Wednesday, April 03, 2013

ದಿನವಹೀ...

ಸುಮ್ನೆ ಓತ್ಲಾ ಹೊಡ್ಕೊಂಡ್ ಕೂತಿದ್ದ.
ಏನೋ ಯೋಚನೆ ಬಂತು. ಮತ್ತೆಲ್ಲಿ ಕಳ್ದುಹೊಗತ್ತೋ ಅಂತ ತನ್ನ ಹಳೇ ಮೊಬೈಲಲ್ಲಿ ಅದನ್ನ ಗುರುತು ಹಾಕ್ಕೊಂಡ.

ಇಂಟರ್ನೆಟ್ ಆಕ್ಸೆಸ್ ಸಿಕ್ಕ ತಕ್ಷಣ ಸಿಕ್ಕ ಸಿಕ್ಕ ಸೈಟಲ್ಲಿ ತನಗೆ ಹೊಳೆದ ವಿಚಾರ ಬರ್ಕೊಂಡ.

ಇನ್ನು ಶುರು ಆಯ್ತು ನೋಡಿ ನಮ್ಮ ಹುಡುಗನ ಪೇಚಾಟ. ಗಂಟ್ ಗಂಟೆಗ್ ಒಂದ್ ಸರ್ತಿ ಚೆಕ್ ಮಾಡೋದು,

ಯಾರ್ ಲೈಕ್ ಮಾಡಿದ್ದಾರೆ?
ಏನ್ ಕಾಮೆಂಟ್ ಬಂದಿದೆ?
ತಾನು ಯಾರನ್ನ ದೃಷ್ಟಿಲಿ ಇಟ್ಟ್ಕೊಂಡು ಅದನ್ನ ಬರ್ದಿದ್ದ್ನೋ, ಅವ್ರು ಅದನ್ನ ನೋಡಿ ಇಷ್ಟ ಪಟ್ಟಿದ್ದಾರಾ?

ಹೀಗೆ ಯಾವಾಗ್ಲೂ ಚೆಕ್ ಮಾಡ್ಕೊಂಡ್ ಬಿದ್ದಿರಕ್ಕೆ ಶುರು ಹಚ್ಚ್ಕೊಂಡ...

ಏನೋ ಚೂರು ಪಾರು ಜನ ಇವನ್ ಕ್ಲೋಸ್ ಫ್ರೆಂಡ್ಸು 'ಸೂಪರ್ ಲೈಕ್', 'ROFL', ಅಂದ್ಕೊಂಡ್ಎಲ್ಲಾ ಲೈಕೂ ಕಾಮ್ಮೆಂಟು ಬಿಸಾಕಿದ್ರು.

ಇವನಿಗೆ ಸಮಾಧಾನ ಆಗ್ಲಿಲ್ಲ. ಛೆ! ನನ್ನ ಯೋಚನೆಗಳು ನನ್ನ ಫ್ರೆಂಡ್ಸ್ ಯಾರಿಗೂ ಅಷ್ಟ್ ಅರ್ಥ ಆಗೋದೇ ಇಲ್ಲ ಅಂತ ಸುಮ್ನಾಗೋದ .

ರಾತ್ರಿ ಕಳೆದು ಬೆಳಿಗ್ಗೆ ಆಯ್ತು. ಇವನ್ ಫ್ರೆಂಡ್ ಫ್ರೆಂಡ್ ಒಬ್ಬ ಇವ್ನ್ ಸ್ಟೇಟಸ್ ನೋಡಿ ಇಷ್ಟ ಪಟ್ಟು ತನ್ನ ಗೆಳೆಯರ ಜೊತೆ ಇವನನ್ನೂ ಟ್ಯಾಗ್ ಮಾಡಿ ಹಂಚಿದ್ದ.

ಇವನಿಗೆ ಸ್ವಲ್ಪ ಖುಷಿ ಆಯ್ತು, ಓಹ್!! ನನ್ನ ಯೋಚನೆಗಳು ಇನ್ನು ಹೊಸ ಜನರಿಗೆ ತಲ್ಪುತ್ತೆ ಅಂದ್ಕೊಂಡು ಬೀಗಿದ.

ಹೀಗೆ ಗುರ್ತು ಪರಿಚಯ ಇಲ್ದೆ ಇರೋ ೨೦ - ೩೦ ಜನ ಇವ್ನ್  ಬರ್ದಿದ್ದು ನೋಡಿ ಇಷ್ಟ ಪಟ್ಟಿದ್ದ್ರು. ಫುಲ್ ಖುಷ್ಹು ಹುಡ್ಗ. ಹಿರಿ ಹಿರಿ ಹಿಗ್ಗ್ದ.

ಸಾಯಂಕಾಲದ ಹೊತ್ತಿಗೆ ಇವನ್ ಇನ್ನೊಬ್ಬ ಫ್ರೆಂಡು ಅದೇ ಯೋಚನೇನ ತನ್ನದು ಅಂತ ಹಾಕ್ಕೊಂಡಿದ್ದ. ಆ ವಿಚಾರನೂ  ಇವನಿಗೆ ಗೊತ್ತಾಗಿದ್ದು  ಇನ್ನೊಬ್ಬ ಫ್ರೆಂಡ್ ಇಂದ.

ವಿಚಾರಿಸ್ಕೊಂಡು  ಮೂಲಕ್ಕೆ ಬಂದ್ರೆ ಹೀಗೆ ಹಂಚಿ ಹಂಚಿ ಯಾರೋ ಇವನ್ ಪೋಸ್ಟ್ ಗೆ ಇವನ್ ಹೆಸರನ್ನೇ ಹೊಡೆದ್ ಹಾಕಿ ಅವನ್ ಹೆಸರು ಹಾಕ್ಕೊಂಡಿದ್ದ.

ಬೇಜಾರಾಗಿ ತಿರ್ಗ ಓತ್ಲಾ ಹೊಡಿಯಕ್ಕೆ ಶುರು ಹಚ್ಚ್ಕೊಂಡ. 

Sunday, April 01, 2012

ಗೂಗಲ್ ನ ಕನ್ನಡ ಅವತರಣಿಕೆಗೆ ಒಂದು ಸಲಹೆ.

ಹೀಗೆ ಗೂಗಲ್ ಕನ್ನಡ ಬಳಸುತ್ತಿದ್ದೆ. ನೀವು ಗೂಗಲ್ ಅನ್ನು ಕನ್ನಡದಲ್ಲಿ ಉಪಯೋಗಿಸುತ್ತಿದ್ದರೂ ಅದರ ಲಾಂಛನ ಆಂಗ್ಲದಲ್ಲಿಯೇ ಬರುತ್ತಿದೆ.

ಹಾಗಾಗಿ ಗೂಗಲ್ಗಾಗಿ ನಾವೇ ಏಕೆ ಒಂದು ಹೊಸ ಆಯಾಮ ಕೊಡಬಾರದೆನ್ನಿಸಿತು? ತಕ್ಷಣ ನನ್ನ ಪೆದ್ದು ತಲೆಗೆ ಹೊಳೆದ ಆಲೋಚನೆಯನ್ನು ಕಾರ್ಯರೂಪಕ್ಕೆ ತಂದಿರಿಸಿದ್ದೇನೆ. ಕೆಳಕಂಡ ಚಿತ್ರಗಳು ಬಾಲಿಶವಾದರೂ ಅವು ನನ್ನದೆಂಬ ಖುಷಿ ನನಗಿದೆ. ನಿಮ್ಮಲ್ಲೂ ಈ ರೀತಿ ಆಲೋಚನೆ ಬಂದಿರಬಹುದು. ಹಲವರು ಇದನ್ನು ಬರೆದಿರಲೂ ಬಹುದು. ನನ್ನ ಮಟ್ಟಿಗಿನ ಯೋಚನೆಯನ್ನು ಹೊರಹಾಕಲು ಈ ಅಂಕಣವನ್ನು ಉಪಯೋಗಿಸುತ್ತಿದ್ದೇನೆ. ಗೂಗಲ್ ಇದನ್ನು ಗಣನೆಗೆ ತಂದುಕೊಂಡರೆ ಇನ್ನೂ ಹೆಚ್ಚಿನ ಖುಷಿಯಾಗುತ್ತದೆ. (ಆದರೂ ಇದು ಚಾಲ್ತಿಯಲ್ಲಿ ಬರುವ ಯಾವುದೇ ಹಂಬಲವಾಗಲಿ ನನ್ನಲಿಲ್ಲವೆಂದು ಈ ಮುಂಚೆಯೇ ಹೇಳಿಕೊಂದಿರುತ್ತೇನೆ). ನನ್ನ ಹುಚ್ಚು ಕಲ್ಪನೆಗಳನ್ನು ಹೊರಗೆಡವುತ್ತೇನೆ.

ಗೂಗಲ್ ಕನ್ನಡದ ಮುಖಪುಟಕ್ಕೆ ಈ ಚಿತ್ರ...
ನಾವು ಏನೇ ಹುಡುಕಿದರೂ ಗೂಗಲ್ ತನ್ನದೇ ಅಡಿಪಟ್ಟಿಯಲ್ಲಿ ಪುಟಗಳ ಸಂಖ್ಯೆಗಳನ್ನು ಹಾಕಿರುವುದನ್ನು ನೀವು ಕಂಡಿರುತ್ತೀರ. ಪ್ರತಿಯೊಂದು ಪುಟಕ್ಕೂ ಆಂಗ್ಲದ 'o' ಅಕ್ಷರವನ್ನು ಅಳವಡಿಸಿರುತ್ತಾರೆ. ಇದನ್ನು ಹೇಗೆ ಹೊರತರಬಹುದೆಂದು ಯೋಚಿಸುತ್ತಿದ್ದಾಗ ನನಗೆ ಈ ರೀತಿ ಸರಿಯಾಗಿ ಕಂಡು ಬಂತು.

ತುಂಬಾ ಬಾಲಿಶವಾಗಿದೆ ಎಂದು ನನಗೆ ಗೊತ್ತು. ನನ್ನ ಲಿನಕ್ಸ್ ಡಬ್ಬಿಯಲ್ಲಿ ಇರುವ ತಂತ್ರಾಂಶಗಳನ್ನು ಉಪಯೋಗಿಸಿ ಈ ಚಿತ್ರವನ್ನು ಬಿಡಿಸಿರುತ್ತೇನೆ. Gimp ಅನ್ನು ಉಪಯೋಗಿಸಬಹುದಿತ್ತು ಎಂದು ಎಲ್ಲೋ ಅನಿಸುತ್ತಿದೆ. ಅದಾನ್ನು ಕಲಿತು ಬಿದಿಸುವಷ್ಟು ವ್ಯವಧಾನ ನನ್ನಲ್ಲಿ ಸಧ್ಯಕ್ಕೆ ಇಲ್ಲವಾದ ಕಾರಣ kolourpaint ಉಪಯೋಗಿಸಿ ಬರೆದಿರುತ್ತೇನೆ. ಗೂ ಕಾರ ಬರುಬರುತ್ತಾ ಸೋತ್ತಗಾಗಿರುವುದನ್ನು ನೀವೇ ಕಣ್ಣಾರೆ ನೋಡಿದ್ದೀರಿ. ನೀವು ಉತ್ತಮ ಚಿತ್ರವನ್ನು ಕೊತ್ತಿರಾದರೆ ಅದನ್ನು ಪ್ರಕಟಿಸಿ ನಿಮ್ಮ ಹೆಸರನ್ನು ನಮೂದಿಸುತ್ತೇನೆ. :-)

ಎಲ್ಲ ಭಾರತೀಯ ಭಾಷೆಗಳನ್ನು ಇದೇ ರೀತಿ ಬರೆಯಬಹುದು ಎಂದು ನಾನು ನಂಬಿರುತ್ತೇನೆ. ಕಡೆಯ ಪಕ್ಷ ತೆಲುಗಿಗೂ ಇದನ್ನೇ ಅಳವಡಿಸಬಹುದು ಅಲ್ಲವೇ? ಈ ಮೂಲಕ ಗೂಗಲ್ ಗೆ ಕನ್ನಡದ ಜನರ ಬಳಿ ಇನ್ನೂ ಹತ್ತಿರ ಸಾಗುವ ಒಂದು ಸೂಚನೆಯನ್ನು ಕೊಡುವ ಭಾಗ್ಯ ನನ್ನದು.

ಈ ಕಾಣಿಕೆಯು ಮೂರ್ಖರ ದಿನಕ್ಕಲ್ಲ. ರಾಮನವಮಿಗೆ.

ಅಂಕಣವನ್ನು ಓದಿದ್ದಕ್ಕೆ ಧನ್ಯವಾದಗಳು.

ಶ್ರೀರಾಮ.

Sunday, September 18, 2011

ಭಾಷಾಭಿಮಾನ

ಅವನು ದಿನಸಿ ತರಲು ಅಂಗಡಿಗೆ ಹೋದ. ಒಂದೋ ಎರಡೋ ವಸ್ತುಗಳನ್ನಷ್ಟೇ ಕೊಂಡುಕೊಳ್ಳಬೇಕಾದ್ದರಿಂದ ಇವನ ಕೆಲಸ ಬೇಗ ಮುಗಿಯಿತು. ಹಣ ಪಾವತಿಸಲು ಬಿಲ್ಲಿಂಗ್ ಕೌಂಟರಿನತ್ತ ಹೆಜ್ಜೆ ಹಾಕಿದ.

ಇವನ ಎದುರುಗಡೆ ಇಬ್ಬರಿದ್ದರು. ಮುಂದಿದ್ದ ಹೆಂಗಸು, ಕೌಂಟರಿನಲ್ಲಿದ್ದವನ ಜೊತೆ ತೆಲುಗಿನಲ್ಲಿ ವ್ಯವಹರಿಸುತ್ತಿದ್ದಳು. ಬಿಲ್ಲು ೪೧ ರುಪಾಯಿಯಾಗಿದ್ದರೆ ೫೦೦ರ ನೋಟು ಮುಂದೆ ಹಿಡಿದು ಚಿಲ್ಲರೆ ಕೊಡು ಎಂದು ಲಘುವಾಗಿ ಜಗಳ ಕಾಯುತ್ತಿದಳು.

ಕೌಂಟರಿನವ: ೫೦೦ ರುಪಾಯಿ ಚಿಲ್ಲರೆ ಇಲ್ಲ ಮೇಡಂ. ಚಿಲ್ಲರೆ ಕೊಡಿ.
ಮಹಿಳೆ: ನಾ ತೋ ಲೇದು ಬಾಬು. ನುವ್ವೇ ಪಂಪಿಚ್ಚೆಯಿ.
ಕೌಂಟರಿನವ: ಇಪ್ಪುಡೆ ಓಪನ್ ಚೇಸ್ಯಾನು. ನಾ ತೋ ಲೇದು. ಮೀರೆ ಈಯಂಡಿ.
....
....
....

ಕೊನೆಗೂ ಜಗಳ ಮುಗಿದು ಅವನು ತನ್ನ ಕ್ಯಾಶ್ ಕೌಂಟರಿನಲ್ಲೆ ಚಿಲ್ಲರೆ ಹುಡುಕಿ ಹುಡುಕಿ ತೆಗೆದು ಕೊಟ್ಟ.

ಅವಳು ಚಿಲ್ಲರೆ ತೆಗೆದುಕೊಂಡು ತನ್ನ ಕಾರಿನತ್ತ ಕಾಲ್ಕಿತ್ತಳು. ಅವಳ ಹಿಂದಿದ್ದ ಆಸಾಮಿಗೆ ಕೌಂಟರಿನವ 'ಅವಳ ಧಿಮಾಕು ನೋಡು' ಎಂದು ದೂರಿತ್ತನು. ಆ ಆಸಾಮಿಯೂ ಅವನ ಕೋಪಕ್ಕೆ ಸೊಪ್ಪು ಹಾಕುತ್ತ ತನ್ನ ಕೆಲಸವನ್ನು ಮುಗಿಸಿದನು.

ಈಗ ಇವನ ಸರದಿ. ೩೪ ರುಪಾಯಿ ವ್ಯಾಪಾರ ಮಾಡಿದ್ದ. ೫೦ ರುಪಾಯಿಯನ್ನಿತ್ತು ಚಿಲ್ಲರೆಗಾಗಿ ಕಾದು ನಿಂತ.

ಕೌಂಟರಿನವ: ಚಿಲ್ಲರೆ ಬೇಕು ಸಾರ್! ಚಿಲ್ಲರೆ ಕೊಡಿ.
ಇವನು: ಇಲ್ಲಪ್ಪ. ನನ್ನ ಹತ್ರ ಬರೀ ಈ ೫೦ ರುಪಾಯಿ ಮಾತ್ರ ಇದೆ.
ಕೌಂಟರಿನವ: ಎಲ್ಲ ಹೀಗಂದ್ರೆ ನಾನ್ ಎಲ್ಲಿಗೆ ಹೋಗ್ಲಿ? ಸರಿ, ಇನ್ನು ರುಪಾಯಿಗೆ ಏನಾದ್ರೂ ತೊಗೊಳ್ಳಿ.

ಇವನು ವಿಧಿಯಿಲ್ಲದೇ ೫ ರುಪಾಯಿಗೆ ಸಣ್ಣ ಮಕ್ಕಳು ತಿನ್ನುವ ಚಾಕಲೇಟ್ ಕೊಂಡ. ೧೧ ರುಪಾಯಿ ಚಿಲ್ಲರೆಯನ್ನಿತ್ತು ಅವನು ಮುಂದಿನ ಗಿರಾಕಿಯತ್ತ ಕೇಳಿದ.

ಅವನ್ಯಾರೋ ಹಿಂದಿಯವ. 'ಚಾವಲ್ ಕಾ ರೇಟ್ ಕ್ಯಾ ಹೇ??'
ಕೌಂಟರಿನವ: ಹಿಂದಿ ಇಲ್ಲ. ಕನ್ನಡ ಕನ್ನಡ!! ಹಿಂದಿ ನಹಿ.

ಸಾಮಾನು ತೆಗೆದುಕೊಳ್ಳುತ್ತಿದ್ದ ಇವನಿಗೆ ರೇಗಿತು. 'ಹಿಂದಿ ಬೇಡ ಅನ್ನೋ ನೀವು, ತೆಲುಗಲ್ಲಿಯೂ ಮಾತಾಡಬೇಡಿ. ಬರೀ ಕನ್ನಡದಲ್ಲೇ ಮಾತಾಡಿ' ಎಂದು ಹೇಳಿ ಅಲ್ಲಿಂದ ಹೋರಾಟ.

ಕೌಂಟರಿನವನ ಮೊಗದಲ್ಲಿ ಏನೋ ಅರ್ಥವಾದ ಹೊಸ ನಗುವಿತ್ತು.

Friday, August 26, 2011

ಎಲ್ಲರಿಗೂ ಕನ್ನಡ ಕಲಿಸುವ ಪದ: ಮಾಡಿ

ರೀ ಡ್ರೈವರ್!! ಡೋರ್ ಓಪನ್ ಮಾಡಿ!

ರೀ! ಸ್ವಾಮಿ! ಸ್ವಲ್ಪ ಅಡ್ಜಸ್ಟ್ ಮಾಡ್ಕೊಂಡ್ ಒಳಗ್ ನುಗ್ಗ್ರಿ!

ಎಂಜಾಯ್ ಮಾಡಿ!!

ಸ್ವಲ್ಪ ಸ್ಪೇಸ್ ಮಾಡಿ!!

ಹೋದ ತಕ್ಷಣ ನಂಗೆ ಒಂದು ಕಾಲ್ ಮಾಡಿ!

ಏನಿದು ಒಂದಕ್ಕೊಂದು ಸಂಬಂಧಾನೇ ಇಲ್ಲ ಅಂತ ಯೋಚಿಸ್ತಿದ್ದೀರಾ? ಇವು ನಮ್ಮ ಉದ್ಯಾನ ನಗರಿಯ ಕನ್ನಡದ ತುಣುಕುಗಳು (ಸ್ಯಾಂಪಲ್ಲುಗಳು) ಅಷ್ಟೇ.

ಮಾಡಿ.

ಬೆಂಗಳೂರಿನಲ್ಲಿ ಯಾರ ಬಳಿಗೂ ಹೋಗಿ ಕನ್ನಡದಲ್ಲಿ ಮಾತನಾಡಿದರೆ ಅವರು ಒಮ್ಮೆಯಾದರು ಈ ಪದವನ್ನು ಉಪಯೋಗಿಸದೇ ಇರುವುದಿಲ್ಲ. ಅವರಿಗೆ ಕನ್ನಡ ಬರಲಿ, ಬರದೇ ಇರಲಿ ಈ ಪದವಂತೂ ಹೆಚ್ಚಿನ ಪಕ್ಷ ತಿಳಿದೇ ಇರುತ್ತದೆ. ಕಾಲೇಜು, ಕಛೇರಿಗಳಲ್ಲಿಯ ಕನ್ನಡೇತರರಂತೂ ತುಸು ಹೆಚ್ಚಾಗಿಯೇ ಉಪಯೋಗಿಸಿದ್ದಾರೆ.

ಪ್ರಿಂಟ್ ಔಟ್ ಮಾಡಿ.
ಕ್ಲಾಸ್ ಬಂಕ್ ಮಾಡಿ.
ಲಂಚ್ ಮಾಡಿ.
ಸಿಗ್ನಲ್ ಜಂಪ್ ಮಾಡಿ.
ಸ್ಟಾಪ್ ಮಾಡಿ.
...
...
...

ಇಡೀ ವಾಕ್ಯವನ್ನು ಆಂಗ್ಲದಲ್ಲಿ ಹೇಳಿ ಕೊನೆಯಲ್ಲಿ ಈ 'ಮಾಡಿ' ಬಾಲಂಗೋಚಿಯನ್ನು ಅಂಟಿಸಿಬಿಡುತ್ತಾರೆ. ಹೀಗೆ ಹೇಳುವುದರಿಂದ ಅವರು ಕನ್ನಡ ಮಾತಾಡುತ್ತೇವೆ ಎಂದು ಸಾಧಿಸುತ್ತಾರೆ. ಕೆಲವೊಮ್ಮೆ ಈ ವಾಕ್ಯಗಳಿಗೆ ಸರಿಯಾದ ಅರ್ಥವಿರದಿದ್ದರೂ ನಮಗದು ಅರ್ಥವಾಗಿ ಬಿಡುತ್ತದೆ.

ಇದೆಲ್ಲಾ ಶುರುವಾಗಿದ್ದು ಎಲ್ಲಿಂದ? ಎಂಬ ಪ್ರಶ್ನೆಯನ್ನು ನಾವೇ ಹಾಕಿಕೊಳ್ಳುವುದು ಒಳ್ಳೆಯದು.

ನನಗೆ ತಿಳಿದ ಮಟ್ಟಿಗೆ ಇದನ್ನು ಮೊದಲು ಶುರು ಮಾಡಿದವರು ಮೊಬೈಲು ಸೇವೆಯ ವಿತರಕರಾದ 'ಸ್ಪೈಸ್' (ಈಗಿನ ಐಡಿಯಾ) ಸಂಸ್ಥೆಯವರು. ಮೊಬೈಲು ಕರೆಗಳು ದುಬಾರಿಯಾಗಿದ್ದ ಕಾಲದಲ್ಲಿ ಕಡಿಮೆ ದರದ ಪ್ಲ್ಯಾನ್ ಒಂದನ್ನು ಬಿಡುಗಡೆ ಮಾಡಿದ ಸಂದರ್ಭದಲ್ಲಿ 'ಸಿಂಪ್ಲಿ ಟಾಕ್ ಮಾಡಿ' ಎಂಬ ಅಡಿಬರಹದೊಂದಿಗೆ ಇದರ ಪ್ರಚಾರವನ್ನು ಮೊದಲುಮಾಡಿತು.

ವೃತ್ತಪತ್ರಿಕೆಗಳಲ್ಲಿ, ರೇಡಿಯೋಗಳಲ್ಲಿ ಇದನ್ನೇ ಕೇಳುತ್ತಿದ್ದ ಮಂದಿಗೂ ಇದೇ ರುಚಿ ಹಿಡಿದು ಇದರಂತೆಯೇ ತಮಾಷೆಯಾಗಿ ಮಾತನಾಡಲು ಪ್ರಾರಂಭಿಸಿತು. ಅದರಲ್ಲೇ ಒಂದು ರೀತಿಯ ಮೋಜು ಕಂಡಿತು. ಹಾಗೆ ಅದು ಬೃಹದಾಕಾರವಾಗಿ ಬೆಳೆದೂ ಬಿಟ್ಟಿತು. ನಮ್ಮ ಮಾಹಿತಿ ತಂತ್ರಜ್ಞರ ಕಿವಿಗಳ ಮೇಲೆ ಬಿದ್ದಮೇಲೆ ಅವರಿಗೆ ಎಲ್ಲಿಲ್ಲದ ಹುರುಪು ತುಂಬಿತು. ಸಿಕ್ಕ ಸಿಕ್ಕ ಕಡೆ ಇದನ್ನೇ ಉಪಯೋಗಿಸತೊಡಗಿದರು. ಬೆಂಗಳೂರಿನಲ್ಲಿರುವ ಎಲ್ಲರಿಗೂ ಈ 'ಮಾಡಿ' ಪದ ಕೆಲವೇ ದಿನಗಳಲ್ಲಿ ಎಂತಹ ಮೋಡಿ ಮಾಡಿತ್ತೆಂದು ತಿಳಿದವರೇ ಬಲ್ಲರು. ದಿನವಿಡೀ ಸಾವಿರ ಮಾಡಿಗಳನ್ನು ಕೇಳಿದವರಿದ್ದಾರೆ. ಕೇಳೀ ಕೇಳಿ ತಲೆ ಚಿಟ್ಟು ಹಿಡಿಸಿಕೊಂಡವರಿದ್ದಾರೆ.

ಪ್ರಮುಖ ಶೂ ತಯಾರಕರಾದ ನೈಕೀ ಗೆ ನಿಜವಾಗಿಯೂ ಈ ಪದದ ಅರ್ಥ ತಿಳಿದುಬಿಟ್ಟಿದ್ದರೆ ಅವರ 'Just Do it' ಕನ್ನಡದಲ್ಲಿ 'ಸುಮ್ನೆ ಮಾಡಿ' ಆಗಿಬಿಡುತ್ತಿತ್ತು. ಹೆಹ್ಹೆಹ್ಹೆ!!

ಇದನ್ನೇ ಹಲವರು ಪ್ರೇರಣೆಯಾಗಿ ತೆಗೆದುಕೊಂಡರು. ಬಟ್ಟೆ ಅಂಗಡಿಯವರು, ಚಿನ್ನದ ಅಂಗಡಿಯವರು ಇನ್ನೂ ಹಲವರು ಇದನ್ನೇ ಉಪಯೋಗಿಸಲು ಶುರು ಮಾಡಿದರು. ಎಲ್ಲರ ಬಾಯಲ್ಲಿಯೂ 'ಮಾಡಿ' ನಲಿದಾಡುತ್ತಿತ್ತು.

ಆದರೆ, ಈಗ;

ನಾವುಗಳೇ ಅದನ್ನು ಕನ್ನಡೇತರರಂತೆ ಉಪಯೋಗಿಸುತ್ತಿದ್ದೇವೆ. ಬಸ್ಸಿನಲ್ಲಿ ಎಷ್ಟು ಮಂದಿ 'ಬಾಗಿಲು ತೆಗೆಯಿರಿ' ಅನ್ನುತ್ತೇವೆ? ಎಲ್ಲರೂ 'ಡೋರ್ ಓಪನ್ ಮಾಡಿ'ಗೆ ಶರಣಾಗಿದ್ದೇವೆ. ಕಾಲ್ ಮಾಡಿ, ಫೋನ್ ಮಾಡಿ, ಕನೆಕ್ಟ ಮಾಡಿ, ಎಲ್ಲಾ ಮಾಮೂಲಾಗಿ ಬಿಟ್ಟಿದೆ. ಈ ಉದಾಹರಣೆಗಳು ಕೊಡುತ್ತಾ ಹೋದರೆ ಹನುಮಂತನ ಬಾಲದಂತೆ ಬೆಳೆಯುತ್ತಲೇ ಹೋಗುತ್ತದೆ. ಎಲ್ಲೋ ಒಂದು ಕಡೆ ಎಲ್ಲ ಕನ್ನಡ ಅಭಿಮಾನಿಗೂ ಇದು ಬೇಸರ ತರಿಸುತ್ತದೆ.

ಕನ್ನಡಿಗರೆಲ್ಲರಲ್ಲೂ ನನ್ನ ಮನವಿ ಇಷ್ಟೇ. ಕನ್ನಡ ಶ್ರೀಮಂತ ಭಾಷೆ. ಅದನ್ನು ಸಮೃದ್ಧವಾಗಿ ಬಳಸಿ. ಭಾಷೆ ಬರದಿರುವವರಂತೆ ಎಲ್ಲದಕ್ಕೂ 'ಮಾಡಿ'ಯನ್ನು ಆಂಟಿಸಬೇಡಿ. ಆಸಕ್ತ ಕನ್ನಡೇತರರಿಗೆ 'ಮಾಡಿ' ಯ ಬದಲು ಬೇರೆ ಪದಗಳನ್ನೂ ತಿಳಿಸಿ ಕೊಡಿ.

ಕೊನೆಯದಾಗಿ ಈ ಅಂಕಣವನ್ನು 'ಸಿಂಪ್ಲಿ ಎಂಜಾಯ್ ಮಾಡಿ' =)

Tuesday, August 16, 2011

ಪರಿವರ್ತನ

ಮಾರ್ಕೆಟ್ಟಲ್ಲಿ ಅವನು ಬಸ್ ಹತ್ತಿ ಕೂತ. ರಾತ್ರಿ ಒಂಬತ್ತೂ ಕಾಲಾದ್ದರಿಂದ ಖಾಲಿ ಖಾಲಿಯಾಗೆಯೇ ಇತ್ತು. ಗಾಳಿ ಬರಲೆಂದು ಕಿಟಕಿ ತೆರೆದು ಪುಸ್ತಕ ಓದಲು ಕೂತ.

ಮೆಜೆಸ್ಟಿಕ್ಕಿಗೆ ಬಂದ ಬಸ್ಸನ್ನು ಹಲವಾರು ಜನ ಏರಿದರು. ಇವನ ಎದುರುಗಡೆ ಒಬ್ಬ ಧಡೂತಿ ಆಸಾಮಿ ಬಂದು ಕೂತ. ಕೂತವನೇ ತನಗೆ ಬೇಕಾದಷ್ಟು ಕಿಟಕಿಯನ್ನು ತಳ್ಳಿ ತಣ್ಣನೆಯ ಗಾಳಿಯನ್ನು ಆಸ್ವಾದಿಸುತ್ತಾ ಕೂತ.

ಇವನಿಗೆ ಇರಿಸು ಮುರುಸಾಯಿತು. ಛಕ್ಕನೆ ಅವನಿಗೆ ಹೇಳಿದ: "ಸ್ವಾಮೀ, ನಾವೂ ಬಸ್ಸಲ್ಲಿದ್ದೇವೆ. ನಮಗೂ ಗಾಳಿ ಬೇಕು" ಎಂದವನೇ ಕಿಟಕಿಯನ್ನು ಮೊದಲಿದ್ದ ಹಾಗೆಯೇ ತಳ್ಳಿ ಓದಲು ಮುಂದುಮಾಡಿದ.

ಮನಸಿನಲ್ಲೇ ಬೈದುಕೊಳ್ಳುತ್ತಾ ಎದುರಿನಲ್ಲಿ ನಗುತ್ತ ಸಾವರಿಸಿಕೊಂಡು ಅವನೂ ತೆಪ್ಪಗಾದ.

ಐದು ನಿಮಿಷ ಕಳೆಯಿತು. ಸುಯಿ ಎಂದು ಬೀಸುತ್ತಿದ್ದ ಗಾಳಿ ತನ್ನ ಜೊತೆ ಭೋರ್ಗರೆಯುವ ಮಳೆಯನ್ನೂ ತಂದಿತು.

ಈಗ ಅವರಿಬ್ಬರೂ ಕಿಟಕಿ ಮುಚ್ಚುವುದಕ್ಕೆ ಮುಂದಾದರು.

Monday, August 15, 2011

ಕನ್ನಡ ವರ್ಣಮಾಲೆಯ ಅನಾಥ ಕೂಸು.

ೠ.

ನಾವೆಲ್ಲಾ ಪಾಠ ಮಾಡೋವಾಗ ಇದ್ದ ಈ ಅಕ್ಷರ ಸುಮಾರು ವರ್ಷಗಳಿಂದ ಕನ್ನಡ ವರ್ಣಮಾಲೆಯಿಂದ ಕಣ್ಮರೆಯಾಗಿದೆ. ಈಗಿನ ಮಕ್ಕಳು ಇವನ್ನು ತಮ್ಮ ಪಠ್ಯ ಪುಸ್ತಕದಲ್ಲಿ ಕಾಣುವುದಿಲ್ಲ. ನಮ್ಮ ಘನ ಕರ್ನಾಟಕ ಸರ್ಕಾರ ಈ ಅಕ್ಷರವನ್ನು ಕನ್ನಡದಿಂದ ಉಚ್ಚಾಟಿಸಿದೆ.

ನಮ್ಮ ಪುಣ್ಯ. ಇದು ಹೇಗೋ ತಂತ್ರಾಂಶದಿಂದ ಹೊರಗೆ ಹೋಗಿಲ್ಲ. ಈಗಲೂ ನಾವು ೠ ಎಂದು ಕೀಲಿಮಣೆಯಿಂದ ಬರೆಯಬಹುದು. ಇದನ್ನೂ ಹೊಡೆದೋಡಿಸದಿದ್ದರಷ್ಟೇ ಸಾಕು. ಈ ವಿಷಯ ಬರೆಯಲು ಆಗುತ್ತದೋ ಇಲ್ಲವೋ ಎಂದು ಶಂಕಿಸಿದ್ದ ನನಗೆ ತೃಪ್ತಿ ನೀಡಿತು.

ಇದಕ್ಕೆ ಕಾರಣ ಇನ್ನೂ ಹಾಸ್ಯಾಸ್ಪದ. ಸಂಸ್ಕೃತದಿಂದ ಆಯ್ದ ಈ ಸ್ವರ ಎಲ್ಲೂ ಉಪಯೋಗವಾಗಿಲ್ಲ. ಈ ಸ್ವರವನ್ನು ಉಪಯೋಗಿಸಿ ಯಾವ ಶಬ್ಧವಾಗಲಿ ಇಲ್ಲ. ಅದರಿಂದ ಇದರ ಉಪಯೋಗವಿಲ್ಲ.

ಇರಬಹುದು. ಆದರೆ ಆ ಕಾರಣ ಈ ಸ್ವರವನ್ನು ತೆಗೆದುಹಾಕಿದಲ್ಲಿ ನಾವು ಏನು ಸಾಧಿಸಿದಂತಾಗುತ್ತದೆ? ಅದು ಇದ್ದರೆ ನಮಗೇನು ಪ್ರಯೋಜನವಿಲ್ಲ; ಅಂದ ಮಾತ್ರಕ್ಕೆ ಅದನ್ನು ತೆಗೆದೇ ಬಿಡುವುದು ಯಾವ ನ್ಯಾಯ? ಸಂಸ್ಕೃತದಿಂದ ನಾವು ಎಷ್ಟೋ ಪದಗಳನ್ನು ಎರವಲು ಪಡೆದಿಲ್ಲವೇ? ಹಾಗೆಯೇ ಈ ಸ್ವರವನ್ನು ಪಡೆದಿದ್ದೆವಷ್ಟೇ. ಈ ಸ್ವರದ ಜಾಗ ಖಾಲಿ ಮಾಡಿ ನಾವು ಅಲ್ಲಿ ಏನಿಡಬೇಕಾಗಿದೆ? ಅದೆಷ್ಟು ಜಾಗ ಆಕ್ರಮಿಸಿಕೊಳ್ಳುತ್ತದೆ?

ಕೆಲವು ಜನರ ಅಭಿಪ್ರಾಯಕ್ಕೆ ಒಂದು ಸ್ವರವನ್ನೇ ಕಿತ್ತರೆ ಅದೆಷ್ಟರ ಮಟ್ಟಿಗೆ ಸರಿ?

ಆಗೀಗ ಹೊಸ ಪದಗಳನ್ನು ಟಂಕಿಸುವ ನಮಗೆ ಈ ಅಕ್ಷರ ಉಪಯೋಗಿಸಿ ಒಂದೂ ಪದವನ್ನು ಸೃಜಿಸಲು ಆಗಿಲ್ಲವೇ?

ಕನ್ನಡ ಶಬ್ದ ಬ್ರಹ್ಮರ ಎದುರು ಈ ಪ್ರಶ್ನೆಯನ್ನಿತ್ತು ಈ ಅಂಕಣವನ್ನು ಮುಗಿಸುತ್ತೇನೆ. ನನಗೇನಾದರೂ ಹೊಸ ಪದ ಆವಿಷ್ಕರಿಸಬೇಕಾಗಿ ಬಂದ ಸಂದರ್ಭದಲ್ಲಿ ಖಂಡಿತವಾಗಿಯೂ ಈ ಸ್ವರವನ್ನು ಗಣನೆಗೆ ತಂದುಕೊಳ್ಳುತ್ತೇನೆ ಎಂದು ಆಶ್ವಾಸನೆ ಕೊಡುತ್ತೇನೆ.

Saturday, July 23, 2011

ನೂತನ ಗಾಂಧಿವಾದಿ/ಉಪೇಂದ್ರವಾದಿಯೊಡನೆ ಒಂದು ಘಳಿಗೆ...

ಸುಮಾರು ಎರಡು ವಾರಗಳ ಹಿಂದೆ ಇರಬಹುದು. ಕಚೇರಿಯಿಂದ ತಡವಾಗಿ ಹೋಗುತ್ತಿದ್ದ ನನಗೆ ಮನೆಗೆ ಹೋಗಲು ಮೆಜೆಸ್ಟಿಕ್ಕಿನಿಂದ ೧೧ ಗಂಟೆಗೆ ಒಂದು ಬಸ್ಸು ಸಿಕ್ಕಿತು. ಯಥಾ ಪ್ರಕಾರ ಓಡಿ ಹೋಗಿ ಹತ್ತಿದ್ದರಿಂದ ನನಗೆ ಸೀಟು ಸಿಕ್ಕಿತು.

ಬಸ್ಸಿನಲ್ಲಿ ಬೆಳಕು ತಕ್ಕ ಮಟ್ಟಿಗೆ ಇದ್ದದ್ದರಿಂದ ನಾನು ನನ್ನ ಹವ್ಯಾಸವಾದ ಪುಸ್ತಕ ಓದುವುದನ್ನು ಮುಂದುವರಿಸಿದೆನು. ಹತ್ತು ನಿಮಿಷ ಜನರಿಗಾಗಿ ಕಾದ ಬಸ್ಸು ಹೊರಟಿತು.

ಎಲ್ಲವೂ ತಣ್ಣಗಿರಲು ಮುಂದಿನಿಂದ ಒಂದು ಸ್ವರ ಹೊರಟಿತು. ಅದು ಸುಮಾರು ೪೫-೫೦ ರ ಪ್ರಾಯದ ಗಂಡಸಿನ ಧ್ವನಿ. ಅಲ್ಲಿ ನಡೆದ ಸಂಭಾಷಣೆಯ ಯಥಾವತ್ ನಕಲು ಇಲ್ಲಿದೆ. (ಅವಾಚ್ಯ ಶಬ್ದಗಳನ್ನು ಮನ್ನಿಸಿ)

ಹಿರಿಯ ಗಂಡಸು: ರೀ ಸ್ವಾಮಿ, ನಿಮ್ಮ ಪಕ್ಕ ಒಂದ್ ಹೆಂಗಸು ನಿಂತ್ಕೊಂಡಿದೆ. ಲೇಡೀಸ್ ಸೀಟ್ ಅಲ್ಲಿ ಕೂತಿದ್ದೀರಾ, ಎದ್ದು ಅವರಿಗೆ ಜಾಗ ಕೊಡ್ರಿ.

ಆ ಕಡೆ ಇಂದ ಏನೂ ಉತ್ತರ ಬರಲಿಲ್ಲ.

ಹಿರಿಯ ಗಂಡಸು: ರೀ ರೆಡ್ ಶರ್ಟ್! ನಿಮಗೇ ಕಣ್ರೀ ಹೇಳ್ತಿರೋದು. ಪಕ್ಕದಲ್ಲಿ ಹೆಂಗಸು ನಿಂತಿರೋದು ಕಾಣಿಸುತ್ತಿಲ್ವಾ? ನಿಮ್ಮ ಅಮ್ಮ ನೋ ತಂಗಿ ನೋ ಹೀಗೇ ನಿಂತಿದ್ದರೆ ಸುಮ್ನೆ ಕೂರ್ತ ಇದ್ದ್ರಾ? ಎದ್ದು ಜಾಗ ಕೊಡ್ರಿ...

ಕಿರಿಯ ಗಂಡಸು: ರೀ ಸುಮ್ನಿರಿ ಸಾಕು. ದೊಡ್ಡದಾಗಿ ಹೇಳಕ್ಕೆ ಬಂದ್ಬಿಟ್ತ್ರು. ಸುಮ್ನೆ ನಿಮ್ಮ ಪಾಡಿಗೆ ನೀವ್ ನಿಂತ್ಕೊಳ್ಳ್ರೀ.

ಹಿರಿಯ: (ಬೇಡಿಕೊಳ್ಳುವ ಧ್ವನಿಯಲ್ಲಿ) ಅಪ್ಪ! ತಿರ್ಗ ಹೇಳ್ತಾ ಇದ್ದೀನಿ. ನಿಮ್ಮ ಅಕ್ಕಾನೋ ಅಮ್ಮ ನೋ ನಿಂತಿದ್ದರೆ ನೀನ್ ಹೀಗೆ ಮಾಡ್ತಿದ್ದ? ಎದ್ದೇಳಪ್ಪ.

ಕಿರಿಯ: ಹೋಗೊಲೋ ಲೌ* ಕೆ ಬಾ*!! ಹುಚ್ಚು ಸೂ* ಮಗನೆ! ಕೂತಿರೋರಿಗೆ ಕೂತಿರಕ್ಕೂ ಬಿಡಲ್ಲ... ನಾಯಿ ನನ್ನ ಮಕ್ಕಳು...

ಹಿರಿಯ: ಹೌದಪ್ಪ!! ಹೌದು. ಹೆಂಗಸರಿಗೆ ಅವ್ರ ಸೀಟಲ್ಲೇ ಜಾಗ ಬಿಡಿ ಅಂತ ಹೆಲೋ ನಾನು ಲೌ& ಕೆ #ಲೇ!! ನಾನಿಷ್ಟು ಮಾತಾಡ್ತಾ ಇದ್ದ್ರೂನೂ ಬೇರೆ ಜನ ಇರ್ಲಿ... ಕಂಡಕ್ಟರೂ ನನ್ನ ಸಹಾಯಕ್ಕೆ ಬರ್ತಿಲ್ಲ ನೋಡಿ... ನಾನು ಹುಚ್ಚು ಸೂ%$ ಮಗಾನೇ!! ಈ ಹೆಂಗಸರಿಗೋಸ್ಕರ ನಿಮ್ಮ ಹತ್ರ ಸೀಟ್ ಬಿಟ್ಟ ಕೊಡಿ ಅಂತ ಹೇಳ್ದೆ ನೋಡಿ, ಅವರೂ ನನ್ನ ಸಪೋರ್ಟಿಗೆ ಬರ್ಲಿಲ್ಲ ಅಂದ್ರೆ ನಾನು ನಾಯಿ ನನ್ನ ಮಗನೆ ಇರ್ಬೇಕು... ಥೂ ನಮ್ಮ ದೇಶಕ್ಕೆ. ಹೆಂಗಸರಿಗೆ ತುಂಬಾ ಮರ್ಯಾದೆ ಕೊಡತ್ತೆ... ಗುರು ಹಿರಿಯರಿಗೆ ಗೌರವ ಕೊಡ್ತಾರೆ ಅಂತ ಏನೇನೋ ಬಡಾಯಿ ಕೊಚ್ಚ್ಕೊತಾರೆ... ಎಲ್ಲ ಓಳು. ಇಡೀ ದೇಶ ಬರೀ ಹಲ್ಕಾ ನನ್ನ ಮಕ್ಕ್ಳಿಂದಾನೆ ತುಂಬ್ಕೊಂಡಿದೆ.

ಹೆಂಗಸರಿಗೆ ಸೀಟ್ ಕೊಡ್ರೋ ಅಂತ ಬೇಡ್ಕೊತೀವಲ್ಲ, ನಾವು ಸುವರ್ರ್ ನನ್ನ ಮಕ್ಕಳು... ಆರಾಮಾಗಿ ಹೆಂಗಸರ ಸೀಟಲ್ಲಿ ಕೂತ್ಕೊತೀರಲ್ಲ , ನೀವೆಲ್ಲ ಮಹಾನುಭಾವರೇ ಬಿಡಿ. ಏನೋ ಈ ಸಂನ್ ಮನುಷ್ಯನ್ನ ಕ್ಷಮಿಸಿ ಬಿಡಿ....


ಇನ್ನು ಮುಂದುವರೀತಾನೆ ಇತ್ತು ಅವನ ಪುರಾಣ ೫ ನಿಮಿಷಕ್ಕೆ. ಈ ರೀತಿ ಶಾಲಲ್ಲಿ ಚಪ್ಪಲಿ ಸುತ್ತ್ಕೊಂಡು ಹೊದೀತಿರೋದ್ ಕೇಳಕ್ಕಾಗ್ದೆ ಕಡೆಗೆ ಕೂತಿದ್ದ ಆ ಮಹಾ ಪುರುಷ ಎದ್ದ.

ಅಂತೂ ಕೊನೆಗೆ ಧರ್ಮಕ್ಕೆ ಜಯ.