Saturday, September 18, 2010

Director's Special: ಸಿನಿಮಾ ಮಾಡಲಾಗದ ಕಥೆಗಳು ಮತ್ತಿತರ ಲೇಖನಗಳು - ಒಂದು ನೋಟ.

೨ ವಾರಗಳ ಹಿಂದೆಯೇ ಬರಬೇಕಿದ್ದ ಈ ಅಂಕಣಕ್ಕೆ ನನ್ನ ಸೋಂಬೇರಿತನವೇ ಹೊಣೆ.

ಇದನ್ನು ವಿಮರ್ಶೆ ಎನ್ನಬೇಕೋ ಅನಿಸಿಕೆ ಎನ್ನಬೇಕೋ ತಿಳಿಯದೇ ಒಂದು ನೋಟ ಎಂದು ಉದ್ಧರಿಸಿರುವೆನಷ್ಟೇ. ವಿಮರ್ಶೆ ಎಂದರೆ ನನಗೆ ಕೆಲವೊಮ್ಮೆ ಭಯವಾಗುವುದುಂಟು. ನಾನು ವಿಮರ್ಶೆ ಎಂದು ಬರೆದೆನೆಂದರೆ ಹೆಚ್ಚಾಗಿ ಅದರ ಬಗ್ಗೆ ತಿರಸ್ಕಾರವೇ ಇರುತ್ತದೆ. ನನಗೆ ಅದು ಬಹಳವಾಗಿ ಹಿಡಿಸಿದರೆ ಅದರ ವಿಮರ್ಶೆಯ ಗೊಡವೆಗೆ ಹೋಗುವುದಿಲ್ಲ. ಏಕೆಂದರೆ, ಒಂದು ವಿಮರ್ಶೆಯನ್ನು ಬರೆದೆನೆಂದರೆ, ಅದರ ಬಗ್ಗೆ ಅಭಿಮಾನ ಮುಂಚಿನಂತಿರುವುದಿಲ್ಲ. ಇವೆಲ್ಲವನ್ನೂ ಮೀರಿ ಈ ಅಂಕಣವನ್ನು ಬರೆಯುತ್ತಿರುವೆನಾದ್ದರಿಂದ ಇದಕ್ಕೆ ಒಂದು ಹಿನ್ನೆಲೆಯನ್ನು ಬರೆಯೋಣ.

ಸದಭಿರುಚಿಯ ಕನ್ನಡ ಸಿನೆಮಾಗಳ ವೀಕ್ಷಕರಿಗೆ ಗುರುಪ್ರಸಾದರು ಅಪರಿಚಿತರೇನಲ್ಲ. ಅವರ 'ಮಠ' ಹಾಗು 'ಎದ್ದೇಳು ಮಂಜುನಾಥ' ಅವರ ಪ್ರತಿಭೆಗೆ ಸಾಕ್ಷಿ. ನನ್ನ ನೆಚ್ಚಿನ ನಿರ್ದೇಶಕರಲ್ಲಿ, ಅಗ್ರಗಣ್ಯರ ಸ್ಥಾನದಲ್ಲಿ ಇವರೂ ಒಬ್ಬರು. ೨ ವಾರದ ಹಿಂದೆ ಅವರ 'ಸಿನಿಮಾ ಮಾಡಲಾಗದ ಕಥೆಗಳು' ಹೊತ್ತಿಗೆ ಬಿಡುಗಡೆಯಾಯಿತು ಎಂದು ಪ್ರಜಾವಾಣಿಯ 'ಸಿನೆಮ ರಂಜನೆ'ಯಲ್ಲಿ ಓದಿ ಆ ಸಂಜೆಯೇ ಗಾಂಧಿನಗರದ 'ನವಕರ್ನಾಟಕ ಪ್ರಕಾಶನ'ದಲ್ಲಿ ಆ ಪುಸ್ತಕ ಕೊಂಡಮೇಲಷ್ಟೇ ಸಮಾಧಾನವಾದುದು. ವರ್ಷದ ಹಿಂದೆಯೇ ಅದರ ಬಗ್ಗೆ ಓದಿ ಇದ್ದ ಬದ್ದ ಪುಸ್ತಕಾಲಯಗಳಲೆಲ್ಲಾ ಹುಡುಕಾಡಿದ್ದಷ್ಟೇ ಬಂತು.

ಪೀಠಿಕೆ ಸಾಕು. ವಿಚಾರಕ್ಕೆ ಬರೋಣ. ಈ ಪುಸ್ತಕಗಳಲ್ಲಿ ಅವರ ೧೮ ಅಂಕಣಗಳಿವೆ. ಮಹಾಭಾರತದ ೧೮ ಅಧ್ಯಾಯಗಳ ತರಹ. ಹೆಹ್ಹೆಹ್ಹೆ. ಹಲವು ಹಿಂದೆಯೇ ಕೆಲವು ಪತ್ರಿಕೆಗಳಲ್ಲಿ ಪ್ರಕಟಗೊಂಡವು, ಕೆಲವು ಹೊಸತು. ಇವರ ಕಾವ್ಯನಾಮ ಶಾರದಾಸುತ. ನಿಜಕ್ಕೂ ಸರಸ್ವತಿ ಪುತ್ರರೇ. ತಮ್ಮ ಹತ್ತಿರದ ಬಳಗದವರಿಗೆಲ್ಲ ವಿಭಿನ್ನವಾಗಿ ಅರ್ಪಿಸುತ್ತ, ಪುಸ್ತಕವನ್ನು ಕೊಂಡು ಓದುವ ನಮಗೂ ಅರ್ಪಿಸುತ್ತಾರೆ. ಕೊನೆಗೆ ಶಾರದೆಗೂ.

ಈ ಎರಡು ವಾರಗಳಲ್ಲಿ ಇದನ್ನು ಓದಿ ೧೦ ದಿನದ ಮೇಲಾಯಿತು. ಕಥೆಗಳು ಜ್ಞಾಪಕವಿದ್ದರೂ, ಅದರಲ್ಲಿ ನನಗೆ ಬಹಳ ಇಷ್ಟವಾದ ಸಂಭಾಷಣೆಗಳು ಕೆಲವು ಮರೆತು ಹೋದಂತಿವೆ. ಈ ಅಂಕಣವು ಆ ಸಂಭಾಷಣೆಗಳನ್ನು ಭಟ್ಟಿ ಇಳಿಸುವುದಿಲ್ಲ. ಇನ್ನೊಮ್ಮೆ ಮೆಲುಕು ಹಾಕಿದಲ್ಲಿ ಕ್ಷಣಮಾತ್ರದಲ್ಲಿ ನೆನಪಿಗೆ ಬರುವುವು. ನಾನು ಬರೆಯಬೇಕೆಂದು ಕೊಂಡ ಕೆಲವು ಸಾಲುಗಳು ಬರದೆ ಇರಬಹುದು. ನೆನಪಾದಾಗ, ಮಗದೊಮ್ಮೆ ಓದಿದಾಗ, ಅವಶ್ಯವಾಗಿ ಅದರ ಬಗ್ಗೆ ಇದೇ ಅಂಕಣದಲ್ಲಿ ಬರೆಯುವೆನು.

ಈ ಕಥೆಗಳಲ್ಲಿ ಕೆಲವು ಕಚಗುಳಿ ಕೊಡುವಂತವುವು, ಎಲ್ಲವೂ ಅನುಭವಗಳು ಹಾಗು ಕೆಲವು ಸಾಮಾನ್ಯ ಕಥೆಯಾಗಿದ್ದರೂ, ನಿರೂಪಣೆಯಲ್ಲಿ ವಿಭಿನ್ನ ಜಾಡು ಹೊಂದಿರುವಂಥವು. ಕೊನೆಗೆ ಒಂದು ಸಂದರ್ಶನ.

ತಡಮಾಡದೆ ಪುಸ್ತಕಕ್ಕೆ ಇಳಿಯೋಣ.

ಲೇಖಕರು: ಗುರುಪ್ರಸಾದ್.
ಪುಸ್ತಕ: Director's Special
ಅಡಿಪಟ್ಟಿ: ಸಿನಿಮ ಮಾಡಲಾಗದ ಕಥೆಗಳು ಮತ್ತಿತರ ಲೇಖನಗಳು.
ಬೆಲೆ: ೧೫೦ ರೂಪಾಯಿಗಳು.

ಮೊದಲ ಮೂರು ಅಂಕಣಗಳು: ಇವೆಲ್ಲ ಒಟ್ಟುಗೂಡಿ ಒಂದು ಕಥೆ. ೨೦೦೫ರಲ್ಲಿ ರೂಪತಾರಕ್ಕೆ ಬರೆದ ಅಂಕಣಗಳು. ಆಸ್ಪತ್ರೆ ನರ್ಸೊಬ್ಬಳು (ಜಿನ್ಸಿ) ಆತ್ಮಹತ್ಯೆ ಮಾಡಿಕೊಂಡ ಸಾಮಾನ್ಯ ದಾರುಣ ಕಥೆ. ಶುರುವಿನಲ್ಲಿ ರಸವತ್ತಾಗಿ ಬಣ್ಣಿಸುವ ಈ ಕಥೆಯ ಮೊದಲ ಅಂಕಣದ ಕೊನೆಯಲ್ಲಿ ಎಣಿಸಲಾರದ ತಿರುವು ಸಿಕ್ಕು ಕಥೆಯು ರೋಚಕವಾಗುತ್ತದೆ. 'ಮಣಿ ಚಿತ್ರ ತಾಳ್' ಎಂಬ ಮಲಯಾಳಿ ಚಿತ್ರದ ಕಥೆಗಾರರನ್ನು ಹುಡುಕಿ ಕೇರಳಕ್ಕೆ ಹೊರಟ ಗುರು, ಬಸ್ಸಿನಲ್ಲಿ ಸಿಕ್ಕ ಈ ನರ್ಸಿನ ಕಥೆ ಹುಡುಕಿಕೊಂಡು ಬರೆದಂತಿದೆ. ಮೊದಲ ಅಂಕಣದಲ್ಲಿ ಗುರು ರ ಅನುಭವವಾದರೆ, ಮಿಕ್ಕೆರಡು ಅಂಕಣಗಳು ಆ ನರ್ಸಿನ ಗೋರಿಯ ಚೀತ್ಕಾರಗಳು.

ಈ ಕಥೆಯಲ್ಲಿ ನನಗೆ ಅಚ್ಚರಿಯಾದ ಒಂದು ಅಂಶವೆಂದರೆ, ಗುರುಪ್ರಸಾದರಿಗೆ 'ಆಪ್ತಮಿತ್ರ' ಚಿತ್ರ ಇಷ್ಟವಾದುದು. ಬುದ್ಧಿವಂತರು ರೀಮೇಕ್ ಮಾಡಬಾರದು; ದಡ್ಡರು ಸ್ವಮೇಕ್ ಮಾಡಬಾರದು ಎಂದ ಗುರು ಗೆ, ಆಪ್ತಮಿತ್ರ ಇಷ್ಟವಾದುದು ಅಚ್ಚರಿಯೇ. ವಯ್ಯಕ್ತಿಕವಾಗಿ ನನಗೆ ಆ ಚಿತ್ರ ಹಿಡಿಸಲಿಲ್ಲ. ಅದರ ಬಗ್ಗೆ ಚರ್ಚೆ ಮಾಡಲು ಈ ಅಂಕಣವನ್ನು ಉಪಯೋಗಿಸಲಿಚ್ಚಿಸುವುದಿಲ್ಲ. ಏನಿದ್ದರೂ ಅದು ಈ ಕಥೆಯಲ್ಲಿ ಗೌಣ.

ಜಿನ್ಸಿ ಹಾಗು ಅವಳ ಪ್ರಿಯಕರನ ಸಂಭಾಷಣೆಗಳು ನಿಮ್ಮ ಮೆದುಳಿನಲ್ಲಿ ಹೊಸ ಆಲೋಚನೆಗಳು ತಂದರೆ ಅದರಲ್ಲಿ ಆಶ್ಚರ್ಯವಿಲ್ಲವಷ್ಟೇ.

ನಾಲ್ಕನೇ ಅಂಕಣ: ಲೇಖಕರೇ ಹೇಳಿಕೊಳ್ಳುವಂತೆ, ಈ ಕಥೆ, ಅವರಿಗೆ ಒಬ್ಬರೇ ಕೂತು ಗುಂಡು ಹಾಕುವಾಗ ಹೊಳೆದ ಕಥೆ. ಆ ಎಣ್ಣೆಯ ಗುಣ ಪೂರ್ತಿಯಾಗಿ ಈ ಕಥೆಗೆ ಎರಕ ಹೊಯ್ಯ್ದಂತಿದೆ. ಪ್ರತಿಯೊಬ್ಬ ಗಂಡ, ಹೆಂಡತಿ (ಕಡೆ ಪಕ್ಷ, ಹೆಚ್ಚಿನವರು) ತಮ್ಮ ಜೀವನದ ಯಾವುದಾದರೂ ಒಂದು ಹಂತದಲ್ಲಿ ಯೋಚಿಸುವ ಒಂದು ತಂತುವನ್ನು ಆಧಾರವಾಗಿಟ್ಟುಕೊಂಡು ಬರೆದ ಕಥೆ. ದಿನೇ ದಿನೇ ಹೊಸ ಮುಖದ ಅರ್ಧಾಂಗಿಯ ಪಡೆವ ಕಥೆ. ಇಂತಹ ಕಥೆಗೆ ಗುರು ಅವರು ಕೊಟ್ಟ ಕೊನೆಯೇ ಸರಿಯಾದುದು. ಅದನ್ನು ಓದಿಯೇ ಸವಿಯಬೇಕು.

ಈ ಕಥೆಯ ಜಾಣ, ಜಗತ್ತಿನ ಎಲ್ಲ ಗಂಡಂದಿರ ಪ್ರತೀಕ.

ಐದನೇ ಅಂಕಣ: ನರಕಕ್ಕೂ ಸ್ವರ್ಗಕ್ಕೂ ಇರುವ ವ್ಯತ್ಯಾಸವನ್ನು ಚಿಕ್ಕದಾಗಿ ಚೊಕ್ಕವಾಗಿ ಈ ಕಥೆಯಲ್ಲಿ ನಿರೂಪಿಸಿದ್ದಾರೆ ಗುರು. ಈ ಕಥೆಯಲ್ಲಿ ಬರುವ ಭಗ್ನ ಪ್ರೇಮಿ ಗಿರಿಧರ ಹಾಗು ಅಪಘಾತ ಮೃತ ನಂದಿನಿ ಈ ದೃಷ್ಠಾಂತಕ್ಕೆ ಸಾಕ್ಷಿಯಾಗುತ್ತಾರೆ. ನರಕದ ವರ್ಣನೆ, ಭೂಮಿಯ ಜೊತೆ ಅದರ ಹೋಲಿಕೆ, ನರಕದ ಹಿಟ್ಲರ್ ಹುಣಸೆ ಮರ, ನರಕದಿಂದ ಸ್ವರ್ಗಕ್ಕೆ ಹೋಗುವ ಪರಿ, ಲೇಖಕರ ಕ್ರಿಯಾಶೀಲತೆಗೆ ಒಂದು ಸಾಕ್ಷಿ.

ಆರನೇ ಅಂಕಣ: ಜಲಪ್ರಳಯದ ಕಥನ. ೨೦೦೮ರಲ್ಲಿ ಮಯುರಕ್ಕೆ ಬರೆದ ಕಥೆ. ಪ್ರಳಯದ ಕೊನೆಯ ಹಂತ ನಮ್ಮ ಬೆಂಗಳೂರಿನಲ್ಲಿ. ಕಥಾನಾಯಕ, ಭಾರಧ್ವಾಜ ಸನಾತನಿ ಹಾಗು ಈಜುಗಾರ. ಆಟ ಹಲಸೂರಿನಿಂದ ಯೆಶವಂತಪುರದ ವರೆಗೂ ಈಜಬಲ್ಲ. ನಾಯಕಿ ಭವತಿ. ಭಾರಧ್ವಾಜ ಭಾವತಿಯರು, ಪ್ರಕೃತಿ ಹಾಗು ಪುರುಷರಾಗಿ ವಿಶ್ವಮಾನವನನ್ನು ಹಡೆವ ಕಥೆಯೇ ಇದು. ಹೊಸ, ಆದರ್ಶ ಸಮಾಜವನ್ನು ಕಟ್ಟುವ ಕನಸನ್ನು ಹೊಂದಿದೆ. ಭಗವಂತನ ನಿಟ್ಟುಸಿರು ಈ ಕಥೆಗೆ ಮಂಗಳ ಹಾಡುತ್ತದೆ.

ಏಳನೇ ಅಂಕಣ: ೨೦೦೯ ರಲ್ಲಿ ಚಿತ್ತಾರಕ್ಕೆ ಬರೆದುಕೊಟ್ಟ ಕಥೆ. ಗುರು ಪ್ರಕಾರ ಇದು ಸತ್ಯ ಕಥೆ. ಆದರೆ ಅವರ ಅಭಿಮಾನಿಗಳಿಗೆ ಅದು ನಂಬಲಸದಳ. ಶಿಷ್ಯನ ವೃದ್ಧಿಯನ್ನು ಕಂಡು ಸಹಿಸದ ಗುರು ಅವನನ್ನು ಕೂಪಕ್ಕೆ ತಳ್ಳುವ ಕಥೆ. ಫೋನ್ ಮಾಡಿ ಕಾಡುವ ಶಿಷ್ಯ. ಶಿಷ್ಯ ವೃತ್ತಿ ಮಾಡಿಕೊಂಡಿರುತ್ತೇನೆ ಎಂಬ ಭರವಸೆ ಇತ್ತ ಮೇಲೆಯೇ ಶಿಷ್ಯನಾಗಿ ಸ್ವೀಕರಿಸುವ ಗುರು, ಅವನ ಏಳಿಗೆ ಕಂಡು ಕೊಂಚ ಕರುಬುತ್ತಾನೆ. ಕೊನೆಯಲ್ಲಿ ಅವನನ್ನು ಕಳಿಸಬೇಕಾದಲ್ಲಿಗೆ ಕಳಿಸಿ ನೆಮ್ಮದಿಯ ಉಸಿರು ಬಿಡುತ್ತಾನೆ. ಇದಕ್ಕಿಂತ ಹೆಚ್ಚು ಹೇಳಿದಲ್ಲಿ ನಿಮ್ಮ ಆಸಕ್ತಿ ಕರಗುತ್ತದೆ. ನೀವೇ ಕಥೆ ಓದಿ.

ಎಂಟನೆ ಅಂಕಣ: ಹೋಟೆಲ್ಲಿನ ಪುರಾಣ. ಲಾಬಿಯಲ್ಲಿ ಕುಳಿತು ಇತರ ಟೇಬಲ್ಲಿನತ್ತ ಕಣ್ಣು ಹಾಯಿಸುತ್ತ ಗೆಳತಿಗಾಗಿ ಕಾಯುತ್ತ ಕೂರುವ ನಿರ್ದೇಶಕರು. ಇನ್ನೊಂದು ಜೋಡಿಯನ್ನು ನೋಡಿ ಮರುಗುವವರು. ಕೊನೆಯಲ್ಲಿ ಒಂದು ಊಹಿಸಬಹುದಾದ ತಿರುವು. ಓಡಿಸಿಕೊಂಡು ಹೋಗುವ ಕಥೆ.

ಒಂಬತ್ತನೇ ಅಂಕಣ: ೨೦೦೯ರಲ್ಲಿ ಪ್ರಜಾವಾಣಿಯಲ್ಲಿ ಪ್ರಕಟಿಸಿದ ಕಥೆ. ನಿಜವಾದ ಜ್ಞಾನಾರ್ಜನೆ ಹೇಗೆ ಮಾಡಬೇಕು ಎಂದು ಕಲಿಸುವ ಕಥೆ. ಮಲ್ಲೇಪುರಂ ಜೀ. ವೆಂಕಟೇಶ್ ರವರು ತಮಗೆ ಕಲಿಸಿ ಕೊಟ್ಟ ಪಾಠವನ್ನು ಇಲ್ಲಿ ಬೇರೆಯದೇ ರೀತಿಯಲ್ಲಿ ಸ್ವಾಮಿ ಹಾಗು ಮಾನಸಿಯ ಸಂಭಾಷಣೆಯಲ್ಲಿ ಕೊಟ್ಟಿದ್ದಾರೆ. ಸ್ವಾಮಿಗಳಿಗೆ ಆಲುಗಡ್ಡೆ ಕೊಂಡು ಹೋಗುವುದು ಭೈರಪ್ಪ ನವರ 'ನಿರಾಕರಣ' ದಲ್ಲಿ ಓದಿದ್ದ ಜ್ಞಾಪಕ. ಗುರು ಕೂಡ ಅದರಿಂದಲೇ ಸ್ಪೂರ್ತಿ ಹೊಂದಿರಬಹುದು.

ಹತ್ತನೇ ಅಂಕಣ: ೨೦೦೫ ರಲ್ಲಿ ರೂಪತಾರಕ್ಕೆ ಬರೆದ ಅಂಕಣ. ಕನ್ನಡದಲ್ಲಿ ಕಥೆ ಇಲ್ಲ ಎಂದು ಸುಮಾರು ವರ್ಷಗಳ ಹಿಂದೆ ನಮ್ಮ ಎನ್. ಎಸ್. ರಾವ್ ರ ಸುಪುತ್ರ ಎನ್. ಓಂಪ್ರಕಾಶ್ ರಾವ್ ರವರು ಬಾಯಿ ಬಡಿದು ಕೊಳ್ಳುತ್ತಿದ್ದಾಗ ಬರೆದ ಕಥೆ. ರಾಮಾಯಣದಲ್ಲಿ ಹೇಳದಿದ್ದ ರಾಮನ ಕಲ್ಪಿತ ಕಥೆ. ರಾಮನು ಹೇಗೆ ಕಾಮನೆಗಳನ್ನು ನಿಗ್ರಹಿಸಿ, ಏಕ ಪತ್ನಿ ವ್ರತವನ್ನು ಆಚರಿಸುತ್ತಿದ್ದನೆಂದು ಸುಂದರವಾಗಿ ಚಿತ್ರಿಸುವ ಕಥೆ. ಕಥೆಯಲ್ಲಿ ಬರುವ ಶ್ಯಾಮಲೆಯ ಹಾಗು ಅನಂಗಪಾತ್ರ ಇಷ್ಟವಾಗುವುದು. ಜೈ ಶ್ರೀರಾಮ್.

ಹನ್ನೊಂದನೇ ಅಂಕಣ: ತಮ್ಮ ತಂಗಿಯ ಮದುವೆ ಪ್ರಕರಣವನ್ನು ಸವಿಸ್ತಾರವಾಗಿ ಎಲ್ಲರಿಗೂ ಹಿಡಿಸುವಂತೆ ಇಲ್ಲಿ ಗುರು ಕೊಟ್ಟಿದ್ದಾರೆ. ಉಗಾದಿಯ ದಿನ ಬರೆದ ಈ ಅಂಕಣ, ಉಗಾದಿಯ ಹಲವಾರು ಅರ್ಥಗಳನ್ನು ಮೆಲುಕು ಹಾಕುತ್ತದೆ. ಅಣ್ಣ ತಂಗಿ ಕಥೆ ಸಿನೆಮಾಗಳಲ್ಲಿ ತೋರಿಸುವಂತಲ್ಲದೆ ಸಹಜವಾಗಿ ಮೂಡಿಬಂದಿದೆ.

ಹನ್ನೆರಡನೆಯ ಅಂಕಣ: ತಮ್ಮ ಸ್ನೇಹಿತರ ಗರ್ವ ಎಂಬ ಪತ್ರಿಕೆಯ ಮೊದಲ ಪ್ರತಿಗೆ ಮಧ್ಯ ರಾತ್ರಿ ಕಳೆದು ಬರೆದ ಕಥೆ. ಪೂರ್ತಿ ಕಥೆಯನ್ನೋದಿದ ಮೇಲೆ ತಿಳಿಯುತ್ತದೆ ಇದೊಂದು ಸ್ವಗತ. ಎಲ್ಲರ ಮನದಲ್ಲಿಯೂ ಇಂತಹ ಸ್ವಗತಗಳು ಹಲವಿವೆ. ಈ ಸ್ವಗತದಿಂದಲೇ ಪತ್ರಿಕೆಯ ಓದುಗನನ್ನು ಸ್ವಾಗತಿಸುವ ಅಂಕಣ. ಸಂಭಾಷಣೆ ಓದಿಯೇ ಆನಂದಿಸ ತಕ್ಕದ್ದು.

ಹದಿಮೂರನೇ ಅಂಕಣ: ೨೦೦೫ರಲ್ಲಿ ರೂಪತಾರಕ್ಕೆ ಬರೆದುದು. ಒಬ್ಬ ಹತಾಶ ಪ್ರೇಕ್ಷಕನ ಸಾಕ್ಷಾತ್ ದರ್ಶನ ಮಾಡಿಸುತ್ತಾರೆ. ಹೊಣೆಯರಿಯದ ನಿರ್ದೇಶಕರ ಅಸಡ್ಡೆಗೆ ಈ ಕಥೆ ಕನ್ನಡಿ ಹಿಡಿಯುತ್ತದೆ. ಸಿನಿಮ ಹೇಗೆ ಮಾಡಬೇಕೆಂಬ ಜಿಜ್ಞಾಸೆಯನ್ನು ಇಲ್ಲಿ ಕಾಣಬಹುದು. ಹಲವಾರು ಉದಾಹರಣೆಗಳ ಸಹಿತ. ಅಂಕಣದ ಮೊದಲಿಗೆ ಹಾಗು ಕೊನೆಯಲ್ಲಿ ಬರುವ ಎರಡೂ ಪ್ರಸಂಗಗಳು ನಗಿಸುತ್ತವೆ. ಹೆಚ್ಚೇಕೆ? ನೀವೇ ಓದಿ ನೋಡಿ.

ಹದಿನಾಲ್ಕನೇ ಅಂಕಣ: ೨೦೦೬ರಲ್ಲಿ ರೂಪತಾರಕ್ಕೆ ಬರೆದುದು. ಈ ಅಂಕಣವನ್ನು ಎರಡು ಪ್ರಸಂಗಗಳಲ್ಲಿ ಪ್ರೇಮವನ್ನು ಬಣ್ಣಿಸಲು ವ್ಯಯಿಸಿದ್ದಾರೆ. ಒಂದು ಓರ್ವ ಹಿರಿಯ ಕಲಾವಿದೆಯದ್ದು. ನನಗನಿಸಿದ ಮಟ್ಟಿಗೆ ಅದು 'ಭಾರ್ಗವಿ ನಾರಾಯಣ್', ರಂಗ ಕರ್ಮಿ ನಾಣಿಯವರ ಪತ್ನಿ. ಇನ್ನೊಂದು ತಮ್ಮದೇ ಸ್ವಂತ ಅನುಭವ. ಎರಡೂ ಮೊದಲ ಪ್ರೇಮ. ಎರಡರ ಹೋಲಿಕೆಯನ್ನೂ ಲೇಖಕರು ಮಾಡುತ್ತಾರೆ. ಎರಡೂ ದುಖಾಂತದಲ್ಲಿ ಕೊನೆಗೊಳ್ಳುತ್ತದೆ.

ಹದಿನೈದನೇ ಹಾಗು ಹದಿನಾರನೇ ಅಂಕಣ: ಮಠ ಚಿತ್ರಕ್ಕೆ ಮೀಸಲು. ಸೆನ್ಸಾರ್ ಸ್ಕ್ರಿಪ್ಟು ನೋಡಿ ಸಿನಿಮಾ ನೋಡದೆಯೇ ಕೆಂಗಣ್ಣಿಗೆ ಗುರಿಯಾದದ್ದು, ಸಿನಿಮಾ ನೋಡಿ ಆನಂದಿಸಿದ್ದು, ನಿರ್ದೇಶಕರು ಅದರ ಪೂರ್ವ ತಯಾರಿಗೆ ಎರಡು ಸೂಟ್ ಕೇಸು ಸಾಕ್ಷಿ ಪುರಾವೆಗಳನ್ನು ಹೊತ್ತು ಕೊಂಡು ಹೋದದ್ದು ಎಲ್ಲವು ನಗಿಸುತ್ತದೆ. ತನ್ನ ಸ್ವ ಸಾಮರ್ಥದ ಮೇಲೆ ನಂಬಿಕೆ ಇರುವ ನಿರ್ದೇಶಕನ ಧೈರ್ಯ, ನಿಮ್ಮನ್ನು ಎರಡೂವರೆ ಗಂಟೆ ಖುಷಿ ಪಡಿಸುತ್ತೇನೆ ಎನ್ನುವ ಅಚಲ ವಿಶ್ವಾಸ, ಗುರು ಅವರ ಬಗ್ಗೆ ನಮ್ಮಲ್ಲಿ ಗೌರವ ನೂರ್ಮಡಿಸುವಂತೆ ಮಾಡುತ್ತದೆ.

ಹದಿನೇಳನೆ ಅಂಕಣ: ಸಿನಿಮಲೋಕದ ಹಲವು ಸತ್ಯಗಳನ್ನು ಹೊರಗೆಡಹುತ್ತಾ ಅದರ ವಿವಿಧ ರಂಗುಗಳ ಬಣ್ಣನೆ ಮಾಡುತ್ತಾರೆ ಗುರು. ಬ್ಲಾಕ್ ಎಂಬ ಹಿಂದಿ ಸಿನಿಮಾ ಬಿಡುಗಡೆ ಆದ ಸಮಯ. ಅವರು ಅ ಚಿತ್ರದ ಬಗ್ಗೆ ಬಹಳ ಖುಷಿಯಲ್ಲಿದ್ದಾರೆ. ನನಗೆ ತಿಳಿದ ಮಟ್ಟಿಗೆ ಅದು ಹೆಲ್ಲೇನ್ ಕೆಲ್ಲರ್ ರ ಕಥೆ. ನಾನು ಆ ಚಿತ್ರ ನೋಡಿಲ್ಲ. ಅದರ ಬಗ್ಗೆ ಇಲ್ಲಿ ಬರೆಯಲಿಚ್ಚಿಸುವುದೂ ಇಲ್ಲ.

ಹದಿನೆಂಟನೆ ಅಂಕಣ: ಇದು ಒಂದು ಸಂದರ್ಶನ. ಸಂಯುಕ್ತ ಕರ್ನಾಟಕದಲ್ಲಿ ಇದೇ(2010) ಜೂನ್ ನಲ್ಲಿ ಪ್ರಕಟವಾದುದು. ಇಲ್ಲಿ ಗುರು ತಮ್ಮ ಇಲ್ಲಿಯವರೆಗಿನ ಹಾದಿ, ಮುಂದಿನ ಗುರು ಎಲ್ಲವನ್ನು ಹೊರಗೆಡಹಿದ್ದಾರೆ. ಕನ್ನಡದಲ್ಲಿ ೨೦ ಸಿನಿಮಾ ಮಾಡುವ ಇರಾದೆ ಓದಿ ಬಹಳವೇ ಖುಷಿ ಆಯಿತು. ಇನ್ನೊಂದು ಕಡೆ ಬೇಜಾರೂ ಆಯಿತು. ಇನ್ನೂ ಹೆಚ್ಚು ಚಿತ್ರಗಳು ಅವರ ಬತ್ತಳಿಕೆಯಿಂದ ಬರಲಿ. ಅವರ ಸತತ ಅಧ್ಯಯನ, ೫೦೦೦ಕ್ಕೂ ಹೆಚ್ಚು ಚಿತ್ರ ವೀಕ್ಷಣೆಯ ಅನುಭವ, ಕನ್ನಡ ಚಿತ್ರಗಳ ಬಗೆಗೆ ಅವರಲ್ಲಿರುವ ಕಳಕಳಿ ಯಾರನ್ನಾದರೂ ಮೆಚ್ಚಿಸುವಂಥಹದ್ದೆ.ಚಿತ್ರರಂಗದ ಅವರ ಕೆಲ ಅನುಭವಗಳು, ಅವರ ಉಪೇಂದ್ರರ ನಡುವಿನ ಸಂಬಂಧ, ಎಲ್ಲದರ ಬಗ್ಗೆ ಮಾತನಾಡುತ್ತಾರೆ. ಕಡೆಗೆ ಆಸ್ಕರ್ ಪ್ರಶಸ್ತಿಗೂ ಕಣ್ಣು ಹಾಕಿದ್ದಾರೆ. ಅವರು ಇಚ್ಚಿಸುವ ಎಲ್ಲವೂ ಅವರಿಗೆ ದಕ್ಕಲಿ ಎಂದು ನಾವು ಹಾರೈಸುತ್ತೇವೆ. aಆದರೆ ಅವರು ಕನ್ನಡ ಚಿತ್ರಗಳನ್ನೇ ಯಾವಾಗಲು ಮಾಡಲಿ ಎಂಬುದು ನಮ್ಮ ಆಸೆಯಷ್ಟೇ.

ಗುರು ಅವರಲ್ಲಿ ಕಾಣಬಹುದಾದ ಇನ್ನೊಂದು ಪ್ರಮುಖ ಅಂಶವೇನೆಂದರೆ, ತನ್ನ ಸಾಮರ್ಥ್ಯದ ಬಗ್ಗೆ ಅಚಲ ವಿಶ್ವಾಸವಿರುವುದು. ಅವರ ಈ ಗುಣ ನಮಗೆ ದೇವುಡು ರನ್ನು ಭೈರಪ್ಪನವರನ್ನು ನೆನೆಯುವಂತೆ ಮಾಡುತ್ತದೆ. ಇವರುಗಳಂತೆಯೇ ಗುರು ರವರ ಕನ್ನಡ ಅಸ್ಖಲಿತವಾದುದು.

ಕಡೆಯದಾಗಿ ಯಾವುದೇ ಪುಸ್ತಕದ ಬಗ್ಗೆ ಎಷ್ಟೇ ವಿಮರ್ಶೆ ಬರೆದರೂ ಅದನ್ನು ಓದಿದಂತಾಗುವುದಿಲ್ಲ. ನಿಮ್ಮಲ್ಲಿ ನನ್ನ ಅರಿಕೆಯೇನೆಂದರೆ ಈ ಪುಸ್ತಕವನ್ನು ಕೊಂಡು ಓದಿ. ನೀವು ಖಂಡಿತ ಇಷ್ಟ ಪಡುತ್ತೀರ. ನಿಮಗೆ ಗುರುಪ್ರಸಾದರ ಬಗ್ಗೆ ಒಲವಿದ್ದಲ್ಲಿ ನೀವು ಖಂಡಿತ ಆ ಕೆಲಸವನ್ನು ಮಾಡುವಿರೆಂದು ನನಗೆ ತಿಳಿದಿದೆ. ಓದಿದ ಮೇಲೆ ಇಲ್ಲಿ ಬಂದು ಒಂದು ಕಾಮೆಂಟ್ ಬರೆಯಿರಿ. ಅವರಿಂದ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಪುಸ್ತಕಗಳೂ ಚಿತ್ರಗಳೂ ಬರಲಿ.

ಸರಿ ಮುಂದಿನ ಅಂಕಣದಲ್ಲಿ ಮತ್ತೆ ಭೇಟಿಯಾಗುತ್ತೇನೆ. ಬರ್ಲಾ?

ವಿಶೇಷ ಸೂಚನೆ: ಕೆಲವು ಕಡೆ ಉತ್ಪ್ರೇಕ್ಷೆ ಎನಿಸುವಂತೆ ಬರೆಯಲಾಗಿದೆ ಎಂದೆನಿಸಿದರೆ, ಅದು ಈ ಪುಸ್ತಕದ ಗುಣ. ಇದಕ್ಕೆ ನಾನು ಜವಾಬ್ದಾರನಲ್ಲ.

2 comments:

KANNADATUBE said...

Nimma lekhana nijakku chennagidhe. Olleya pustaka vimarshagalige dhanyavadhagalu. Omme beti kodi: http://kannadatube.blogspot.com

Unknown said...

Nanna blogige bheti neediddakke vandanegalu. heege veekshisutta iri. naanu nimma blog nodteeni. =)