ಸುಮಾರು ೨ ವರ್ಷಗಳ ಹಿಂದೆ ಶ್ರೀನಿಧಿ ಹಂದೆ, ಅಡಿಗರ ಮೋಹನ ಮುರಲಿ ಯ ಸಾಹಿತ್ಯ ಸಿಗುವುದೇ ಎಂದು ಕೇಳಿದ್ದನು. ಅದಕ್ಕೆ ಉತ್ತರವಾಗಿ ಇಷ್ಟು ಬೇಗ ಅದನ್ನು ಇಲ್ಲಿ ಕೊಟ್ಟಿರುತ್ತೇನೆ. ತಾಳ್ಮೆಗಾಗಿ ವಂದನೆಗಳು.
ಕೃತಿ - ಮೋಹನ ಮುರಲಿ.
ರಚನೆ - ಗೋಪಾಲ ಕೃಷ್ಣ ಅಡಿಗ
ವಿ.ಸೂ : ಇದರ ಎಲ್ಲಾ ಹಕ್ಕುಗಳು ಆಯಾ ಪ್ರಕಾಶಕರಿಗೆ ಸೇರಿದ್ದು. ಅಂತರ್ಜಾಲದಲ್ಲಿ ಹುಡುಕುವವರಿಗೆ ಲಭ್ಯವಾಗಲಿ ಎಂದು ಇಲ್ಲಿ ಒಂದು ಪ್ರತಿಯನ್ನು ಪ್ರಕಟಿಸಿದ್ದೇನೆ. ತಪ್ಪಾದಲ್ಲಿ ಕ್ಷಮೆಯಿರಲಿ.
---------------------------------------------------------
ಯಾವ ಮೋಹನಮುರಲಿ ಕರೆಯಿತು ದೂರ ತೀರಕೆ ನಿನ್ನನು ?
ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು ?
ಹೂವು ಹಾಸಿಗೆ, ಚಂದ್ರ, ಚಂದನ, ಬಾಹುಬಂಧನ ಚುಂಬನ;
ಬಯಕೆತೋಟದ ಬೇಲಿಯೊಳಗೆ ಕರಣಗಣದೀ ರಿಂಗಣ;
ಒಲಿದ ಮಿದುವೆದೆ, ರಕ್ತಮಾಂಸದ ಬಿಸಿದುಸೋಂಕಿನ ಪಂಜರ;
ಇಷ್ಟೆ ಸಾಕೆಂದಿದ್ದೆಯಲ್ಲೋ! ಇಂದು ಏನಿದು ಬೇಸರ?
ಏನಿದೇನಿದು ಹೊರಳುಗಣ್ಣಿನ ತೇಲುನೋಟದ ಸೂಚನೆ?
ಯಾವ ಸುಮಧುರ ಯಾತನೆ? ಯಾವ ದಿವ್ಯದ ಯಾಚನೆ?
ಮರದೊಳಡಗಿದ ಬೆಂಕಿಯಂತೆ ಎಲ್ಲೊ ಮಲಗಿದೆ ಬೇಸರ;
ಏನೊ ತೀಡಲು ಏನೊ ತಾಗಲು ಹೊತ್ತಿ ಉರಿವುದು ಕಾತರ.
ಸಪ್ತಸಾಗರದಾಚೆಯೆಲ್ಲೋ ಸುಪ್ತಸಾಗರ ಕಾದಿದೆ,
ಮೊಳೆಯದಲೆಗಳ ಮೂಕ ಮರ್ಮರ ಇಂದು ಇಲ್ಲಿಗು ಹಾಯಿತೆ?
ವಿವಶವಾಯಿತು ಪ್ರಾಣ; ಹಾ! ಪರವಶವು ನಿನ್ನೀ ಚೇತನ;
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ?
ಯಾವ ಮೋಹನಮುರಲಿ ಕರೆಯಿತು ಇದ್ದಕಿದ್ದೊಲೆ ನಿನ್ನನು ?
ಯಾವ ಬೃಂದಾವನವು ಚಾಚಿತು ತನ್ನ ಮಿಂಚಿನ ಕೈಯನು?
----------------------------------------------------------
Subscribe to:
Post Comments (Atom)
No comments:
Post a Comment