Tuesday, August 04, 2009

ಬೆಂಗಳೂರಿನಲ್ಲಿ ತಿರುವಳ್ಳುವರ್ ಪ್ರತಿಮೆ ಪುರಾಣ...

ಒಂದ್ ರಾತ್ರಿ ಬೆಂಗಳೂರಲ್ಲಿರೋ ಎಲ್ಲಾ ಪ್ರತಿಮೆಗಳು ವಿಧಾನ ಸೌಧದ ಎದುರು ಹಾಜರಾದವು. ರಾತ್ರಿ ಸುಮಾರು ಗಂಟೆ ಇರಬಹುದೋ ಏನೋ? ಒಬ್ಬೊಬ್ಬರೆ ಮಾತಾಡಕ್ಕೆ ಶುರು ಹಚ್ಚಿದವು.

ಮೊದಲಿಗೆ ಆನಂದ್ ರಾವ್ ಸರ್ಕಲ್ ಬಳಿಯ ಗಾಂಧಿ ಪ್ರತಿಮೆ ಮಾತು ಶುರು ಮಾಡಿತು.
ಗಾಂಧಿ: ಯಪ್ಪಾ! ಸಾಕಪ್ಪಾ! ಸಾಕು! ಬಿಸಿಲಲ್ಲಿ ಕೂರೋದೂ ಸಾಕು... ಮೈಯೆಲ್ಲಾ ಉರಿಯೋದು ಸಾಕು.
ಎಲ್ಲಾ ಪ್ರತಿಮೆಗಳು: ಹೌದು ಬಾಪು! ನಮಗಂತೂ ಬಿಸಿಲಲ್ಲಿ ನಿಂತು ನಿಂತೂ ಸಾಕಾಗ್ಹೊಯ್ತು.
ಗಾಂಧಿ: ಸಧ್ಯ! ಈಗ ಮೇಲೆ ಒಂದ್ ಫ್ಲೈ-ಓವರ್ ಇದೇ. ಇಲ್ಲಾಂದ್ರೆ ಮಧ್ಯಾಹ್ನ ಗಂಟೆ ಮೇಲೂ ಬಿಸಿಲಲ್ಲೇ ಕೂರ್ಬೇಕಾಗ್ತಿತ್ತು. ಇನ್ನೊಂದ್ ಒಳ್ಳೆ ಕೆಲಸ ಏನಪ್ಪಾ ಮಾಡಿದ್ರು ಅಂದ್ರೆ ಮುಂಚೆ, ಹಾಳು ರೇಸ್ ಕೋರ್ಸ್ ಗೇ ಮುಖ ಮಾಡಿ ಇಟ್ಟಿದ್ದರು. ಈಗ ಅದರ ವಿರುದ್ದ ಇಟ್ಟಿದ್ದಾರೆ.

ಅಷ್ಟರಲ್ಲಿ ಕಿತ್ತೂರು ಚೆನ್ನಮ್ಮ ತನ್ನ ನೋವು ಹೇಳಿಕೊಂಡಳು.
ಚೆನ್ನಮ್ಮ: ನಂಗೂ ಒಂದ್ ಪ್ರತಿಮೆ ಮಾಡ್ಸಿದ್ದಾರೆ ಟೌನ್ ಹಾಲ್ ಪಕ್ಕ. ಯುದ್ಧ ಮಾಡೋವಾಗ ಸತ್ತರು ಅಂತ ಕುದುರೆ ಮೇಲೆ ಕೂಡ್ಸಿ ಅದರ ಎರಡೂ ಕಾಲು ಮೇಲ ಎತ್ತಿದ್ದಾರೆ. ರೀತಿ ಕೂತೂ ಕೂತೂ ನನ್ನ ಬೆನ್ನೆಲ್ಲಾ ನೋವು. ಸಾಲದ್ದಕ್ಕೆ ಕೈಯಲ್ಲಿರೋ ಕತ್ತಿ ಕೂಡ ಮೇಲೆತ್ಹ್ಸಿದ್ದಾರೆ. ಕೈ ಕೂಡ ನೋವು.

ವಿಧಾನ ಸೌಧದ ಮುಂದೆ ಇರೋ ಅಂಬೇಡ್ಕರ್ ಪ್ರತಿಮೆ ಈಗ ಮಾತು ಶುರು ಹಚ್ಚಿತು.
ಅಂಬೇಡ್ಕರ್: ಅಮ್ಮ! ನೀವಾದ್ರೂ ಕುದುರೆ ಮೇಲೆ ಕುಳಿತಿರುತ್ತೀರಾ. ನಾನು ಬಡಪಾಯಿ. ನನ್ನನ್ನು ನಿಲ್ಲಿಸಿ ಎಡಗೈ ಗೆ ಒಂದು ಪುಸ್ತಕ, ಬಲಗೈಯನ್ನು ಮೇಲೆತ್ತಿ ಎಲ್ಲಿಗೋ ಬೆರಳು ಮಾಡುವಂತೆ ಮಾಡಿದ್ದಾರೆ. ಇಡೀ ದಿನ ಬಿಸಿಲಲ್ಲಿ ಕೈಯನ್ನು ರೀತಿ ಇಟ್ಟುಕೊಂಡು ನನಗಂತೂ ರೋಸಿ ಹೋಗಿದೆ.

ಪಕ್ಕದಲ್ಲೇ ಇದ್ದ ಸೆಂಟ್ರಲ್ ಬಳಿ ಇದ್ದ ರಾಜೀವ್ ಗಾಂಧಿ ಪ್ರತಿಮೆ ಅದಕ್ಕೆ ಹೂಂಕರಿಸಿತು.
ರಾಜೀವ್ ಗಾಂಧಿ: ಅದೇ ಮತ್ತೆ! ನಮ್ಮದು ಅದೇ ಪರಿಸ್ಥಿತಿ.

ಈಗ ಕಾರ್ಪೋರೇಷನ್ನಿನ ಕೆಂಪೇಗೌಡರು ಮಾತನಾಡಿದರು.
ಕೆಂಪೇಗೌಡರು: ನಮ್ಮದು ಬೇರೆಯದೇ ರಗಳೆ. ದಿನಕ್ಕೆ ಮೂರು ನಾಲ್ಕು ಹಕ್ಕಿಗಳು ನಮ್ಮ ತಲೆ, ಹೆಗಲಮೇಲೆ ಕುಳಿತುಕೊಂಡು ಅಸಹ್ಯ ಮಾಡುತ್ತವೆ. ಇದನ್ನೆಲ್ಲಾ ಯಾರಿಗೆ ಹೇಳೋದು? ವಾರಕ್ಕೋ ತಿಂಗಳಿಗೋ ಬರುವ ಮಳೆಗೆ ಕಾಯಬೇಕು. ಕಾರ್ಪೋರೇಷನ್ನಿನವರಂತೂ ನಮಗೆ ಸ್ನಾನ ಮಾಡಿಸುವುದಿಲ್ಲ. ಕೈಯಲ್ಲಿ ಕತ್ತಿ ಇದ್ದರೇನು ಪ್ರಯೋಜನ? ಹಕ್ಕಿಗಳನ್ನು ಓಡಿಸಲಾದೀತೇ?

ಎಲ್ಲರೂ ಒಗ್ಗೂಡಿದರು: ನಮ್ಮೆಲ್ಲರ ಗೋಳಿನಲ್ಲೂ ರಗಳೆ ಇದ್ದ್ದಿದ್ದೇ.

ಚಾಲುಕ್ಯ ಹೋಟೆಲಿನ ಬಳಿಯಿರುವ ವೃತ್ತ ಬಸವಣ್ಣನವರು ಈಗ ಮಾತನಾಡಿದರು.
ಬಸವಣ್ಣನವರು: ಇರುವುದರಲ್ಲಿ ನಮ್ಮ ಪರಿಸ್ಥಿತಿಯೇ ಮೇಲೆನ್ನಿಸುತ್ತಿದೆ. ತಂಪಾದ ನೆರಳಿದೆ. ಕುಳಿತುಕೊಳ್ಳಲು ಕುದುರೆಯಿದೆ. ರಣರಂಗದಲ್ಲಲ್ಲದಿದ್ದರೂ, ಯುದ್ಧ ಮಾಡುವಾಗ ಆದ ಗಾಯದಿಂದ ಸತ್ತೆನೆಂದು ಕುದುರೆಯ ಒಂದು ಕಾಳಿ ಮೇಲಿದೆ. ಆದರೆ ಅದರಿಂದ ನನ್ನ ಬೆನ್ನಿಗೇನು ನೋವಿಲ್ಲ. ಹಕ್ಕಿಗಳ ತಾಪತ್ರಯ ಬಿಟ್ಟರೆ, ಬೇರೆ ಯಾವ ತೊಂದರೆಯೂ ಇಲ್ಲವೆನ್ನಿಸುತ್ತದೆ.

ಗಾಂಧಿನಗರದ ಕೆಂಪೇಗೌಡ ವೃತ್ತದಲ್ಲಿರುವ ಡಾ|| ರಾಜಕುಮಾರ್ ಪ್ರತಿಮೆ ಈಗ ಮಾತನಾಡಿತು.
ರಾಜಕುಮಾರ್: ನೀವೊಬ್ಬರೇ ನೋಡಿ ಒಳ್ಳೆ ಮಾತಾಡ್ತಾ ಇರೋದು. ಎಷ್ಟೇ ಆಗ್ಲಿ ವಚನಕಾರರಲ್ಲವೇ? ನಮ್ಮ ಪರಿಸ್ಥಿತಿ ಯಾರಿಗೂ ಬೇಡ. ನಿಮಗೆಲ್ಲರಿಗೂ ನಿಮ್ಮ ಅಂಗಾಂಗ ನೆಟ್ಟಗಿದೆ. ನಮಗೆ ಕೈ ಕಾಲಿರಲಿ, ದೇಹವೇ ಇಲ್ಲ. ಎದೆಯ ಮಟ್ಟಕ್ಕೆ ಮಾತ್ರ ಪ್ರತಿಮೆ. ನಾವೇನು ಮಾಡಬೇಕು?

ವಿಧಾನ ಸೌಧದ ಮತ್ತೊಂದು ಪ್ರತಿಮೆ, ಡಿ. ದೇವರಾಜ್ ಅರಸ್ ಸರದಿ ಈಗ:
ನಮ್ಮ ಕಾಲದಲ್ಲಿ ಬೆಂಗಳೂರನ್ನು ಉದ್ಯಾನನಗರಿ ಎಂದು ಬೆಳೆಸಿದ್ದೆವು. ಎಲ್ಲೇ ಹೋಗಲಿ, ಎಲ್ಲವೂ ತಂಪು ತಂಪು. ಈಗ ಅದೇನೋ ಹಾಳಾದ . ಟಿ ಅಂತೆ. ಅದು ಬಂದ ಮೇಲೆ ಸರ್ವನಾಶವಾಯಿತು. ಉದ್ಯಾನನಗರಿ, ಅದ್ವಾನನಗರಿಯಾಯಿತು. ಬೆಂಗಳೂರಿನ ತಾಪಮಾನ ವರ್ಷೆ ವರ್ಷೇ ಏರುತ್ತಿದೆ ವಿನಃ ಇಳಿಯುವುದು ಕನಸಿನ ಮಾತಾಯಿತು. ನಮ್ಮ ಪ್ರತಿಮೆಗಳಿಗೂ ನೆರಳಿಲ್ಲ. ಈಗ ನಮ್ಮ ಬೆಂಗಳೂರಿನಲ್ಲಿ ಇನ್ನ್ಯಾವುದೋ ತಮಿಳು ಕವಿಯ ಪ್ರತಿಮೆ ಪ್ರತಿಷ್ಟಾಪಿಸುವುದಕ್ಕೆ ದೊಡ್ಡ ವಾಗ್ವಾದವೇ ನಡೆಯುತ್ತಿದೆಯಂತೆ. ನಮ್ಮ ಗೋಳಿನಲ್ಲಿ ಇನ್ನೊಬ್ಬರು ಬಂದು ಸೇರಿಕೊಂಡರು.


ಕೇಳಿದಿರಲ್ಲ ಈ ಪ್ರತಿಮೆಗಳ ಗೋಳು? ಇವು ಕೇವಲ ಸ್ಯಾಂಪಲ್ ಅಷ್ಟೆ. ಇನ್ನೂ ಬಹಳವಿರಬಹುದು ಇವರ ಗೋಳುಗಳು.

ಈಗ ವಿಚಾರಕ್ಕೆ ಬರೋಣ.

ಈ ತಮಿಳು ಕವಿ ತಿರುವಳ್ಳುವರ್ ಅವರ ಪ್ರತಿಮೆ, ಬೆಂಗಳೂರಿನಲ್ಲಿ ಬೇಕೇ ಬೇಡವೇ?

ಬೇಕು ಎನ್ನುವವರ ವಾದ ನೋಡೋಣ.
೧. ತಿರುವಳ್ಳುವರ್ ತಮಿಳಿನ ಶ್ರೇಷ್ಠ ಜ್ಞಾನಿ, ದಾರ್ಶನಿಕ, ಸಾಹಿತಿ ಇತ್ಯಾದಿ ಇತ್ಯಾದಿ. ಅಂತಹ ಮಹಾ ಪುರುಷರ ಪ್ರತಿಮೆ, ಬೆಂಗಳೂರಿನಲ್ಲಿ ಏಕೆ ಇರಬಾರದು?
೨. ಕನ್ನಡಿಗರು ಸಹಿಷ್ಣುಗಳು. ಅವರು ಕನ್ನಡಿಗರು, ತಮಿಳರು, ತೆಲುಗರು, ಉತ್ತರ ಭಾರತೀಯ, ಹೀಗೆ ಭೇದ ಭಾವ ಮಾಡುವುದಿಲ್ಲ. ಎಲ್ಲರನ್ನೂ ಒಂದೇ ದೃಷ್ಟಿಯಿಂದ ನೋಡುತ್ತಾರೆ. ಬೆಂಗಳೂರಿನಲ್ಲಿ ವಳ್ಳುವರ್ ರ ಪ್ರತಿಮೆ ಸ್ಥಾಪಿಸಿದರೆ ಕನ್ನಡಿಗರ ಸಹಿಷ್ಣುತೆ ಮೆರೆದಂತಾಗುತ್ತದೆ.
೩. ತಮಿಳುನಾಡಿನ ಜೊತೆ, ಹೊಗೆನೇಕಲ್ ಹಾಗು ಕಾವೇರಿ ವಿವಾದ ಒಂದು ಪ್ರತಿಮೆ ನೆಡುವುದರಿಂದ ಪರಿಹಾರವಾಗುವುದೆಂದರೆ, ಎಲ್ಲರ ಒಳಿತಿಗೆ ಪ್ರತಿಷ್ಟಾಪಿಸುವುದರಲ್ಲಿ ತಪ್ಪೇನು ಕಾಣಿಸುವುದಿಲ್ಲ.
೪. ಕನ್ನಡಕ್ಕೆ ಅನ್ಯಭಾಷಿಗರಿಂದ ತಕ್ಕ ಮಟ್ಟಿಗೆ ಕೊಡುಗೆಯಿದೆ (ತಮಿಳರು ಕೂಡ ಇದರಲ್ಲಿ ಸೇರಿದ್ದಾರೆ, ಉದಾ: ಮಾಸ್ತಿ, ಟಿ.ಪಿ.ಕೈಲಾಸಂ, ಮರಾಠಿಯ ದ. ರಾ. ಬೇಂದ್ರೆ). ಹಾಗಾಗಿ ವಳ್ಳುವರ್ ಪ್ರತಿಮೆ ಬರಲಿ. ಯಾಕೆ ಬೇಡ?

ಈಗ ಬೇಡ ಎನ್ನುವವರ ವಾದ ನೋಡೋಣ.
೧. ವಳ್ಳುವರ್, ತಮಿಳಿನ ಶ್ರೇಷ್ಠ ದಾರ್ಶನಿಕನಾದರೇನಂತೆ? ಕನ್ನಡ ಅಥವಾ ಕರ್ನಾಟಕಕ್ಕೆ ಅವರ ಕೊಡುಗೆಯೇನಾದರು ಇದೆಯೇ? ಅಂದ ಮೇಲೆ ಅವರ ಪ್ರತಿಮೆಯನ್ನು ಕರ್ನಾಟಕದಲ್ಲಿ ಏಕೆ ನೆಡಬೇಕು?
೨. ಸ್ವಾಮಿ, ಕನ್ನಡಿಗರು ಸಹಿಷ್ಣುಗಳು, ಎಂದು ಕನ್ನಡಿಗರನ್ನು ತುಳಿದಿದ್ದು ಸಾಕು. ಕನ್ನಡಿಗರ ಸಹಿಷ್ಣುತೆಗೆ ಆ ಕಾಲದಿಂದಲೂ ಅನ್ಯರು ಪೆಟ್ಟು ಕೊಡುತ್ತಲೇ ಬಂದಿದ್ದಾರೆ. ಇನ್ನು ಮೇಲೆ ಹಾಗಾಗಬಾರದು. ಕನ್ನಡಿಗರು ಅತಿಯಾಗಿ ಸಹಿಷ್ಣುಗಳಾಗಿದ್ದಕ್ಕೇ ಅವರಿಗೆ ಈ ಪರಿಸ್ಥಿತಿ ಬಂದಿರುವುದು. ತಮ್ಮ ನಾಡಿನಲ್ಲಿ ತಮ್ಮ ಭಾಷೆಯನ್ನೂ ಮಾತನಾಡುವುದಕ್ಕೆ ಅಂಜುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನೇನಾಗಬೇಕು? ಆದ್ದರಿಂದ ಕನ್ನಡಿಗರೇ, ಎಚ್ಚೆತ್ತುಕೊಳ್ಳಿ.
೩. ಇದು ತಮಿಳರದ್ದೆ ಕುತಂತ್ರ. ಸಮಸ್ಯೆಯ ಹಿನ್ನೆಲೆಯಲ್ಲಿ ತಮ್ಮ ಬೇಳೆಕಾಳು ಬೇಯಿಸಿಕೊಳ್ಳುತ್ತಿದ್ದಾರೆ. ಕರ್ನಾಟಕದಲ್ಲಿರುವ, ಅದರಲ್ಲೂ ಬೆಂಗಳೂರಿನಲ್ಲಿರುವ ತಮಿಳರ ಪರವಾಗಿ ಈ ರೀತಿಯಾಗಿ ತ.ನಾ ಸರಕಾರ ಹುನ್ನಾರ ಮಾಡುತ್ತಿದೆ. ಇದಕ್ಕೆ ಕರ್ನಾಟಕ ಬಲಿಯಾಗಬಾರದು.
೪. ಅನ್ಯಭಾಶಿಗರೆಂದು ಇವರು ಹೇಳುವ ಜನರು, ತಾವೆಂದು ಅನ್ಯಭಾಷಿಗರು ಎಂದು ಹೇಳಿಕೊಂಡಿಲ್ಲ. ಅವರೆಲ್ಲರೂ ತಾವು ಕನ್ನಡಿಗರೆಂದೇ ಮೆರೆದಿದ್ದಾರೆ. ಈ ರೀತಿ ಮಾತನಾಡಿ ಅವರ ಗೌರವಕ್ಕೆ ಧಕ್ಕೆ ಉಂಟುಮಾಡುತ್ತಿದ್ದೀರಿ. ಇದನ್ನು ನಿಲ್ಲಿಸಿ.
೫. ಸಮತೋಲನ ಮಾಡಲು ತಮಿಳುನಾಡಿನ ಚೆನ್ನೈ ಅಲ್ಲಿ ನಮ್ಮವನೇ ಆದ ಸರ್ವಜ್ಞ ಕವಿಯ ಪ್ರತಿಮೆಯನ್ನು ಸ್ಥಾಪಿಸುತ್ತೆವೆಂದು ಹೇಳಿ, ಅದನ್ನು ಚೆನ್ನೈ ಇಂದ ಸುಮಾರ್ ಮೈಲಿ ದೂರವಿರುವ ಯಾವುದೋ ಕೊಂಪೆಯಲ್ಲಿ ಪ್ರತಿಷ್ಠಾಪಿಸುತ್ತಿದ್ದೀರಿ. ಇದು ಎಲ್ಲಿಯ ನ್ಯಾಯ?

ಹೀಗೆ ಮುಂದುವರೆಯುತ್ತಾ ಸಾಗುತ್ತದೆ ಎರಡೂ ಕಡೆಗಿನ ಮಾತುಕತೆ.

ಈಗ ನನ್ನ ನಿಲುವಿಗೆ ಬರೋಣ.

ವೈಯಕ್ತಿಕವಾಗಿ ನನಗೆ ಆ ಪ್ರತಿಮೆಯೋಳಗಿರುವ ಎಲ್ಲಾ ಮಹಾನುಭಾವರ ಬಗ್ಗೆ ಗೌರವ ಇದ್ದೆ ಇದೆ. (ಕೆಲವರ ಬಗ್ಗೆ ಭಿನ್ನಾಭಿಪ್ರಾಯವೂ ಉಂಟು. ಇಲ್ಲಿ ಅದು ಅಪ್ರಸ್ತುತ). ನನ್ನ ನಿಲುವೇನೆಂದರೆ, ಮಹಾನುಭಾವರಿಗೆ ಪ್ರತಿಮೆ ಮಾಡಿದರೆ ಅವರಿಗೆ ಗೌರವ ಕೊಟ್ಟ ಹಾಗೆ ಎನ್ನುವುದು ಸುಳ್ಳು. ಏನೇ ಗೌರವವಿರಲಿ, ಅದು ನಿಮ್ಮ ಮನಸ್ಸಿನಲ್ಲಿರಬೇಕು. ಮನಸ್ಸಿನಲ್ಲಿ ಯಾವ ರೀತಿಯ ಗೌರವವು ಇಲ್ಲದೆ, ಬಾಹ್ಯವಾಗಿ ಈ ರೀತಿ ಪ್ರತಿಮೆಗಳಾಗಲಿ, ಸ್ಮಾರಕಗಳಾಗಲಿ ಎಷ್ಟೇ ಕಟ್ಟಿದರೂ ಏನೂ ಪ್ರಯೋಜನವಿಲ್ಲ.

ಅಲ್ಲದೇ, ಎಲ್ಲರಿಗೂ ಪ್ರತಿಮೆ ಕಟ್ಟುತ್ತಾ ಹೋದರೆ, ಅದನ್ನು ಎಲ್ಲಿ ಇಡುತ್ತೀರಿ? ಕೊನೆಗೊಂದು ದಿನ ಪ್ರತಿಮೆಗಳಿಗೆ ಜಾಗವೇ ಇರುವುದಿಲ್ಲ.

ಇನ್ನು ಕೆಲವರಿಗೆ ಪ್ರತಿಮೆಗಳು ಬೇಕು. ತಮ್ಮ ಮುಂದಿನ ಜನಾಂಗಕ್ಕೆ ಮಾದರಿಯಾಗಲಾದರೂ ಅವು ಬೇಕು ಎನ್ನುತ್ತಾರೆ. ಹೋಗಲಿ. ಹಾಗೆ ಎಂದಿಟ್ಟುಕೊಳ್ಳೋಣ. ಬೆಂಗಳೂರಿನಲ್ಲೇ, ಸರ್ವಜ್ಞನ ಪ್ರತಿಮೆ, ಯಾವ ಪ್ರಮುಖ ಜಾಗದಲ್ಲಿದೆ? ಪಂಪ, ರನ್ನ, ಜನ್ನ, ಪೊನ್ನ, ಕುಮಾರವ್ಯಾಸ ಇವರನ್ನೆಲ್ಲಾ ಎಲ್ಲಿ ಪ್ರತಿಷ್ಠಾಪಿಸಿದ್ದಾರೆ? ಹೋಗಲಿ. ಅವರೆಲ್ಲಾ ಹಳೆಯ ಕವಿಗಳಾದರು. ನಮ್ಮ ಪಂಜೆ ಮಂಗೇಶರಾಯರು, ಗೋವಿಂದ ಪೈಗಳು, ಗೊರೂರು ರಾಮಸ್ವಾಮಿ ಅಯ್ಯಂಗಾರರು, ಕುವೆಂಪು, ಬೀ. ಎಂ. ಶ್ರೀ, ದ. ರಾ. ಬೇಂದ್ರೆ, ಮಾಸ್ತಿ, ಇವರಿಗೆಲ್ಲ ಎಲ್ಲಿ ಜಾಗ ಕೊಟ್ಟಿದ್ದಾರೆ?

ಮೊದಲು ಇವರಿಗೆಲ್ಲಾ ಪ್ರತಿಮೆ ಮಾಡಿಸಿ ಆಮೇಲೆ ವಳ್ಳುವರ್, ನಾಣಯ್ಯ, ಕಬೀರ, ಇನ್ನೆಲ್ಲಾರಿಗೂ ಪ್ರತಿಮೆ ಮಾಡಿಸಲಿ. ಏನಂತೀರಾ?

6 comments:

Tejas said...

oLLe yochane. oppuththene.

Sandesh said...

@Tejas: Olledu.

Thilak Kumar M said...

Kannadigaradu vishaala hrudaya. I agree with you.

Sandesh said...

@Thilak - =)

vasant shetty said...

sakat baraha !

Sandesh said...

@ vasant - Dhanyavaadagalu.