮಿಕಿಯಲ್ಲವೇ? ರಾಜರೆಲ್ಲರೂ ಸಂಸ್ಕೃತವನ್ನು ಮಾತನಾಡುತ್ತಲಿರಲಿಲ್ಲವೇ? ಮೊದಲೇ ಹೇಳಿದ ಒಂದು ಶ್ಲೋಕದ ಅಪಾರ್ಥದಿಂದ ಸಂಸ್ಕೃತ ಮಾತನಾಡದಿದ್ದರೆ ಅದು ಬ್ರಾಹ್ಮಣರ ತಪ್ಪೇ? ನಾನೇ ವರ್ಣಾಶ್ರಮ ಧರ್ಮದ ಬಗ್ಗೆ ಬರೆದಿರುವ ಅಂಕಣವನ್ನು ತಾವು ಓದಬೇಕೆಂದು ಕೋರುತ್ತೇನೆ. ಅದರ ಎರಡನೆಯ ಭಾಗವು ಇಲ್ಲಿದೆ. ಅದರ ಬಗ್ಗೆ ಇನ್ನೂ ಹಲವು ವಿಚಾರಗಳು ಬರೆಯುವುದಿದೆ. ವರ್ಣಾಶ್ರಮ ಧರ್ಮ ತಪ್ಪು ಎನ್ನುವ ಇವರು, ಈಗ ಪಾಲಿಸುತ್ತಿರುವುದು ಇವರು ಜರಿಯುತ್ತಿದ್ದ ವರ್ಣಾಶ್ರಮವಲ್ಲದೆ ಮತ್ತಿನೇನು? ಅವರು ಹೇಳುವಂತೆ ಮೊದಲು ಬ್ರಾಹ್ಮಣರಿಗೆ ಪ್ರಾಧಾನ್ಯ ಕೊಡುತ್ತಿದ್ದರೆ, ಈಗ ಪರಿಶಿಷ್ಟ ಜಾತಿ ಹಾಗು ಪಂಗಡಗಳಿಗೆ ಮಾನ್ಯತೆ ಸಿಗುತ್ತಿಲ್ಲವೇನು? ಇದರಿಂದ ಏನು ಸಾಧಿಸಿದಂತಾಗುತ್ತದೆ? ಚಕ್ರ ತಿರುಗುತ್ತದೆ. ನಾಳೆ ಇದೇ ವ್ಯವಸ್ಥೆ ಇದ್ದರೆ ಬ್ರಾಹ್ಮಣರು ಇವರು ತಿಳಿದುಕೊಂಡ ರೀತಿಯಲ್ಲಿ ಮೇಲೆ ಬರುವುದರಲ್ಲೂ ಯಾವ ಸಂಶಯವೂ ಇಲ್ಲ. ಎಲ್ಲರಿಗೂ ಸಮಾನ ಹಕ್ಕುಗಳನ್ನು ನೀಡುವ ಬದಲು ಸಮಾಜದ ಯಾವುದೇ ಸಮುದಾಯಕ್ಕೆ ವಿಶೇಷ ಅನುದಾನ ನೀಡಿದರೆ ಆಗುವುದೇ ಹೀಗೆ. ಇದರ ಬಗ್ಗೆ ಇನ್ನೊಂದು ಅಂಕಣದಲ್ಲಿ ಬರೆಯೋಣ. ಇವರು ಏನೇ ಮಾಡಿದರೂ ವರ್ಣಾಶ್ರಮ ಧರ್ಮವನ್ನು ಅಲ್ಲಗಳೆಯಲು ಯಾರಿಂದಲೂ ಸಾಧ್ಯವಿಲ್ಲ (ಹೇಗೆ ಎಂದು ಹೇಳುವುದಕ್ಕೆ ಇನ್ನೊಂದು ಅಂಕಣ ಮೀಸಲು). ಈ ರೀತಿ ಸಂಸ್ಕೃತ ಒಂದು ಪಂಗಡದ ಭಾಷೆ ಎನ್ನುವವರು ತಮ್ಮ ಮೇಲೆ ತಾವೇ ಕೆಸರು ಎರಚಿಕೊಳ್ಳುವವರು ಎನ್ನೋಣವೇ?

ನಾಲ್ಕನೆಯದಾಗಿ ನಮ್ಮ ಇತರ ಭಾಷೆಗಳ ಬಗ್ಗೆ. ಅವನ್ನೂ ಉಧ್ಧಾರ ಮಾಡಲಿ. ನಾವೇನು ಬೇಡ ಎನ್ನುತ್ತೆವೆಯೇ?ಅದರ ಜೊತೆ ಸಂಸ್ಕೃತದಂತಹ ಉಚ್ಚ ಭಾಷೆಯನ್ನೂ ಕಲಿತರೆ ಯಾವ ನಷ್ಟ ಒದಗೀತು?

ಕೆಲವು ಬುದ್ಧಿಜೀವಿಗಳು, ಐದನೇ ಮಾತನ್ನು ಕೇಳುತ್ತಾರೆ. ಅವರಿಗೆ ನಮ್ಮ ಭಾಷೆಯಾವುದೂ ಬೇಡ. ಅವರಿಗೆ ಲ್ಯಾಟಿನ್, ಇಂಗ್ಲಿಷ್, ಉರ್ದು ಎರವಲು ಭಾಷೆಗಳೇ ಪ್ರಾತಃಸ್ಮರಣೀಯ. ಈ ಮಾತಿಗೆ ನಿರ್ಧಾರ ನಿಮಗೇ ಬಿಟ್ಟದ್ದು. ನಾನು ಇನ್ನ್ನು ಹೆಚ್ಚು ವಿಸ್ತಾರವಾಗಿ ಹೇಳಲಾರೆ.

ಆರನೆಯದಾಗಿ ಇನ್ನೊಂದು ಸಂಸ್ಕೃತ ವಿ.ವಿ ಬೇಕಿತ್ತೆ ಎನ್ನುವ ವಿಚಾರ. ಇದ್ದರೆ ತಪ್ಪೇನು? ಕರ್ನಾಟಕದಲ್ಲಿರುವ ಸಂಸ್ಕೃತ ಆಸಕ್ತರು, ಅಧ್ಯಯನಕ್ಕಾಗಿ ಹೊರಗೆಲ್ಲೂ ಓದುವ ಬದಲು ಇಲ್ಲೇ ಓದಲಿ ಎನ್ನುವುದು ಸರ್ಕಾರದ ಅಂಬೋಣ. ತರಕಾರಿಗೆ ಪರವೂರಿಗೆ ಹೋಗುವ ಬದಲು ನಮ್ಮ ಊರಿನಲ್ಲೇ ಒಂದು ಅಂಗಡಿ ಇದ್ದರೆ ಎಷ್ಟು ಚೆನ್ನ ಅಲ್ಲವೇ?

ಕೊನೆಯದಾಗಿ, ಈ ವಿ.ವಿ ಗೆ ವೇದದ ಅಡಿಪಟ್ಟಿ ಬೇಕಿತ್ತೆ ಎಂಬುದು. ಅಲ್ಲ್ರಿ? ಕನ್ನಡ ಅಧ್ಯಯನ ಮಾಡಲು ಕವಿರಾಜಮಾರ್ಗ ಬೇಡ ಎಂದ ಹಾಗಾಯಿತು ಇವರ ವಾದ. ಸಂಸ್ಕೃತದ ವ್ಯಾಕರಣ, ಛಂದಸ್ಸು , ಅಲಂಕಾರ ಎಲ್ಲವೂ ವೇದೊಪನಿಶತ್ತುಗಳಲ್ಲಿ ಇರುವಾಗ, ಬೇರೆ ಏನು ಇಡಬೇಕು? ಸಂಸ್ಕೃತದ ಜೊತೆಗೆ ವೇದವನ್ನೂ ಓದಲಿ ಎನ್ನುವ ಅಂಬೋಣವನ್ನು ಏಕೆ ತಳ್ಳಿಹಾಕಬೇಕು?ವಾದದಲ್ಲಿ ಅಡಗಿರುವ ಸನಾತನ ಸತ್ಯಗಳ ಅನ್ವೇಷಣೆಯನ್ನು ಇದರ ಮೂಲಕ ಏಕೆ ಸಾಧಿಸಬಾರದು? ನಮ್ಮ ನೆಲದಲ್ಲಿ ಹುಟ್ಟಿ ಬೆಳೆದ ನಮ್ಮದೇ ಸಂಸ್ಕೃತಿಯನ್ನು ನಾವು ಉದ್ಧಾರ ಮಾಡದೆ ಇನ್ನ್ಯಾರು ಮಾಡಿಯಾರು? ನಮ್ಮ ವೇದಗಳನ್ನು ಹೊರಗಿನ ಜನ ಈ ೫ ದಶಕಗಳಲ್ಲಿ ನಮಗಿಂತ ಹೆಚ್ಚಾಗಿ ಅಧ್ಯಯನ ಮಾಡುವುದು, ನಮಗೆ ನಾಚಿಕೇಡಲ್ಲವೇ? ಸಂಸ್ಕೃತ ವಿ. ವಿ. ಬೇಡ ಎನ್ನುವವರು ಈ ಮಾತನ್ನು ಸ್ವಲ್ಪ ಯೋಚಿಸಬೇಕು. ನಮ್ಮ ಸಂಸ್ಕೃತಿಯಲ್ಲಿರುವಷ್ಟು ಪಾರಮಾರ್ಥಿಕ ಸತ್ಯಗಳು ಬೇರೆ ಯಾವ ಸಂಸ್ಕೃತಿಯಲ್ಲೂ ಸಿಗುವುದಿಲ್ಲವೆನ್ನುವುದು ಉತ್ಪ್ರೇಕ್ಷೆಯಲ್ಲ. (ನಮ್ಮ ಬುದ್ಧಿಜೀವಿಗಳಿಗೆ ಇದು ಉತ್ಪ್ರೇಕ್ಷೆಯಾಗಬಹುದು, ನಾವು ಅದಕ್ಕೇನೂ ಮಾಡಲಾಗುವುದಿಲ್ಲ. ಗೋರ್ಕಲ್ಲ ಮೇಲೆ ಮಳೆ ಸುರಿದಂತೆ.)

ಇಷ್ಟೆಲ್ಲಾ ಮಾತನಾಡುವ ಈ ಬಂಡಾಯ ಸಾಹಿತಿಗಳು, ವೇದ ಉಪನಿಷತ್ತುಗಳ ಕನ್ನಡ ಅವತರಣಿಕೆಗಳನ್ನು ಯಥಾವಥ್ಥ್ ಉಧ್ಧರಿಸಿದ್ದಾರೆಯೇ? ಇಲ್ಲ? ಮಾಡುವ ಕೆಲಸ ಬಹಳವಿದ್ದರೂ, ಈ ರೀತಿ ಟೀಕೆ ಮಾಡುವರೇ ವಿನಃ, ಅದಕ್ಕಾಗಿ ಏನು ಮಾಡಬಹುದು ಎಂದು ಯೋಚಿಸುವವರು ಬಹಳ ಕಡಿಮೆ. ಸ್ವಲ್ಪ ನಾನು ಹೇಳಿರೋ ಮಾತುಗಳನ್ನು ವಿಶ್ಲೇಷಿಸಿ ನೋಡಿ.

ನಾನೇನು ಕನ್ನಡ ವಿರೋಧಿಯಲ್ಲ. ನಾನು ಕನ್ನಡಪರನೇ. ಆದರೆ ಕನ್ನಡ ಪರರೆಂದು ಹೇಳಿಕೊಳ್ಳುವ ಈ ಬಂಡಾಯ ಸಾಹಿತಿಗಳ ಸಂಸ್ಕೃತ ದ್ವೇಷ ಸಲ್ಲದೆನ್ನುವುದು ನನ್ನ ಧೋರಣೆ.

ತಮಗೆ ನಾನು ಉದ್ಧರಿಸಿರುವ ಯಾವುದೇ ಮಾತು ಸರಿಯಿಲ್ಲವೆನ್ನಿಸಿದರೆ ದಯಮಾಡಿ ಸೂಚಿಸಿ. ಸರಿಯಾದಲ್ಲಿ ತಿದ್ದಿಕೊಳ್ಳುತ್ತೇನೆ. ತಪ್ಪಾದಲ್ಲಿ ನನ್ನ ನಿಲುವನ್ನು ಸಮರ್ಥಿಸುತ್ತೇನೆ. ಚರ್ಚೆ ನಡೆಯಲಿ.