ಈ ಅಂಕಣದಲ್ಲಿ ನಾನು ಇತ್ತೀಚೆಗಷ್ಟೇ ಓದಿದ ಕಾದಂಬರಿ ಹಾಗು ಅದರ ಸಿನಿಮಾ ರೂಪದ ವಿಶ್ಲೇಷಣೆ ಬರೀತೀನಿ.
ನಾನು ಈ ಮೂರು ಕಾದಂಬರಿಗಳನ್ನ ಓದಿ ಸುಮಾರು ಮೂರು ತಿಂಗಳಾಯಿತು. ಈ ಮೂರು ಕಾದಂಬರಿಗಳ ಮೇಲೆ ರಚಿತವಾದ ಆಕಸ್ಮಿಕ ಚಿತ್ರ ನೋಡಬೇಕನ್ನ್ಸ್ತು. ನನ್ನ ಗೆಳೆಯನ ಬಳಿ ಇದ್ದ ವೀಸಿಡಿ ತೊಗೊಂಡು ಮೊನ್ನೆ ಭಾನುವಾರ ನೋಡಿದೆ. ಎರಡರಲ್ಲೂ ಬಹಳ ವ್ಯತ್ಯಾಸ ಇದ್ದರೂ ಎರಡೂ ಚೆನ್ನಾಗಿವೆ. ಎರಡರ ಕಾಲ ವ್ಯತ್ಯಾಸವಿದೆ.
ಮೂರು ಕಾದಂಬರಿಗಳ ಕಾಲ ೧೯೫೭. ಆಕಸ್ಮಿಕ ಮೇ ೧೯೫೭, ಅಪರಾಧಿ ಅಕ್ಟೋಬರ್ ೧೯೫೭ ಹಾಗು ಪರಿಣಾಮ ಫೆಬ್ರವರಿ ೧೯೫೮ ಕ್ಕೆ ಬಿಡುಗಡೆಗೊಂಡವು. ಈ ಮೂರು ಕಾದಂಬರಿಗಳ ಮೂಲಕ ತ.ರಾ.ಸು ರವರು ಸ್ವಾತಂತ್ರೋತ್ತರ ಭಾರತದ ಯುವಕರ ಅಧಃಪತನದ ಚಿತ್ರಣ ಮಾಡಿದ್ದಾರೆ. ಸಿನಿಮಾ ೧೯೯೩ರಲ್ಲಿ ಬಿಡುಗಡೆಯಾಯಿತು .
ಮೂಲ ಕಥೆಗೆ ಬಂದರೆ, ಕಥೆ ಶುರುವಾಗೋದು ರೈಲು ಪ್ರಯಾಣದಲ್ಲಿ. ಸಿನೆಮಾದಲ್ಲಿ ಕಥೆ ಕೊನೆಗೊಳ್ಳುವುದೂ ರೈಲು ನಿಲ್ದಾಣದಲ್ಲಿಯೇ ಆದರೂ ಮೂಲ ಕಾದಂಬರಿಯಲ್ಲಿ ಹಾಗಲ್ಲ. ಕಾದಂಬರಿಗೂ ಸಿನೆಮಾಗೂ ಮುಖ್ಯವಾಗಿ ನಾಯಕನ ಸ್ವಭಾವದಲ್ಲಿ ಮಹತ್ತರ ಬದಲಾವಣೆ ಕಾಣಬಹುದು.
ಕಾದಂಬರಿಯಲ್ಲಿ ನಾಯಕ ಮೂರ್ತಿ ಹೆಣ್ಣಿಗ. ಸಿಕ್ಕ ಸಿಕ್ಕ ಹೆಣ್ಣುಮಕ್ಕಳನ್ನು ಕಾಮುಕ ದೃಷ್ಟಿಯಿಂದ ನೋಡುತ್ತಾ ಆ ಹೆಣ್ಣು ತನಗೆ ಒಲಿಯುತ್ತಾಳೋ ಇಲ್ಲವೋ ಎಂದು ಕನಸು ಕಾಣುವಾತ. ಅವನಿಗೆ ಕಾಲೇಜಿನಲ್ಲಿ ಸಹಪಾಠಿಯಾದ ಅಲಕನಂದೆಯೂ ಬೇಕು, ಪಕ್ಕದ ಮನೆಯಲ್ಲಿರುವ ಬಡ ಗೌರಿಯೂ ಬೇಕು, ರೈಲಿನಲ್ಲಿ ಆಕಸ್ಮಿಕವಾಗಿ ಪರಿಚಯವಾದ ಇಂದಿರೆಯ ಸಂಗವೂ ಚೆನ್ನ, ಹಾಗೇ ಪ್ಲಾಜ ಥಿಯೇಟರಲ್ಲಿ ಸಿಗುವ ಕ್ಲಾರಾ ಕೂಡ ಬೇಕು. ಅವನ ಕನಸಿಗೆ, ಬಯಕೆಗೆ ಪಾರವೇ ಇಲ್ಲ! ಅವನೊಬ್ಬ ಹಗಲುಗನಸುಗಾರ. ಈ ಹೆಣ್ಣುಗಳು ಬೇಕು ಎಂದು ಅವನು ಸಿಗುವ ಬಗ್ಗೆ ಯೋಚನೆ ಮಾಡ್ತ್ಹಾನಷ್ಟೇ. ಅದನ್ನು ಕಾರ್ಯರೂಪಕ್ಕೆ ತರುವ ಮಟ್ಟಕ್ಕೆ ಬರಲು ಅಂಜುತ್ತಾನೆ. ಸ್ವಾತಂತ್ಯ್ರ ಸಂಗ್ರಾಮದಲ್ಲಿ ಪಾಲ್ಗೊಳ್ಳುತ್ತಾನೆ, ಒಂದೆರಡು ಕಲ್ಲು ತೂರಾಟ ನೋಡಿ ಹೆದರಿ ಮನೆಯಲ್ಲೇ ಕೊಳೆಯುತ್ತಾನೆ. ಇದಕ್ಕೆ ಅವನ ಅಪ್ಪ ಅಮ್ಮನು ಒಪ್ಪಿಕೊತಾರೆ.
ಈ ಮೇಲೆ ಹೇಳಿದಂತೆ ಮೊದಲು ಇವನ ಕಣ್ಣು ಕಾಲೇಜಿನಲ್ಲಿರುವ ಅಲಕನಂದೆಯ ಮೇಲಿರುತ್ತದೆ. ಅವನ ಕಾಲೇಜಿನ ಪ್ರೊಫೆಸರ್ ರ ಕಣ್ಣು ಆಕೆಯ ಮೇಲಿರುವುದನ್ನು ಅರಿತ ಇವನು ಅವರ ಬೆದರುಗಣ್ಣಿಗೆ ಹೆದರಿ ಅವಳನ್ನು ಬಿಟ್ಟು ತನ್ನ ಮನೆಗೆ ಗ್ರಾಮಾಫೋನ್ ಕೇಳಲು ಆಸೆಯಿಂದ ಬರುವ ಪಕ್ಕದ ಮನೆಯ ಬಡ ಹುಡುಗಿ ಗೌರಿಯ ಮೇಲೆ ಕಣ್ಣು ಹಾಯಿಸುತ್ತಾನೆ. ಅವಳನ್ನು ಒಲಿಸಿಯೂಕೊಳ್ಲ್ತ್ತಾನೆ. ಅವಳೂ ಇವನಿಗೆ ಇವನ ಆಸೆ ಅಭಿಲಾಷೆಯನ್ನ ಪೂರೈಸುವುದಕ್ಕೆ ಸಹಕರಿಸುತ್ತಾಳೆ. ಎರಡು ತಿಂಗಳ ನಂತರ ಮೈ ನೆರೆತ ಅವಳಿಗೆ ಇವನ ಬಗ್ಗೆ ಆಸೆ ಹೆಚ್ಚಾಗಿ ಇವನ ಬಳಿ ಬಂದಾಗ ಇವನು ಮನೆಯವರಿಗೆ ಹೆದರಿ ಇವಳನ್ನು ನಿರಾಕರಿಸುತ್ತಾನೆ. ಬೇಗೆ ತಡೆಯದ ಅವಳು ಬೇರೊಬ್ಬ ಹುಡುಗನ ಜೊತೆ ಓಡಿ ಹೋಗುತ್ತಾಳೆ. ಸಿನೆಮಾದಲ್ಲಿ ಈ ಇಬ್ಬರ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ. ಅನಗತ್ಯವೆಂದು ಅದನ್ನು ಬದಿಗಿರಿಸಿದ್ದೆಂದು ಅನ್ನಿಸುತ್ತದೆ. ಎಷ್ಟೇ ಆಗಲೀ ಎರಡೂವರೆ ಘಂಟೆಯಲ್ಲಿ ಇಡೀ ಕಾದಂಬರಿಯನ್ನ ಚಿತ್ರಿಸುವುದರಲ್ಲಿ ಹೆಚ್ಚಿನ ನಿರ್ದೇಶಕರು ಒಲವು ತೋರಿಸುವುದಿಲ್ಲ.
ಸಿನೆಮಾದಲ್ಲಿ ಅದೇ ನಾಯಕ ಧೈರ್ಯವಂತ. ಡಾ||ರಾಜಕುಮಾರ್ ಅವರ ಇಮೇಜ್ ಗೆ ಭಂಗತರದೇ ಈ ಸಿನಿಮಾ ಮಾಡಬೇಕು ಅನ್ನೋದು ನಿರ್ದೇಶಕ ನಾಗಾಭರಣರವರ ಇಂಗಿತವಾಗಿತ್ತೋ ಏನೋ?
ರೈಲಿನಲ್ಲಿ ಸ್ನೇಹಿತನ ಮದುವೆ ಮುಗಿಸಿಕೊಂಡು ಬೆಂಗಳೂರಿಗೆ ಹೊರಟ ನಾಯಕ ಆಕಸ್ಮಿಕವಾಗಿ ಪರಿಚಯವಾದ ಹೆಣ್ಣಿನ ಸಹಾಯಕ್ಕೆ ನಿಂತು ತಾನೆ ಪೇಚಿಗೆ ಸಿಲುಕುವ ಪರಿಸ್ಥಿತಿಗೆ ತಲುಪುತ್ತಾನೆ. ಕಾದಂಬರಿಯಲ್ಲಿ ಅಂಜುಕುಳಿ ನಾಯಕ ತೊಂದರೆಯಿಂದ ತಪ್ಪಿಸಿಕೊಳ್ಳಲು ನೋಡಿದರೆ, ಸಿನೆಮಾದಲ್ಲಿ ನಾಯಕ ಹುಡುಗಿಯ ಸಹಾಯಕ್ಕೆ ಒದಗುತ್ತಾನೆ. ಆದರೂ ಖಳನಾಯಕನ ಸಂಚಿಗೆ ಬಲಿಯಾಗಿ ಅವಳನ್ನು ಬಿತ್ತುಕೊದಬೇಕಾದ ಪರಿಸ್ಥಿತಿ ಒದಗುತ್ತದೆ. ನಾಯಕನ ತಲೆಗೆ ಬಲವಾದ ಪೆಟ್ಟು ಬಿದ್ದು ಅವನು ಮನೆ ತಲುಪಿದ್ದೇ ದೊಡ್ಡದಾಗುತ್ತದೆ. ಕಾದಂಬರಿಯಲ್ಲಿ ಖಳನ ಆಮಿಷಕ್ಕೆ ಬಿದ್ದು ಆ ಹುಡುಗಿಯನ್ನ ಅನುಭವಿಸಬೇಕು, ಅಲಕನಂದೆಯಲ್ಲಿ ಹಾಗು ಗೌರಿಯಲ್ಲಿ ಪಡೆಯದೆ ಬಿಟ್ಟ ಅನುಭವ ಈ ಇಂದಿರೆಯಲ್ಲಿ ಪಡೆಯಬೇಕು ಎಂದು ಕಡೂರಿನ ಟ್ರಾವೆಲ್ಲೆರ್ಸ ಬಂಗಲೆಯಲ್ಲಿ ಇಳ್ಕೊತಾರೆ. ಇವನಿಗೆ ಎರಡು ಮನಸ್ಸು. ಅವಳನ್ನು ಅನುಭವಿಸು ಎಂದು ಕೆಟ್ಟ ಮನಸ್ಸು, ಹಾಗೆ ಮಾಡಬಾರದು. ಇವಳು ನಿನ್ನನ್ನೇ ನಂಬಿದ್ದಾಳೆ. ಅವಳಿಗೆ ಮೋಸ ಮಾಡಬೇಡ ಎನ್ನುವ ಒಳ್ಳೆಯ ಮನಸ್ಸು ಇನ್ನೊಂದು ಕಡೆ. ಇವನು ಹತಾಶನಾಗಿ ಹೊರಗೆ ಬರುವಾಗ ಖಳನ ಮರುದರ್ಶನ. ಈ ಮಧ್ಯ ಇಂದಿರೆಯ ಕಥೆ ಕೆಲ ಕಾಲ ತೆರೆಯ ಮೇಲೆ ಬರುತ್ತದೆ. ಅದನ್ನು ಯಥಾವತ್ತಾಗಿ ಚಿತ್ರಿಸಿದ್ದಾರೆ. ಅವಳು, ಅವಳ ಬಡ ಕುಟುಂಬ. ಪಕ್ಕದ ಮನೆಯ ಹಣವಂತೆ, ಸೂಳೆ ಆನಂದಿಯ ಚಿತ್ರಣ ಚೆನ್ನಾಗಿ ಆಗಬೇಕಂದರೆ ನೀವು ಕಾದಂಬರಿಯನ್ನೇ ಓದಬೇಕು. ಅವಳ ಹಾಗು ಖಳ ವ್ಯಾಸರಾಯನ ಪರಿಚಯ ಇತ್ಯಾದಿ ಇತ್ಯಾದಿ.
ಇವೆರಡೂ ಆಕಸ್ಮಿಕ ಹಾಗು ಅಪರಾಧಿಯಲ್ಲಿ ಸಿಗುತ್ತದೆ. ಈ ಎರಡು ಕಾದಂಬರಿಯ ಚಿತ್ರಣ ಸರಿ ಸುಮಾರು ಅರ್ಧ - ಮುಕ್ಕಾಲು ಗಂಟೆ ತೆಗೆದುಕೊಳ್ಳುತ್ತದೆ. ಸಿನಿಮಾ ನಿರ್ದೇಶಕರು ಪರಿಣಾಮದಲ್ಲಿ ಹೆಚ್ಚು ಆಸಕ್ತರೆಂದು ತೋರುತ್ತದೆ. ಅಲ್ಲಿ ಬರುವ ಕ್ಲಾರಾ, ಅವಳ ಅನ್ನ, ಅವಳ ಪೂರ್ವ ಕಥೆ, ಅವಳ ಗೆಳತಿ ಸುಂದರಿ, ಗೆಳೆಯ ರೆಜ್ಜಿ, ಮೋಸ ಹೋದ ಬಗೆ... ಇವೆಲ್ಲ ಸರಿ. ಎರಡರಲ್ಲೂ ಒಂದೇ ರೀತಿ ಚಿತ್ರಿತವಾಗಿದೆ. ಕ್ಲಾರಾ ಹಾಗು ಮೂರ್ತಿಯ ಪರಿಚಯವಾಗುವ ಬಗೆ ಎರಡರಲ್ಲೂ ಭಿನ್ನವಾಗಿವೆ, ಸಿನಿಮಾ ಹಾಲಲ್ಲಿ ಪರಿಚಯವಾಗುವ ಕಾದಂಬರಿಯ ಕ್ಲಾರಾ ದೈಹಿಕ ಸುಖಕ್ಕೆ ಮೂರ್ತಿಯನ್ನು ದಾಳವಾಗಿ ಬಳಸಿಕೊಳ್ಳುತ್ತಾಳೆ. ಅದಾದ ನಂತರ ಮೂರ್ತಿಯಲ್ಲಿ ಅನುರಕ್ತಳಾಗಿ ಅವನನ್ನೇ ಮದುವೆಯಾಗಬೇಕೆಂದು ನಿಶ್ಚಯಿಸುತ್ತಾಳೆ. ತನ್ನ ಅಳುಕಿನ ಕಾರಣ ಮೂರು ಹೆಣ್ಣುಗಳಿಂದ ವಂಚಿತನಾದ ಮೂರ್ತಿ ಇವಳನ್ನು ಹೇಗಾದರೂ ಸರಿ, ಪಡೆಯಲೇ ಬೇಕು ಎಂದು ನಿರ್ಧರಿಸುತ್ತಾನೆ.
ಅಡ್ಡಾದಿಡ್ಡಿ ಕಾರನ್ನು ಓಡಿಸುತ್ತಾ ಮರಕ್ಕೆ ಗುದ್ದುವ ಸಿನಿಮಾ ಕ್ಲಾರಳನ್ನು ಮೂರ್ತಿಯು ಸರಿದಾರಿಗೆ ತರುತ್ತಾನೆ. ಅವಳ ಕುಡಿಯುವ ಚಟ ಬಿಡಿಸಿ ಅವಳಿಗೆ ಬಾಳಿನ ಅರ್ಥ ತೋರಿಸಿಕೊಟ್ಟು ಮಾನವಳಾಗಿ ಮಾಡುತ್ತಾನೆ.
ಸಿನೆಮಾದಲ್ಲಿ ಮದುವೆಯ ನಿಶ್ಚಯ ಮಾಡಿದ ಇಬ್ಬರೂ ನಾಯಕನ ತಾಯಿಯ ಬಳಿಸಾರಿ ಅವರನ್ನು ಹೆಚ್ಚು ಶ್ರಮವಿಲ್ಲದೆ ಒಪ್ಪಿಸುತ್ತಾರೆ. ಇದಕ್ಕೆ ನಾಯಕನ ಸ್ನೇಹಿತರು ಸಹಾಯಕರಾಗುತ್ತಾರೆ. ಕಾದಂಬರಿಯಲ್ಲಿ ಇದು ಒಂದು ದೊಡ್ಡ ಗಂಡಾಂತರವಾಗುತ್ತದೆ. ಮೂರ್ತಿಯ ತಂದೆ ತಾಯಿಯರನ್ನು ಒಪ್ಪಿಸಲು ಆದಾಗ ಮೂರ್ತಿ, ಕ್ಲಾರಾ ಇಲಿದುಕೊಂಡಿರುವ ಹೋಟೆಲ್ಲಿಗೆ ಬಂದು ಅವಳೊಂದಿಗೆ ಇರಲು ಪ್ರಾರಂಭಿಸುತ್ತಾನೆ. ಹೆತ್ತ ಕರುಳು ಒದ್ದಾಡಿ, ಜಾತಿ ಬೇರೆ ಅನ್ನೋ ಕಾರಣಕ್ಕಾಗಿ ಮೂರ್ತಿಯ ಭಾವ (ಅಕ್ಕನ ಗಂಡ)ನನ್ನು ಕರೆದು, ಅವನ ಮಧ್ಯಸ್ತಿಕೆಯಲ್ಲಿ ಉಭಾಯರಿಗೂ ಸಮಾಧಾನವಾಗುವಂತೆ ಮದುವೆ ನಡೆದು ಹೋಗುತ್ತದೆ.
ಇನ್ನ್ನೊಂದು ಪ್ರಮುಖ ವ್ಯತ್ಯಾಸವೇನೆಂದರೆ, ಕಾದಂಬರಿಯ ಕ್ಲಾರಾ ಅಂದ ಚೆಂದದಲ್ಲಿ ಎಷ್ಟು ಚೆಂದವೋ, ಯಾವ ಬಟ್ಟೆ ತೊಡುವುದರಲ್ಲೂ ಮೇಲುಗೈ. ಆದರೆ ಸಿನೆಮಾದಲ್ಲಿ ಕ್ಲಾರಾ ಸೀರೆ ಉಡುವುದೇ ಒಂದು ದೃಶ್ಯವಾಗುತ್ತದೆ. ಈಗಿನ ಕಾಲದ ಹುಡುಗಿಯರೂ ಸೀರೆ ಉಡುವುದನ್ನು ಎಲ್ಲಿ ಮರೆತಿದ್ದರೋ ಎನ್ನುವ ಹಾಗೆ ಈ ದೃಶ್ಯ ಚಿತ್ರಿತವಾಗಿದೆ. ಹಾಸ್ಯಾಸ್ಪದವಾಗಿದೆ.
ಮಧುಚಂದ್ರಕ್ಕೆ ಹೊರಟ ದಂಪತಿಗಳು , ಬರುವಾಗ ಮೂರ್ತಿ ಒಬ್ಬನೇ ಬರುತ್ತಾನೆ. ಆಗುಂಬೆ ಘಾಟಿಯಲ್ಲಿ ಮಧುಚಂದ್ರದ ಅಂತ್ಯ ತೋರಿಸುವ ಸಿನಿಮಾ, ಕಾದಂಬರಿಯಲ್ಲಿ ಆಗುಂಬೆಯಲ್ಲಿ ಶುರು ಮಾಡಿ, ಬರ್ಕಣದಲ್ಲಿ ಅಂತ್ಯಗೊಳ್ಳುತ್ತದೆ.
ಕ್ಲಾರಳ ಸಾವು ಮೂರ್ತಿಯನ್ನು ವ್ಯಘ್ರಗೊಳಿಸುತ್ತದೆ. ಅವನು ಪೋಲಿಸ್ ಇನ್ಸ್ಪೆಕ್ಟರ್ ಆಗಿ ಎಲ್ಲರ ಮೇಲೆ ನರಸಿಮ್ಹನಂತೆ ಎಗರುತ್ತ ಇರುತ್ತಾನೆ. ಕೊನೆಗೆ...
ಕಾದಂಬರಿಯಲ್ಲಿ ಇವನು ಇರುವ ಜಾಗಕ್ಕೆ ಓರ್ವ ಹೆಂಗಸು ಒಬ್ಬನ ಕೊಲೆ ಮಾಡಿರುವ ಕೇಸ್ ಬರುತ್ತದೆ. ಅಲ್ಲಿ ಹೋಗಿ ನೋಡಿದರೆ ಅದು ಇಂದಿರೆ ವ್ಯಾಸರಾಯನ ಕೊಲೆ ಮಾಡಿರುತ್ತಾಳೆ. ಅವಳ ಶೀಲಹರಣ ಮಾಡಿದ ವ್ಯಾಸರಾಯನ ಮೇಲೆ ಸೇಡು ತೀರಿಸಿಕೊಂಡ ಇಂದಿರೆಯನ್ನು ಹಾಗೆ ಹೋಗಲು ಬಿಟ್ಟು ಮೂರ್ತಿ, ತಾನು ಹಿಂದೆ ಮಾಡಿದ ತಪ್ಪಿಗೆ ಇದು ಸರಿಯಾದ ಪ್ರಾಯಶ್ಚಿತ್ತ ಎಂದುಕೊಳ್ಳುತ್ತಾನೆ.
ಸಿನೆಮಾದಲ್ಲಿ ಪೋಲಿಸ್ ಇನ್ಸ್ಪೆಕ್ಟರ್ ಆದ ಮೂರ್ತಿ, ಈ ಥಲೆಹಿದುಕರ ಜಾಲ ಪತ್ತೆ ಮಾಡಲು ಹರಸಾಹಸ ಪಡುತ್ತಾನೆ. ಅನಂದಿಯನ್ನು ಸುಳಿವಾಗಿತ್ತುಕೊಂಡು ಅಲ್ಲಿಂದ ವ್ಯಾಸರಾಯ, ಕಾಟಯ್ಯ ಹಾಗೆ ತಿಪ್ಪರಾಜು ಇವರುಗಳನ್ನು ಹಿಡಿಯಲು ಹೋಗಿ ಸಫಲನಾಗುತ್ತಾನೆ. ವ್ಯಾಸರಾಯನನ್ನು ಕೊನೆಗೆ ಹಿಡಿಯಲು ಹೋದ ಮೂರ್ತಿ, ರೈಲು ನಿಲ್ದಾಣದಲ್ಲೇ ಇನೊಮ್ಮೆ ಆಕಸ್ಮಿಕವಾಗಿ ಇಂದಿರೆಗೆ ಸಿಕ್ಕು ಅವಳನ್ನು ಮದುವೆಯಾಗುತ್ತಾನೆ. ಈ ಸಂಧರ್ಭದಲ್ಲೇ ವ್ಯಾಸರಾಯ ಹಾಗು ಅವನ ಸಂಗಡಿಗರನ್ನು ಸದೆಬಡಿದು, ವ್ಯಾಸರಾಯ ರೈಲಿನಡಿಯಲ್ಲಿ ಸಿಕ್ಕು ಭಸ್ಮವಾಗುತ್ತಾನೆ.
ಒಟ್ಟಾಗಿ ಹೇಳಬೇಕೆಂದರೆ ಎರಡು ಚೆನ್ನಾಗಿವೆ. ಮೂಲವನ್ನು ತೆಗೆದುಕೊಂಡರೆ, ಸಿನಿಮಾ ಕೆಲವೆಡೆ ಬೇರೆಯದೇ ಹಾಡಿ ಹಿಡಿಯುತ್ತದೆ, ಆದರೂ ಎಲ್ಲೂ ಪ್ರೇಕ್ಷಕರಿಗೆ ಬೇಜಾರು ಮಾಡುವುದಿಲ್ಲ. ತ.ರಾ.ಸು ಅವರು ಇದ್ದಿದ್ದರೆ ಈ ರೀತಿ ಕಥೆಯನ್ನು ತಿರುಚಲು ಬಿಡುತ್ತಿದ್ದರೋ ಇಲ್ಲವೊ ನಾಕಾಣೆ. ಅವರ ನಾಗರಹಾವು ಚೆನ್ನಾಗಿ ಚಿತ್ರಿತವಾಗಲಿಲ್ಲ ಎಂದು ಅವರು ಕಿಡಿಕಾರಿದ್ದು ನಿಮ್ಮಲ್ಲಿ ಕೆಲವರಿಗೆ ನೆನಪಿರಬಹುದು. ನನ್ನ ನಾಗರಹಾವನ್ನು ಕೆರೆ ಹಾವನ್ನಗಿ ಮಾಡಿದಿರಿ ಎಂದು ಅವರು ಹೇಳಿಕೆ ನೀಡಿದ್ದರು. ಇಲ್ಲಿ ಅವರ ನೋಟಕ್ಕೆ ವಿರುದ್ಧವಾಗಿ ಕಥೆ ಇದ್ದರೂ ಎಲ್ಲೂ ಹದ ಮೀರಿಲ್ಲದ ಕಾರಣ ಎಲ್ಲವು ಸರಿಯಾಗಿದೆ ಎಂದು ಅವರ ಧರ್ಮಪತ್ನಿ ಶ್ರೀಮತಿ ಅಂಬುಜ ತ.ರಾ.ಸು ಅವರು ಒಪ್ಪಿರಬಹುದು.
ನೀವು ಬರೀ ಚಿತ್ರವನ್ನು ನೋಡಿದ್ದರೆ, ಖಂಡಿತ, ಈ ಮೂರು ಕಾದಂಬರಿಗಳನ್ನು ಓಧಿ. ನಿಮಗೆ ಹಿಡಿಸುವುವು. ಬರೀ ಕಾದಂಬರಿಯನ್ನು ಓದಿದ್ದರೆ ಸಿನಿಮಾ ನೋಡಿ, ನಿಮಗೆ ಇಷ್ಟವಾಗಬಹುದು. ಎರಡೂ ನೋಡಿದ್ದರೆ ನಿಮ್ಮ ಅನಿಸಿಕೆಯನ್ನು ಇಲ್ಲಿ ಬರೆಯಬಹುದು. ಇಲ್ಲದಿದ್ದರೂ ಬರೆಯಬಹುದು.
Subscribe to:
Post Comments (Atom)
No comments:
Post a Comment