Wednesday, December 30, 2009

ಎರಡು ದಿನ ಎರಡು ಸಾವು.

ನೀವು ಕರ್ನಾಟಕದಲ್ಲಿದ್ದರೆ ಮಾಧ್ಯಮದಲ್ಲಿ, ಮೊಬೈಲಿನಲ್ಲಿ ನೀವೆಲ್ಲ ಈ ಸುದ್ದಿಯನ್ನು ಕೇಳೇ ಇರುತ್ತೀರಿ. ನಿನ್ನೆ ಸರಿ ಸುಮಾರು ಮಧ್ಯಾಹ್ನ ಹನ್ನೆರಡು ಗಂಟೆಗೆ ಸುಗಮ ಸಂಗೀತ, ಜನಪದ ಪ್ರಾಕಾರಗಳಲ್ಲಿ ತಮ್ಮನ್ನು ತಾವೇ ತೊಡಗಿಸಿಕೊಂಡ ಪ್ರಸಿದ್ಧ ಸಂಗೀತ ನಿರ್ದೇಶಕ, ಸಿ. ಅಶ್ವಥ್ ತೀರಿಕೊಂಡರು. ಕಿಡ್ನಿ ವೈಫಲ್ಯ ಅವರ ಸಾವಿಗೆ ಕಾರಣವಾಯಿತು. ಅದಾದ ದಿನದ ಒಳಗೆ ಕನ್ನಡ ಚಿತ್ರರಂಗದ ಪ್ರಮುಖ ನಟ ಡಾ|| ವಿಷ್ಣುವರ್ಧನ್ ಹೃದಯ ವೈಫಲ್ಯದಿಂದ ಬಳಲಿ ಆಸ್ಪತ್ರೆಗೆ ಸೇರುವ ಮುನ್ನವೇ ತೀರಿಕೊಂಡರೆಂದು ಈ ಬೆಳಿಗ್ಗೆ ಸುದ್ದಿ ಬಂತು.

ಇಬ್ಬರ ಸಾವನ್ನೂ ಬೇರೆ ಬೇರೆಯಾಗಿ ನಿರಪೇಕ್ಷವಾಗಿ ನೋಡೋಣ.

ಮೊದಲು ಅಶ್ವಥ್. ವಾರಗಳ ಹಿಂದೆ ಪತ್ರಿಕೆಯಲ್ಲಿ ಅಶ್ವಥ್ ರವರು ಅಸ್ವಸ್ಥರಾಗಿದ್ದರು ಎಂದು ಪ್ರಕಟವಾಗಿತ್ತು. ಅವರ ಆರೋಗ್ಯ ಅಷ್ಟರ ಮಟ್ಟಿಗೆ ಸರಿಯಾಗಿಲ್ಲವೆಂದು ಆಗಲೇ ಎಲ್ಲರಿಗೂ ತಿಳಿದಿತ್ತು. ಅವರು ಅಗಲುವ ಸಮಯ ಸನ್ನಿಹಿತವಾಯಿತೆಂದು ನಮಗೆಲ್ಲ ಆಗಲೇ ತಿಳಿಯಿತು. ಅವರ ಹುಟ್ಟಿದ ದಿನವೇ (ಆಂಗ್ಲ ನಿಯತಕಾಲಿಕದ ಪ್ರಕಾರ) ಅವರು ದೇಹತ್ಯಾಗ ಮಾಡಿದ್ದು ಅವರ ಸುಕೃತವೋ, ಕರ್ಮವೋ ನಾ ಕಾಣೆ. ೭೦ ವಸಂತಗಳನ್ನು ಅವರು ಕಳೆದದ್ದು ಹಲವಾರು ಸುಮಧುರ ಹಾಡುಗಳಿಗೆ ರಾಗ ಸಂಯೋಜನೆ ಮಾಡಿದ ಕೀರ್ತಿಗೆ ಪಾತ್ರರಾಗುತ್ತಾರೆ. ಅವರ ಶ್ರಾವಣ, ದೀಪಿಕಾ, ಕೈಲಾಸಂ ಹಾಡುಗಳು, ಕುವೆಂಪು ಹಾಡುಗಳನ್ನು ನಾನು ಹಲವಾರು ಬಾರಿ ಕೇಳಿದ್ದೇನೆ. ಇನ್ನಿತರ ಹಾಡುಗಳನ್ನು ನಾನು ರೇಡಿಯೋದಲ್ಲಿ ಕೇಳಿ ಆನಂದಿಸಿದ್ದೇನೆ.

ಹಲವಾರು ಸಿನಿಮಾ ಹಾಡುಗಳಿಗೆ ಧ್ವನಿಯಾದ ಅಶ್ವಥ್ ಕೆಲವು ಚಿತ್ರಗಳಿಗೆ ಸಂಗೀತವನ್ನೂ ನೀಡಿದ್ದಾರೆ. ಕಾಕನಕೋಟೆ, ಕಾಡು ಕುದುರೆ, ಹೀಗೆ ಹಲವು ಚಿತ್ರಗಳಿಗೆ ಸಂಗೀತವನ್ನೋದಗಿಸಿದ್ದಾರೆ. ಅವರ ಇತ್ತೀಚಿನ ಹಾಡುಗಳು 'ತಪ್ಪು ಮಾಡದವ್ರ್ ಯಾರವ್ರೆ?' 'ಕೆಂಚಾಲೋ ಮಚ್ಚಾಲೋ' ಇಂದಿಗೂ ಎಲ್ಲ ಚಿತ್ರ ರಸಿಕರ ಬಾಯಲ್ಲಿ ಓಡಾಡುತ್ತಿರುತ್ತದೆ. ಈ ರಸಿಕರಲ್ಲಿ ಹಲವರಿಗೆ ಅಶ್ವಥ್ ರ ಬಗ್ಗೆ ಹೆಚ್ಚು ತಿಳಿದಿಲ್ಲವೆಂಬುದು ವಿಷಾದಕರ.

ಹುಟ್ಟಿದವರು ಸಾಯಲೇ ಬೇಕು, ಇದು ಶತ ಸಿದ್ಧ. ಜನರಿಗೆ ಈ ನೇರ ಸತ್ಯವು ಯಾಕೆ ತಟ್ಟುವುದಿಲ್ಲವೋ ನನಗೆ ತಿಳಿಯುತ್ತಿಲ್ಲ. ಯಾವುದೇ ಪ್ರಮುಖ ವ್ಯಕ್ತಿ ಸತ್ತನಂತರ ಹುಯಿಲಿಡುವುದು ಸರ್ವೇ ಸಾಮಾನ್ಯ ಸಂಗತಿಯಾಗಿದೆ. ಅದಕ್ಕೆ ತುಪ್ಪ ಸುರಿಯಲು ನಮ್ಮ ಹಲವು ಮಾಧ್ಯಮಗಳು ಬಕಪಕ್ಷಿಯಂತೆ ಕಾತರರಾಗಿರುತ್ತಾರೆ. ಅವರಿಗೆ ಸಾವಿನ ಬಗ್ಗೆ ಸಂತಾಪವಾಗಲಿ ಸಂಕತವಾಗಲಿ alla.  ಸುದ್ದಿ ಬಿತ್ತರಿಸುವ ತವಕವಷ್ಟೇ. ಈ ತತ್ವವನ್ನೆಲ್ಲ ಆಮೇಲೆ ಮಾತಾಡೋಣ.

ಬೆಳಿಗ್ಗೆ ಏಳುತ್ತಲೇ ನನ್ನ ಗೆಳೆಯ, ಗೆಳತಿಯರೆಲ್ಲರಿಗೂ ಒಂದು ಎಸ್.ಎಂ.ಎಸ್. ಕಳಿಸುವುದು ನನ್ನ ಅಭ್ಯಾಸ. ಇಂದಿನ ಮೆಸೇಜ್ ಕಳಿಸಿದ ನಂತರ, ೩ ಜನ ನನಗೆ ವಿಷ್ಣುವರ್ಧನರ ಸಾವಿನ ಸುದ್ದಿ ಹೇಳಿದರು. ಬೆಳಿಗ್ಗೆ ಏಳುತ್ತಲೇ ಸಾವಿನ ಸುದ್ದಿ. ಟಿವಿ ಹಚ್ಚುತ್ತಲೇ ಇದೇ ಸುದ್ದಿ. ೫ ನಿಮಿಷ ನೋಡುತ್ತಾ ನನ್ನ ಪ್ರಾತಃಕರ್ಮಗಳನ್ನು ಮುಗಿಸಲು ಎದ್ದೆ.

ಎಲ್ಲ ಮುಗಿಸಿ ಪುನಃ ಸ್ವಲ್ಪ ಹೊತ್ತು ಟಿವಿ ನೋಡುತ್ತಾ ಕುಳಿತೆ. ಎಲ್ಲೆಡೆಯೂ ಇದೇ ಸುದ್ದಿ. ಈ ಇಡೀ ದಿನ ಇದೇ ಸುದ್ದಿಯೆಂದು ಖಾಯಂ ಆದ ಮೇಲೆ ಟಿವಿ ನೋಡುವುದನ್ನು ಬಿಟ್ಟು ಎದ್ದೆ.

ವಿಷ್ಣುವರ್ಧನರ ಬಗ್ಗೆ ಬರೆಯುವುದು ಸ್ವಲ್ಪವಿದೆ. ಈ ಹೊತ್ತಿನಲ್ಲಿ ಕೆಲವರಿಗೆ ಅದು ಸ್ವಲ್ಪ ಆಘಾತಕಾರಿಯಾದರೂ ನಿಷ್ಟುರವಾಗಿ ಹೇಳುವುದು ನನ್ನ ಕರ್ತವ್ಯವೆಂದು ಭಾವಿಸುತ್ತಾ ಬರೆಯುತ್ತೇನೆ.

ವಿಷ್ಣುವರ್ಧನ್ ಒಬ್ಬ ಒಳ್ಳೆಯ ನಟ ಎಂಬುದು ಎಲ್ಲರೂ ತಿಳಿದ ವಿಷಯ. ಅವರ ಸಾವಿನ ನಂತರ ಕೆಲವು ವೆಬ್ ಸೈಟುಗಳು ಕೆಲವು ಕಳಪೆ ದರ್ಜೆಯ ಸರ್ವೆಗಳನ್ನು  ಮಾಡುತ್ತಿದ್ದಾರೆ. ರಾಜಕುಮಾರ್ ಹಾಗು ವಿಷ್ಣುವರ್ಧನ್ರಲ್ಲಿ   ಯಾರು ಉತ್ತಮ? ರಾಜಕುಮಾರ್ ಹಾಗು ವಿಷ್ಣುವರ್ಧನ್ರಲ್ಲಿನ ದ್ವೇಷವನ್ನು ಅಭಿವ್ಯಕ್ತಿಸಿದ್ದಾರೆ. ಅವರೆಲ್ಲರಿಗೆ ಬುದ್ಧಿ ಬರಲಿ ಎಂದು ನಾವು ಹಾರೈಸೋಣ.

ಚಿತ್ರರಂಗದಲ್ಲಿ ಅವರು ನಡೆದ ಹಾದಿಯನ್ನು ನೋಡೋಣ. ೯೦ರ ದಶಕದವರೆಗೂ ಅವರ ಹೆಚ್ಚಿನ ಚಿತ್ರಗಳಲ್ಲಿ ಸತ್ವಯುತವಾದ ಕಥೆಯಿರುವುದನ್ನು ನಾವು ಕಾಣಬಹುದು. ವಂಶವೃಕ್ಷದಲ್ಲಿ ಬಾಲನಟನಾಗಿ ಬಣ್ಣದ ಬದುಕಿಗೆ ನಾಂದಿ ಹಾಡಿದ ವಿಷ್ಣು, ಪ್ರಮುಖ ನಟರಾದದ್ದು ಪುಟ್ಟಣ್ಣ ಕಣಗಾಲರ 'ನಾಗರಹಾವು' ಚಿತ್ರದ ಬಳಿಕ. ಆಶ್ಚರ್ಯವೆಂದರೆ ಅಂಬರೀಶ್ ರವರೂ  ಇದೇ ಚಿತ್ರದಿಂದ ತಮ್ಮ  ಪ್ರಯಾಣವನ್ನು ಪ್ರಾರಂಭಿಸಿದರು. ನಾಗರಹಾವಿನ ಸಿಟ್ಟಿನ ಯುವಕನ ಪಾತ್ರದಲ್ಲಿ ಅವರು ಮಿಂಚಿದರು.

ಅಲ್ಲಿಂದ ಹೆಚ್ಚಿನ ಪಕ್ಷ ಅಂತಹ ಪಾತ್ರಗಳಲ್ಲೇ ಕಾಣಿಸಿಕೊಳ್ಳುತ್ತ ಬಂದರು. ಸಹೋದರರ ಸವಾಲ್, ಕಳ್ಳ ಕುಳ್ಳ, ಚಾಣಕ್ಯ, ಜಿಮ್ಮಿ ಗಲ್ಲು, ಖೈದಿ, ಸಾಹಸ ಸಿಂಹ ಹೀಗೆ ಇನ್ನಿತರ ಚಿತ್ರಗಳಲ್ಲಿ ಕಾಣಿಸಿಕೊಂಡರು. ವೈವಿಧ್ಯ ಬೇಕೆಂದು ಇನ್ನು ಹಲವು ಪಾತ್ರ ಮಾಡಿದ್ದರಲ್ಲಿ ಪ್ರಮುಖವಾದದ್ದು ಹೊಂಬಿಸಿಲು, ಅವಳ ಹೆಜ್ಜೆ, ಗಲಾಟೆ ಸಂಸಾರ. ಇಂತಹ ಪಾತ್ರಗಳಲ್ಲೂ ಗಟ್ಟಿಗರು ಎಂದೆನಿಸಿಕೊಂಡರು.

ಇದಾದ ನಂತರ, ೮೦ರ ದಶಕದಲ್ಲಿ ಹೆಚ್ಚಾಗಿ ಕೌಟುಂಬಿಕ ಚಿತ್ರಗಳತ್ತ ವಾಲಿದರು. ಕರ್ಣ, ಕಥೆಗಾರ, ಜೀವನ ಚಕ್ರ, ಕರುಣಾಮಯಿ, ಒಂದಾಗಿ ಬಾಳು, ಹೃದಯಗೀತೆ, ಮಲಯ ಮಾರುತ ಎಲ್ಲವೂ ಹೆಸರು ಮಾಡಿದ ಚಿತ್ರಗಳು. ಇಲ್ಲಿ ಹಲವು ಚಿತ್ರಗಳನ್ನು ನಾನು ಹೆಸರಿಸಿಲ್ಲ. ೮೦ನೆ ದಶಕದ ಮೊದಲಲ್ಲಿ ಬಂದ 'ಬಂಧನ' ಚಿತ್ರ ಒಂದು ಹೊಸ ರೀತಿಯ ಚಿತ್ರಗಳನ್ನು ಹುಟ್ಟು ಹಾಕಿತೆಂದು ಹೇಳಿದರೆ ಅತಿಶಯವಲ್ಲ.

೯೦ರ ದಶಕದ ಮೊದಲಿನಲ್ಲಿ ಒಳ್ಳೆಯ ಚಿತ್ರಗಳನ್ನೇ ಕೊಡುತ್ತ ಬಂದ ವಿಷ್ಣು, ಅದಾದ ನಂತರ ಸತ್ವಯುಕ್ತವಾದ ಯಾವುದೇ ಸ್ವಮೇಕ್ ಚಿತ್ರದಲ್ಲಿ ನಟಿಸದಿದ್ದಿದ್ದು ವಿಷಾದಕರ. ೯೦ರ ದಶಕದ ಮೊದಲಲ್ಲಿ ಬಂದ ಸುಪ್ರಭಾತ, ಮುತ್ತಿನಹಾರ ಭರ್ಜರಿ ಯಶಸ್ಸು ಗಳಿಸಿತು. ನಂತರ ಸುನಿಲ್ ಕುಮಾರ್ ದೇಸಾಯಿ ಅವರ ಸಂಘರ್ಷ, ನಿಷ್ಕರ್ಶ ಚಿತ್ರಗಳೂ ಚೆನ್ನಾಗಿದ್ದವು. ನಂತರ ವಿಷ್ಣು ಹೆಚ್ಚಾಗಿ ರಿಮೇಕ್ ಚಿತ್ರಗಳತ್ತ ವಾಲಿದರು. ಈ ಮಧ್ಯ ಕೆಲವು ಸ್ವಮೇಕ್ ಚಿತ್ರಗಳಲ್ಲಿ ಕೆಲಸ ಮಾಡಿದ್ದೆಂದರೆ ಹಾಲುಂಡ ತವರು, ಮಾತಾಡ್ ಮಾತಾಡ್ ಮಲ್ಲಿಗೆ ಚಿತ್ರಗಳು.

ಅವರ ರಿಮೇಕ್ ಚಿತ್ರಗಳು ಗೆದ್ದಿರಬಹುದು. ಆದರೆ ಅವರ ನೈಜ ಅಭಿಮಾನಿಗಳನ್ನು ಕಳೆದುಕೊಳ್ಳುವಲ್ಲಿ ಅದು ಸಹಕಾರಿಯಾಯಿತು. ೯೦ರ ದಶಕದ ನಂತರ ಅವರು ಮಾಡಿದ ೯೦% ಹೆಚ್ಚಿನ ಚಿತ್ರಗಳು ರಿಮೇಕ್ ಗಳು. ಕೆಲವನ್ನು ಹೆಸರಿಸಬೇಕೆಂದರೆ ಯಜಮಾನ, ಸಿಂಹಾದ್ರಿಯ ಸಿಂಹ, ಕೋಟಿಗೊಬ್ಬ, ಆಪ್ತಮಿತ್ರ, ಜಮೀನ್ದಾರರು, ಸೂರ್ಯವಂಶ, ಬಳ್ಳಾರಿ ನಾಗ, ನಮ್ ಯಜಮಾನ್ರು, ವಿಷ್ಣು ಸೇನಾ, ಇತ್ಯಾದಿ ಇತ್ಯಾದಿ. ಹಲವು ಚಿತ್ರಗಳು ಕಳಪೆ ದರ್ಜೆಯವು ಎಂದು ಹೇಳಲು ವಿಷಾದಿಸುತ್ತೇನೆ.

ಅದರಲ್ಲಿಯೂ ಆ ಆಪ್ತಮಿತ್ರ ಚಿತ್ರವಂತೂ ನೋಡಿ ತಲೆ ಕೆಟ್ಟುಹೋಯಿತು. ೯೦ರ ದಶಕದ ನಂತರ ನಾನು ಅವರ ಸಿನೆಮ ನೋಡುವುದಿಲ್ಲವೆಂದು ತೀರ್ಮಾನಿಸಿದ್ದಕ್ಕೆ ಇದೇ ಕಾರಣ.

ಇರಲಿ. ರಾಜಕುಮಾರ್ ರ ನಂತರ ಕನ್ನಡ ಚಿತ್ರರಂಗದ ಚುಕ್ಕಾಣಿ ಹಿಡಿಯಲು ಸರಿಯಾದ ವ್ಯಕ್ತಿ ವಿಷ್ಣುವರ್ಧನ್ ಎಂದು ಎಲ್ಲರೂ ತೀರ್ಮಾನಿಸಿದ್ದಕ್ಕೆ ಖಡಾಖಂಡಿತವಾಗಿ ಆಗುವುದಿಲ್ಲವೆಂದು ನಿರಾಕರಿಸಿದ್ದು ಇದೇ ವಿಷ್ಣುವರ್ಧನ್. ಕನ್ನಡ ಭಾಷೆ, ಚಿತ್ರರಂಗಕ್ಕೆ ಸಂಬಂಧಿಸಿದಂತೆ ಯಾವುದೇ ಬಿಕ್ಕಟ್ಟಿಗೆ ಮುಂದೊತ್ತಿ ಹೋಗಲು ನಿರಾಕರಿಸುತ್ತಿದ್ದರು. ಇಂಥಾದ್ದರಲ್ಲಿ ಕೆಲವರು ರಾಜಕುಮಾರ್ ರಿಗೂ ವಿಷ್ಣುವರ್ಧನ್ ರಿಗೂ ತುಲನೆಯಲ್ಲಿ ತೊಡಗುತ್ತಾರೆ.  ವಿಪರ್ಯಾಸ.

ಕೊನೆಯದ್ದಾಗಿ ಒಂದು ಹೇಳಲಿಚ್ಛಿಸುತ್ತೇನೆ. ಆಪ್ತಮಿತ್ರ ಬಿಡುಗಡೆಯಾಗುವ ಮುನ್ನ ನಟಿ ಸೌಂದರ್ಯ ಸತ್ತರು. ಆ ಅನುಕಂಪದಿಂದಷ್ಟೇ ಆ ಚಿತ್ರ ೧ ವರ್ಷ ಓಡಿತು. ಇನ್ನು ಅದರ ಮುಂದುವರಿದ ಭಾಗ, ಆಪ್ತರಕ್ಷಕ, ವಿಷ್ಣುವರ್ಧನರ ಸಾಆವಿನ ಛಾಯೆಯಲ್ಲಿ ಅದೇನೇ ಕಥೆಯಿದ್ದರೂ ೧ ವರ್ಷ ಓಡುವುದು ಶತಸಿದ್ದ.

ಸತ್ತವರ ಬಗೆಗೆ ಕಟುವಾಗಿ ಮಾತಾಡಬಾರದು ನಿಜ. ವಿಷ್ಣುವರ್ಧನರ ಹಳೆಯ ಸಿನೆಮಾಗಳ ಬಗ್ಗೆ ಈಗಲೂ ನನಗೆ ಗೌರವವಿದೆ. ಆದರೆ ಅವರು ಅದನ್ನು ಕೊನೆಯ ತನಕ ಉಳಿಸಿಕೊಳ್ಳಲ್ಲಿಲ್ಲ ಎಂಬುದಷ್ಟೇ ನನ್ನ ಅಂಬೋಣ.

ಸತ್ತವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಬೇಡಿಕೊಳ್ಳುವುದರಲ್ಲಿ ನನಗೆ ನಂಬಿಕೆ ಅಷ್ಟಾಗಿ ಇಲ್ಲ. ಆದದ್ದಾಯಿತು ಎನ್ನುವ ಜಾಯಮಾನ ನನ್ನದು. ಕನ್ನಡ ಚಿತ್ರರಂಗ ಹಾಗು ಸುಗಮ ಸಂಗೀತ ಕ್ಷೇತ್ರ ಇಬ್ಬರು ರತ್ನಗಳನ್ನು ಕಳೆದುಕೊಂಡಿತು ಎನ್ನುವುದು ನಾಟಕೀಯವೆನ್ನಿಸುತ್ತದೆ. ಅವರು ಸತ್ತರೂ ಅವರ ಕೆಲಸದಲ್ಲಿ ಅವರನ್ನು ನೋಡಬಹುದೆನ್ನುವುದು ನನ್ನ ನೋಟ. ಏನಂತೀರ?

2 comments:

Chintanananda said...

I am writing from Atlanta,USA. I am surprised to hear that Apthamitra was average movie and could survive in Box office on sympathy base. I have seen the movie and really I liked Soundrya's action than Vishnu.
I am not bias here, but just expressing the surprise here. May be you are right.

Unknown said...

Hey Chintanananda,

Thanks for the comment. I could write up a detailed review on that movie. Will do it may be in the near future. May be the acting was good. Well its all relative. I've many adoring that movie a lot. I see nothing. This is just my view.

In short, I aws totally irritated by the story. (come on, a black magic specialist, visiting America to study Psychology??) This one single point is more than enough to screw it. One may like it, but I prefer watchin better movies. No pun intended.

Thanks for the comment once again. Keep visiting.