Wednesday, January 13, 2010

ಕೃಷ್ಣದೇವರಾಯನ ೫೦೦ನೇ ಪಟ್ಟಾಭಿಷೇಕ ಮಹೋತ್ಸವ, ಒಂದು ವರದಿ.

ನಿನ್ನೆ ನಡೆದ ಕೃಷ್ಣದೇವರಾಯನ ಪಟ್ಟಾಭಿಷೇಕ ಮಹೋತ್ಸವದ ೫೦೦ನೇ ವರ್ಷಾಚರಣೆ ಸಂಭ್ರಮವನ್ನು ನೋಡಲು ನಾನು ನಿನ್ನೆಯ ದಿನ ಕಂಠೀರವ ಹೊರಾಂಗಣ ಮೈದಾನಕ್ಕೆ ಹೊರಟೆ. ಇದೇ ಸಂಸರ್ಭದಲ್ಲಿ ವಿವೇಕಾನಂದ ಜಯಂತಿಯೂ ಬಂದದ್ದರಿಂದ ಕಾರ್ಯಕ್ರಮಕ್ಕೆ ಇನ್ನೂ ಮೆರಗು ಬಂದಿತ್ತು.

೪ ಗಂಟೆಗೆ ಪ್ರಾರಂಭವಾಗಬೇಕಿದ್ದ ಕಾರ್ಯಕ್ರಮವು ೪:೧೦ಕ್ಕೆ ಆರಂಭವಾಯಿತು. ಅಭ್ಯಾಗತರನ್ನು ಕಾಯುವಲ್ಲಿ ಆ ಹತ್ತು ನಿಮಿಷಗಳು ಕಳೆದವು. ಅವರು ಬರದಿದ್ದನ್ನು ನೋಡಿ ಅಲ್ಲಿಯವರೆಗೂ ನೆರೆದಿರುವ ಸಮೂಹಕ್ಕೆ ಗಾಯನವಾದರೂ ಮನರಂಜನೆಯನ್ನು ನೀಡಲಿ ಎಂಬುದು ಅವರ ಆಶಯವಾಗಿತ್ತು.

ಮನೆಯಿಂದ ಹೊರಡುವ ಮುನ್ನ ಅಭ್ಯಾಗತರ ಪಟ್ಟಿಯನ್ನು ಓದಿದ್ದೆ.
೧. ಕರ್ನಾಟಕದ ಮುಖ್ಯಮಂತ್ರಿ ಶ್ರೀ|| ಬಿ. ಎಸ್. ಯಡಿಯೂರಪ್ಪ.
೨. ಆರ್ಟ್ ಆಫ್ ಲಿವಿಂಗ್ ನ ಸಂಸ್ಥಾಪಕರಾದ ಪೂಜ್ಯ ಶ್ರೀ|| ಶ್ರೀ|| ರವಿಶಂಕರ್ ಗುರೂಜಿ
೩. ಸ್ಥಳೀಯ ಶಾಸಕ ಶ್ರೀ|| ರೋಶನ್ ಬೇಗ್.
೪. ಉನ್ನತ ಶಿಕ್ಷಣ ಮಂತ್ರಿ ಶ್ರೀ|| ಅರವಿಂದ ಲಿಂಬಾವಳಿ.
೫. ಪ್ರವಾಸೋದ್ಯಮ ಹಾಗು ಕನ್ನಡ ಏಳಿಗೆ ಮಂತ್ರಿ ಶ್ರೀ|| ಜನಾರ್ಧನ ರೆಡ್ಡಿ.
೬. ಕೇಂದ್ರ ಉನ್ನತ ಶಿಕ್ಷಣ ಇಲಾಖೆಯ ವತಿಯಿಂದ ಆಗಮಿಸಿದ್ದ ಶ್ರೀ|| ಕೆ. ಏನ್. ರಘುನಂದನ್

ಇನ್ನೂ ಹಲವರು.

೩:೫೦ಕ್ಕೆ ಕಾರ್ಪೋರೇಶನ್ ತಲುಪಿದ ನಾನು ದೊಡ್ಡ ಹೆಜ್ಜೆ ಹಾಕುತ್ತ ಸರಿಯಾಗಿ ೪ ಗಂಟೆಗೆ ಸಭಾಂಗಣ ಸೇರಿದೆ. ಅಲ್ಲೇ ನೆರೆದಿದ್ದ ಒಬ್ಬ ಸಂಚಾರಿ ಆರಕ್ಷಕರನ್ನು ಕುರಿತು ಒಳಗೆ ಹೋಗಲು ದಾರಿ ಯಾವುದೆಂದು ಕೇಳಿ ತಿಳಿದು ಹೊರಟೆ. ಅದು ವಿದ್ಯಾರ್ಥಿಗಳ ಗುಂಪು. ಅವರಲ್ಲಿಯೇ ನಾನು ಒಬ್ಬನಾಗಿ ಕುಳಿತೆ.

ಸಭಾಂಗಣಕ್ಕೆ ಆಗಮಿಸಿದ ವಿದ್ಯಾರ್ಥಿಗಳನೇಕರಲ್ಲಿ ಸಭ್ಯತೆ ಕಾಣಿಸಲಿಲ್ಲ. ಅಸಭ್ಯವಾಗಿ ಶಿಳ್ಳೆ ಹೊಡೆಯುತ್ತ ವೇದಿಕೆಯ ಮೇಲೆ ನೆರೆದಿರುವ ಸಂಗೀತಗಾರರನ್ನು ಹೀಯಾಳಿಸುತ್ತ ಕಾಲ ಕಳೆಯುತ್ತಿದ್ದರು. ಮೇಲಿನ ಅಂಕಣದಿಂದ ಕಾಗದದ ಕ್ಷಿಪಣಿಗಳು, ಉಂಡೆಗಳು ಎಸೆಯಲ್ಪಟ್ಟವು. ನನ್ನ ಪಕ್ಕದಲ್ಲೇ ಓರ್ವ ಆರಕ್ಷಕ ಬಂದು ಕುಳಿತರೂ ಇವು ನಿಲ್ಲಲಿಲ್ಲ.

ಎಂ. ಡಿ. ಪಲ್ಲವಿಯವರ ಗಾಯನ ಶುರುವಾಯಿತು. ಮೊದಲಿಗೆ ಡಿ. ಎಸ್. ಕರ್ಕಿಯವರ 'ಹಚ್ಚೇವು ಕನ್ನಡದ ದೀಪ' ಹಾಡಲು ಕೆಲವು ವಿದ್ಯಾರ್ಥಿಗಳು ಚಪ್ಪಾಳೆಗಳ ಸುರಿಮಳೆಗೈದರು. ನಂತರ ರಾಷ್ಟ್ರಕವಿ ಕುವೆಂಪು ವಿರಚಿತ 'ಎಲ್ಲಾದರೂ ಇರು, ಎಂತಾದರು ಇರು' ಹಾಡು ಹಾಡುವಾಗಲಂತೂ ಜನ ಕೇಕೆ ಹಾಕಲು ಮುಂದಾದರು. ಇದರ ಜೊತೆ ಹೊರವಲಯದಲ್ಲಿ ಡೊಳ್ಳು ಕುಣಿತವೂ ಸಾಗುತ್ತಲಿತ್ತು.

ಇಷ್ಟರಲ್ಲಿಯೇ ಬಲಿಷ್ಠ ಸುತ್ತುಗಾವಲಿನೊಂದಿಗೆ ಮುಖ್ಯ ಮಂತ್ರಿಗಳ ಆಗಮನ. ಹಾಡಿನ ನಂತರ ವೇದಿಕೆಯನ್ನು ಭಾಷಣಗಳಿಗೆ ಅನುವು ಮಾಡಿಕೊಡಲಾಯಿತು. ನಿರೂಪಣೆಯ ಕಾರ್ಯವನ್ನು ಹೊತ್ತವರು ಕನ್ನಡ ಚಿತ್ರರಂಗದ ಖ್ಯಾತ ತಾರೆ ವಿನಯಾ ಪ್ರಸಾದ್ ರವರು. ಈ ಕಾರ್ಯಕ್ರಮಕ್ಕೆ ಬೆನ್ನೆಲುಬಾದವರು ಸಂಭ್ರಮ ಸುರಭ ಸಂಸ್ಥೆಯ ಸಂಜೀವ್ ಕುಲಕರ್ಣಿಯವರು.

ಅಭ್ಯಾಗತರಲ್ಲಿ ಶ್ರೀ|| ರವಿಶಂಕರರನ್ನು ಹೊರತು ಪಡಿಸಿ ಎಲ್ಲರೂ ಇದ್ದರು. ರಾಜಾಜಿನಗರ ಶಾಸಕರಾದ ನೆ. ಲ. ನರೇಂದ್ರ ಬಾಬುರವರು ಜೊತೆಗೊಂಡರು. ಮೊದಲಿಗೆ ಇವರೆಲ್ಲ ದೀಪ ಬೆಳಗಿಸಿದರು. ಇದಾದ ನಂತರ ನಾಡಗೀತೆ ಹಾಡಲನುವಾದರು. ಈ ಬಡ ವಿದ್ಯಾರ್ಥಿಗಳಿಗೆ ನಾಡಗೀತೆಯ ಸಂದರ್ಭದಲ್ಲಿ ನಿಂತುಕೊಳ್ಳಬೇಕೆನ್ನುವ ಕನಿಷ್ಠ ಸೌಜನ್ಯವನ್ನೂ ಅವರ ಶಿಕ್ಷಕರು ಹೇಳಿಕೊಟ್ಟಿಲ್ಲವೇ? ನಾನೊಬ್ಬನೇ ನಿಂತಾಗ ನನಗೊಮ್ಮೆ ಭ್ರಾಂತಿಯೆದುರಾಯಿತು. ನಂತರ ಧ್ವನಿವರ್ಧಕದಲ್ಲಿ ವಿನಯಾ ಪ್ರಸಾದರು ಹೇಳಿದ ನಂತರವಷ್ಟೇ ಅವರು ಎದ್ದು ನಿಂತದ್ದು. ರಾಜ್ಯ ಸರ್ಕಾರದ ನಾಡಗೀತೆಯಲ್ಲಿ ಕೆಲವು ಹೊಸ ಪದಗಳನ್ನು ಸೇರಿಸಿರುವುದು ನನಗೆ ಕಂಡುಬಂದಿತು.

ನಂತರ ಮುಖ್ಯಮಂತ್ರಿಗಳು ರಾಜ ಶೈಲಿಯಲ್ಲಿ ರೇಶಿಮೆ ವಸ್ತ್ರದಲ್ಲಿ ಮುದ್ರಿಸಿದ ಕೃಷ್ಣದೇವರಾಯರ ಪಟ್ಟಾಭಿಷೇಕ ಮಹೋತ್ಸವದ ಒಕ್ಕಣೆಯನ್ನು ನುಡಿದರು.

ನಂತರ ಮಾತನಾಡಿದ ಕೆ. ಎನ್. ರಘುನಂದನರವರು ಕೃಷ್ಣದೇವರಾಯರ ಬಗ್ಗೆ ಹಾಗು ವಿವೇಕಾನಂದರ ಬಗ್ಗೆ ಸವಿವರವಾಗಿ ಎಲ್ಲರಿಗೂ ತಿಳಿಯುವಂತೆ ಗುಣಗಾನ ಮಾಡಿದರು. ಆದರೆ ನಮ್ಮ ಸುತ್ತಮುತ್ತಲಿದ್ದ ಯಾವುದೇ ವಿದ್ಯಾರ್ಥಿಗಳು ಅದನ್ನು ಕಿವಿಯ ಮೇಲೆ ಹಾಕಿಕೊಂಡರೆಂದು ನನಗನ್ನಿಸಲಿಲ್ಲ. ಎಲ್ಲರೂ ಅವರವರಲ್ಲೇ ಗುಸು ಗುಸು ಪಿಸ ಪಿಸ ಮುಂದುವರೆಸಿದ್ದರು. ನನ್ನ ಹಿಂದೆಯೇ ಕುಳಿತ ಅವರ ಶಿಕ್ಷಕರೊಬ್ಬರು ಕಾಗದದ ಕ್ಷಿಪಣಿಗಳನ್ನು ತಯಾರು ಮಾಡಿ ಗುಂಪಿನತ್ತ, ಕೆಲವೊಮ್ಮೆ ಆರಕ್ಷಕರತ್ತ ತೂರುತಿದ್ದರು. ಇನ್ನು ವಿದ್ಯಾರ್ಥಿಗಳನ್ನು ಕೇಳಬೇಕೆ? ಅವರು ಇವರನ್ನು ಹುರಿದುಂಬಿಸುತ್ತಿದ್ದರು.

ಇದೇ ವೇಳೆ ಒಂದು ಸುಸಂಧರ್ಭ ಒದಗಿ ಬಂತು. ನಮ್ಮೊಟ್ಟಿಗೆ ಕುಳಿತಿದ್ದ ಸುಮಾರು ಐವತ್ತು ಮೀರಿದ ದಂಪತಿಗಳಿಬ್ಬರು ಮೈದಾನಕ್ಕೆ ಅಂಟಿದಂತಿದ್ದ ಬಾಗಿಲ ಬಳಿ ಇರುವ ಆರಕ್ಷಕರನ್ನು ಕೇಳಿ ಮೈದಾನಕ್ಕೆ ಹೋಗಬಹುದೇ ಎಂದು ಕೇಳಿದರು. ಅವರು ಅವರದೇ ತಲೆನೋವಿನಲ್ಲಿ ಹೋಗಿ, ಪರವಾಗಿಲ್ಲವೆಂದರು. ಆನೆಯ ಜೊತೆ ಬಾಲದಂತೆ ನಾನು ಅವರೊಂದಿಗೆ ನಡೆದುಬಿಟ್ಟೆನು.

ನನ್ನ ಸೌಭಾಗ್ಯಕ್ಕೆ ನನಗೆ ಪತ್ರಕರ್ತರ ಹಿಂಬದಿಯಲ್ಲಿಯೇ ಆಸನ ದೊರೆಯಿತು. ವೇದಿಕೆಯ ಮೇಲೆ ನೆರೆದಿರುವರೆಲ್ಲರೂ ಇನ್ನೂ ಸ್ಪಷ್ಟವಾಗಿ ಕಾಣಿಸತೊಡಗಿದರು.

ರಘುನಂದನರು ಸುಮಾರು ೪೦ ನಿಮಿಷಕ್ಕೂ ಹೆಚ್ಚು ತಮ್ಮ ಅಮೋಘ ಭಾಷಣವನ್ನು ಮಾಡಿದರು. ಬ್ರಹ್ಮ ತೇಜಸ್ಸನ್ನು ವಿವೇಕಾನಂದರು ಹಾಗು ಕ್ಷಾತ್ರ ತೇಜಸ್ಸನ್ನು ಕೃಷ್ಣದೇವರಾಯ ಪ್ರತಿನಿಧಿಸುವಲ್ಲಿ ಯಾವುದೇ ಸಂಶಯವಿಲ್ಲ. ಇಂದಿನ ಯುವ ಪೀಳಿಗೆಗೆ ಅದು ಮಾರ್ಗದರ್ಶಿಯಾಗಲಿ ಎಂದು ಹಾರೈಸಿದರು. ವಿಜಯನಗರವನ್ನು ವೀಕ್ಷಿಸಲು ಬಂದ ಪರದೇಶದ ರಾಯಭಾರಿಗಳು ಅದನ್ನು ಬಣ್ಣಿಸಿದ ರೀತಿಯನ್ನು ವಿವರಿಸಿದರು.

ನಂತರ ಉನ್ನತ ಶಿಕ್ಷಣ ಮಂತ್ರಿಗಳು, ಅರವಿಂದ ಲಿಂಬಾವಳಿ ಅವರು ಹಂಪೆಯಲ್ಲಿ ಕೃಷ್ಣದೇವರಾಯನ ಹೆಸರಿನಲ್ಲಿ ಮಾಡಬೇಕೆಂದಿರುವ ಮ್ಯೂಸಿಯುಂಗಾಗಿ ವಿಶ್ವವಿದ್ಯಾಲಯದ ವತಿಯಿಂದ ಯಾವುದೇ ಸಹಾಯವಾಗಲಿ ಮಾಡಲು ತಯಾರಿದ್ದೇವೆ ಎಂದು ಘೋಷಿಸಿದರು.

ಜನಾರ್ಧನ ರೆಡ್ಡಿಗಳು ನಂತರ ಮಾತನಾಡಿ ಕೃಷ್ಣದೇವರಾಯನ ಕಾಲದ ವಿಜಯನಗರ, ಇಂದು ಮರುಕಳಿಸುವ ದಿನ ಹೆಚ್ಚೇನೂ ದೂರವಿಲ್ಲ. ರಾಜ್ಯದಲ್ಲಿ ವ್ಯವಹರಿಸಲು ದೊಡ್ಡ ದೊಡ್ಡ ಕುಳರಾದ ಲಕ್ಷ್ಮಿ ಮಿತ್ತಲ್, ಜಿಂದಾಲ್, ಪೆಸ್ಕೋ(??) ಕಂಪನಿಗಳು ಮುಂದಾಗುತ್ತಿರುವಲ್ಲಿ ನಮಗೆಲ್ಲ ಸಂತಸ ತಂದಿದೆ ಎಂದು ಕೊಂಡಾಡಿದರು.

ಈ ಮೂವರಲ್ಲಿ ಕಂಡ ಸಮಾನಂಶವೆಂದರೆ, ಅವರು ಮುಖ್ಯ ಮಂತ್ರಿಗಳನ್ನು ಸಂಬೋಧಿಸುತ್ತಿದ್ದ ಶೈಲಿ. ನಾಟಕೀಯವೆನ್ನುವಂತೆ ಯಡಿಯೂರಪ್ಪನವರನ್ನು ಎರಡು ಮೂರು ಬಿರುದುಗಳಿಂದ ಮೊದಲು ಕರೆದಿದ್ದು ನೋಡಿ ನನಗಂತೂ ನಗು ಬಂತು.

ಮುಖ್ಯ ಮಂತ್ರಿಗಳು ಈಗ ಮಾತನಾಡಿದರು. ವಿದ್ಯಾರ್ಥಿಗಳೆಲ್ಲರೂ ತಮ್ಮ ವಿದ್ಯಾರ್ಥಿ ದೆಸೆಯಲ್ಲಿರುವಾಗ ಒಮ್ಮೆಯಾದರೂ ಹಂಪಿಯನ್ನು ನೋಡಲು ಬರಬೇಕು. ಅದಕ್ಕೆ ನಮ್ಮ ಸರಕಾರ ಶ್ರಮವಹಿಸಿ ಕೆಲಸ ಮಾಡುತ್ತದೆ. ವಿಜಯನಗರದ ಹಿರಿಮೆ ಗರಿಮೆಯ ಬಗ್ಗೆ ಮಾತನಾಡಿದ ಅವರು, ಅದೇ ಸುವರ್ಣ ಯುಗ ಇನ್ನೊಮ್ಮೆ ಮರುಕಳಿಸಲಿದೆ ಎಂದು ಹೇಳಿದರು. ಆ ನಿಟ್ಟಿನಲ್ಲಿ ನಮ್ಮ ಸರಕಾರ, ತನ್ನೆಲ್ಲ ಮಂತ್ರಿವರ್ಯರ ಜೊತೆ ತೀವ್ರ ಗತಿಯಲ್ಲಿ ಕಾರ್ಯವಹಿಸಲಿದೆಯೆಂದರು.

ಆನಂತರ ಮಾತನಾಡಿದ ಶಿವಾಜಿನಗರದ ಶಾಸಕ ರೋಶನ್ ಬೇಗ್ ರವರು ತಮ್ಮ ಅಜ್ಞಾನವನ್ನು ಜಗವೆಲ್ಲ ಪಸರಿಸಿದರು. ಬಹುಷಃ ಅವರು ಕನ್ನಡ ಸಿನೆಮಗಳನ್ನೇ ನೋಡಿಲ್ಲವೆನ್ನಿಸುತ್ತದೆ. ಎಲ್ಲರಿಗೂ ಶುಭ ಕೋರಿದ ಅವರು ಹೇಳಿದ್ದು "ನಾನು ನಿಮ್ಮ ಟೈಮ್ ಅನ್ನು ಹೆಚ್ಚಿಗೆ ವ್ಯರ್ಥ ಮಾಡುವುದಿಲ್ಲ. ಮುಖ್ಯಮಂತ್ರಿಗಳಿಗೆ ನನ್ನ ಒಂದೇ ಸಲಹೆ ಏನೆಂದರೆ 'ನಮ್ಮ ಸಂಜಯ್ ಖಾನ್', ಏನು 'ಟಿಪ್ಪು ಸುಲ್ತಾನ್' ರ ಬಗ್ಗೆ ಒಂದು ಸೀರಿಯಲ್ ಮಾಡಿದರು, ಹಾಗೆ ಕೃಷ್ಣದೇವರಾಯರ ಕುರಿತು ಒಂದು ಸಿನಿಮಾನೋ ಸೀರಿಯಲನ್ನೋ ಮಾಡಬೇಕು" ಎಂದು ವಿನಂತಿಸಿದರು. ಡಾ|| ರಾಜಕುಮಾರ್ ಅವರು ೭೦ ರ ದಶಕದಲ್ಲಿ ಮಾಡಿದ ಕೃಷ್ಣದೇವರಾಯ ಸಿನಿಮಾದ ಬಗ್ಗೆ ಇವರಿಗೆ ತಿಳಿದೇ ಇಲ್ಲವೆನಿಸುತ್ತದೆ. ಇವರ ಕನ್ನಡವೂ ಅಷ್ಟೇ. ಎಲ್ಲಾದ್ರೂ ಉನ್ನತ ಶಿಕ್ಷಣ ಮಂತ್ರಿಗಳು, ಪ್ರವಾಸೋದ್ಯಮ ಸಚಿವರೂ ಎನ್ನುತ್ತಿದ್ದಾರೆ, ಇವರು Higher Education Minister ಮತ್ತೆ Tourism Minister ಎಂದೇ ಸಂಬೋಧಿಸುತ್ತಿದ್ದರು.

ಇವರೆಲ್ಲರ ಭಾಷಣದ ನಂತರ ಚಿಕ್ಕದಾಗಿ ವಂದನಾರ್ಪಣೆಯನ್ನು ಮಾಡಿ, ಸಾಂಸ್ಕೃತಿಕ ಕಾರ್ಯಕ್ರಮಗಳು ಮುಂದುವರಿದವು. ಮೊದಲಿಗೆ ಬಿ. ಜಯಶ್ರಿಯವರಿಂದ ರಂಗಗೀತೆಗಳು. ಮೊದಲ ಬಾರಿಗೆ ಅಂತಹ ದೊಡ್ಡ ಆವರಣದಲ್ಲಿ ರಂಗಗೀತೆಗಳನ್ನು ಅವರ ಉಚ್ಚ ಕಂಠದಿಂದ ಕೇಳಲು ಮನ ಪುಳಕವಾಯಿತು. ಅವರ ಉತ್ಸಾಹ ನಮ್ಮಲ್ಲಿಯೂ ಮೂಡುವಂತೆ ಅವರ ಬಳಗದೆಲ್ಲರೂ ಹಾಡಿದರು. ಒಟ್ಟು ಮೂರು ಗೀತೆಗಳನ್ನು ಅವರು ಹಾಡಿದರು.

೧. ಯಾವುದೇ ನಾಟಕದ ಆದಿಯಲ್ಲಿ ಹಾಡುವ 'ಗಜವದನಾ ಹೇರಂಬ, ವಿಜಯಧ್ವಜ ಶತರವಿಪ್ರತಿಭ'
೨. ಹೆಚ್. ಎಸ್. ವೆಂಕಟೇಶ ಮೂರ್ತಿ ವಿರಚಿತ 'ಈ ಯಮ್ಮ ನೋಡೇ ನಿಂತ ಭಂಗಿ'
೩. ನಾಗಮಂಡಲ ನಾಟಕದ ಸಿ. ಅಶ್ವಥ್ ಸಂಗೀತದ 'ಹಿಂಗಿದ್ದಳೊಬ್ಬಳು ಹುಡುಗಿ'
೪. 'ಸಾವಿರದ ಶರಣವ್ವ ಕರಿಮಾಯಿ ತಾಯಿ' (ನಾಟಕ, ರಚನೆ, ಸಂಗೀತ ತಿಳಿದಿಲ್ಲ, ಕ್ಷಮಿಸಿ...)

ಈ ಎಲ್ಲ ಹಾಡುಗಳಿಗೂ ಸಭೆ ಶಿಳ್ಳೆ, ಕರತಾಡನ ಹೊಡೆದು ಸ್ವಾಗತಿಸಿತು. ಉತ್ಸಾಹದಲ್ಲಿ ನಾಟಕರಂಗವನ್ನು ಮೀರಿಸುವವರಿಲ್ಲವೆಂದು ನನಗನ್ನಿಸಿತು.

ನಂದಿತಾರವರು ಹಾಡಲು ಈಗ ಸಭೆಗೆ ಬಂದರು. ೩ ಸಿನಿಮಾ ಹಾಡುಗಳನ್ನು ಹಾಡಿದರು. ಎಲ್ಲವೂ ಕನ್ನಡ, ಕರ್ನಾಟಕಕ್ಕೆ ಸಂಬಂಧಿಸಿದ್ದವು.

೧. ಜೀವನದಿ ಚಿತ್ರದ 'ಕನ್ನಡ ನಾಡಿನ ಜೀವನದಿ ಓ ಕಾವೇರಿ'
೨. ಉಪಾಸನೆ ಚಿತ್ರದ 'ಭಾರತ ಭೂಶಿರ ಮಂದಿರ ಸುಂದರಿ'
೩. ಅಮೃತಘಳಿಗೆ ಚಿತ್ರದ 'ಹಿಂದೂಸ್ಥಾನವು ಎಂದು ಮರೆಯದ ಭಾರತ ರತ್ನವು ನೀನಾಗು'

ರಾಜೇಶ್ ಕೃಷ್ಣ ರವರು ಕೂಡ ಈ ಹಾಡುಗಳನ್ನು ಹಾಡಲು ಬರಬೇಕಿತ್ತು. ಅವರ ಕಾರ್ಯಕ್ರಮವೂ ಇದೆಯೆಂದು ಪತ್ರಿಕೆಗಳು ಹೇಳಿದ್ದರೂ ಅವರು ಕಾರಣಾಂತರಗಳಿಂದ ಬರಲಾಗಲಿಲ್ಲ. ಸಭೆ ಎಂದಿನಂತೆ ಚಪ್ಪಾಳೆ, ಶಿಳ್ಳೆ ಮುಂದುವರಿಸಿದರು.

ಆಮೇಲೆ, ವಿನಯ್ ಕುಮಾರ್ ರವರು, 'ಕೋಡಗನ ಕೋಳಿ ನುಂಗಿತ್ತ' ಹಾಡು ಹಾಡಿದರು. ಈ ಹಾಡಿಗಂತೂ 'ಜನ ರೈಲು' ಮೈದಾನದ ಸುತ್ತ ಓಡಾಡಿತು. ನಂತರ ಎಂ. ಡಿ. ಪಲ್ಲವಿಯವರು ದ. ರಾ. ಬೇಂದ್ರೆ ಅವರ 'ನಾಕು ತಂತಿ' ಯನ್ನು ಹಿಂದುಸ್ತಾನಿ ಶೈಲಿಯಲ್ಲಿ ಹಾಡಿದರು.

ಎಂ. ಎಸ್. ನರಸಿಂಹ ಮೂರ್ತಿ ಹಾಗು ಗಂಗಾವತಿ ಬೀಚಿ ಎಂದು ಪ್ರಸಿದ್ದವಾಗಿರುವ ಪ್ರಾಣೇಶಾಚಾರರು ನಗೆ ಚಟಾಕಿಗಳಿಂದ ಸಭೆಯ ಮೈ ಪುಳಕಿಸಿದರು.

ಹಂಸಲೇಖ ರವರ 'ಭರತಭೂಮಿ ವರಪುತ್ರ' ನಾಟಕ ನಂತರ ಮೂಡಿಬಂತು. ಎಲ್ಲರಲ್ಲಿಯೂ ವಿಷೆಶತಹ ಮಕ್ಕಳಲ್ಲಿ ದೇಶಭಕ್ತಿ ಜಾಗೃತಗೊಳಿಸಲು ಈ ನಾಟಕ ಒಂದು ಒಳ್ಳೆಯ ಮಾಧ್ಯಮ. ಆದರೆ ನೀವು ಒಮ್ಮೆ ಈ ನಾಟಕ ನೋಡಿ ಬನ್ನಿ.

ಮುಂದುವರಿದಂತೆ, ಲೆಜರ್ ಶೋ, ಬಿತ್ತರವಾಯಿತು. ಒಂದು ಎಲೆಕ್ಟ್ರೋ ಹಾಡಿಗೆ ಹೊಗೆಯಲ್ಲಿ ಬೆಳಕು ಮೂಡಿಬಂದ ರೀತಿ ಎಲ್ಲರೂ ಮೂಗಿನಮೇಲೆ ಬೆರಳಿಡುವಂತೆ ಮಾಡಿತು. ಇದೇ ಲೆಜರ್ ಶೋ ಮುಂದುವರಿದು, ವಿಜಯನಗರ ಸಾಮ್ರಾಜ್ಯ, ಕೃಷ್ಣದೇವರಾಯ, ಹಂಪೆಯ ಒಂದು ಕಿರುಚಿತ್ರ ಮೂಡಿಬಂತು.

ಇವೆಲ್ಲ ಆದಮೇಲೆ ಕೃಷ್ಣದೇವರಾಯನ ಕುರಿತು ಒಂದು ನೃತ್ಯರೂಪಕ ಸುಮಾರು ಅರ್ಧಗಂಟೆಗೂ ಮೀರಿ ಮೂಡಿಬಂತು. ಸಾರಾಂಶ ಇಷ್ಟು. ಕೃಷ್ಣದೇವರಾಯ ತನ್ನ ಆಸ್ಥಾನವನ್ನು ನಡೆಸಿಕೊಂಡು ಬಂದ ರೀತಿ, ತನ್ನ ಅಷ್ಟ ದಿಗ್ಗಜರ ಕುರಿತು ತೋರುವ ಆದರ ಇವೆಲಾಲ್ ಚಿತ್ರಿತವಾದವು. 'ಪಾರಿಜಾತ ಪರಿಣಯ' ನೋಡುತ್ತಿದ್ದ ವೇಳೆ, ಬೇಹುಗಾರನ ಸುದ್ದಿ ಬಂದು ಒರಿಸ್ಸಾ ದೇಶದ ರಾಜ ಗಜಪತಿ ದಂಡೆತ್ತಿ ಬರುವ ಸುದ್ದಿ ಕೇಳಿ ಯುದ್ಧಕ್ಕೆ ಸನ್ನದ್ಧನಾಗುತ್ತಾನೆ. ಅವನನ್ನು ಪರಾಕ್ರಮದಲ್ಲಿ ಸೋಲಿಸಿ ಬಿಜಯನ್ಗೈದು ಬರುತ್ತಾನೆ. ಆಗ ಸಭೆ ಅವನನ್ನು ಬರಮಾಡುವ ರೀತಿ, ಬಿಜಾಪುರದ, ಗೋಲಕೊಂಡದ ಹಾಗು ಅಹ್ಮೆದ್ ನಗರದ ಸುಲ್ತಾನರು, ಅವನಿಗೆ ಕಪ್ಪ ಕಾಣಿಕೆ ಸಲ್ಲಿಸುವ ಸನ್ನಿವೇಶ. ನೃತ್ಯರೂಪಕಗಳಲ್ಲಿ ಹೆಚ್ಚು ತಿಳಿವಿಲ್ಲದ ನನಗೆ ಅಷ್ಟಾಗಿ ಗೊತ್ತಾಗಲಿಲ್ಲ. ತಿಳಿವಿದ್ದವರು ಖುಷಿಪಟ್ಟರು ಎಂದು ಭಾವಿಸುತ್ತೇನೆ. ಈ ನೃತ್ಯರೂಪಕದ ರೂವಾರಿ ಡಾ|| ಮಾಯಾ ರಾವ್.

ಹಂಸಲೇಖ, ಮಾಯಾ ರಾವ್ ರವರಿಗೆ ಅರವಿಂದ ಲಿಂಬಾವಳಿ, ಜನಾರ್ಧನರೆಡ್ಡಿ, ಹಾಗು ವಿಶ್ವೇಶ್ವರ ಹೆಗ್ಗಡೆ ಕಾಗೇರಿ ರವರು ಸಮ್ಮಾನಿಸಿದರು.

ಇದೆಲ್ಲದರ ನಂತರ ಲೆಜರ್ ಶೋ ಮುಂದುವರೆಯಿತು. ಸರಕಾರದ ಲೋಕೋಪಯೋಗಿ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡುವ ಕಿರುಚಿತ್ರ ಲೆಜರ್ ನಲ್ಲಿ ಬಿತ್ತರವಾಯಿತು. ಪಟಾಕಿಗಳನ್ನು ಸಿಡಿಸುವ ಮೂಲಕ ಕಾರ್ಯಕ್ರಮಕ್ಕೆ ತೆರೆಯೆಳೆಯಲಾಯಿತು.

No comments: