ಇತ್ತೀಚಿಗೆ ಈ ಎರಡೂ ವಿಚಾರಗಳು ಹಾಗು ಮತಾಂತರದ ಬಗ್ಗೆ ಬಹಳ ಚರ್ಚೆ ನಡೆಯುತ್ತಿದೆ. ಈ ಕಂಡ ವಿಚಾರಗಳ ಬಗ್ಗೆ ನನ್ನ ನಿಲುವನ್ನು ಅಭಿವ್ಯಕ್ತಿಪಡಿಸುವ ಸಲುವಾಗಿ ಈ ನನ್ನ ಲೇಖನ.
ಸುಮಾರು ಮೂರು ತಿಂಗಳ ಹಿಂದೆ ಮಂಗಳೂರು, ಉಡುಪಿ ಹಾಗು ಸುತ್ತಮುತ್ತ ಅಕ್ರಮವಾಗಿ ಮಾಡಲ್ಪಟ್ಟ ಮತಾಂತರದ ವಿಚಾರವಾಗಿ ನಡೆದ ಗಲಭೆಯ ಕಾರಣ ಈ ವಿಚಾರಗಳು ತೀವ್ರವಾಗಿ ಚರ್ಚಿಸಲ್ಪಟ್ಟು ಹಲವು ವಿಚಾರವಾದಿಗಳ, ಬುದ್ಧಿಜೀವಿಗಳ ಜಿಜ್ಞಾಸೆಗೆ ಎಡೆ ಮಾಡಿಕೊಟ್ಟಿದೆ. ಈ ಕಾರಣವಾಗಿ ಹಲವು ಚರ್ಚೆ ಪತ್ರಿಕಾ ಮಾಧ್ಯಮದಲ್ಲಿ ಹಾಗು ದೂರದರ್ಶನ ವಾಹಿನಿಗಳಲ್ಲಿಯೂ ನೀವು ನೋಡಿರಬಹುದು. ಈ ಬಗ್ಗೆ ನನ್ನ ಅಭಿಪ್ರಾಯ ತಿಳಿಸಲು ಈ ಅಂಕಣವನ್ನು ಬಳಸಿಕೊಂಡಿದ್ದೇನೆ.
ನನ್ನ ನಿಲುವನ್ನು ಪ್ರಸ್ತಾಪಿಸುವ ಮುನ್ನ, ಇದರ ಭೂಮಿಕೆಯನ್ನು ಕೊಂಚ ಬರೆದರೆ ತಮಗೂ ಉಪಯುಕ್ತವಾಗಬಹುದು ಎಂದು ನನ್ನ ನಂಬಿಕೆ.
ಈ ವಿಷಯವಾಗಿ ನೀವು ಆಸಕ್ತರಾಗಿದ್ದರೆ, ೧೬ನೇ ಅಕ್ಟೋಬರ್ ೨೦೦೮ರಿಂದ ೨೦ನೇ ನವೆಂಬರ್ ೨೦೦೮ರ ವರೆಗಿನ ವಿಜಯಕರ್ನಾಟಕ ಪತ್ರಿಕೆಯನ್ನು ಸಾವಕಾಶವಾಗಿ ಓದಲು ನಾನು ಸೂಚಿಸುತ್ತೇನೆ. ಅದರಲ್ಲಿ ಹಲವಾರು ಮಹನೀಯರು ತಮ್ಮ ಅಭಿಪ್ರಾಯವನ್ನು ಪ್ರಕಟಿಸಿದ್ದಾರೆ. ಮತಾಂತರದ ಪರವೂ ವಿರುದ್ದವೂ ನೀವು ಅನೇಕ ಗಣ್ಯಾತಿಗಣ್ಯರಿಂದ ಅಭಿಪ್ರಾಯವನ್ನು ಇಲ್ಲಿ ಅವಲೋಕಿಸಬಹುದು. ಸಂತೇಶಿವರ ಲಿಂಗಣ್ಣ ಭೈರಪ್ಪರವರಿಂದ ಶುರುವಾದ ಈ ಸಂವಾದವು ಅವರ ಉಪಸಂಹಾರದಿಂದಲೇ ಮುಕ್ತಾಯಗೊಳ್ಳುತ್ತದೆ. ಅವರು ಮತಾಂತರದ ವಿರುದ್ದ ತಮ್ಮ ಸಾಕ್ಷ್ಯಾಧಾರಿತ ವಾದ ಮಂಡಿಸಿದ್ದಾರೆ. ಅವರ ಪರವಾಗಿ ಪ್ರೊ.ಚಿದಾನಂದ ಮೂರ್ತಿ, ಶತಾವಧಾನಿ ಆರ್ ಗಣೇಶ್, ನವರತ್ನ ರಾಜಾರಾಮ್, ಅಜ್ಜಕ್ಕಳ ಗಿರೀಶ್ ಭಟ್, ಪೇಜಾವರ ತೀರ್ಥ ವಿಶ್ವೇಶ್ವರ ಸ್ವಾಮಿಗಳು, ತರಳುಬಾಳು ಸ್ವಾಮಿಗಳು, ಸೇರಿದಂತೆ ಇನ್ನೂ ಹಲವರು ಸಾಕಷ್ಟು ಸಾಕ್ಷಿ ಒದಗಿಸಿ ಆ ನಿಲುವನ್ನು ಪುಷೀಕರಿಸಿದ್ದಾರೆ.
ಆದರೆ ಅವರ ವಿರುದ್ದ ಎಂದರೆ ಮತಾಂತರದ ಪರವಾಗಿಯೂ ಅಥವಾ ಒಂದು ನಿರ್ದಿಷ್ಟ ನಿಲುವನ್ನು ತಾಳದಿರುವವರು ಮತಾಂತರ ಯಾಕೆ ನಿಶಿದ್ದವಾಗಬಾರದು ಎಂದು ವಾದಿಸುವುದ್ದಕ್ಕಿಂತ ಭೈರಪ್ಪನವರ ಮೇಲೆ ಹರಿಹಾಯ್ದಿದ್ದಾರೆ. ಮತಾಂತರದ ಪರವಾಗಿ ಮಾತನಾಡಿದ ಒಬ್ಬರಿಂದಲೂ ಸದೃಢ ಸಾಕ್ಷಿಯಾಗಲಿ, ಪುರಾವೆಯಾಗಲಿ ದೊರೆತಿಲ್ಲವೆಂಬುದು ವಿಷಾದದ ಸಂಗತಿ. ಈ ಗುಂಪಿನಲ್ಲಿ ಸೇರುವ ಮಹನೀಯರೂ, ಬುದ್ಧಿವಂತರೂ ಆದ ಪ್ರೊ. ಗೋವಿಂದ ರಾವ್, ಪತ್ರಕರ್ತ ರವಿ ಬೆಳಗೆರೆ, ಪಾಟೀಲ ಪುಟ್ಟಪ್ಪ, ಚಂಪಾ, ಎನ್. ಎಸ್. ಶಂಕರ್, ಪತ್ರಕರ್ತ ಅಗ್ನಿ ಶ್ರೀಧರ್, ಜನತಾ ದಳದ ಕಾರ್ಯಾಧ್ಯಕ್ಷರು, ಇನ್ನೂ ಹಲವರು. ಇವರಲ್ಲಿ ಹಲವಾರು ಮಂದಿ ವಿಷಯಾಂತರ ಮಾಡಿ ತಮ್ಮ ಅಭಿಪ್ರಾಯವನ್ನು ಪ್ರಸ್ತುತ ಪಡಿಸುವ ಬದಲು ಭೈರಪ್ಪನವರನ್ನು ವಾಚಾಮಗೋಚರ ಬೈದಾಡಿದ್ದಾರೆ.
ಮತಾಂತರದ ವಿರುದ್ಧ ಬಣದ ವಾದದಲ್ಲಿ ಮುಖ್ಯಾಂಶಗಳು:
೧. ಸೆಮೆಟಿಕ್ ಧರ್ಮಗಳಾದ ಕ್ರಿಶ್ಚಿಯಾನಿಟಿ ಹಾಗು ಇಸ್ಲಾಂ ಧರ್ಮಗಳು ತಮ್ಮ ಧರ್ಮ ಪ್ರಸಾರಕ್ಕೋಸ್ಕರ ಮತಾಂತರವೆಂಬ ಪಿಡುಗನ್ನು ಆಶ್ರಯಿಸಿದ್ದಾರೆ. ಅದರಿಂದ ಹಲವಾರು ವಾಮ ಮಾರ್ಗ (ಪ್ರಲೋಭನೆ, ಬಲವಂತ ಮತಾಂತರ, ರೋಗಿಗೆ ಔಷಧ, ಬಡವರಿಗೆ ದುಡ್ಡಿನ ಪ್ರಲೋಭನೆ, ನಿಕೃಷ್ಟರಿಗೆ ಉತ್ತಮ ಬಾಳುವೆಯ ಪ್ರಲೋಭನೆ, ಹೀಗೆ ಸಂಧರ್ಭಕ್ಕೆ ತಕ್ಕ ಹಾಗೆ ವಿಧಾನಗಳು) ಬಳಸಿ ಭಾರತದ ಸನಾತನ ಧರ್ಮದ ಹಲವರನ್ನು ಮತಾಂತರಿಸಿ ಈ ದೇಶದ ಭವ್ಯ ಸಂಸ್ಕೃತಿಗೆ ಧಕ್ಕೆಯುಂಟುಮಾಡುತ್ತಿದ್ದಾರೆ.
೨. ಮತದ ಹೆಸರಿನಲ್ಲಿ ದಾಂಧಲೆ ಎಬ್ಬಿಸುವುದು, ಒಟ್ಟಿನಲ್ಲಿ ದೇಶದಲ್ಲಿ ತಳಮಳ ಉಂಟುಮಾಡುವುದು ಇವರ ಪದ್ಧತಿ.
೩. ದೀನ ದಲಿತರ ಸೇವೆಯ ಹೆಸರಿನಲ್ಲಿ ಮತ ಪ್ರಚಾರ ಮಾಡುವುದು. (ಮದರ್ ತೆರೇಸಾ).
೪. ದೇಶವು ತಮ್ಮ ಅಧೀನದಲ್ಲಿದ್ದಾಗ ತಮ್ಮ ಮತ ಪ್ರಚಾರಕ್ಕೆ ಎಲ್ಲ ವಿಧವಾದ ಕಾರ್ಯತಂತ್ರವನ್ನು ಉಪಯೋಗಿಸಿದ್ದು. (The Goan Inquisition, ಮುಘಲರ ಹಾಗು ಇನ್ನಿತರ ಮುಸ್ಲಿಂ ರಾಜ್ಯಾಡಳಿತದಲ್ಲಿ ಬಲವಂತ ಮತಾಂತರ) ಹಾಗು ಇನ್ನಿತರ ಮಾರ್ಗಗಳು. (ಬ್ರಿಟಿಷರ ದಬ್ಬಾಳಿಕೆ, ಯುರೋಪಿನಿಂದ ಕ್ರಿಶ್ಚಿಯನ್ ಸಾಧು ಸಂತರನ್ನು ಮತಾಂತರಕ್ಕಾಗಿ ಕರೆಸಿದ್ದು, ಇತ್ಯಾದಿ)
೫. ಸ್ವಾತಂತ್ರ್ಯಾನಂತರ ಅವರ ಏಳಿಗೆಗೆ ಸರಕಾರದಿಂದ ಪಡೆದ ಸವಲತ್ತುಗಳು, ಅವರ ಯಾವುದೇ ಕೃತ್ಯಗಳಿಗೆ ಸರಕಾರ ಸುಮ್ಮನಿದ್ದುದು ಎಲ್ಲವನ್ನು ಬೊಟ್ಟು ಮಾಡಿ ತೆಗೆದಿದ್ದಾರೆ.
೬. ಅವರ ಧರ್ಮದಲ್ಲಿ ಮತಾಂತರ ಅಗತ್ಯವಾಗಿ ಮಾಡಿ, ಬೇರೆ ಧರ್ಮದವರನ್ನು ತುಛ್ಛವಾಗಿ ಕಾಣಿ ಎಂದು ಅವರ ಪ್ರವಾದಿಗಳ ವಾಣಿಯನ್ನು ಅವರ ಧರ್ಮ ಗ್ರಂಥದಿಂದಲೇ ಹುಡುಕಿ ತೆಗೆದಿದ್ದಾರೆ.
೭. ಅಸ್ಪೃಶ್ಯತೆ ವೈದಿಕ ಧರ್ಮಕ್ಕೆ ಅಂಟಿದ ಕಳಂಕ, ಅದನ್ನು ಹೋಗಲಾಡಿಸಬೇಕು. ದಲಿತರಿಗೂ ಸಮಾನ ಸ್ಥಾನಮಾನ ದೊರಕುವಂತಾಗಬೇಕು.
ಹೀಗೆ ಹಲವು ಉದಾಹರಣೆಗಳನ್ನು ಸಾಕ್ಷಿ ಸಮೇತ ಪ್ರಸ್ತುತ ಪಡಿಸಿದ್ದಾರೆ.
ಇದಕ್ಕೆ ಪ್ರತಿಯಾಗಿ ಮತಾಂತರದ ಪರವಾಗಿ ಮಾತನಾಡುವವರು ಬ್ರಾಹ್ಮಣರನ್ನು ತೆಗಳುವುದರಿಂದ, ದಲಿತರ ಶೋಷಣೆ, ಸಂವಿಧಾನದಲ್ಲಿ ದಲಿತರ ಸ್ಥಾನಮಾನ ಇದರ ಬಗ್ಗೆ ಬರೆಯುತ್ತಾರೆ ಹೊರತು ಮತಾಂತರ ಏಕೆ ಒಳಿತು ಎಂದು ಹೇಳುವುದೇ ಇಲ್ಲ. ಎಲ್ಲರು ಭೈರಪ್ಪನವರನ್ನು ತೆಗಳುವುದರಲ್ಲೇ ಕಾರ್ಯಪ್ರವೃತ್ತರಾಗುತ್ತಾರೆ. ರವಿ ಬೆಳೆಗೆರೆ ಸಾಹೇಬರು ಅವರನ್ನು 'Paranoid' ಅಂತ ಕರೀತಾರೆ. ಮುತ್ತ್ಸದ್ಧಿ ಅಲ್ಲ ಎಂದು ಹೇಳುತ್ತಾರೆ. ಗೋವಿಂದರಾಯರು ಸ್ಟಾಲಿನ್ ನ 'ಮಾಹಿತಿ ಯಾವತ್ತು ಸತ್ಯವಾಗುವುದಿಲ್ಲ' ಎಂಬ ಸಿದ್ಧಾಂತವನ್ನು ಒಂದು ಪತ್ರದಲ್ಲಿ ಬರೆಯುತ್ತಾರೆ. ಇವೆಲ್ಲದಕ್ಕೂ ಉಪಸಂಹಾರದಲ್ಲಿ ಉತ್ತರಿಸಿದ್ದಾರೆ ಭೈರಪ್ಪನವರು. ಮತಾಂತರದ ಪರವಾಗಿ ಮಾತನಾಡಿದ ಕೆಲವು ಅಂಶಗಳು.
೧. ದಲಿತರು ಸಾವಿರಾರು ವರ್ಷಗಳಿಂದ ಶೋಷಣೆಗೆ ಒಳಗಾಗಿದ್ದಾರೆ. ಈಗಲೂ ಆ ಶೋಷಣೆ ಮುಂದುವರೆದಿದೆ. ಇದನ್ನು ತಡೆಯಲು ವೈದಿಕ ಧರ್ಮದಲ್ಲಿ ಯಾವುದೇ ಸೂತ್ರವಿಲ್ಲ. ದಲಿತರು ದಲಿತರಾಗಿಯೇ ಉಳಿಯಬೇಕು ಎನ್ನುವುದೇ ಅದರ ಪದ್ಧತಿ. ಇದರಿಂದ ದಲಿತರಿಗೆ ಇರುವುದೊಂದೇ ಪರಿಹಾರ, ಅದುವೇ ಮತಾಂತರ.
೨. ವೈದಿಕ ಧರ್ಮವೆಂಬುದು ಬರೀ ಬ್ರಾಹ್ಮಣರ ಏಳಿಗೆಗೆ ಮೀಸಲು. ಬೇರೆ ವರ್ಣಗಳು ಜೀವಿಸಲು ಸಾಧ್ಯವೇ ಇಲ್ಲ.
ಇದನ್ನು ಪುಷ್ಟೀಕರಿಸಲು ಅವರು ಮನುಸ್ಮೃತಿಯಿಂದ ಕೆಲವು ಸೂಕ್ತಗಳನ್ನು ಉದ್ದರಿಸಿದ್ದಾರೆ. ಮನುಸ್ಮೃತಿ ಒಂದೇ ವೈದಿಕ ಧರ್ಮದ ಕೀಳರಿಮೆ ಸಾರಲು ಸಾಕು.
೪. ಸೆಮೆಟಿಕ್ ಧರ್ಮದ ಹಲವರು ಭಾರತದ ಏಳಿಗೆಗೆ ದುಡಿದಿದ್ದಾರೆ. ಫಾ || ರೆ || ಫೆರ್ಡಿನಂಡ ಕಿಟ್ಟೆಲ್ ಅವರು ಕನ್ನಡಕ್ಕೆ ಅದರದೇ ಆದ ಶಬ್ದಕೋಶವನ್ನು ಒದಗಿಸಿದ್ದಾರೆ, ಮದರ್ ತೆರೆಸ ದೀನ ದಲಿತರ ಏಳಿಗೆಗಾಗಿ ದುಡಿದಿದ್ದಾರೆ, ಹೀಗೆ ಹಲವು ಉದಾಹರಣೆಗಳನ್ನೊದಗಿಸುತ್ತಾರೆ.
೫. ಈ ಮೇಲೆ ಮತಾಂತರದ ವಿರುದ್ದವಾಗಿ ಹೇಳಿದ ೫ನೆ ಅಂಶವನ್ನು ಪ್ರಶ್ನಿಸುತ್ತ, ಈ ಬಣದವರು ನೀವು ನಿಮ್ಮ ಮಠದಲ್ಲಿ ದಲಿತರನ್ನು ಗರ್ಭಗುಡಿಯ ಒಳಗೆ ಬಿಡುವಿರಾ? ದಲಿತರನ್ನು ಮಠಾಧೀಶರನ್ನಾಗಿ ಮಾಡುವಿರಾ? ಎಂದು ಸವಾಲೆಸೆಯುತ್ತಾರೆ.
ಈಗ ನಾನು ನನ್ನ ವಾದಕ್ಕೆ ಬರುತ್ತೇನೆ. ವರ್ಣಾಶ್ರಮ ಧರ್ಮ ಹೇಗೆ ಹುಟ್ಟಿರಬಹುದು? ಇದನ್ನು ಒಂದು ಸಣ್ಣ ಕಥೆಯಿಂದ ಪ್ರಾರಂಭಿಸಬೇಕೆಂದು ನನ್ನ ಅಭಿಲಾಷೆ. ಈ ರೀತಿ ಹಲವರು ಆಲೋಚಿಸಿರಬಹುದು. ನನ್ನ ಯೋಚನಾಕ್ರಮ ಈ ನಿಟ್ಟಿನಲ್ಲಿ ಇದೆ ಎಂದು ಮಾತ್ರ ಇಲ್ಲಿ ಹೇಳುತ್ತೇನೆ.
ಬಹಳ ಹಿಂದೆ, ನಮ್ಮ ಕಥೆಗನುಗುಣವಾಗಿ, ವೈದಿಕ ಧರ್ಮದ ಆರಂಭದಲ್ಲಿ ಎಂದು ಇಟ್ಟುಕೊಳ್ಳೋಣ, ನಾಲ್ಕು ಮಂದಿ ತಮ್ಮ ಸಂಸಾರ ಸಮೇತ ನಮ್ಮ ಭರತಖಂಡದಲ್ಲಿ ಇದ್ದರು. ನಾಲ್ಕು ಸಾಮನ್ಯ ಕುಟುಂಬ. ಒಂದು ಕುಟುಂಬದಲ್ಲಿ ಗಂಡ, ಹೆಂಡತಿ, ಇಬ್ಬರು ಮಕ್ಕಳು (ಒಂದು ಗಂಡು, ಇನ್ನೊಂದು ಹೆಣ್ಣು ಎಂದಿಟ್ಟುಕೊಳ್ಳೋಣ). ಈ ನಾಲ್ಕು ಕುಟುಂಬಗಳು ತಮ್ಮ ಬಾಳುವೆ ನಡೆಸಲು ಇಲ್ಲಿ ತಮ್ಮ ತಮ್ಮ ಕೆಲಸಗಳನ್ನು ತಾವೇ ಮಾಡಿಕೊಂಡಿರುತ್ತಾರೆ. ಹೀಗಿರುವ ಸಂದರ್ಭದಲ್ಲಿ, ಅವರಿಗೆ ಒಂದು ತೊಡಕಾಗುತ್ತದೆ. ಎಲ್ಲರು, ಎಲ್ಲ ಕೆಲಸಗಳನ್ನು ಮಾಡುತ್ತಿರುವುದರಿಂದ ಎಲ್ಲೋ ಸ್ವಲ್ಪ ಅಸಮಾಧಾನ. ಹೆಚ್ಚು ಹೊತ್ತು ಈ ಎಲ್ಲ ಕೆಲಸಗಳನ್ನು ಮಾಡುವುದರಲ್ಲೇ ಕಾಲ ಕಳೆದು ಹೋಗುತ್ತಿದೆ. ಬೇರೆ ವಿಷಯಗಳ ಕಡೆಗೆ ಗಮನ ಕೊಡಲು ಆಗುತ್ತಿಲ್ಲ. ಯಾವುದರಲ್ಲೂ ವೃದ್ಧಿಯಿಲ್ಲ. ಜೀವನ ಒಂದು ಥರ ನೀರಸವಾಗುತ್ತದೆ. ಈ ರೀತಿ ಆದಾಗ,ಇವರಲ್ಲಿ ಒಬ್ಬ ಒಂದು ಉಪಾಯ ಸೂಚಿಸುತ್ತಾನೆ. ನಾವ್ಯಾಕೆ ಈ ಕೆಲಸಗಳನ್ನ ಹಂಚಿಕೊಬಾರದು? ನಾವೆಲ್ಲರೂ ಎಲ್ಲ ಕೆಲಸವನ್ನು ಮಾಡುವುದರಿಂದ ಯಾವುದೇ ಒಂದು ಕೆಲಸದ ಮೇಲೆ ಶ್ರದ್ಧೆಯಿಂದ ಕೆಲಸ ಮಾಡಲಾಗುತ್ತಿಲ್ಲ. ಈ ಕೆಲಸವಾಗಿಲ್ಲವೆಂದು ಆ ಕೆಲಸವನ್ನು, ಆ ಕೆಲಸವಾಗಿಲ್ಲವೆಂದು ಮತ್ತೊಂದು ಕೆಲಸವನ್ನು ಮಾಡುತ್ತಾ, ಕೊನೆಗೆ ಯಾವುದೇ ಕೆಲಸವನ್ನು ಪೂರ್ಣ ಮಾಡಲಾಗದೆ ಒದ್ದಾಡುತ್ತಿದ್ದೀವಿ. ನಮ್ಮಲ್ಲಿ ಅನೇಕ ಕಾರ್ಯವನ್ನು ಎಲ್ಲರೂ ಮಾಡುತ್ತವೆ. ನಾವೇಕೆ ಒಂದು ಕಾರ್ಯವನ್ನು ಒಬ್ಬರು ವಹಿಸಿ, ಅವರು ಆ ಕಾರ್ಯವನ್ನು ಒಪ್ಪಿಕೊಂಡು ಪೂರ್ಣ ಶ್ರದ್ಧೆಯಿಂದ ಆ ಕೆಲಸ ಮಾಡುತ್ತಾ ಅದರಲ್ಲಿ ಪರಿಣತಿ ಹೊಂದಬಾರದು? ಸರಿ ಎಂದು ಎಲ್ಲರೂ ಒಪ್ಪಿಕೊಂಡು ಕೆಲಸಗಳನ್ನೆಲ್ಲ ವಿಂಗಡಿಸಿ, ಆ ಕೆಲಸಗಳಲ್ಲಿ ಇರುವವರಲ್ಲಿ ಹೆಚ್ಚು ಪರಿಣತರನ್ನು ಆಯಾ ಕೆಲಸಗಳಿಗೆ ಹಚ್ಚಿದರು. (ಇಲ್ಲಿ ಕೆಲಸಗಳೆಂದರೆ, ಒಂದೇ ವರ್ಗಕ್ಕೆ ಸೇರಿದ ಕೆಲಸಗಳು, ಉದಾ:- ಕಸ ಗುಡಿಸುವುದು, ಮನೆ ಸಾರಿಸುವುದು, ಎಲ್ಲವನ್ನು ಚೊಕ್ಕವಾಟ್ಟುಕೊಳ್ಳುವುದು, ಇವೆಲ್ಲವೂ ಒಂದೇ ವರ್ಗಕ್ಕೆ ಸೇರಲ್ಪಡುತ್ತವೆ, ಹಾಗೆಯೇ ಇತರ ಕೆಲಸಗಳನ್ನು ವರ್ಗಗಳಾಗಿ ವಿಂಗಡಿಸಬಹುದು)
ವರ್ಣಾಶ್ರಮ ಧರ್ಮಕ್ಕೆ ಇದೇ ಸ್ಪೂರ್ತಿಯಿರಬಹುದು. ಇಲ್ಲಿ ಕೆಲಸ ಮಾಡುವುದಷ್ಟೇ ಕಾರಣ ಹೊರತು, ಜನರಲ್ಲಿ ಭೇಧ ಕಾಣುವುದಲ್ಲ. ನೀವು ವೇದಗಳ ಕಾಲದಲ್ಲಿ ನೋಡಿದರೆ ನಿಮಗೆ ಈ ಜಾತಿ ಮತ್ಸರಗಳು ಕಾಣಸಿಗುವುದಿಲ್ಲ. ರಾಮಾಯಣ ಕಾಲದಲ್ಲಿ ಕೂಡ ಅಷ್ಟಾಗಿ ಕಾಣಿಸುವುದಿಲ್ಲ. ರಾಮ ಅಗಸನ ಮಾತಿಗೆ ಅಷ್ಟು ಬೆಲೆ ಕೊಟ್ಟಿದ್ದು ಒಂದು ನಿದರ್ಶನ.
ಮಹಾಭಾರತದಲ್ಲಿ ಜಾತಿ ತಾರತಮ್ಯ ಕಾಣಸಿಗುತ್ತದೆ. ಕರ್ಣನಿಗೆ ಸೂತಪುತ್ರ ಎಂದು ಹೀಗಳೆಯುವುದು ಒಂದು ಉದಾಹರಣೆ.
ಈ ರೀತಿ ತಾರತಮ್ಯಕ್ಕೆ ಏನು ಎಡೆಮಾಡಿಕೊಟ್ಟಿರಬಹುದು? ಮುಂದಿನ ಅಂಕಣದಲ್ಲಿ ನೋಡೋಣ.
Subscribe to:
Post Comments (Atom)
No comments:
Post a Comment